ಬೆಳಗಾವಿ: ಜೆಪಿಸಿ ಅಧ್ಯಕ್ಷರ ಭೇಟಿ ಅನಧಿಕೃತ ಎಂದ ಸಚಿವ ಎಚ್.ಕೆ ಪಾಟೀಲ್ಗೆ ಸಂಸದ ತೇಜಸ್ವಿ ಸೂರ್ಯ ತಿರುಗೇಟು ನೀಡಿದ್ದಾರೆ. ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ತೇಜಸ್ವಿ ಸೂರ್ಯ ಪ್ರತಿಕ್ರಿಯೆ ನೀಡಿದ್ದು, ಜೆಪಿಸಿ ಅಧ್ಯಕ್ಷರ ಕಚೇರಿಯಿಂದಲೇ ಪ್ರವಾಸದ ಮಾಹಿತಿ ರಾಜ್ಯ ಸರ್ಕಾರ ಸಿಎಸ್, ಡಿಸಿಗಳಿಗೆ ನೀಡಲಾಗಿತ್ತು ಎಂದಿದ್ದಾರೆ.
ಹೆಲಿಕಾಪ್ಟರ್ ಲ್ಯಾಂಡಿಂಗ್, ಎಸ್ಕಾರ್ಟ್, ಪೊಲೀಸ್ ಭದ್ರತೆ ಕೊಡುವ ಕೆಲಸ ಜಿಲ್ಲಾಡಳಿತಗಳು ಮಾಡಿವೆ. ಈ ಎಲ್ಲಾ ಪ್ರಕ್ರಿಯೆ ಕೂಡ ಆಫಿಷಿಯಲ್ ಕಮ್ಯುನಿಕೇಶನ್ ಇಲ್ಲದೇ ಮಾಡಲು ಸಾಧ್ಯವೇ..? ಇವರು ಮಾಡಿದ ಕರ್ಮಕಾಂಡ ಇಡೀ ದೇಶಕ್ಕೆ ಗೊತ್ತಾಗಬಾರದು. ರಾಜ್ಯದಲ್ಲಿ ಸರ್ಕಾರವೇ ವಕ್ಫ್ ಬೋರ್ಡ್ಗೆ ಸಪೋರ್ಟ್ ಮಾಡಿ ರೈತರ ಸಾವಿರಾರು ಎಕರೆ ಜಮೀನನ್ನು, ಸಾವಿರಾರು ವರ್ಷಗಳಿಂದ ಇರುವ ಮಠಗಳು, ದೇವಸ್ಥಾನ ಜಾಗ ಕಬಳಿಸಲು ಕಾಂಗ್ರೆಸ್ ಸರ್ಕಾರ ನೀಡ್ತಿರುವ ವಾಸ್ತವತೆ ಜೆಪಿಸಿ ಎದುರು ಬರಬಾರದು. ದೇಶಕ್ಕೆ ಗೊತ್ತಾಗಬಾರದು ಎಂದು ಈ ರೀತಿಯ ಕಥೆಗಳನ್ನು ಹೇಳ್ತಿದ್ದಾರೆ ಎಂದಿದ್ದಾರೆ.
ಜೆಪಿಸಿ ಚೇರ್ಮನ್ ಕರ್ನಾಟಕಕ್ಕೆ ಬರುವ ಮುನ್ನ ಕಮ್ಯುನಿಕೇಶನ್ ಮಾಡಿಲ್ಲ ಎಂದು ಸುಳ್ಳು ಹೇಳ್ತಿದ್ದಾರೆ. ಜನರ ಅಹವಾಲು ಕೇಳುವುದು ಜೆಪಿಸಿ ಚೇರ್ಮನ್ ಡ್ಯೂಟಿ. ಇವರು ಮಾಡಿರುವ ಕೆಲಸ ಹೊರಗೆ ಬರಬಾರದು, ಗೊತ್ತಾಗಬಾರದು. ಗೊತ್ತಾದ್ರೆ ಇಡೀ ದೇಶದಲ್ಲಿ ಕಾಂಗ್ರೆಸ್ಗೆ ಛೀಮಾರಿ ಹಾಕ್ತಾರೆ ಅಂತ ಈ ರೀತಿ ಸುಳ್ಳು ಹೇಳ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ. ವಕ್ಫ್ ಆಸ್ತಿ ವಿವಾದದ ಬಗ್ಗೆ ಜೆಪಿಸಿ ಚೇರ್ಮನ್ ಕರ್ನಾಕದ ವಿಜಯಪುರಕ್ಕೆ ಭೇಟಿ ನೀಡಿದ್ದರು.