ಕಾಂಗ್ರೆಸ್ ಪಕ್ಷ ಭಾರೀ ಬಹುಮತದಿಂದ ಸರ್ಕಾರ ರಚನೆ ಮಾಡಿದ್ದು, ಇದೀಗ ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ಹಗರಣ ಸದ್ದು ಮಾಡುತ್ತಿದೆ. ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಕೊಟ್ಟಿರುವ ಅನುಮತಿ ವಿಚಾರದಲ್ಲಿ ಹೈಕೋರ್ಟ್ ವಿಚಾರಣೆ ನಡೆಸುತ್ತಿದೆ. ಈ ನಡುವೆ ಕಾಂಗ್ರೆಸ್‌ನಲ್ಲಿ ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟವರು ನಾನು ನಾನು ಎನ್ನುತ್ತಿದ್ದಾರೆ. ಸಿದ್ದರಾಮಯ್ಯ ರಾಜೀನಾಮೆ ನೀಡುವ ಮೊದಲೇ ಸಿಎಂ ಕುರ್ಚಿ ಕಡೆಗೆ ಕಾಂಗ್ರೆಸ್ ನಾಯಕರು ನುಗ್ಗುತ್ತಿರುವುದು ಬಿಜೆಪಿ ಪಾಲಿಗೆ ಬ್ರಹ್ಮಾಸ್ತ ಎನ್ನುವಂತಾಗಿದೆ.
ಸಿದ್ದರಾಮಯ್ಯ ಒಪ್ಪಿದರೆ ನಾನು ಸಿಎಂ ಆಗಲು ರೆಡಿ ಅಂತಾ ಆರ್ ವಿ ದೇಶಪಾಂಡೆ ಹೇಳಿಕೆ ನೀಡಿದ್ದರು. ಆ ಬಳಿಕ ಕಾಂಗ್ರೆಸ್ ನಾಯಕರೇ ಸಿಎಂ ಸ್ಥಾನದ ಬಗ್ಗೆ ಹಲವಾರು ಹೇಳಿಕೆಗಳನ್ನು ನೀಡುವ ಮೂಲಕ ಕಾಂಗ್ರೆಸ್ ಪಕ್ಷಕ್ಕೇ ಮುಜುಗರ ಉಂಟು ಮಾಡಿದ್ದಾರೆ. ದಲಿತ ಸಿಎಂ ವಿಚಾರವೂ ಭಾರೀ ಸದ್ದು ಮಾಡುತ್ತಿದ್ದು, ಸಿಎಂ ಸಿದ್ದರಾಮಯ್ಯ Siddaramaiah ರಾಜೀನಾಮೆ ನೀಡುವ ಮುನ್ನವೇ ಅಲ್ಲಲ್ಲಿ ಸಭೆ ಮಾಡುವ ಮೂಲಕ ಸಿದ್ದರಾಮಯ್ಯ ರಾಜೀನಾಮೆ ನೀಡ್ತಾರಾ ಅನ್ನೋ ಅನುಮಾನ ರಾಜ್ಯದ ಜನರನ್ನು ಕಾಡುವಂತೆ ಮಾಡಿದ್ದಾರೆ. ಈ ವಿಚಾರವಾಗಿ ಹೈಕಮಾಂಡ್‌ಗೆ ಪತ್ರ ಬರೆದು ನಿಯಂತ್ರಣಕ್ಕೆ ಮನವಿ ಮಾಡಿದ್ದಾರೆ.
ಬಿ.ಎಲ್ ಶಂಕರ್, ವಿ.ಎಸ್ ಉಗ್ರಪ್ಪ, ಮೋಹನ್ ಕೊಂಡಜ್ಜಿ, ಹೆಚ್.ಎಂ ರೇವಣ್ಣ ನೇತೃತ್ವದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ರವಾನೆ ಮಾಡಿದ್ದು, ಕಾಂಗ್ರೆಸ್ ಪಕ್ಷ, ಪಂಚ ಗ್ಯಾರಂಟಿ ನೀಡುವ ಮೂಲಕ 135 ಸ್ಥಾನಗಳನ್ನು ಗೆದ್ದಿದೆ. ಕರ್ನಾಟಕದ ಜನತೆ ನೀಡಿರುವ ಗೆಲುವನ್ನು ಕಾಂಗ್ರೆಸ್ ಸರ್ಕಾರ ಯಶಸ್ವಿಯಾಗಿ ಪೂರೈಸುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಬಿಜೆಪಿ – ಜೆಡಿಎಸ್ ಪಕ್ಷದ ಆರೋಪಗಳಿಂದ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿರುವ ಸಮಯದಲ್ಲೇ ನಾಯಕರು ಮನಸೋ ಇಚ್ಚೆ ಹೇಳಿಕೆ ನೀಡುತ್ತಿರುವುದು ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ತರುತ್ತಿದೆ. ರಾಜ್ಯದ ಜನರ ನಂಬಿಕೆ ಕಳೆದುಕೊಳ್ಳುವ ಸ್ಥಿತಿಗೆ ತಲುಪಿದೆ. ಕೂಡಲೇ ಕರ್ನಾಟಕ ಕಾಂಗ್ರೆಸ್‌ನಲ್ಲಿ ಆಗುತ್ತಿರುವ ಬೆಳವಣಿಗೆ ಬಗ್ಗೆ ಗಮನಹರಿಸಲು ಒತ್ತಾಯಿಸಲಾಗಿದೆ.