‘ಲೋಕ’ ಎಲೆಕ್ಷನ್ ಕಾವು ಕರ್ನಾಟಕದಲ್ಲಿ ಜೋರಾಗಿದೆ. ರಾಜಕೀಯ ನಾಯಕರ ನಡುವಿನ ವಾಗ್ಯುದ್ಧ ಜೋರಾಗಿಯೇ ಇದೆ. ಈ ನಡುವೆ ಕಾಂಗ್ರೆಸ್ ವಲಯದಿಂದ ಶಾಕಿಂಗ್ ಹೇಳಿಕೆ ಹೊರಬಿದ್ದಿದೆ.
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 20 ಕ್ಕೂ ಹೆಚ್ಚು ಸ್ಥಾನ ಗೆಲ್ಲದಿದ್ದರೇ ಸಿಎಂ ಸ್ಥಾನಕ್ಕೆ ಕಂಟಕ ಬರಲಿದೆ ಎಂದು ಸಚಿವ ಭೈರತಿ ಸುರೇಶ್ ಸ್ಪೋಟಕ ಹೇಳಿಕೆ ನೀಡಿದ್ದಾರೆ.ಕೋಲಾರ ಜಿಲ್ಲೆಯಲ್ಲಿ ಕುರುಬ ಸಮುದಾಯದ ಮುಖಂಡರ ಸಭೆಯಲ್ಲಿ ಮಾತನಾಡಿದ ಸಚಿವ ಬೈರತಿ ಸುರೇಶ್, ಲೋಕಸಭೆ ಚುನಾವಣೆಯಲ್ಲಿ ರಾಜ್ಯ ಕಾಂಗ್ರೆಸ್ ನಾಯಕರಿಗೆ ಎಐಸಿಸಿ ದೊಡ್ಡ ಜವಾಬ್ದಾರಿ ನೀಡಿದ್ದು ಕನಿಷ್ಠ ಪಕ್ಷ 20ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲದೆ ಹೋದರೆ ಸಿಎಂ ಸ್ಥಾನಕ್ಕೆ ಕುತ್ತು ಬರುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದೆ. ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿಗಳು ಸೋತರೆ ಸಿದ್ದರಾಮಯ್ಯ ಸ್ಥಾನಕ್ಕೆ ಕಂಟಕವಿದೆ ಎಂದರು.ಕುರುಬ ಸಮುದಾಯ ಸಿಎಂ ಸಿದ್ದರಾಮಯ್ಯ ಕೈ ಬಲಪಡಿಸಬೇಕು ನಿಮ್ಮ ಬೆಂಬಲ ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ಮೇಲಿರಲಿ ಬೇರೆ ಅಭ್ಯರ್ಥಿ ಗೆದ್ದರೆ ಸಿದ್ದರಾಮಯ್ಯ ಸ್ಥಾನಕ್ಕೆ ಕಂಟಕವಾಗಲಿದೆ ಎಂದು ಸಚಿವ ಭೈರತಿ ಸುರೇಶ್ ಹೇಳಿದರು.

ಸಿಎಂ ಬದಲಾವಣೆ ಪುಕಾರು..
ಲೋಕಸಭಾ ಎಲೆಕ್ಶನ್ ನಂತ್ರ ಸಿಎಂ ಸಿದ್ದರಾಮಯ್ಯ ಬದಲಾವಣೆ ಆಗ್ತಾರೆ, ಆ ಜಾಗಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಬರ್ತಾರೆ ಅನ್ನೋ ಮಾತು ರಾಜಕೀಯ ವಲಯದಲ್ಲಿ ಜೋರಾಗಿ ಹರಿದಾಡ್ತಿದೆ. ಈ ಮಧ್ಯೆ ಸಿದ್ದು ಬಂಟ ಭೈರತಿ ಸುರೇಶ್ ಈ ರೀತಿ ಹೇಳಿರೋದು ಕೌತುಕವನ್ನ ಮತ್ತಷ್ಟು ಹೆಚ್ಚಿಸಿದೆ. ಹಾಗೆಯೇ ಕಾಂಗ್ರೆಸ್ ವಲಯದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ.