ಬುಧವಾರ ಮುಂಜಾನೆ ‘ಪ್ರತಿಧ್ವನಿ’ ಪ್ರಕಟಿಸಿದ ವರದಿಯಲ್ಲಿ ಹೈಕೋರ್ಟ್ನಲ್ಲಿ ಕನ್ನಡ ವಿಚಾರವಾಗಿ ನಡೆಯುತ್ತಿರುವ ಕುರಿತ ವಿವರಗಳಿವೆ. ಪದವಿ ತರಗತಿಗಳಲ್ಲಿ ಕನ್ನಡವನ್ನು ಕಡ್ಡಾಯಗೊಳಿಸಿದ್ದನ್ನು ಪ್ರಶ್ನಿಸಿ ಹೈಕೋರ್ಟ್ ಮುಂದೆ ಸ್ಟೇ ಆರ್ಡರ್ ಕೇಳಿದ ಸಂಸ್ಥೇಗಳೆಲ್ಲ ಸಂಘ ಪರಿವಾರದ ಅಂಗಸಂಸ್ಥೇಗಳೇ ಆಗಿವೆ ಎಂಬುದನ್ನು ಗಮನಿಸಬೇಕು. ಸಂಸ್ಕೃತ ಭಾರತಿ ಸಂಘಿ ಸಂಸ್ಥೇಯೇ ಎಂಬುದಕ್ಕೆ ಸಾಕಷ್ಟು ಆಧಾರಗಳಿವೆ.
ಹೀಗಾಗಿ ಸರ್ಕಾರ ಕನ್ನಡ ಪರ ನಿಲುವು ತೋರಿಸಿದಂತೆ ಮಾಡುವುದು, ಇನ್ನೊಂದು ಕಡೆ ಸಂಘಿ ಸಂಸ್ಥೆಗಳು ಕೋರ್ಟಿನಲ್ಲಿ ಅದಕ್ಕೆ ತಡೆಯಾಜ್ಞೆ ತರುವುದು ಒಂದು ಹಿಡನ್ ಅಜೆಂಡಾವೇ ಆಗಿದೆ;.
ಈ ಕುರಿತಾಗಿ ‘ಪ್ರತಿಧ್ವನಿ; ಭಾಷಾ ತಜ್ಞರು, ಕನ್ನಡ ಹೋರಾಟಗಾರರು ಮತ್ತು ಕಾಲೇಜು ಉಪನ್ಯಾಸಕರೊಂದಿಗೆ ಚರ್ಚೆ ನಡೆಸಿತು. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಭಾಗವಾಗಿಯೇ ಇದೆಲ್ಲ ನಡೆಯುತ್ತಿದೆಯೇ ಎಂಬ ಸಂಶಯ ವ್ಯಕ್ತವಾಗಿತು. ಅದಕ್ಕೂ ಮೊದಲು ಹೈಕೋರ್ಟಿನಲ್ಲಿ ನಡೆದ ವಿಚಾರವನ್ನು ಗಮನಿಸೋಣ.
ಹೈಕೋರ್ಟಿನಲ್ಲಿ ಆಗಿದ್ದೇನು?
ಸದ್ಯ ಹೈಕೋರ್ಟ್ ಪೀಠ ವಿಚಾರಣೆಯನ್ನು ನವೆಂಬರ್ 10 ಕ್ಕೆ ಮುಂದೂಡಿದೆ. ಪದವಿ ಶಿಕ್ಷಣದ ಹಂತದಲ್ಲಿ ವಿದ್ಯಾರ್ಥಿಗಳಿಗೆ ಕನ್ನಡವನ್ನು ಕಡ್ಡಾಯಗೊಳಿಸಲಾಗದು. ರಾಜ್ಯ ಸರ್ಕಾರವು ಕನ್ನಡ ಕಡ್ಡಾಯ ಮಾಡಿರುವ ತನ್ನ ನೀತಿಯನ್ನು ಮರುಪರಿಶೀಲಿಸಬೇಕು. ಕನ್ನಡ ಕಲಿಯಬೇಕು ಎಂದು ಸರ್ಕಾರ ಒತ್ತಿ ಹೇಳಲಾಗದು. ನಿಮ್ಮ (ಸರ್ಕಾರ) ನೀತಿಯನ್ನು ಮರು ಪರಿಶೀಲಿಸದಿದ್ದರೆ ನಾವು ತಡೆಯಾಜ್ಞೆ ನೀಡಬೇಕಾಗುತ್ತದೆ” ಎಂದು ಮಂಗಳವಾರ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.
ರಾಜ್ಯ ಸರ್ಕಾರವು ಪದವಿ ಹಂತದಲ್ಲಿ ಕನ್ನಡ ಭಾಷಾ ಅಧ್ಯಯನವನ್ನು ಕಡ್ಡಾಯಗೊಳಿಸಿರುವುದನ್ನು ಪ್ರಶ್ನಿಸಿ ಸಂಸ್ಕೃತ ಭಾರತಿ (ಕರ್ನಾಟಕ) ಟ್ರಸ್ಟ್, ಮಹಾವಿದ್ಯಾಲಯದ ಸಂಸ್ಕೃತ ಪ್ರಾಧ್ಯಾಪಕ ಸಂಘ, ಶ್ರೀ ಹಯಗ್ರೀವಾ ಟ್ರಸ್ಟ್, ವ್ಯೋಮಾ ಲಿಂಗ್ವಿಸ್ಟಿಕ್ ಲ್ಯಾಬ್ಸ್ ಫೌಂಡೇಶನ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿಯ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ನೇತೃತ್ವದ ವಿಭಾಗೀಯ ಪೀಠ ನಡೆಸಿತು.
ವಿಚಾರಣೆ ಆರಂಭಾಗುತ್ತಿದ್ದಂತೆ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರು, “ಆರಂಭಿಕರಿಗೆ ಕಾರ್ಯನಿರ್ವಹಣೆಗೆ ಅಗತ್ಯವಾದ ಕನ್ನಡವನ್ನು ಕಲಿಸಲಾಗುತ್ತದೆ ವಿನಾ ಸಾಂಪ್ರದಾಯಿಕ ರೀತಿಯಲ್ಲಿ ಕ್ರಮಬದ್ಧವಾಗಿ ಕನ್ನಡ ಬೋಧಿಸುವುದಿಲ್ಲ. ಇಡೀ ಪದವಿ ಅವಧಿಯ ಆರು ತಿಂಗಳು ಮಾತ್ರ ಕನ್ನಡ ಬೋಧಿಸಲಾಗುತ್ತದೆ. ಇದನ್ನು ನಾವು ಇನ್ನಷ್ಟೇ ಜಾರಿ ಮಾಡಬೇಕಿರುವುದರಿಂದ ತಡೆಯಾಜ್ಞೆ ಪ್ರಶ್ನೆ ಉದ್ಭವಿಸುವುದಿಲ್ಲ.. ಕರ್ನಾಟಕದಲ್ಲೇ ಇದ್ದು, ಇಲ್ಲೇ ಉದ್ಯೋಗ ಪಡೆಯಲು ಬಯಸಿದರೆ ಇದರಿಂದ ಅನುಕೂಲವಾಗುತ್ತದೆ. ರಾಜ್ಯ ಸರ್ಕಾರವು ತನ್ನ ನೀತಿಯ ಭಾಗವಾಗಿ ಕನ್ನಡ ಕಲಿಯುವುದನ್ನು ಕಡ್ಡಾಯಗೊಳಿಸಿದೆ” ಎಂದು ಸಮರ್ಥಿಸಿದರು.

ಇದಕ್ಕೆ ಆಕ್ಷೇಪಿಸಿದ ಪೀಠವು “ಸರ್ಕಾರದ ಉದ್ದೇಶ ಏನೇ ಆಗಿದ್ದರೂ ಕನ್ನಡ ಅಧ್ಯಯನ ಮಾಡಬೇಕು ಎಂದು ಒತ್ತಿ ಹೇಳುವಂತಿಲ್ಲ. ಉದ್ಯೋಗ ಪಡೆಯಲು ಕನ್ನಡ ಕಲಿಯಬೇಕು ಎಂಬ ನಿಮ್ಮ ಮಾತು ಒತ್ತಟ್ಟಿಗಿರಲಿ. ವಿದ್ಯಾರ್ಥಿಗಳು ಕರ್ನಾಟಕದಲ್ಲಿ ಅಧ್ಯಯನ ಮಾಡುತ್ತಿದ್ದಾರೆ ಎಂದ ಮಾತ್ರಕ್ಕೆ ಕನ್ನಡ ಕಲಿಯಲೇಬೇಕು ಎಂದೇನಿಲ್ಲ. ಹೊರ ರಾಜ್ಯಗಳ ವಿದ್ಯಾರ್ಥಿಗಳಿಗೆ ಕನ್ನಡ ಕಲಿಯುವುದನ್ನು ನೀವು ಕಡ್ಡಾಯಗೊಳಿಸಲಾಗದು. ಉದ್ಯೋಗದ ವಿಚಾರದಲ್ಲಿ ನೀವು ಷರತ್ತು ವಿಧಿಸಬಹುದು. ವಿದ್ಯಾರ್ಥಿಗಳ ಬಗ್ಗೆ ಸರ್ಕಾರ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಅವರ ಬಗ್ಗೆ ಅವರು ಗಮನಹರಿಸಿಕೊಳ್ಳುತ್ತಾರೆ” ಎಂದಿತು.
ಇದಕ್ಕೂ ಮುನ್ನ ನಾವದಗಿ ಅವರು “ಸರ್ಕಾರದ ಆಕ್ಷೇಪಾರ್ಹವಾದ ಆದೇಶದ ಜಾರಿಯಿಂದಾಗಿ ವಿದ್ಯಾರ್ಥಿಗಳು, ಶಿಕ್ಷಕರು, ಕಾಲೇಜು, ವಿಶ್ವವಿದ್ಯಾಲಯಗಳು, ವಿಶಾಲ ನೆಲೆಯಲ್ಲಿ ಸಮಾಜಕ್ಕೆ ಸಮಸ್ಯೆಯಾಗುತ್ತದೆ ಎಂದು ಅರ್ಜಿದಾರರಾದ ಸಂಸ್ಕೃತ ಭಾರತಿ ಟ್ರಸ್ಟ್ ಮತ್ತಿತರರು ಮನವಿಯಲ್ಲಿ ಹೇಳಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಯಾರಿಗಾದರೂ ಸಮಸ್ಯೆಯಾದರೆ ವಿದ್ಯಾರ್ಥಿಗಳು, ಶಿಕ್ಷಕರು ನ್ಯಾಯಾಲಯದ ಮುಂದೆ ಬರಬೇಕೆ ವಿನಾ ಪಿಐಎಲ್ ಮಾದರಿಯಲ್ಲಿ ಅಲ್ಲ. ಕನ್ನಡವನ್ನು ಕಡ್ಡಾಯಗೊಳಿಸಿರುವುದಕ್ಕೆ ಆಕ್ಷೇಪವಿರಬಹುದು. ನನಗೆ ಇರುವ ಮಾಹಿತಿಯ ಪ್ರಕಾರ ಕನ್ನಡವನ್ನು ಪದವಿ ಹಂತದಲ್ಲಿ ಒಂದು ಬಾರಿ ಭಾಷೆಯನ್ನಾಗಿ ಬೋಧಿಸಲಾಗುತ್ತದೆ” ಎಂದರು.
ಇದಕ್ಕೆ ಪೀಠವು “ವಿದ್ಯಾರ್ಥಿಗಳು ಮತ್ತು ಶಿಕ್ಷಕರೇ ಸರ್ಕಾರದ ಆದೇಶವನ್ನು ಪ್ರಶ್ನಿಸಬೇಕು ಎಂದು ಬಯಸಲಾಗದು” ಎಂದಿತು. ಆಗ ನಾವದಗಿ ಅವರು “ಸರ್ಕಾರದ ಜೊತೆ ಸಮಾಲೋಚಿಸಿ ನ್ಯಾಯಾಲಯಕ್ಕೆ ಮಾಹಿತಿ ನೀಡಲಾಗುವುದು” ಎಂದು ತಿಳಿಸಿದರು.
ಅರ್ಜಿದಾರರ ಪರ ಹಿರಿಯ ವಕೀಲ ಎಸ್ ಎಸ್ ನಾಗಾನಂದ್ ಅವರು “ಶೈಕ್ಷಣಿಕ ವರ್ಷ ಆರಂಭವಾಗಿದೆ. ವಿದ್ಯಾರ್ಥಿಗಳು ತಮ್ಮ ಇಚ್ಛೆಯ ವಿಷಯವನ್ನು ಆಯ್ಕೆ ಮಾಡಿಕೊಳ್ಳಬೇಕಿದೆ. ಹಾಗಾಗಿ, ಪ್ರಕರಣಕ್ಕೆ ಆದ್ಯತೆ ನೀಡಬೇಕು” ಎಂದು ಪೀಠವನ್ನು ಕೋರಿದರು.
ವಾದ-ಪ್ರತಿವಾದವನ್ನು ಆಲಿಸಿದ ಪೀಠವು ಪ್ರಕರಣದ ವಿಚಾರಣೆಯನ್ನು ನವೆಂಬರ್ 10ಕ್ಕೆ ಮುಂದೂಡಿತು.
‘ಪ್ರತಿಧ್ವನಿ’ ಚರ್ಚೆಯ ಅಂಶಗಳು

ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿರುವ ಹಿರಿಯ ಭಾಷಾ ತಜ್ಞ ಮತ್ತು ಚಿಂತಕ ಗಣೇಶ್ ದೇವಿ ಅವರನ್ನು ‘ಪ್ರತಿಧ್ವನಿ’ ಸಂಪರ್ಕಿಸಿತು. ‘ ಕನ್ನಡವನ್ನು ಕರ್ನಾಟಕ ಸರ್ಕಾರವಲ್ಲದೇ ಇನ್ನ್ಯಾವ ಸರ್ಕಾರ ಪ್ರಮೋಟ್ ಮಾಡಲು ಸಾಧ್ಯ? ಪದವಿ ತರಗತಿಗಳಲ್ಲಿ ಕನ್ನಡ ಕಡ್ಡಾಯ ಮಾಡುವುದರ ಬಗ್ಗೆ ಸರ್ಕಾರಕ್ಕೆ ಸ್ಪಷ್ಟ ನಿಲುವು ಇಲ್ಲ. ಇದು ಕಾಟಾಚಾರದ ಕೆಲಸ ಮಾಡುತ್ತಿದೆ. ಒಂದು ಪ್ರಾದೇಶಿಕ ಭಾಷೆಯ ಅಸ್ಮಿತೆಯನ್ನು ಎತ್ತಿ ಹಿಡಿಯುವುದು ಆಯಾ ರಾಜ್ಯ ಸರ್ಕಾರದ ಕೆಲಸ. ಕರ್ನಾಟಕ ಸರ್ಕಾರ ನ್ಯಾಯಾಲಯದಲ್ಲಿ ಇದನ್ನು ಗಟ್ಟಿಯಾಗಿ ಪ್ರತಿಪಾದಿಸಬೇಕು. ಹೊರಗಿನಿಂದ ಬಂದವರಿಗೆ ಕೆಲವು ಬೇರೆ ಅವಕಾಶ ನೀಡಬಹುದು’ ಎಂದು ತಿಳಿಸಿದರು.

ಕವಯಿತ್ರಿ ಮತ್ತು ಕತೆಗಾರ್ತಿ ಕಾಲೇಜು ಅಧ್ಯಾಪಕಿಯೂ ಆಗಿರುವ ವಿನಯಾ ಒಕ್ಕುಂದ ಕೂಡ, ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಓದಲು ಚೆನ್ನಾಗಿದೆ. ಆದರೆ ಅದು ಪ್ರಾದೇಶಿಕ ಭಾಷೆಗಳಿಗೆ ಗಂಡಾಂತರ ತರಲಿದೆ. ಈಗ ಪದವಿಯಲ್ಲಿ ಕೇವಲ ಒಂದು ಸೆಮಿಸ್ಟರ್ನಲ್ಲಿ ಕನ್ನಡ ಕಲಿಸುತ್ತೇವೆ. ಅದು ಸುಲಭ ಕನ್ನಡ. ಬಾಲವಾಡಿ ಮಕ್ಕಳು ಕಲಿಯುವ ಸರಳ ಕನ್ನಡ. ಇದರಿಂದ ಹೊರ ರಾಜ್ಯದವರಿಗೂ ಕನ್ನಡ ಕಲಿಸಿದಂತಾಗುತ್ತದೆ. ಸರ್ಕಾರ ಕನ್ನಡ ಕಲಿಕೆಯ ಪರ ನಿಲ್ಲಲೇಬೇಕು’ ಎಂದರು.

ಹೈಕೋರ್ಟ್ ವಕೀಲ ಮತ್ತು ರಾಜ್ಯ ಕಾಂಗ್ರೆಸ್‌ನ ಕಾನೂನು ವಿಭಾಗದ ಪ್ರಧಾನ ಕಾರ್ಯದರ್ಶಿ ಆಗಿರುವ ಸೂರ್ಯ ಮುಕುಂದರಾಜ್, ‘ ಎಲ್ಲ ರಾಜ್ಯಗಳಲ್ಲೂ ಬಿಜೆಪಿ ಇಂತಹ ಆಟ ಆಡುತ್ತಿದೆ. ಒಂದು ಕಡೆ ಮಗುವನ್ನು ಚಿವುಟುವುದು ಮತ್ತೊಂದು ಕಡೆ ಲಾಲಿ ಹಾಡುತ್ತ ತೂಗುವ ಕೆಲಸವನ್ನು ಮಾಡುತ್ತಿದೆ. ನ್ಯಾಯಾಲಯದ ಗೈಡ್ಲೈನ್ಸ್ ಬಂದರೆ ಸಾಕು, ನೋಡಿ ನಾವೇನೂ ಮಾಡಲಾಗದು ಎಂದು ಅದು ಪೋಸ್ ಕೊಡುತ್ತಿದೆ. ಹೀಗೆ ಅಡ್ಡ ಮಾರ್ಗದಲ್ಲಿ ನ್ಯಾಯಾಲಯದ ಅರೆಬರೆ ಅನುಮತಿಯನ್ನು ಬಳಸಿ ಅದು ಪ್ರಾದೇಶಿಕ ಅಸ್ಮಿತೆಯನ್ನು ನಾಶ ಮಾಡುತ್ತಿದೆ’’ಎಂದರು
ಕನ್ನಡ ಸಂಘಟನೆಗಳ ವಿರೋಧ

ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ನಾರಾಯಣಗೌಡ, ‘ಪ್ರತಿಧ್ವನಿಗೆ ಪ್ರತಿಕ್ರಿಯೆ ನೀಡುತ್ತ, ‘ ಕೋರ್ಟಿನಲ್ಲಿ ನಡೆಯುತ್ತಿರುವ ವಿಚಾರಣೆ ಮತ್ತು ರಾಜ್ಯ ಸರ್ಕಾರದ ಧೋರಣೆಯನ್ನು ಗಮನಿಸುತ್ತಿದ್ದೇವೆ. ಕನ್ನಡ ಕಲಿಕೆ ಮತ್ತು ಬೋಧನೆಗೆ ಅಡ್ಡಿಯಾಗುವ ಯಾವುದೇ ಕ್ರಮವನ್ನು ಕರವೇ ವಿರೋಧಿಸುತ್ತದೆ. ಈ ಬಗ್ಗೆ ರಾಜ್ಯಾದ್ಯಂತ ಹೋರಾಟಕ್ಕೆ ಸಿದ್ಧತೆ ಮಾಡಿಕೊಂಡಿದ್ದೇವೆ’ ಎಂದರು.

ಕರವೇ ರಾಜ್ಯ ಉಪಾಧ್ಯಕ್ಷ ಮತ್ತು ಕಮ್ಯನಿಸ್ಟ್ ಹಿನ್ನೆಲೆಯ ಎಚ್ ಎಸ್ ಸೋಂಪುರ ಪ್ರತಿಕ್ರಿಯೆ ನೀಡಿ,’ಇದು ಬಿಜೆಪಿಯ ಹಿಡನ್ ಅಜೆಂಡಾ. ಸಂಸ್ಕೃತ ಮತ್ತು ಹಿಂದಿ ಹೇರಿಕೆಯೇ ಅದರ ಉದ್ದೇಶ. ಕನ್ನಡವನ್ನು ಹತ್ತಿಕ್ಕಲು ಅದರ ಅಂಗಸಂಸ್ಥೆಗಳು ಕೆಲಸ ಮಾಡುತ್ತವೆ. ಸರ್ಕಾರ ಕನ್ನಡ ಪರ ಇದ್ದಂತೆ ನಟಿಸುತ್ತದೆ. ಆದರೆ ವಾಸ್ತವ ಬೇರೆಯೇ ಆಗಿದೆ. ಒಟ್ಟಿನಲ್ಲಿ ಬಿಜೆಪಿ ಮತ್ತು ಸಂಘ ಪರಿವಾರಕ್ಕೆ ಸ್ಥಳೀಯ ಅಸ್ಮಿತೆಗಳನ್ನು ನಾಶ ಮಾಡುವುದೇ ಗುರಿಯಾಗಿದೆ. ಆದರೆ ನಾವು ಇದಕ್ಕೆ ಪ್ರಬಲ ಪ್ರತಿರೋಧ ಒಡ್ಡುತ್ತಲೇ ಇರುತ್ತೇವೆ’ ಎಂದರು.