ರಾಜ್ಯದಲ್ಲಿ 2014ರಲ್ಲಿ ಅಧಿಕಾರಕ್ಕೆ ಬಂದಿದ್ದ ಕಾಂಗ್ರೆಸ್ ಪಕ್ಷ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ನಡೆಸುವುದಕ್ಕೆ ಆದೇಶ ಮಾಡಿತ್ತು. ಶಾಶ್ವತ ಹಿಂದುಳಿದ ಆಯೋಗದ ಮೂಲಕ ನಡೆದ ಈ ಸಮೀಕ್ಷೆಯಲ್ಲಿ ಜಾತಿಯನ್ನು ಪಡೆದುಕೊಳ್ಳಲಾಗಿತ್ತು. ಈ ಸಮೀಕ್ಷೆಯಲ್ಲಿ ಜಾತಿವಾರು ಜನಸಂಖ್ಯೆ ಸರ್ಕಾರದ ಅಂಗಳ ತಲುಪಿತ್ತು. ಆದರೆ ರಾಜ್ಯ ಸರ್ಕಾರದ ಜಾತಿ ಸಮೀಕ್ಷೆಗೆ ಲಿಂಗಾಯತರು ಹಾಗು ಒಕ್ಕಲಿಗರು ತೀವ್ರ ವಿರೋಧ ಮಾಡಿದ್ದರು. ಅದರಲ್ಲೂ ಬಿಜೆಪಿ ಸಂಸದರು, ಕೇಂದ್ರ ಸಚಿವರು ಸೇರಿದಂತೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಕೂಡ ಟೀಕೆ ಮಾಡಿದ್ದರು. ಇದೀಗ ಕೇಂದ್ರ ಸರ್ಕಾರವೇ ಜನಗಣತಿ ಜೊತೆಗೆ ಜಾತಿ ಗಣತಿಗೂ ಮುಂದಾಗಿದೆ. ಇದು ಜಾಲತಾಣದಲ್ಲಿ ವ್ಯಂಗ್ಯಕ್ಕೆ ಕಾರಣವಾಗಿದೆ.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ರಾಜ್ಯ ಸರ್ಕಾರದ ಜಾತಿ ಜನಗಣತಿಯನ್ನು ಟೀಕಿಸಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮಾಡಿರುವ ಜಾತಿ ಜನಗಣತಿಯಿಂದ ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಲಿದೆ. ಜಾತಿ ಆಧಾರರಿತ ಸಮೀಕ್ಷೆಗಳು ಸರಿಯಲ್ಲ. ಈ ಯುಗದಲ್ಲಿ ಜಾತಿ ಆಧಾರದಲ್ಲಿ ನಾವು ವಿಭಜನೆ ಆಗುವುದಕ್ಕಿಂತ ನಾವೆಲ್ಲರೂ ಒಂದಾಗುವುದು ಒಳಿತು ಎಂದು ಟೀಕಿಸಿದ್ದರು. ಕೇಂದ್ರ ಸಚಿವ ಕುಮಾರಸ್ವಾಮಿ ಕೂಡ, ರಾಜ್ಯ ಸರ್ಕಾರ ಮಾಡಿರುವುದು ಜಾತಿಗಣತಿಯೋ..? ಅಥವಾ ದ್ವೇಷದ ಗಣತಿಯೋ ಎಂದು ಪ್ರಶ್ನೆ ಮಾಡಿದ್ದರು. ಆದರೆ ಒಂದೇ ತಿಂಗಳಲ್ಲಿ ಹೇಳಿಕೆಗಳು ಉಲ್ಟಾ ಆಗಿವೆ.

ಇದೀಗ ನರೇಂದ್ರ ಮೋದಿ ಸರ್ಕಾರ ಜನಗಣತಿ ಜೊತೆಗೆ ಜಾತಿಗಣತಿ ಮಾಡುವುದಾಗಿ ಘೋಷಣೆ ಮಾಡಿದ ಕೆಲವೇ ನಿಮಿಷಗಳಲ್ಲಿ ತೇಜಸ್ವಿ ಸೂರ್ಯ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ನರೇಂದ್ರ ಮೋದಿ ಸರ್ಕಾರದಿಂದ ಐತಿಹಾಸಿಕ ಘೋಷಣೆ ಎಂದಿದ್ದಾರೆ. ಜನಗಣತಿ ಜೊತೆಗೆ ಜಾತಿಗಣತಿ ಮಾಡುವ ಐತಿಹಾಸಿಕ ನಿರ್ಧಾರವನ್ನು ಸ್ವಾಗತಿಸುತ್ತೇನೆ ಎಂದು ಪೋಸ್ಟ್ ಮಾಡಿದ್ದಾರೆ. ಅದೇ ರೀತಿ ಮಾಜಿ ಸಿಎಂ ಹಾಗು ಹಾಲಿ ಕೇಂದ್ರ ಸಚಿವ ಕುಮಾರಸ್ವಾಮಿ, 1931 ರ ಬಳಿಕ ನರೇಂದ್ರ ಮೋದಿ ನಾಯಕತ್ವದಲ್ಲಿ ಇದೇ ಮೊದಲ ಬಾರಿಗೆ ಜನಗಣತಿ ಜೊತೆಗೆ ಜಾತಿಗಣತಿ ಮಾಡಲು ಮುಂದಾಗಿರುವ ಬಗ್ಗೆ ಹೆಮ್ಮೆಯಿಂದ ಪೋಸ್ಟ್ ಮಾಡಿದ್ದಾರೆ.

ಆದರೆ ಈಗ ಎದುರಾಗಿರುವ ಪ್ರಶ್ನೆ ಏನೆಂದರೆ ಕಾಂಗ್ರೆಸ್ ಸರ್ಕಾರ ಮಾಡಿದರೆ ದ್ವೇಷ ಬಿತ್ತುವ ಉದ್ದೇಶ. ಬಿಜೆಪಿ ಸರ್ಕಾರವೇ ಜಾತಿಗಣತಿ ಮಾಡಿದರೆ ಅದು ಐತಿಹಾಸಿಕ ನಿರ್ಧಾರವೇ ಎಂದು ಕಾಂಗ್ರೆಸ್ ನಾಯಕಿ ಲಾವಣ್ಯ ಬಲ್ಲಾಳ್ ಪ್ರಶ್ನಿಸಿದ್ದಾರೆ. ಎರಡೂ ಪೋಸ್ಟ್ಗಳನ್ನು ಒಟ್ಟಿಗೆ ಸೇರಿಸಿ ಮತ್ತೆ ಪೋಸ್ಟ್ ಮಾಡಿದ್ದಾರೆ. ಜಾಲತಾಣದ ಬಳಕೆದಾರರು ಕೂಡ ಬಿಜೆಪಿ ಹಾಗೂ ಬಿಜೆಪಿ ಮೈತ್ರಿ ನಾಯಕರ ದ್ವಂದ್ವ ನಿಲುವಿನ ಬಗ್ಗೆ ವ್ಯಂಗ್ಯವಾಡುತ್ತಿದ್ದಾರೆ. ಇನ್ನೂ ಜಾತಿಗಣತಿ ಉದ್ದೇಶ ನಗರ ನಕ್ಸಲಿಸಂ ಎಂದಿದ್ದ ಪ್ರಧಾನಿ ಮೋದಿ ಸ್ವತಃ ತಾವೇ ಜಾತಿಗಣತಿ ಮಾಡಲು ಮುಂದಾಗಿರುವುದಕ್ಕೂ ತೀಕ್ಷ್ಣ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.
