ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪ್ರಬಲ ಪೈಪೋಟಿ ನಡೆಸುತ್ತಿದೆ. 224 ಕ್ಷೇತ್ರಗಳ ಪೈಕಿ ನಮ್ಮ ಅಭ್ಯರ್ಥಿಗಳೇ ಆಯ್ಕೆಯಾಗಲಿದ್ದಾರೆ ಎನ್ನುತ್ತಾ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ನಾಮಪತ್ರ ಪರಿಶೀಲನೆ ಮುಗಿದ ಬಳಿಕ ಚುನಾವಣಾ ಪ್ರಚಾರದ ಕಾವು ಜೋರಾಗಲಿದೆ. ಈ ನಡುವೆ ರಾಜ್ಯದಲ್ಲಿ ರಾಜಕಾರಣಿಗಳು ತಮಗೆ ಬೇಕಾದ ಕಡೆಗಳಲ್ಲಿ ಹೊಂದಾಣಿಕೆ ರಾಜಕೀಯ ಮಾಡುತ್ತಿದ್ದಾರಾ..? ಅನ್ನೋ ಅನುಮಾನ ದಟ್ಟವಾಗಿದೆ. ಈಗಾಗಲೇ ಕೆಲವೊಂದು ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿರುವ ರೀತಿಯನ್ನು ನೋಡಿದಾಗಲೂ ಒಳ ಸಂಬಂಧಗಳು ಜನರ ಮನಸ್ಸಲ್ಲಿ ಅಸಹ್ಯದ ಭಾವನೆ ಮೂಡಿಸುತ್ತಿರುವುದು ಸಹಜವಾಗಿದೆ. ಇದೀಗ ಒಳ ಒಪ್ಪಂದದ ಬಗ್ಗೆ ಕಾಂಗ್ರೆಸ್ ಮುಖಂಡರೊಬ್ಬರು ಬಹಿರಂಗವಾಗಿ ಅಸಮಾಧಾನ ಹೊರ ಹಾಕಿದ್ದು, ಕಾಂಗ್ರೆಸ್ – ಬಿಜೆಪಿ ಇನ್‌ಸೈಡ್ ದೋಸ್ತಿ ಹೊರ ಬಿದ್ದಿದೆ.

ಶಾಂತವೀರಪ್ಪ ಗೌಡ ರಾಜೀನಾಮೆ, ದೋಸ್ತಿ ವಿರುದ್ಧ ಗುಡುಗು..!
ಶಿವಮೊಗ್ಗ ಜಿಲ್ಲೆ ಶಿಕಾರಿಪುರ ಕಾಂಗ್ರೆಸ್‌ನಲ್ಲಿ ಪ್ರಮುಖ ಮುಖಂಡ ಹಾಗೂ ಕೆಪಿಸಿಸಿ ವಕ್ತಾರರಾಗಿದ್ದ ಶಾಂತವೀರಪ್ಪ ಗೌಡ, ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವ ಹಾಗೂ ಕೆಪಿಸಿಸಿ ವಕ್ತಾರ ಸ್ಥಾನಕ್ಕೆ ರಾಜೀನಾಮೆ ಘೋಷಣೆ ಮಾಡಿದ ಬಳಿಕ ಮಾತನಾಡಿರುವ ಶಾಂತವೀರಪ್ಪ ಗೌಡ, ಒಬ್ಬ ಭ್ರಷ್ಟ ಮತ್ತು ಲಂಪಟ ಯಡಿಯೂರಪ್ಪನಿಂದ 2 ಬಾರಿ ನನಗೆ ಅನ್ಯಾಯವಾಗಿದೆ. ಸಿದ್ದರಾಮಯ್ಯ ಜೊತೆ ಯಡಿಯೂರಪ್ಪ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡು ರಾಜಕೀಯ ಮಾಡುತ್ತಿದ್ದಾರೆ. ನಮ್ಮ ತಂದೆ ಯಡಿಯೂರಪ್ಪ ಜೊತೆಗೆ ಬೆಂಬಲವಾಗಿ ನಿಂತಿದ್ದರು. ಲಿಂಗಾಯತ ಹಾಗೂ ಕುರುಬ ಸಮಾಜದ ಮುಖಂಡರು ಅವರಿಗೆ ಬೆಂಬಲ ನೀಡಿದ್ದರು. ನಮ್ಮ ಪ್ರಾಣದ ಹಂಗು ತೊರೆದು ಅವರನ್ನು ಕಾಪಾಡಿದೆವು. ಹೀಗಿದ್ದರೂ ನಮ್ಮ ಅಣ್ಣನ ಮಗ ನಾಗರಾಜ್ ಗೌಡನಿಗೆ ಕಾಂಗ್ರೆಸ್ ಟಿಕೆಟ್ ತಪ್ಪಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
“ರಾಜಕಾರಣದಲ್ಲಿ ಯಡಿಯೂರಪ್ಪ ಭ್ರಷ್ಟಾಚಾರದ ಗುರು..!”
ರಾಜ್ಯ ರಾಜಕಾರಣದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಭ್ರಷ್ಟಾಚಾರದ ಗುರು ಎಂದು ಬಣ್ಣಿಸಿರುವ ಶಾಂತ ವೀರಪ್ಪಗೌಡ, ಹೀಗಾಗಿ ಮಕ್ಕಳೂ ಕೂಡ ಅದೇ ರೀತಿ ಆಗಿದ್ದಾರೆ. ಯಡಿಯೂರಪ್ಪ ಅವರನ್ನು ಮಂಡ್ಯಕ್ಕಲ್ಲ, ಮಲೇಷಿಯಾ, ಮಾರಿಷಸ್ ಮೊದಲಾದ ಕಡೆ ಮಾಡಿರುವ ಅಕ್ರಮ ಆಸ್ತಿಯನ್ನು ನೋಡಿಕೊಳ್ಳಲು ಕಳಿಸಬೇಕು ಎಂದು ಟೀಕೆ ಮಾಡಿದ್ದಾರೆ. ಶಿಕಾರಿಪುರದ ಜನತೆ ಪಕ್ಷ ಭೇದ ಮರೆತು ನಾಗರಾಜ್ ಗೌಡರನ್ನು ಗೆಲ್ಲಿಸಲು ನಿರ್ಧರಿಸಿದ್ದಾರೆ. ಯಡಿಯೂರಪ್ಪ ಹೊರತು ಪಡಿಸಿ ಬೇರೆ ಯಾರೂ ನನಗೆ ಬಿಜೆಪಿಯಲ್ಲಿ ತೊಂದರೆ ಕೊಟ್ಟಿಲ್ಲ. ಆಗ ಬಿಜೆಪಿ ಬಿಡಲು ಹಾಗೂ ಈಗ ಕಾಂಗ್ರೆಸ್‌ನಲ್ಲೂ ತೊಂದರೆ ಆಗಲು ಯಡಿಯೂರಪ್ಪರೇ ಕಾರಣ. ಶಿಕಾರಿಪುರದ ಜನತೆಯನ್ನು ಜೀತದಾಳುಗಳನ್ನಾಗಿ ಮಾಡಿಕೊಂಡು ರಾಜಕೀಯ ಮಾಡಿಕೊಂಡು ಬಂದಿದ್ದಾರೆ ಎಂದು ಕಟುವಾಗಿ ಟೀಕಿಸಿದ್ದಾರೆ.
ಎಲ್ಲೆಲ್ಲಿ ರಾಜಕಾರಣಿಗಳ ಹೊಂದಾಣಿಕೆ ಅನುಮಾನ..!
ಕನಕಪುರದಲ್ಲಿ ಕಾಂಗ್ರೆಸ್ ಹಾಗು ಜೆಡಿಎಸ್ ಒಪ್ಪಂದ ಕಣ್ಣಿಗೆ ಕಟ್ಟುವಂತಿದೆ. ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ ಶಿವಕುಮಾರ್ ಗೆಲ್ಲಿಸಲು ಸ್ವತಃ ಜೆಡಿಎಸ್ ಅಭ್ಯರ್ಥಿ ಆಗಬೇಕಿದ್ದ ವಿಶ್ವನಾಥ್ ಕಾಂಗ್ರೆಸ್ ಸೇರಿಕೊಂಡರು. ಅದಕ್ಕೆ ಪ್ರತಿಯಾಗಿ ಚನ್ನಪಟ್ಟಣದಲ್ಲಿ ಸಂಭವ್ಯ ಕಾಂಗ್ರೆಸ್ ಅಭ್ಯರ್ಥಿ ಎಂದು ಗುರುತಿಸಲಾಗಿದ್ದ ಪ್ರಸನ್ನ ಜೆಡಿಎಸ್ ಸೇರ್ಪಡೆ ಆಗಿದ್ದರು. ಅದೇ ರೀತಿ ಚಿಕ್ಕಾಬಳ್ಳಾಪುರದಲ್ಲಿ ಸಚಿವ ಸುಧಾಕರ್ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರದೀಪ್ ಈಶ್ವರ್ ಆಯ್ಕೆ ಕೂಡ ಹಲವು ಅನುಮಾನಕ್ಕೆ ಕಾರಣವಾಗಿದೆ. ಕೆಲವೇ ದಿನಗಳ ಹಿಂದೆ ನಡೆದಿದ್ದ ಕಾರ್ಯಕ್ರಮದಲ್ಲಿ ಪ್ರದೀಪ್ ಈಶ್ವರ್ ಸುಧಾಕರ್ ಅವರನ್ನು ಹಾಡಿ ಹೊಗಳಿದ್ದರು. ಅತ್ತ ವಿಜಯೇಂದ್ರ ವಿರುದ್ಧ ಪ್ರಬಲ ಸಾದರ ಲಿಂಗಾಯತ ಅಭ್ಯರ್ಥಿಗೆ ಟಿಕೆಟ್ ಕೊಡದೆ ಕಾಂಗ್ರೆಸ್-ಬಿಜೆಪಿ ಹೊಂದಾಣಿಕೆ ಮಾಡಿಕೊಂಡಿವೆ ಎನ್ನುವುದು ಸ್ಥಳೀಯವಾಗಿ ಜನಾಕ್ರೋಶಕ್ಕೆ ಕಾರಣವಾಗಿದೆ. ಇದೇ ರೀತಿ ರಾಜ್ಯದ ಹತ್ತಾರು ಕ್ಷೇತ್ರಗಳಲ್ಲಿ ಹೊಂದಾಣಿಕೆ ಕಾಣಿಸಿತ್ತಿದ್ದು, ಮೇಲ್ನೋಟಕ್ಕೆ ಗುದ್ದಾಟ ನಡೆಯುತ್ತಿದೆ ಎನ್ನುವುದು ಆರೋಪ.
ಕೃಷ್ಣಮಣಿ