ಬೆಂಗಳೂರು.ಕೃಷಿ ಕ್ಷೇತ್ರ ಉದ್ಯಮದ ಸ್ವರೂಪ ಪಡೆಯುತ್ತಿದ್ದು ರೈತರು ತಮ್ಮ ಉತ್ಪನ್ನಗಳ ಮೌಲ್ಯವರ್ಧನೆ ಬಗ್ಗೆ ಹೆಚ್ಚಿನ ಗಮನ ಹರಿಸುವ ಅಗತ್ಯವಿದೆ ಎಂದು ಕೃಷಿ ಸಚಿವರಾದ ಎನ್.ಚಲುವರಾಯಸ್ವಾಮಿರವರು ತಿಳಿಸಿದ್ದಾರೆ.
ನಗರದ ಅರಮನೆ ಮೈದಾನದಲ್ಲಿ ಫಸ್ಟ್ ಸರ್ಕಲ್ ಉದ್ಯಮಿ ಒಕ್ಕಲಿಗ ಸಂಸ್ಥೆ ಆಯೋಜಿಸಿದ್ದ ವಾರ್ಷಿಕ ಸಮಾರಂಭದಲ್ಲಿ ಭಾಗವಹಿಸಿ ಸಚಿವರು ಮಾತನಾಡಿದರು.
ಒಕ್ಕಲಿಗರು ಕೃಷಿಯನ್ನೇ ಮೂಲ ಕಸುಬಾಗಿಸಿಕೊಂಡಿದ್ದರು ಇತರೆ ಕ್ಷೇತ್ರಗಳಲ್ಲಿಯೂ ಯಶಸ್ವಿಯಾಗಿ ಬೆಳೆಯುತ್ತಿರುವುದು ಸಂತೋಷದ ವಿಚಾರ ಅದರಲ್ಲೂ ಸಮುದಾಯದ ಉದ್ಯಮಿಗಳು ವ್ಯವಸ್ಥಿತವಾಗಿ ಸಂಘಟಿತರಾಗಿರುವುದು ಅಭಿನಂದನೀಯ ಎಂದರು.
ಕೃಷಿ ಇಲಾಖೆ ಹಾಗೂ ವಿಶ್ವವಿದ್ಯಾಲಯಗಳು ರೈತರ ಉತ್ಪನ್ನಗಳ ಮೌಲ್ಯವರ್ಧನೆ ಮತ್ತು ಯಾಂತ್ರಿಕ ಸಬಲೀಕರಣಕ್ಕೆ ಒತ್ತು ನೀಡಿದೆ ಸಾವಯವ, ಸಮಗ್ರ ಕೃಷಿಗೂ ಪ್ರೋತ್ಸಾಹ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕೃಷಿಕರನ್ನೂ ಉದ್ಯಮಿಗಳನ್ನಾಗಿ, ಉದ್ಯೋಗದಾತರನ್ನಾಗಿ ಪರಿವರ್ತಿಸುವ ಕಾರ್ಯಕ್ಕೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಎನ್.ಚಲುವರಾಯಸ್ವಾಮಿ ಹೇಳಿದರು.
ಕೃಷಿಕರ ಮಕ್ಕಳು ಉದ್ಯಮಶೀಲತೆ ತರಬೇತಿ ನೈಪುಣ್ಯತೆಗಳನ್ನು ಮೈಗೂಡಿಸಿ ಕೊಳ್ಳಬೇಕು, ಕೃಷಿ ಉತ್ಪನ್ನಗಳನ್ನು ವ್ಯವಸ್ಥಿತ ರೂಪದಲ್ಲಿ ಮಾರುಕಟ್ಟೆಗೆ ತರುವ ಕಾರ್ಯ ಮಾಡಬೇಕೆಂದು ತಿಳಿಸಿದರು.
ಕೇವಲ 3 ವರ್ಷಗಳಲ್ಲಿ ಉದ್ಯಮಿ ಒಕ್ಕಲಿಗ ಸಂಘಟನೆ ಬೆಳೆದು ಬಂದಿರುವ ಹಾದಿ ಅದ್ಭುತವಾಗಿದೆ ಎಲ್ಲಾ ಕ್ಷೇತ್ರಗಳಲ್ಲೂ ಸಮುದಾಯ ವ್ಯವಸ್ಥಿತವಾಗಿ ಬೆಳೆದು ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡಬೇಕೆಂದು ಕೃಷಿ ಸಚಿವರು ಕರೆ ನೀಡಿದರು.
ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಆರ್ಶೀವಚನ ನೀಡಿದರು, ಶಾಸಕರಾದ ಶ್ರೀ ಗೋಪಾಲಯ್ಯ, ಅಶ್ವಥ್ನಾರಾಯಣಗೌಡ ಮತ್ತು ಉದ್ಯಮಿ ಒಕ್ಕಲಿಗ ಸಂಸ್ಥೆಯ ಸಂಸ್ಥಾಪಕರಾದ ಜಯರಾಮ್ ರಾಯಪುರ ಮತ್ತಿತರರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಾಜಿ ಸ್ಪೀಕರ್ ಶ್ರೀ ಬಿ.ಎಲ್.ಶಂಕರ್, ಮಾಜಿ ಸಂಸದ ಶಿವರಾಮೇಗೌಡ, ಮಾಜಿ ವಿಧಾನ ಪರಿಷತ್ ಸದಸ್ಯ ರಮೇಶ್ಗೌಡ, ಒಕ್ಕಲಿಗರ ಸಂಘದ ಅಧ್ಯಕ್ಷ ಕೆಂಚಪ್ಪಗೌಡ ಸೇರಿದಂತೆ ಇತರೆ ಗಣ್ಯರು ಭಾಗವಹಿಸಿದ್ದರು..