—-ನಾ ದಿವಾಕರ—-
ಪುರುಷಪ್ರಧಾನವಾಗಿರುವ ಸಾಹಿತ್ಯ ಸಮ್ಮೇಳನಗಳು ಈಗಾಗಲೇ ಲಿಂಗಸೂಕ್ಷ್ಮತೆ ಕಳೆದುಕೊಂಡಿವೆ.
——-
110 ವರ್ಷಗಳ ಭವ್ಯ ಇತಿಹಾಸ ಇರುವ ಕನ್ನಡ ಸಾಹಿತ್ಯ ಪರಿಷತ್ತು ನಿಯತಕಾಲಿಕವಾಗಿ ನಡೆಸುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಈ ಬಾರಿ ಮಂಡ್ಯ ಆತಿಥ್ಯ ನೀಡಲಿದೆ. ಮೂವತ್ತು ವರ್ಷಗಳ ನಂತರ ಕರ್ನಾಟಕದ ಸಕ್ಕರೆ ನಾಡು ಎಂದೇ ಹೆಸರಾದ ಮಂಡ್ಯದಲ್ಲಿ ನಡೆಯುತ್ತಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಲವು ಕಾರಣಗಳಿಂದ ಗಮನಸೆಳೆಯುತ್ತದೆ. ಮೊದಲನೆಯದಾಗಿ ಸಮ್ಮೇಳನದ ಪ್ರಧಾನ ವಿಷಯ ಅಥವಾ Theme ಏನಾಗಿರಬೇಕು ಎನ್ನುವುದಕ್ಕಿಂತಲೂ ಸಮ್ಮೇಳನಾಧ್ಯಕ್ಷರ ಆಯ್ಕೆ ಸಾರ್ವಜನಿಕ ಚರ್ಚೆಗೊಳಗಾಗಿದೆ. ಎರಡನೆಯದಾಗಿ ಊಳಿಗಮಾನ್ಯ-ಜಾತಿ ರಾಜಕಾರಣದ ಕೇಂದ್ರ ಬಿಂದುವಾಗಿರುವ ಮಂಡ್ಯದ ಸಮ್ಮೇಳನ ಸಾಹಿತ್ಯಕವಾಗಿಯೂ ಇದೇ ದಿಕ್ಕಿನಲ್ಲಿ ಸಾಗುತ್ತದೆಯೇ ಎಂಬ ಅನುಮಾನ ಮೂಡುತ್ತಿದೆ. ಏಕೆಂದರೆ ರಾಜಕೀಯ ಪ್ರಾಬಲ್ಯಕ್ಕೆ ಕಾರಣವಾಗುವ ಜಾತಿ ಸಮೀಕರಣಗಳೇ ಸಮ್ಮೇಳನದ ಒಳದನಿಯನ್ನೂ ನಿಯಂತ್ರಿಸುತ್ತಿರುವ ಸೂಚನೆಗಳು ಕಾಣುತ್ತಿವೆ.
ಈ ಸೂಕ್ಷ್ಮತೆಯನ್ನು ಸಮ್ಮೇಳನಾಧ್ಯಕ್ಷರ ಆಯ್ಕೆಯ ಪ್ರಶ್ನೆ ಸಾಹಿತ್ಯದ ಅಂಗಳದಿಂದ ರಾಜಕೀಯ ಕೂಪಕ್ಕೆ ಜಿಗಿದಿರುವುದರಲ್ಲಿ ಗುರುತಿಸಬಹುದು. ಸಮ್ಮೇಳನದ ಉಸ್ತುವಾರಿ ವಹಿಸುವ ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ಆರಂಭಿಸಿರುವ ಈ ಚರ್ಚೆಯ ಹಿಂದೆ ಯಾವ ಹಿತಾಸಕ್ತಿಗಳಿವೆ ಎನ್ನುವುದಕ್ಕಿಂತಲೂ ಹೆಚ್ಚಾಗಿ, ಸಾಹಿತ್ಯ ಮತ್ತು ಸಮಾಜದ ನಡುವೆ ಇರುವ ಸೂಕ್ಷ್ಮ ಸಂಬಂಧಗಳ ನಡುವೆ ಕಾಲಕಾಲಕ್ಕೆ ನಡೆಯುವ ಈ ಔಪಚಾರಿಕ ಜಾತ್ರೆಗೆ ಸಾಹಿತ್ಯೇತರ ವ್ಯಕ್ತಿಗಳನ್ನು ಅಧ್ಯಕ್ಷರನ್ನಾಗಿ ಮಾಡುವ ಆಲೋಚನೆ ಚಿಂತೆಗೀಡುಮಾಡುತ್ತದೆ. ಬೇರೆ ಕ್ಷೇತ್ರಗಳವರು ತಮ್ಮ ಕ್ಷೇತ್ರವನ್ನೂ ಸಮ್ಮೇಳನಾಧ್ಯಕ್ಷತೆಗೆ ಪರಿಗಣಿಸಲು ಮನವಿ ಮಾಡಿರುವುದಾಗಿ ಕಸಾಪ ಅಧ್ಯಕ್ಷ ಮಹೇಶ್ ಜೋಷಿ ಹೇಳಿದ್ದಾರೆ. ಯಾವ ಕ್ಷೇತ್ರಗಳವರು ಎಂದು ಸ್ಪಷ್ಟವಾಗಿ ಹೇಳದೆ ಹೋದರೂ, ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ತನ್ನ ಬೇರುಗಳನ್ನು ಹರಡಿರುವ ರಾಜಕೀಯದ ವಾಸನೆ ಬಡಿಯದೆ ಇರುವುದಿಲ್ಲ.
ರಾಜಕೀಯ ಮತ್ತು ಸಾಹಿತ್ಯ
ಸರ್ಕಾರದ ಕೃಪಾಕಟಾಕ್ಷದಲ್ಲೇ ಬಹುಮಟ್ಟಿಗೆ ನಡೆಯುವ ಸಾಹಿತ್ಯ ಸಮ್ಮೇಳನಗಳು ಈಗಾಗಲೇ ತಮ್ಮ ಸಾಹಿತ್ಯಕ ರೂಪವನ್ನು ಕಳೆದುಕೊಂಡಿದ್ದು, ಎರಡು ದಿನಗಳ ಅಕ್ಷರ ಜಾತ್ರೆಯಲ್ಲಿ ಅಧಿಕಾರಾರೂಢ ರಾಜಕೀಯ ಪಕ್ಷದ ಆಡಂಬರವೇ ಎದ್ದು ಕಾಣುವಂತಿರುತ್ತದೆ. ಮಹಾರಾಷ್ಟ್ರದಲ್ಲಿ ಮರಾಠಿ ಸಾಹಿತ್ಯ ಸಮ್ಮೇಳನಗಳಲ್ಲಿ ಯಾವುದೇ ರಾಜಕೀಯ ವ್ಯಕ್ತಿ ಅಥವಾ ಅಧಿಕಾರಶಾಹಿಯ ಪ್ರತಿನಿಧಿಗಳಿಗೆ ವೇದಿಕೆ ಇರುವುದಿಲ್ಲ. ಈ ಪರಂಪರೆಯನ್ನು ಇಂದಿಗೂ ಕಾಪಾಡಿಕೊಂಡು ಬರಲಾಗಿದೆ. ಈ ಪರಂಪರೆಯ ಹಿಂದಿನ ಔದಾತ್ಯವನ್ನು ಕನ್ನಡ ಸಾಹಿತ್ಯ ಲೋಕ ಇನ್ನಾದರೂ ಗಮನಿಸಬೇಕಿದೆ. ರಾಜಕೀಯ ಎನ್ನುವುದು ಅಧಿಕಾರದ ಸುತ್ತ ಹೆಣೆದುಕೊಳ್ಳುವ ಒಂದು ವಿದ್ಯಮಾನ. ಸಾಹಿತ್ಯ ಅಥವಾ ರಂಗಭೂಮಿ ಎನ್ನುವುದು ಅಧಿಕಾರಪೀಠಕ್ಕೆ ದೂರವಾದ ಒಂದು ಸಾಂಸ್ಕೃತಿಕ ಆಲೋಚನೆ. ಎಷ್ಟೇ ರಾಜಕೀಯ ಪ್ರಭಾವಕ್ಕೊಳಗಾದರೂ ಈ ಎರಡೂ ಕ್ಷೇತ್ರಗಳಲ್ಲಿರುವ ಸಾಹಿತಿಗಳು, ಕಲಾವಿದರು ಹಾಗೂ ಅಧ್ಯಯನಶೀಲ ವ್ಯಕ್ತಿಗಳು ತಮ್ಮ ಸೃಜನಶೀಲತೆಯನ್ನು ಕಾಪಾಡಿಕೊಂಡು, ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸುತ್ತಾ ಬಂದಿದ್ದಾರೆ.
ಸಾಹಿತ್ಯ ಸಮ್ಮೇಳನ ಎನ್ನುವುದು ಈ ಸೃಜನಶೀಲ ಸಾಹಿತ್ಯಕ ಅಭಿವ್ಯಕ್ತಿಯನ್ನು ವಿಶಾಲ ಸಮಾಜದ ನಡುವೆ ಇಟ್ಟು ನೋಡುವ ಒಂದು ಪ್ರಯತ್ನ. ಮೂಲತಃ ಸಾಹಿತ್ಯ ಎನ್ನುವುದು ಸುತ್ತಲಿನ ಸಮಾಜದ ಸ್ಥಿತ್ಯಂತರಗಳನ್ನು, ಜನಜೀವನ ಮತ್ತು ಆಗುಹೋಗುಗಳನ್ನು ಗಮನಿಸುತ್ತಲೇ ಬೆಳೆಯುವ ಒಂದು ಅಕ್ಷರ ಲೋಕದ ಪ್ರಯತ್ನ. ಇಲ್ಲಿ ಬರುವ ಫಸಲುಗಳೆಲ್ಲವೂ ವಸ್ತುನಿಷ್ಠವಾಗಿರುತ್ತದೆ ಎಂದು ಖಚಿತವಾಗಿ ಹೇಳಲಾಗುವುದಿಲ್ಲ. ಏಕೆಂದರೆ ಸಾಹಿತಿಗಳು ತಮ್ಮ ವ್ಯಕ್ತಿಗತ ನೆಲೆಯಲ್ಲಿ ನಿಂತು ಸಮಾಜವನ್ನು ನೋಡುತ್ತಾ ಬರೆಯುತ್ತಾರೆ. ಅಲ್ಲಿ ವ್ಯಕ್ತಿನಿಷ್ಠ ತಾತ್ವಿಕ ನಿಲುವುಗಳು ಪ್ರಧಾನವಾಗಿರುತ್ತವೆ. ಇದರೊಳಗಿನ ಒಂದು ಚಿಂತನಾಧಾರೆ ಸಮಾಜಮುಖಿಯಾಗಿ, ಸಮಷ್ಟಿ ಪ್ರಜ್ಞೆಯೊಂದಿಗೆ ಎಲ್ಲವನ್ನೂ ಒಳಗೊಳ್ಳುವ ಉದಾತ್ತ ಅಲೋಚನೆಗಳಿಗೆ ತೆರೆದುಕೊಂಡಿರುತ್ತದೆ. ಈ ಸಾಹಿತ್ಯ ಪ್ರಕಾರದಲ್ಲೇ ನಮ್ಮ ಸಮಾಜ ಎದುರಿಸುವ ಸಾಮಾಜಿಕ-ಸಾಂಸ್ಕೃತಿಕ ಸಿಕ್ಕುಗಳು ಮತ್ತು ಸವಾಲುಗಳೂ ಅಭಿವ್ಯಕ್ತಗೊಳ್ಳುತ್ತವೆ.
ಈ ಎರಡೂ ಧಾರೆಗಳನ್ನು ಸಮಾನಾಂತರವಾಗಿ ನೋಡುತ್ತಲೇ ಸಾಹಿತ್ಯ ಲೋಕವೂ ವಿಸ್ತರಿಸಿಕೊಳ್ಳುತ್ತದೆ. ಈ ವಿಭಿನ್ನ ಧಾರೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾ, ಅವುಗಳೊಳಗಿನ ಸಮಾಜಮುಖಿ ಚಿಂತನೆಗಳನ್ನು ಮುಖಾಮುಖಿಯಾಗಿಸಿ, ವಿಮರ್ಶೆಗೊಳಪಡಿಸುವ ಒಂದು ದೊಡ್ಡ ಜವಾಬ್ದಾರಿ ಸಾಹಿತ್ಯಪರಿಷತ್ತಿನಂತಹ ಸಂಸ್ಥೆಗಳ ಮೇಲಿರುತ್ತದೆ. ಕಸಾಪ ಹೀಗೆ ಮಾಡುತ್ತಿಲ್ಲ ಎನ್ನುವುದು ಬೇರೆ ವಿಚಾರ. ಆದರೆ ಕಾಲಕಾಲಕ್ಕೆ ನಡೆಯುವ ಸಾಹಿತ್ಯ ಸಮ್ಮೇಳನಗಳು ಈ ವಿಮರ್ಶಾತ್ಮಕ ಹಿನ್ನೋಟ ಮತ್ತು ದೂರಗಾಮಿ ಮುನ್ನೋಟಕ್ಕೆ ವೇದಿಕೆಯಾಗಿ ನಡೆಯಬೇಕಾಗುತ್ತದೆ. ಹಾಗಾಗಿಯೇ ಇಲ್ಲಿ ನಡೆಯುವ ಗೋಷ್ಠಿಗಳು, ಚರ್ಚೆ-ಸಂವಾದಗಳು ಆಯಾ ಕಾಲಘಟ್ಟದ ಸಾಮಾಜಿಕ ಸ್ಥಿತ್ಯಂತರಗಳ ಮೇಲೆ ಬೆಳಕು ಚೆಲ್ಲುತ್ತಲೇ, ತಳಮಟ್ಟಕ್ಕೂ ವಿಸ್ತರಿಸುವ ಸಾಮಾಜಿಕ ತಲ್ಲಣಗಳನ್ನು ದಾಖಲಿಸಿ, ಎಲ್ಲರನ್ನೊಳಗೊಳ್ಳುವ ಒಂದು ಸುಂದರ ಸಮಾಜದ ನಿರ್ಮಾಣಕ್ಕೆ ಬೇಕಾದ ಹಾದಿಗಳನ್ನು ಸೂಚಿಸುವಂತಿರಬೇಕಾಗುತ್ತದೆ. ಅದ್ದೂರಿ ಜಾತ್ರೆಗಳಂತೆ ನಡೆಯುವ ಸಾಹಿತ್ಯ ಸಮ್ಮೇಳನಗಳಲ್ಲಿ ಇದನ್ನು ಅಪೇಕ್ಷಿಸುವುದು ಅತಿ ಎನಿಸಿದರೂ ಇದು ಅಗತ್ಯ.
ಅಧ್ಯಕ್ಷತೆಯ ಔಚಿತ್ಯ ಮತ್ತು ಪ್ರಸ್ತುತತೆ
ಹಾಗಾಗಿಯೇ ಸಮ್ಮೇಳನಾಧ್ಯಕ್ಷರನ್ನು ಆಯ್ಕೆ ಮಾಡುವಾಗ ಅನುಸರಿಸಬೇಕಾದ ಮಾನದಂಡಗಳು ಗಂಭೀರ ಚರ್ಚೆಗೊಳಗಾಗಬೇಕಿದೆ. ಈಗ ಸಾಹಿತ್ಯ ವಲಯದಲ್ಲಿ ಉದ್ಭವಿಸಿರುವ ಚರ್ಚೆ “ಸಾಹಿತ್ಯೇತರ ವ್ಯಕ್ತಿಗಳನ್ನು” ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡುವ ವಿಚಾರದಲ್ಲಿ. ಮೊಟ್ಟಮೊದಲು ಈ ಅಪೇಕ್ಷೆಯೇ ಅನಗತ್ಯವಾದದ್ದು. ʼ ಸಾಹಿತ್ಯೇತರ ʼ ಎಂಬ ವಿಂಗಡನೆ ಬಹುಶಃ ಸಾಹಿತ್ಯದಲ್ಲಿ ತೊಡಗಿಕೊಳ್ಳದಿರುವವರನ್ನು ಉದ್ದೇಶಿಸಿ ಮೂಡಿಬಂದಂತೆ ಕಾಣುತ್ತದೆ. ಸಹಜವಾಗಿಯೇ ಇಲ್ಲಿ ಸಮಾಜದ ಇತರ ಕ್ಷೇತ್ರಗಳು ಗಮನಸೆಳೆಯುತ್ತವೆ. ಔದ್ಯೋಗಿಕ , ಔದ್ಯಮಿಕ, ಕಾರ್ಪೋರೇಟ್, ಸಾಫ್ಟ್‌ವೇರ್, ಚಿತ್ರರಂಗ, ಕ್ರೀಡೆ, ಸಮಾಜ ಸೇವೆ ಹೀಗೆ ವಿಸ್ತರಿಸಿಕೊಳ್ಳುತ್ತಾ ಕೊನೆಗೆ ಇದು ಬಂದು ತಲುಪುವುದು ʼ ರಾಜಕೀಯ ʼ ಎಂಬ ಕೇಂದ್ರ ಸ್ಥಾನಕ್ಕೆ. ಈ ಎಲ್ಲಾ ಕ್ಷೇತ್ರಗಳಲ್ಲೂ ತನ್ನ ಪ್ರಭಾವವನ್ನು ಹೊಂದಿರುವ ರಾಜಕೀಯ ವಲಯವೇ ಇಲ್ಲಿ ನಿರ್ಣಾಯಕವಾಗಿಬಿಡುತ್ತದೆ. ಇದರ ಪರಿಣಾಮ ಮತ್ತದೇ ಶಿಫಾರಸು, ಮೇಲಿನವರಿಂದ ಒತ್ತಡ, ʼ ನಮ್ಮವರಿಗೊಂದು ಅವಕಾಶ ʼ ಎಂಬ ಆಗ್ರಹ ಲಾಬಿಕೋರತನ ಇತ್ಯಾದಿ.
ಈ ಕ್ಷೇತ್ರಗಳಲ್ಲಿ ಕನ್ನಡ ನಾಡು ನುಡಿಯ ಸೇವೆ ಸಲ್ಲಿಸಿರುವವರು ಇಲ್ಲವೆಂದೇನಲ್ಲ. ನೂರಾರು ಕನ್ನಡ ಪರ ಸಂಘಟನೆಗಳೇ ಇಲ್ಲಿ ಎದ್ದು ಕಾಣುತ್ತವೆ. ಈಗಾಗಲೇ ಜಿಲ್ಲಾ ಸಾಹಿತ್ಯ ಪರಿಷತ್ತಿನ ಆಯಕಟ್ಟಿನ ಜಾಗಗಳಲ್ಲಿ ಈ ಕ್ಷೇತ್ರಗಳಿಂದ ಬಂದ ವ್ಯಕ್ತಿಗಳು ಸುರಕ್ಷಿತ ಸ್ಥಾನಗಳನ್ನು ಗಳಿಸಿ ಆಗಿದೆ. ಈ ಕ್ಷೇತ್ರ ಕಾರ್ಯಕರ್ತರ ಅಥವಾ ಮುಂಚೂಣಿ ನಾಯಕರ ಕನ್ನಡಾಭಿಮಾನ, ಭಾಷಾ ಶ್ರದ್ಧೆ ಮತ್ತು ಬದ್ಧತೆಯನ್ನು ಸಮ್ಮಾನಿಸಬೇಕಾದ್ದು ಸಮಾಜದ ಕರ್ತವ್ಯ. ಆದರೆ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಲು ಇವಿಷ್ಟೇ ಸಾಲುವುದಿಲ್ಲವಲ್ಲಾ ! ಇಲ್ಲಿ ಅಧ್ಯಕ್ಷ ಸ್ಥಾನ ವಹಿಸುವವರಿಗೆ ಸಾಹಿತ್ಯ ಕೃಷಿಯ ಅನುಭವ ಇರಬೇಕು, ಅಷ್ಟೇ ಅಲ್ಲದೆ ಸಾಹಿತ್ಯಕ ಸೃಜನಶೀಲ ಕಣ್ಣೋಟದಿಂದ ಇಡೀ ಸಮಾಜವನ್ನು ಒಳಹೊಕ್ಕು ನೋಡುವ ಹಾಗೂ ಅದರೊಳಗಿನ ತಲ್ಲಣ, ತುಮುಲ, ತೊಳಲಾಟಗಳನ್ನು ಗ್ರಹಿಸುವ ಸಾಮರ್ಥ್ಯ ಇರಬೇಕು. ಸಾಹಿತ್ಯ ಕೃಷಿಯಿಂದ ಹೊರತಾದ ವ್ಯಕ್ತಿಗಳಲ್ಲಿ ಇಂತಹ ಸಂವೇದನೆ ಇರಬಹುದಾದರೂ, ಅದನ್ನು ಕನ್ನಡ ಸಾಹಿತ್ಯದ ಒಳನೋಟದೊಂದಿಗೆ ನೋಡುವ ವ್ಯವಧಾನ ಇರುವುದು ಅನುಮಾನ. ಹಾಗಾಗಿಯೇ ಸಮ್ಮೇಳನಾಧ್ಯಕ್ಷ ಸ್ಥಾನಕ್ಕೆ ಸಾಹಿತ್ಯೇತರ ವ್ಯಕ್ತಿಗಳು ಅನಪೇಕ್ಷಿತವಾಗುತ್ತಾರೆ.
ಮಹಿಳಾ ಪ್ರಾತಿನಿಧ್ಯದ ಪ್ರಶ್ನೆ
ಇಲ್ಲಿ ಮತ್ತೊಂದು ಸೂಕ್ಷ್ಮವನ್ನೂ ನಾವು ಗಂಭೀರವಾಗಿ ಪರಾಮರ್ಶಿಸಬೇಕಿದೆ. ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಅದು ಒಂದು ಶತಮಾನದಿಂದ ನಡೆಸುತ್ತಿರುವ ವಾರ್ಷಿಕ-ದ್ವಿವಾರ್ಷಿಕ ಸಮ್ಮೇಳನಗಳ ಚರಿತ್ರೆಯನ್ನು ಗಮನಿಸಿದಾಗ ಅಲ್ಲಿ ನಮಗೆ ಢಾಳಾಗಿ ಕಾಣುವ ಕೊರತೆ ಎಂದರೆ ಮಹಿಳಾ ಪ್ರಾತಿನಿಧ್ಯ. 110 ವರ್ಷಗಳ ದೀರ್ಘ ಇತಿಹಾಸದಲ್ಲಿ ಕಸಾಪ ಒಮ್ಮೆಯೂ ಮಹಿಳಾ ಅಧ್ಯಕ್ಷರನ್ನು ಹೊಂದಿಲ್ಲದಿರುವುದು ಸಾಹಿತ್ಯ ವಲಯದಲ್ಲಿ ಬೇರೂರಿರುವ ಗಂಡಾಳ್ವಿಕೆಯ ಸಂಕೇತವಾಗಿ ಕಾಣುತ್ತದೆ. ಇತ್ತೀಚಿನ ದಿನಗಳಲ್ಲಿ ಕಸಾಪ ಚುನಾವಣೆಗಳೂ ಅಧಿಕಾರ ರಾಜಕಾರಣದ ರೀತಿಯಲ್ಲೇ ನಡೆಯುವುದರಿಂದ ಹಣಬಲ, ಜಾತಿಬಲ ಮತ್ತು ಸೈದ್ದಾಂತಿಕ ಪ್ರಾಬಲ್ಯಗಳೇ ಪ್ರಧಾನವಾಗಿದ್ದು, ರಾಜಕೀಯ ಅಧಿಕಾರ ವಲಯಗಳಂತೆಯೇ ಕಸಾಪ ಸಹ ಗಂಡಾಳ್ವಿಕೆಯ ಕೇಂದ್ರವಾಗಿದೆ.
ಅದಿರಲಿ, ಈ ಕೊರತೆಯ ಜೊತೆಗೇ ಎದ್ದುಕಾಣುವ ಮತ್ತೊಂದು ಅಂಶ ಎಂದರೆ ಕಾಲಕಾಲಕ್ಕೆ ನಡೆಯುವ ಅಖಿಲ ಭಾರತ ಸಾಹಿತ್ಯ ಸಮ್ಮೇಳನಗಳಲ್ಲಿ ಮಹಿಳಾ ಪ್ರಾತಿನಿಧ್ಯದ ಕೊರತೆ. ಕಳೆದ 110 ವರ್ಷಗಳಲ್ಲಿ 86 ಅಖಿಲ ಭಾರತ ಸಮ್ಮೇಳನಗಳು ನಡೆದಿವೆ. ಇವುಗಳಲ್ಲಿ ಮಹಿಳಾ ಸಾಹಿತಿಗೆ ಸಿಕ್ಕಿರುವ ಸ್ಥಾನವನ್ನು ಗಮನಿಸಿದಾಗ, ಸಾಹಿತ್ಯ ಪರಿಷತ್ತು ಇಂದಿಗೂ ಗಂಡಾಳ್ವಿಕೆಯ ನೆರಳಲ್ಲೇ ಸಾಗುತ್ತಿರುವುದು ಹೆಚ್ಚು ಸ್ಪಷ್ಟವಾಗುತ್ತದೆ. ಸಮ್ಮೇಳನಾಧ್ಯಕ್ಷರಾಗಿ ಮೊದಲಬಾರಿ ಮಹಿಳೆ ಆಯ್ಕೆಯಾಗಲು 60 ವರ್ಷಗಳೇ ಬೇಕಾದವು (1974 ಜಯದೇವಿತಾಯಿ ಲಿಗಾಡೆ). ಆನಂತರ ಮಹಿಳಾ ಸಾಹಿತಿಗಳಿಗೆ 26 ವರ್ಷಗಳ ಕಡ್ಡಾಯ ರಜೆ ನೀಡಲಾಯಿತು. ಕನ್ನಡ ಸಾಹಿತ್ಯದ ಉತ್ಕರ್ಷದ ಕಾಲಘಟ್ಟ ಎನ್ನಬಹುದಾದ 1975-2000ರ ಅವಧಿಯಲ್ಲಿ ಮಹಿಳಾ ಸಾಹಿತಿಗಳು ಪ್ರಕಟಿಸಿದ ಅಕ್ಷರ ಭಂಡಾರ, ಕನ್ನಡ ಸಾಹಿತ್ಯ ಪರಂಪರೆಗೆ ಹೆಮ್ಮೆ ತರುವಂತಹುದು. ಆದರೂ ಈ ಅವಧಿಯಲ್ಲಿ ಕಸಾಪದ ಕಣ್ಣಿಗೆ ಒಬ್ಬ ಮಹಿಳಾ ಸಾಹಿತಿಯೂ ಕಾಣಲಿಲ್ಲ. ಸಮಾನತೆಯ ಘೋಷಣೆ ಸಮಾಜದ ಎಲ್ಲ ಸ್ತರಗಳನ್ನೂ ಆವರಿಸಿದ್ದ ಕಾಲಘಟ್ಟದಲ್ಲಿ ಹೀಗೇಕಾಯಿತು ? ಇದು ಆತ್ಮವಿಮರ್ಶೆಗೆ ಪ್ರೇರೇಪಿಸುವ ಪ್ರಶ್ನೆ.
ತದನಂತರ ಹೊಸ ಶತಮಾನದಲ್ಲ, 2000ದ ನಂತರ ನಡೆದಿರುವ 19 ಸಮ್ಮೇಳನಗಳಲ್ಲಿ ಕೇವಲ ಮೂರು ಬಾರಿ ಮಹಿಳಾ ಸಾಹಿತಿಯನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. (2000 ಶಾಂತಾದೇವಿ ಮಾಳವಾಡ 2003 ಕಮಲಾ ಹಂಪನಾ 2010 ಗೀತಾ ನಾಗಭೂಷಣ). ಇದರರ್ಥ ಕನ್ನಡ ಸಾಹಿತ್ಯ ಲೋಕದಲ್ಲಿ ಸಮ್ಮೇಳನಾಧ್ಯಕ್ಷರಾಗುವ ಅರ್ಹತೆ ಇರುವ ಮಹಿಳಾ ಸಾಹಿತಿಗಳು ಇಲ್ಲವೆಂದೇನಲ್ಲ. ಸಾಮಾಜಿಕ ಪಿತೃಪ್ರಧಾನತೆ, ರಾಜಕೀಯ ಪುರುಷಾಧಿಪತ್ಯ, ಸಾಂಸ್ಕೃತಿಕ ಗಂಡಾಳ್ವಿಕೆ ಇವುಗಳನ್ನು ದಿಟ್ಟವಾಗಿ ಎದುರಿಸುತ್ತಲೇ, ಪುರುಷ ಸಮಾಜದ ವಿಕೃತಿಗಳಿಗೆ ಬಲಿಯಾದ ಸಹಸ್ರಾರು ಮಹಿಳೆಯರಿಗೆ ದನಿಯಾಗುವಂತಹ ಸಾಹಿತ್ಯ ಈ ಅವಧಿಯಲ್ಲಿ ಮಹಿಳಾ ಸಾಹಿತಿಗಳಿಂದಲೇ ವಿಪುಲವಾಗಿ ಹರಿದುಬಂದಿದೆ. ಆದರೂ ಸಮ್ಮೇಳನಾಧ್ಯಕ್ಷರ ಸ್ಥಾನದಿಂದ ಮಹಿಳೆ ವಂಚಿತಳಾಗಿದ್ದಾಳೆ. ಕಾರಣ ಸ್ಪಷ್ಟ, ಆ ಗೌರವಯುತ ಸ್ಥಾನಕ್ಕೆ ಮಹಿಳೆಯನ್ನು ಕೂರಿಸುವ ವಿಶಾಲ ಚಿಂತನೆ-ಸೂಕ್ಷ್ಮತೆ ಕನ್ನಡ ಸಾಹಿತ್ಯ ಲೋಕಕ್ಕೆ ಅಥವಾ ಅದನ್ನು ನಿರ್ದೇಶಿಸುವ ಸಾಂಸ್ಥಿಕ ಗಂಡಾಳ್ವಿಕೆಗೆ ಇರಲಿಲ್ಲ/ಈಗಲೂ ಇಲ್ಲ.
ಸಾಮಾಜಿಕ ನ್ಯಾಯ, ಸಮಾನತೆ ಇತ್ಯಾದಿ
ಸಾಮಾಜಿಕ ನ್ಯಾಯದ ಘೋಷಣೆಯೊಂದಿಗೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಇತ್ತೀಚೆಗೆ ಸಾಂಸ್ಕೃತಿಕ ವಲಯದ ಸಂಸ್ಥೆಗಳಿಗೆ ಮಾಡಿರುವ ನೇಮಕ ಪ್ರಕ್ರಿಯೆಯಲ್ಲೇ ಈ ತಾರತಮ್ಯವನ್ನು ಕಂಡಿದ್ದೇವೆ. ಮಹಿಳಾ ದೌರ್ಜನ್ಯಗಳು ನಿತ್ಯ ಸುದ್ದಿಗಳಾಗಿರುವ ಹೊತ್ತಿನಲ್ಲಿ ರಾಜ್ಯ ಮಹಿಳಾ ಆಯೋಗಕ್ಕೆ ಸದಸ್ಯರನ್ನು ನೇಮಿಸುವ ಕನಿಷ್ಠ ವಿವೇಕವನ್ನೂ ಸರ್ಕಾರ ಕಳೆದುಕೊಂಡಿದೆ. ಇದರ ವಿಸ್ತೃತ ರೂಪವನ್ನೇ ನಾವು ಕಸಾಪ ಮತ್ತು ಅದು ನಡೆಸುವ ಸಾಹಿತ್ಯ ಸಮ್ಮೇಳನಗಳಿಗೂ ಅನ್ವಯಿಸಬಹುದು. ಈ ಸೂಕ್ಷ್ಮತೆ ಇರುವುದೇ ಆದಲ್ಲಿ ಮಂಡ್ಯದಲ್ಲಿ ನಡೆಯಲಿರುವ 87ನೆಯ ಸಾಹಿತ್ಯ ಸಮ್ಮೇಳನದ ಮುಖ್ಯ ವಿಷಯ ಅಥವಾ ಥೀಮ್ ಮಹಿಳೆಯೇ ಆಗಬೇಕಿದೆ. ಮಂಡ್ಯ ಈಗ ಸಕ್ಕರೆ-ಕನ್ನಂಬಾಡಿಗಿಂತಲೂ ಹೆಚ್ಚಾಗಿ ವಿಶ್ವಮಾನ್ಯವಾಗಿರುವುದು ಹೆಣ್ಣು ಭ್ರೂಣ ಹತ್ಯೆಗಳಿಗಾಗಿ ಮತ್ತು ಕುಸಿಯುತ್ತಿರುವ ಲಿಂಗಾನುಪಾತಕ್ಕಾಗಿ.
ಇತ್ತೀಚಿನ ಅಧಿಕೃತ ವರದಿಗಳ ಅನುಸಾರ ಮಂಡ್ಯ ಜಿಲ್ಲೆಯ ಲಿಂಗಾನುಪಾತ 1000:875 ರಷ್ಟಿದೆ ಅಂದರೆ ಒಂದು ಸಾವಿರ ಗಂಡುಮಕ್ಕಳಿಗೆ 875 ಹೆಣ್ಣುಮಕ್ಕಳಿದ್ದಾರೆ. ಮತ್ತೊಂದು ಆಘಾತಕಾರಿ ಅಂಶವೆಂದರೆ ಬಾಲ್ಯ ವಿವಾಹ ಪ್ರಕರಣಗಳಲ್ಲಿ ಮಂಡ್ಯ ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದೆ. ಇವೆರಡನ್ನೂ ಮೀರಿಸುವ ಆಘಾತ ಎಂದರೆ ಸಾವಿರಾರು ಹೆಣ್ಣು ಭ್ರೂಣ ಹತ್ಯೆಗಳು ಸಂಭವಿಸುತ್ತಿರುವುದು. ಈ ಹಿನ್ನೆಲೆಯಲ್ಲಿ ನೋಡಿದಾಗ 87ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಥೀಮ್ ʼಮಹಿಳೆ ʼ ಆಗಬೇಕಿದೆ. ಸಮ್ಮೇಳನಾಧ್ಯಕ್ಷರು ಮಹಿಳೆಯೇ ಆಗಬೇಕಿದೆ. ಒಂದು ಶತಮಾನ ಕಳೆದರೂ ಮಹಿಳಾ ಪ್ರಾತಿನಿಧ್ಯ ಒಂದು ಸಹಜ ಪ್ರಕ್ರಿಯೆಯಾಗದೆ, ಆಗ್ರಹವಾಗಿಯೇ ಕೇಳಿಬರುತ್ತಿರುವುದು ನಾಚಿಕೆಗೇಡಿನ ವಿಚಾರವಲ್ಲವೇ ? ಪಿತೃಪ್ರಧಾನತೆ, ಸಾಂಸ್ಕೃತಿಕ ಲೋಕದ ಸಾಂಸ್ಥಿಕ ಗಂಡಾಳ್ವಿಕೆ, ಅಧಿಕಾರ ರಾಜಕಾರಣದ ಪುರುಷಾಧಿಪತ್ಯ ಮತ್ತು ಮರೆಯಾಗುತ್ತಲೇ ಇರುವ ಲಿಂಗ ಸೂಕ್ಷ್ಮತೆ – ಈ ತಲ್ಲಣಗಳ ದೃಷ್ಟಿಯಿಂದ ಮಂಡ್ಯದಲ್ಲಿ ನಡೆಯುವ 87ನೆಯ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಮಹಿಳಾ ಅಧ್ಯಕ್ಷರನ್ನು ಆಯ್ಕೆ ಮಾಡುವುದು ನಮ್ಮ ಆದ್ಯತೆಯಾಗಬೇಕಿದೆ. ಸಾಹಿತ್ಯೇತರ ವ್ಯಕ್ತಿ-ಸಂಸ್ಥೆ-ಸಂಘಟನೆಗಳನ್ನು ಹೊರಗಿಟ್ಟು, ಸಾಹಿತ್ಯ ಲೋಕದಿಂದಲೇ ಮಹಿಳಾ ಸಾಹಿತಿಯನ್ನು ಆಯ್ಕೆ ಮಾಡಬೇಕಿದೆ. ಈ ಸ್ಥಾನವನ್ನು ಸಮರ್ಪಕವಾಗಿ ನಿಭಾಯಿಸಬಲ್ಲ ಮಹಿಳಾ ಸಾಹಿತಿಗಳು ನಮ್ಮ ನಡುವೆ ಹೇರಳವಾಗಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ತೆರೆದ ಕಣ್ಣು, ಮುಕ್ತ ಮನಸ್ಸಿನಿಂದ ನೋಡಬೇಕಷ್ಟೇ.