ನ್ಯೂಯಾರ್ಕ್: ಇಸ್ರೇಲ್ ಮತ್ತು ಪ್ಯಾಲೆಸ್ಟೇನ್ ಹಮಾಸ್ ಉಗ್ರರ ನಡುವೆ ನಡೆಯುತ್ತಿರುವ ಸಂಘರ್ಷದಿಂದ ಉಂಟಾಗಿರುವ ಅಪಾರ ಜೀವ ಹಾನಿ ಸಂಬಂಧ ಭಾರತ ವಿಶ್ವಸಂಸ್ಥೆಯಲ್ಲಿ ಕಳವಳ ವ್ಯಕ್ತಪಡಿಸಿದೆ. ಈ ಸಂಬಂಧ ಉಭಯ ರಾಷ್ಟ್ರಗಳ ಈ ಕೂಡಲೇ ಹಿಂಸಾಚಾರವನ್ನು ಕೈ ಬಿಡುವಂತೆ ಭಾರತ ಒತ್ತಾಯಿಸಿದೆ.
ಇಸ್ರೇಲ್ ಮತ್ತು ಹಮಾಸ್ ಸಂಘರ್ಷ ಸಂಬಂಧ ಶುಕ್ರವಾರ ಇಲ್ಲಿ ನಡೆದ ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿ ತುರ್ತು ವಿಶೇಷ ಸಭೆಯಲ್ಲಿ ಭಾರತ ಕಳವಳ ವ್ಯಕ್ತಪಡಿಸಿತು. ಸಭೆಯಲ್ಲಿ ಭಾರತದ ಖಾಯಂ ಉಪ ಪ್ರತಿನಿಧಿ ಯೋಜನಾ ಪಟೇಲ್ ಮಾತನಾಡಿ, ಭಾರತವು ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಸಂಘರ್ಷದಿಂದ ಹದಗೆಡುತ್ತಿರುವ ಭದ್ರತಾ ಪರಿಸ್ಥಿತಿ ಮತ್ತು ನಾಗರಿಕರ ಸಾವಿನ ಸಂಬಂಧ ಕಳವಳ ವ್ಯಕ್ತಪಡಿಸುತ್ತದೆ. ಯುದ್ಧದಿಂದಾಗಿ ಈ ಪ್ರದೇಶದಲ್ಲಿ ಹಗೆತನ ಉಂಟಾಗುತ್ತಿದ್ದು, ಇದು ಮಾನವೀಯ ಬಿಕ್ಕಟ್ಟಿಗೆ ಕಾರಣವಾಗಿದೆ. ಈ ಸಂಬಂಧ ಎಲ್ಲಾ ದೇಶಗಳು ತನ್ನ ಜವಾಬ್ದಾರಿಯನ್ನು ಪ್ರದರ್ಶಿಸುವುದು ಅಗತ್ಯ ಎಂದು ಹೇಳಿದರು.
ಭಾರತವು ಇಸ್ರೇಲ್ ಮತ್ತು ಪ್ಯಾಲೆಸ್ಟೇನ್ ಬಿಕ್ಕಟ್ಟಿಗೆ ದ್ವಿರಾಜ್ಯ ಪರಿಹಾರವನ್ನು ಬೆಂಬಲಿಸುತ್ತದೆ. ಇದು ಸಾರ್ವಭೌಮ, ಸ್ವತಂತ್ರ ಪ್ಯಾಲೆಸ್ಟೇನ್ ದೇಶದ ನಿರ್ಮಾಣಕ್ಕೆ ಕಾರಣವಾಗುತ್ತದೆ. ಇದರಿಂದ ಪ್ಯಾಲೆಸ್ಟೇನ್ ಇಸ್ರೇಲ್ನೊಂದಿಗೆ ಶಾಂತಿಯುತ ಗಡಿಯನ್ನು ಹೊಂದಲು ಸಾಧ್ಯವಾಗುತ್ತದೆ. ಈ ಸಂಬಂಧ ಇಸ್ರೇಲ್ ಹಮಾಸ್ ಸಂಘರ್ಷವನ್ನು ಶಾಂತಿ ಮಾತುಕತೆಗಳ ಮೂಲಕ ಬಗೆಹರಿಸಲು ಮುಂದಾಗಬೇಕು ಎಂದು ಅಭಿಪ್ರಾಯಪಟ್ಟರು.
ಈ ಸಭೆಯು ಭಯೋತ್ಪಾದನೆ ಮತ್ತು ಹಿಂಸಾಚಾರದ ವಿರುದ್ಧ ಒಂದು ಸ್ಪಷ್ಟ ಸಂದೇಶವನ್ನು ರವಾನಿಸುತ್ತದೆ.