ಇತ್ತೀಚಿಗೆ ನಡೆದ ಕಾಂಗ್ರೆಸ್ ಕಾರ್ಯಕಾರಣಿ ಸಭೆಯಲ್ಲಿ 2022ರ ಸೆಪ್ಟೆಂಬರ್ ವೇಳೆಗೆ ಎಐಸಿಸಿ ನೂತನ ಅಧ್ಯಕ್ಷರ ಆಯ್ಕೆಗೆ ಸಮಯ ನಿಗಧಿ ಮಾಡಲಾಗಿದೆ. ರಾಹುಲ್ ಗಾಂಧಿ ಅವರೇ ಅಧ್ಯಕ್ಷರಾಗುತ್ತಾರೆ ಎಂಬುದು ಈಗ ಎಲ್ಲರಿಗೂ ಗೊತ್ತಿರುವ ವಿಚಾರ. ಆದರೂ ನಿಯಮಾವಳಿಗಳ ಪ್ರಕಾರ ಚುನಾವಣೆ ನಡೆಸಲು ಇನ್ನೂ 11 ತಿಂಗಳು ಸಮಯ ತೆಗೆದುಕೊಳ್ಳಲಾಗಿದೆ. ಸದ್ಯ ತೀವ್ರ ಸಂಕಷ್ಟದಲ್ಲಿರುವ ಕಾಂಗ್ರೆಸ್ ಪಕ್ಷ ಇಷ್ಟು ಮಂದಗತಿಯಲ್ಲಿ ಸಾಗುವುದು ಸೂಕ್ತವೇ ಎಂಬುದನ್ನು ಆ ಪಕ್ಷದ ನಾಯಕರು ಕೇಳಿಕೊಳ್ಳಬೇಕು.
ಕಾಂಗ್ರೆಸ್ ನಾಯಕರ ಧೋರಣೆ ಹೇಗಿದೆ ಎಂದರೆ ‘ಕಾಂಗ್ರೆಸ್ ಕಾರ್ಯಕಾರಿಣಿ ನಡೆಸಿದ್ದೇ ಹೆಚ್ಚು. ರಾಹುಲ್ ಗಾಂಧಿ ಅವರು ಅಧ್ಯಕ್ಷರಾಗಲು ಒಪ್ಪಿಗೆ ಸೂಚಿಸಿದ್ದೇ ಹೆಚ್ಚು. ಎಲ್ಲಾ ಸಮಸ್ಯೆಗಳು ಬಗೆಹರಿದವು’ ಎಂಬಂತಿದೆ. ಕಾಂಗ್ರೆಸ್ ಪಕ್ಷವನ್ನು ಸತತವಾದ ಸೋಲುಗಳು ಕಂಗೆಡಿಸಿವೆ. ಜಿ -23 ನಾಯಕರ ಅಸಹಕಾರ, ಭಿನ್ನಮತಗಳು ತೊಡಕಾಗಿವೆ. ಕಾಂಗ್ರೆಸಿನಿಂದ ಎಲ್ಲಾ ರೀತಿಯ ಅಧಿಕಾರ ಉಂಡವರು ಪಕ್ಷ ಬಿಟ್ಟು ಹೋಗುತ್ತಿದ್ದಾರೆ. ಸ್ಥಳೀಯ ನಾಯಕರ ಕೊರತೆ ಶುರುವಾಗಿದೆ. ಸಂಘಟನೆ ಸೊರಗಿದೆ ಎಂಬೆಲ್ಲಾ ವಿಷಯಗಳು ನಿಜ. ಆದರೆ ಈ ಎಲ್ಲಾ ಸಮಸ್ಯೆಗಳ ಮೂಲ ನಾಯಕತ್ವ ಎಂಬುದು ಕೂಡ ಅಷ್ಟೇ ಸತ್ಯ.
ಹೇಳಿದ ರೀತಿಯಲ್ಲಿ ಮತ್ತು ಹೇಳಿದವರ ಉದ್ದೇಶದಲ್ಲಿ ದೋಷ ಇದ್ದಿರಬಹುದು; ಜಿ 23 ನಾಯಕರು ಪದೇ ಪದೇ ಪ್ರಸ್ತಾಪಿಸಿದ್ದು ಇದೇ ನಾಯಕತ್ವದ ಸಮಸ್ಯೆಯ ಬಗ್ಗೆ. ಇದೇ ಕಾರಣಕ್ಕೆ ರಾಹುಲ್ ಗಾಂಧಿ ಅಧ್ಯಕ್ಷರಾಗಲು ಒಪ್ಪಿಗೆ ಸೂಚಿಸಿದಾಕ್ಷಣ (ಈಗಲೂ ಅವರು ನೇರವಾಗಿ ಒಪ್ಪಿಗೆ ಕೊಟ್ಟಿಲ್ಲ, ಅಧ್ಯಕ್ಷರಾಗಬೇಕೆಂಬ ಬೇರೆಯವರ ಪರಿಗಣಿಸುತ್ತೇನೆ ಎಂದು ಪರೋಕ್ಷವಾಗಿ ಹೇಳಿದ್ದಾರೆ) ಯುದ್ಧ ಗೆದ್ದವರಂತೆ ಬೀಗುತ್ತಿರುವುದು. ಆದರೆ ಇಷ್ಟು ಪ್ರಮುಖವಾದ ವಿಷಯವನ್ನು ಇಷ್ಟು ಮಂದಗತಿಯಲ್ಲಿ ನಿಭಾಯಿಸುವುದರಿಂದ ಹೆಚ್ಚಿನ ಲಾಭ ಆಗಲಾರದು ಎಂಬುದನ್ನು ಕಾಂಗ್ರೆಸ್ ಮನಗಾಣಬೇಕು.

ವಾಸ್ತವವಾಗಿ ಕಾರ್ಯಕಾರಣಿ ಸಭೆಯಲ್ಲೇ ‘ಮುಂದಿನ ಸೆಪ್ಟೆಂಬರ್ ವೇಳೆಗೆ ಅಧಿಕೃತವಾಗಿ ನೀವೇ ಅಧ್ಯಕ್ಷರಾಗಿರಿ, ಆದರೆ ಅಲ್ಲಿಯವರೆಗೂ ಕಾಯದೇ ಈಗನಿಂದಲೇ ಪಕ್ಷವನ್ನು ಎಲ್ಲಾ ರೀತಿಯಲ್ಲೂ ಮುನ್ನಡೆಸಿ’ ಎಂಬ ವಿಷಯ ಚರ್ಚೆಯಾಗಿದೆ. ಇದನ್ನಾದರೂ ಪರಿಣಾಮಕಾರಿಯಾಗಿ ಮಾಡಬೇಕು. ಅಳೆದು-ತೂಗಿ ಮಾಡುವುದರ ಜೊತೆಗೆ, ಸಕಾಲದಲ್ಲಿ ಸೂಕ್ತವಾದ ತೀರ್ಮಾನ ಮಾಡಿದರೆ ಲಾಭ ಹೆಚ್ಚು ಎನ್ನುವುದು ಪಂಜಾಬಿನಲ್ಲಿ ಚರಣಜಿತ್ ಸಿಂಗ್ ಚನ್ನಿ ಅವರನ್ನು ಮುಖ್ಯಮಂತ್ರಿ ಮಾಡಿದ್ದರಿಂದ ಗೊತ್ತಾಗಿದೆ. ಚನ್ನಿ ಜಾಗದಲ್ಲಿ ಬೇರೆ ಯಾರೇ ಇದ್ದರೂ ಇಷ್ಟೊತ್ತಿಗೆ ಪಂಜಾಬ್ ಕಾಂಗ್ರೆಸ್ ಪರಿಸ್ಥಿತಿ ರಣರಂಪ ಆಗಿರುತ್ತಿತ್ತು. ಆದರೆ ಕಾಂಗ್ರೆಸ್ ಹೈಕಮಾಂಡ್ ಮಾಸ್ಟರ್ ಸ್ಟ್ರೋಕ್ ಗೆ ಎಲ್ಲರೂ ತೆಪ್ಪಗಾಗಿದ್ದಾರೆ. ಸದ್ಯಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಇಂಥ ತೀರ್ಮಾನಗಳು ಅಗತ್ಯ.
ಎಐಸಿಸಿ ಅಧ್ಯಕರ ಆಯ್ಕೆ ವಿಷಯದಲ್ಲೂ ನಿಯಮಾವಳಿಗಳನ್ನು ತ್ವರಿತವಾಗಿ ಪೂರೈಸಿ ಆದಷ್ಟು ಬೇಗ ರಾಹುಲ್ ಗಾಂಧಿ ಅವರಿಗೆ ಅಧ್ಯಕ್ಷ ಪಟ್ಟ ಕಟ್ಟಬಹುದಾಗಿತ್ತು. ಮುಂದಿನ ವರ್ಷದ ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ಉತ್ತರ ಪ್ರದೇಶ, ಗೋವಾ, ಮಣಿಪುರ, ಪಂಜಾಬ್ ಮತ್ತು ಉತ್ತರಖಾಂಡ್ ವಿಧಾನಸಭಾ ಚುನಾವಣೆಗಳು ಎದುರಾಗಲಿವೆ. ಮುಂದಿನ ವರ್ಷದ ಕೊನೆಗೆ ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಚುನಾವಣೆ ಬರಲಿವೆ. ಈ ಪೈಕಿ ಪಂಜಾಬ್ ಒಂದರಲ್ಲಿ ಮಾತ್ರ ಕಾಂಗ್ರೆಸ್ ಗೆಲ್ಲಬಹುದು. ಗೋವಾ, ಉತ್ತರಖಾಂಡ್ ಹಾಗೂ ಹಿಮಾಚಲ ಪ್ರದೇಶದಲ್ಲಿ ಅವಕಾಶಗಳಿವೆ. ದೊಡ್ಡ ರಾಜ್ಯಗಳಾದ ಉತ್ತರ ಪ್ರದೇಶ ಮತ್ತು ಗುಜರಾತ್ ಗಳಲ್ಲಿ ಪಕ್ಷದ ನೆಲೆ ಹೆಚ್ಚಿಸಿಕೊಳ್ಳಬೇಕಷ್ಟೇ. ಹಾಗೇ ಪಕ್ಷದ ನೆಲೆ ವೃದ್ಧಿಯಾಗಬೇಕೆಂದರೂ ನಾಯಕತ್ವದ ಬಗ್ಗೆ ಇರುವ ಗೊಂದಲ ದೂರವಾಗಬೇಕು.
ಈ ಏಳು ರಾಜ್ಯಗಳಲ್ಲಿ ಪಕ್ಷದ ನೆಲೆ ಹೆಚ್ಚಾದರೆ ಮಾತ್ರ 2024ರ ಲೋಕಸಭಾ ಚುನಾವಣೆ ಮೇಲೆ ನಿರೀಕ್ಷೆ ಇಟ್ಟುಕೊಳ್ಳಲು ಸಾಧ್ಯ. ವಿಧಾನಸಭಾ ಚುನಾವಣೆಗಳು ಮಾತ್ರವಲ್ಲ, ಪಕ್ಷದ ಪರಿಸ್ಥಿತಿ ನೋಡಿದರೆ ಲೋಕಸಭಾ ಚುನಾವಣೆಗೂ ಈಗಿನಿಂದಲೇ ಕೆಲಸ ಆರಂಭಿಸಬೇಕಿದೆ. 200ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಕಾಂಗ್ರೆಸಿಗೆ ಅಭ್ಯರ್ಥಿಗಳೇ ಇಲ್ಲ. ಅಭ್ಯರ್ಥಿಗಳನ್ನು ಅಣಿಗೊಳಿಸಬೇಕಿದೆ. ಸದ್ಯ ಬೇರೆ ಪಕ್ಷಗಳು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳಲು ಮೀನಾ ಮೇಷ ಎಣಿಸುತ್ತಿವೆ. ಚುನಾವಣೆ ವೇಳೆಗೆ ಕಾಂಗ್ರೆಸ್ ‘ತಾನೇ ಪರ್ಯಾಯ’ ಎಂದು ಬಿಂಬಿಸಬೇಕು. ಹೀಗೆ ಮಾಡಬೇಕಿರುವ ಕೆಲಸಗಳು ಸಾವಿರ ಇರುವಾಗ ಕಾಂಗ್ರೆಸ್ ತನ್ನ ಪುರಾತನ ಕಾರ್ಯಶೈಲಿಯಲ್ಲಿ ಸಾಗಿದರೆ ಗಮ್ಯ ತಲುಪುವುದು ಸಾಧ್ಯವೇ ಇಲ್ಲ. ಆ ದೃಷ್ಟಿಯಲ್ಲಿ ತ್ವರಿತವಾಗಿ ಕಾರ್ಯಪ್ರವೃತ್ತರಾಗಬೇಕು.

ಕಾಂಗ್ರೆಸ್ ನಾಯಕರು ಇನ್ನೊಂದು ವಿಷಯವನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಈಗಲೂ ಎಲ್ಲಾ ಮಿತಿಗಳ ನಡುವೆಯೂ ದೇಶದಲ್ಲಿ ಕಾಂಗ್ರೆಸ್ ಪಕ್ಷವೇ ಪರ್ಯಾಯ. ಆ ಸ್ಥಾನ ಕಿತ್ತುಕೊಳ್ಳಲು ಆಮ್ ಆದ್ಮಿ ಪಕ್ಷ ಮತ್ತು ತೃಣಮೂಲ ಕಾಂಗ್ರೆಸ್ ಕನಸು ಕಾಣುತ್ತಿವೆ. ಅವು ಜಿಗಿತುಕೊಳ್ಳುವುದಕ್ಕಿಂತ ಕಾಂಗ್ರೆಸ್ ಮರಳಿ ಹಳಿಗೆ ಬರುವುದು ಸುಲಭದ ಕೆಲಸ. ಇದು ಎಲ್ಲರಿಗಿಂತ ಮಿಗಿಲಾಗಿ ರಾಹುಲ್ ಗಾಂಧಿ ಅವರಿಗೆ ಅತ್ಯಗತ್ಯ. ಏಕೆಂದರೆ ಇದು ರಾಹುಲ್ ಗಾಂಧಿ ಅವರಿಗೆ ಕಡೆಯ ಅವಕಾಶ. ಈ ಬಾರಿ ತನ್ನ ಸಾಮರ್ಥ್ಯ ಸಾಬೀತುಪಡಿಸದಿದ್ದರೆ ಕಾಂಗ್ರೆಸ್ ಇದ್ದರೂ ರಾಹುಲ್ ಗಾಂಧಿ ಅಪ್ರಸ್ತುತ ಆಗುವ ಸಾಧ್ಯತೆ ಇದೆ.