ಭಾರತದಲ್ಲಿ ಅಗ್ನಿಪಥ್ ಯೋಜನೆ ಘೋಷಣೆಯಾಗುತ್ತಿದ್ದಂತೆ ದೇಶಾದ್ಯಂತ ಅದರ ವಿರುದ್ಧ ಪ್ರತಿಭಟನೆಗಳು ನಡೆದವು, ಕೆಲವು ಕಡೆ ಈ ಪ್ರತಿಭಟನೆಗಳು ಹಿಂಸಾತ್ಮಕವೂ ಆದವು. ಅಗ್ನಿಪಥ್ ಯೋಜನೆಯಂತೆ ನಾಲ್ಕು ವರ್ಷಗಳ ನಂತರ ಅಗ್ನಿವೀರರಾಗಿ ನೇಮಕ ಮಾಡಿಕೊಂಡವರನ್ನು ಸೇವೆಯಿಂದ ಬಿಡುಗಡೆಗೊಳಿಸಲಾಗುವುದು. ಅವರಿಗೆ ಯಾವುದೇ ರೀತಿಯ ಪಿಂಚಣಿ ನೀಡಲಾಗುವುದಿಲ್ಲ. ಹಾಗಾಗಿಯೇ ಅಗ್ನಿಪಥ್ ವಿರುದ್ಧ ದೊಡ್ಡ ಮಟ್ಡದ ಪ್ರತಿರೋಧವೆದ್ದದ್ದು. ಇದೀಗ ಭಾರತ ಮಾತ್ರವಲ್ಲದೆ ನೇಪಾಳದಲ್ಲಿ ಸಹ ಭಾರತದ ಈ ಯೋಜನೆಗೆ ವಿರೋಧ ಕಂಡು ಬಂದಿದೆ. ಅಗ್ನಿಪಥ್ ಯೋಜನೆಯ ಬಗ್ಗೆ ಹೆಚ್ಚಿನ ಸ್ಪಷ್ಟತೆ ಬರುವವರೆಗೆ ನೇಪಾಳಿಗಳ ನೇಮಕಾತಿಯನ್ನು ಮುಂದೂಡುವಂತೆ ನೇಪಾಳವು ಭಾರತೀಯ ಸೇನೆಗೆ ಮನವಿ ಮಾಡಿದೆ .
ನೇಪಾಳಿ ಪತ್ರಿಕೆ ‘ಮೈ ರಿಪಬ್ಲಿಕಾ’ ಪ್ರಕಾರ, ವಿದೇಶಾಂಗ ಸಚಿವ ನಾರಾಯಣ್ ಖಡ್ಕಾ ಅವರು ಬುಧವಾರ ಭಾರತೀಯ ರಾಯಭಾರಿ ನವೀನ್ ಶ್ರೀವಾಸ್ತವ ಅವರನ್ನು ಸಚಿವಾಲಯಕ್ಕೆ ಕರೆದು ಅಗ್ನಿಪಥ್ ಯೋಜನೆಯಡಿಯಲ್ಲಿ ಭಾರತೀಯ ಸೇನೆಯ ಗೂರ್ಖಾ ರೆಜಿಮೆಂಟ್‌ಗೆ ಸೇರ್ಪಡೆಗೊಂಡ ನೇಪಾಳಿ ಯುವಕರನ್ನು ನೇಮಿಸಿಕೊಳ್ಳುವ ಯೋಜನೆಯನ್ನು ಮುಂದೂಡುವಂತೆ ಹೇಳಿಕೊಂಡಿದ್ದಾರೆ.
ಭಾರತೀಯ ಸೇನೆಯು ಪಶ್ಚಿಮ ನಗರವಾದ ಬುಟ್ವಾಲ್‌ನಲ್ಲಿ ಗುರುವಾರ ಮತ್ತು ಸೆಪ್ಟೆಂಬರ್ 1 ರಂದು ಪೂರ್ವ ನಗರವಾದ ಧರಣ್‌ನಲ್ಲಿ ನೇಪಾಳಿಗರನ್ನು ನೇಮಕ ಮಾಡಿಕೊಳ್ಳಲು ಯೋಜಿಸಿತ್ತು. ಮೈ ರಿಪಬ್ಲಿಕಾ ಪ್ರಕಾರ, ನೇಪಾಳದ ವಿದೇಶಾಂಗ ಸಚಿವ ಖಡ್ಕಾ ಅವರು ಭಾರತೀಯ ರಾಯಭಾರಿಗೆ “ನೇಪಾಳದ ಎಲ್ಲಾ ರಾಜಕೀಯ ಪಕ್ಷಗಳು ಅಗ್ನಿಪಥ್ ಯೋಜನೆಯ ಬಗ್ಗೆ ಅವಿರೋಧವನ್ನು ಹೊಂದುವುದು ಅನಿವಾರ್ಯ” ಎಂದು ಹೇಳಿದ್ದಾರೆ. ಹಾಗಾಗಿ ಅಗ್ನಿಪಥ್ ಯೋಜನೆಯನ್ನು ಸರಿಯಾಗಿ ಪರಿಶೀಲಿಸಿ ಒಮ್ಮತದ ನಿರ್ಧಾರಕ್ಕೆ ತಲುಪುವವರೆಗೆ ನೇಮಕಾತಿಯನ್ನು ನಿಲ್ಲಿಸುವಂತೆ ಭಾರತವನ್ನು ನೇಪಾಳ ವಿನಂತಿಸಿಕೊಂಡಿದೆ.
1947 ರಲ್ಲಿ ಸಹಿ ಮಾಡಿದ ತ್ರಿಪಕ್ಷೀಯ ಒಪ್ಪಂದದ ಪ್ರಕಾರ ನೇಪಾಳಿ ಪ್ರಜೆಗಳನ್ನು ಭಾರತ ಮತ್ತು ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಮಿಲಿಟರಿ ಸೇವೆಗಳಿಗೆ ನೇಮಕ ಮಾಡಿಕೊಳ್ಳಬಹುದು. ಕಠ್ಮಂಡು ಪೋಸ್ಟ್ ಪ್ರಕಾರ, ಈ ವರ್ಷ ಸುಮಾರು 1,300 ನೇಪಾಳಿಗಳನ್ನು ಅಗ್ನಿಪಥ್ ಯೋಜನೆಯಡಿ ನೇಮಕ ಮಾಡಿಕೊಳ್ಳಲಾಗಿದೆ, ಹಿಂದಿನ ವರ್ಷಗಳಿಗೆ ಹೋಲಿಸಿದರೆ ಇದು ತೀರಾ ಕಡಿಮೆ. ಒಟ್ಟಾರೆಯಾಗಿ, ಈ ವರ್ಷ ಮೂರೂ ಭಾರತೀಯ ಸೇವಾ ಶಾಖೆಗಳಿಗೆ ಸುಮಾರು 40,000 ‘ಅಗ್ನಿವೀರ್’ಗಳನ್ನು ನೇಮಕ ಮಾಡಿಕೊಳ್ಳುವ ನಿರೀಕ್ಷೆಯಿದೆ.
ಸುದ್ದಿ ಸಂಸ್ಥೆ IANS ಪ್ರಕಾರ, ಜೂನ್ 14 ರಂದು ಅಗ್ನಿಪಥ್ ಘೋಷಿಸಿದ ನಂತರ, ಭಾರತೀಯ ಸೇನೆಯು ಕಠ್ಮಂಡುವಿನಲ್ಲಿ ಭಾರತೀಯ ರಾಯಭಾರ ಕಚೇರಿಯ ಮೂಲಕ ನೇಪಾಳದ ವಿದೇಶಾಂಗ ಸಚಿವಾಲಯಕ್ಕೆ ಪತ್ರ ಬರೆದು ನೇಮಕಾತಿ ಮತ್ತು ಭದ್ರತಾ ಬೆಂಬಲಕ್ಕಾಗಿ ಅನುಮೋದನೆಯನ್ನು ಕೋರಿತ್ತು. ಆದರೆ ನೇಪಾಳ ಸರ್ಕಾರವು ಭಾರತೀಯ ಸೇನೆಗೆ ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಲು ಅವಕಾಶ ನೀಡುತ್ತದೆಯೇ ಎಂಬುವುದರ ಬಗ್ಗೆ ಭಾರತದ ಬಳಿ ಚರ್ಚೆ ನಡೆಸಲು ವಿಫಲವಾಗಿತ್ತು. ಬುಧವಾರ, ಬುಟ್ವಾಲ್‌ನಲ್ಲಿ ಯೋಜಿತ ನೇಮಕಾತಿಗೆ ಒಂದು ದಿನದ ಮೊದಲು, ನೇಪಾಳ ವಿದೇಶಾಂಗ ಸಚಿವರು ನೇಪಾಳಿ ಯುವಕರ ನೇಮಕಾತಿಯನ್ನು ವಿಳಂಬಗೊಳಿಸುವಂತೆ ಭಾರತವನ್ನು ಕೇಳಿಕೊಂಡಿದೆ.
ನೇಪಾಳದ ಮೇಲೆ ಅಗ್ನಿಪಥ್ ಯೋಜನೆಯ ಸಾಮಾಜಿಕ ಪರಿಣಾಮದ ಬಗ್ಗೆ ರಕ್ಷಣಾ ವಿಶ್ಲೇಷಕರು ಚಿಂತಿತರಾಗಿದ್ದಾರೆ ಎಂದು ಪತ್ರಿಕೆ ವರದಿ ಮಾಡಿದೆ. “ಭಾರತೀಯ ಗೂರ್ಖಾಗಳಲ್ಲಿ ಪೂರ್ಣ ವೃತ್ತಿಜೀವನವನ್ನು ಕಳೆಯುವುದಕ್ಕಿಂತ ಹೆಚ್ಚಾಗಿ ಯುದ್ಧ ಮತ್ತು ಶಸ್ತ್ರಾಸ್ತ್ರಗಳಲ್ಲಿ ತರಬೇತಿ ಪಡೆದ ಯುವಕರನ್ನು ನೇಪಾಳಕ್ಕೆ ಮರಳಿ ಕಳುಹಿಸಿದ ಮೇಲೆ ನೇಪಾಳಿ ಸಮಾಜದ ಮೇಲೆ ಅವರು ಬೀರಬಹುದಾದ ಸಾಮಾಜಿಕ ಪ್ರಭಾವವನ್ನು ಪರಿಗಣಿಸಬೇಕು. ಅಂತಹ ಪರಿಸ್ಥಿತಿಯು ಸಮಾಜದಲ್ಲಿ ಬಂದೂಕು-ಹಿಂಸಾಚಾರ ಮತ್ತು ಇತರ ರೀತಿಯ ಹಿಂಸಾಚಾರದ ಮಟ್ಟವನ್ನು ಹೆಚ್ಚಿಸುವ ಸಾಧ್ಯತೆಯಿದೆ ಎಂಬುದಕ್ಕೆ ಸಾಮಾಜಿಕ ಪುರಾವೆಗಳಿವೆ. ಈ ಸಂಬಂಧ ಭಾರತೀಯರು ಸಹ ಕಳವಳ ವ್ಯಕ್ತಪಡಿಸಿದ್ದಾರೆ ”ಎಂದು ನೇಪಾಳದ ಮಾಜಿ ಸೇನಾ ಜನರಲ್ ಹೇಳಿರುವುದಾಗಿ ‘ಮೈ ರಿಪಬ್ಲಿಕಾ’ ವರದಿ ಮಾಡಿದೆ.
ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿದ ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ, “ನಾವು ಬಹಳ ಸಮಯದಿಂದ ಭಾರತೀಯ ಸೇನೆಗೆ ಗೂರ್ಖಾ ಸೈನಿಕರನ್ನು ನೇಮಕ ಮಾಡುತ್ತಿದ್ದೇವೆ. ಅಗ್ನಿಪಥ್ ಯೋಜನೆಯಡಿಯಲ್ಲಿ ಭಾರತೀಯ ಸೇನೆಗೆ ಗೂರ್ಖಾ ಸೈನಿಕರ ನೇಮಕಾತಿಯನ್ನು ಮುಂದುವರಿಸುವುದನ್ನು ನಾವು ಎದುರು ನೋಡುತ್ತಿದ್ದೇವೆ” ಎಂದು ಹೇಳಿದ್ದಾರೆ.