ರಾಜ್ಯ ವಿಧಾನಸಭಾ ಚುನಾವಣೆ ಎದುರಿಸಲು ಸಕಲ ಸಿದ್ಧತೆ ನಡೆಸುತ್ತಿರುವ ಕಾಂಗ್ರೆಸ್ ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕ್ಷೇತ್ರ ಆಯ್ಕೆ ತಲೆನೋವಾಗಿ ಪರಿಣಮಿಸಿದೆ. ಅಂದುಕೊಂಡಂತೆ ಎಲ್ಲವೂ ನಡೆದಿದ್ದರೆ ಕೋಲಾರದಲ್ಲಿಯೇ ಸಿದ್ದರಾಮಯ್ಯ ಸ್ಪರ್ಧಿಸಬೇಕಿದ್ದು, ಈಗಾಗಲೇ ಅಧಿಕೃತ ಘೋಷಣೆಯೂ ನಡೆದಿರಬೇಕಿತ್ತು.
ಆದರೆ, ಕೊನೆ ಕ್ಷಣದಲ್ಲಿ ಸಿದ್ದರಾಮಯ್ಯ ಅವರಿಗೆ ಕೋಲಾರದಲ್ಲಿ ವಿರೋಧಿ ಅಲೆ ಇದ್ದು, ಮಾಜಿ ಸಿಎಂ ಗೆಲುವಿನ ಹಾದಿ ಕಠಿಣವಿದೆ ಎಂದು ಹೈಕಮಾಂಡ್ ಗೆ ವರದಿ ಹೋಗಿದ್ದು, ಅಲ್ಲಿಂದ ಸ್ಪರ್ಧಿಸದಂತೆ ಹೈಕಮಾಂಡ್ ಸಲಹೆ ನೀಡಿದೆ. ಸಿದ್ದರಾಮಯ್ಯ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿ ಸದ್ಯ ಗೊಂದಲಕ್ಕೆ ಸಿಲುಕಿದ್ದಾರೆ.
ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸುವುದಿಲ್ಲ ಎನ್ನುವುದು ತಿಳಿಯುತ್ತಿದ್ದಂತೆ, ಕೋಲಾರ ಭಾಗದ ಕಾಂಗ್ರೆಸ್ ಮುಖಂಡರು ತೀವ್ರ ಅಸಮಾಧಾನ ಹಾಕಿದ್ದು, ಸಿದ್ದು ಕರೆದ ಸಭೆಗೂ ಗೈರಾಗಿದ್ದಾರೆ. ಕೋಲಾರದಲ್ಲಿ ಸಿದ್ದು ಸ್ಪರ್ಧಿಸಿದರೆ ಅವರ ವರ್ಚಸ್ಸಿನಲ್ಲಿ ಸ್ಥಳೀಯ ಇತರೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳೂ ಗೆಲ್ಲಬಹುದಿತ್ತು ಎಂಬುದು ಅವರ ಸರಳ ಲೆಕ್ಕಾಚಾರವಾಗಿತ್ತು. ಆದರೆ, ಏಕಾಏಕಿ ಸಿದ್ದರಾಮಯ್ಯ ವಿರೋಧಿ ಅಲೆ ಇದೆ ಎಂದು ಹಿಂದೆ ಸರಿಯುವುದರಿಂದ ಸ್ಥಳೀಯ ಕ್ಷೇತ್ರದ ಮೇಲೆ ನಕರಾತ್ಮಕ ಪರಿಣಾಮ ಬೀರಲಿದೆ ಎನ್ನುವುದು ರಮೇಶ್ ಕುಮಾರ್ ಮೊದಲಾದ ನಾಯಕರ ಆತಂಕಕ್ಕೆ ಕಾರಣವಾಗಿದೆ.
ಇದರ ನಡುವೆ, ಕೋಲಾರದಿಂದಲೇ ಸಿದ್ದರಾಮಯ್ಯ ಸ್ಪರ್ಧಿಸಬೇಕೆಂದು ಅಲ್ಲಿನ ಅಭಿಮಾನಿಗಳು ಪಟ್ಟು ಹಿಡಿಯುತ್ತಿದ್ದು, ದೊಡ್ಡ ಹೈಡ್ರಾಮವನ್ನೇ ಮಾಡುತ್ತಿದ್ದಾರೆ.
ಸಿದ್ದರಾಮಯ್ಯ ಅವರ ಕ್ಷೇತ್ರ ಆಯ್ಕೆ ಅತಂತ್ರ ಪರಿಸ್ಥಿತಿಯನ್ನು ರಾಜಕೀಯ ಲಾಭವನ್ನಾಗಿ ಮಾಡಲು ಬಿಜೆಪಿ ಸನ್ನದ್ದವಾಗಿದ್ದು, ಮಾಜಿ ಮುಖ್ಯಮಂತ್ರಿಗಳಿಗೆ ನೆಲೆ ಇಲ್ಲ ಎಂದು ಕಮಲ ಮುಖಂಡರು ವ್ಯಂಗ್ಯವಾಡುತ್ತಿದ್ದಾರೆ. ಇದು ಪಕ್ಷಕ್ಕೆ ಹಿನ್ನೆಡೆ ಉಂಟುಮಾಡುತ್ತಿದೆ ಎಂದು ಪಕ್ಷದ ವರಿಷ್ಠರು ಭಾವಿಸಿದ್ದು, ಆದಷ್ಟು ಬೇಗ ಕ್ಷೇತ್ರ ಆಯ್ಕೆ ಮಾಡುವಂತೆ ಸಿದ್ದರಾಮಯ್ಯ ಮೇಲೆ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ.
ಕೈ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿಯೇ ಸಿದ್ದರಾಮಯ್ಯ ಅವರ ಕ್ಷೇತ್ರವನ್ನು ಅಂತಿಮಗೊಳಿಸಬೇಕೆಂಬುದು ಕಾಂಗ್ರೆಸ್ ವರಿಷ್ಠರ ಬಯಕೆಯಾಗಿದ್ದು, ಅದಕ್ಕಾಗಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯೂ ವಿಳಂಬವಾಗುತ್ತಿದೆ. ಮೊದಲ ಪಟ್ಟಿ ಬಿಡುಗಡೆಯ ಬಳಿಕವಷ್ಟೇ ಉಳಿದ ಭಿನ್ನಮತ ಇರುವ ಕ್ಷೇತ್ರಗಳ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕಿರುವುದರಿಂದ ಸಿದ್ದರಾಮಯ್ಯ ಮೇಲೆ ಒತ್ತಡ ಹೆಚ್ಚಾಗುತ್ತಿದೆ.