ಕೇರಳ ಚಿತ್ರರಂಗದಲ್ಲಿ ಮಹಿಳೆಯರನ್ನು ಮಂಚಕ್ಕೆ ಕರೆಯುವ ಪದ್ದತಿ ಇದೆ ಎನ್ನುವ ಆರೋಪ ಕೇಳಿ ಬಂದಿತ್ತು. ಆ ಬಳಿಕ ಕೇರಳ ಸರ್ಕಾರ ಸಿನಿಮಾ ರಂಗದಲ್ಲಿನ ಆರೋಪದ ಬಗ್ಗೆ ಪರಿಶೀಲನೆ ಮಾಡಿ ವರದಿ ಕೊಡುವಂತೆ ಜಸ್ಟೀಸ್ ಹೇಮಾ ಕಮಿಟಿಯನ್ನು ನೇಮಕ ಮಾಡಿತ್ತು. ಜಸ್ಟೀಸ್ ಹೇಮಾ ಕಮಿಟಿ ಕಳೆದ ಎರಡು ತಿಂಗಳ ಹಿಂದೆ ಕೊಟ್ಟ ವರದಿ ಸಾಕಷ್ಟು ರಾಜ್ಯಗಳಲ್ಲಿ ತಲ್ಲಣ ಮೂಡಿಸಿತ್ತು. ಕರ್ನಾಟಕದಲ್ಲೂ ಜಸ್ಟೀಸ್ ಹೇಮಾ ಕಮಿಟಿ ರೀತಿಯಲ್ಲೇ ಸಮಿತಿ ನೇಮಕ ಮಾಡಿ ತನಿಖೆ ನಡೆಸಬೇಕು ಅನ್ನೋ ಒತ್ತಾಯ ಕೇಳಿ ಬಂದಿತ್ತು. ಸಿಎಂ ಸಿದ್ದರಾಮಯ್ಯಗೂ ಈ ಬಗ್ಗೆ ಮನವಿ ಸಲ್ಲಿಕೆ ಆಗಿತ್ತು. ಇದೀಗ ಕೇರಳ ಪ್ರಕರಣವೊಂದು ಕರ್ನಾಟಕಕ್ಕೆ ವರ್ಗಾವಣೆ ಆಗಿದೆ.
ಕೇರಳದಲ್ಲಿ ಜಸ್ಟೀಸ್ ಹೇಮಾ ಕಮಿಟಿ ಎದುರು ದಾಖಲಾಗಿದ್ದ ಕೇಸ್ ಬೆಂಗಳೂರಿನ ಇಂಟರ್ನ್ಯಾಷನಲ್ ಏರ್ಪೋರ್ಟ್ ಪೊಲೀಸ್ ಠಾಣೆಗೆ ರವಾನೆ ಆಗಿದೆ. 2012ರಲ್ಲಿ ಯುವಕನ ಮೇಲೆ ಅತ್ಯಾಚಾರದ ಬಗ್ಗೆ ಕೇರಳದಲ್ಲಿ ಜಸ್ಟೀಸ್ ಹೇಮಾ ಕಮಿಟಿಗೆ ದೂರು ದಾಖಲಾಗಿತ್ತು. ಆದರೆ ಬೆಂಗಳೂರಿನ ಇಂಟರ್ನ್ಯಾಷನಲ್ ಏರ್ಪೋರ್ಟ್ ಬಳಿಯ ತಾಜ್ ಹೋಟೆಲ್ನಲ್ಲಿ ಘಟನೆ ನಡೆದಿದೆ ಎನ್ನಲಾಗಿದ್ದು, ಕೇಸ್ ಬೆಂಗಳೂರು ಪೊಲೀಸ್ ಠಾಣೆಗೆ ವರ್ಗಾವಣೆ ಆಗಿದೆ. ಕೇರಳಾದ ಕಸಬಾ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿತ್ತು. ಪ್ರಕರಣ ನಡೆದ ಠಾಣಾ ವ್ಯಾಪ್ತಿಯ ಪೊಲೀಸರು ತನಿಖೆ ನಡೆಸಲಿ ಅನ್ನೋ ಕಾರಣಕ್ಕೆ ಕೇಸ್ ವರ್ಗಾವಣೆ ಆಗಿದೆ.
ರಂಜಿತ್ ಎಂಬಾತ ಮುಮೂಟಿ ಶೂಟಿಂಗ್ ವೇಳೆ ಪರಿಚಯ ಆಗಿದ್ದ. ‘ಬವತ್ತಿಯುಡೆ ನಮತಿಲ್’ ಅನ್ನೋ ಸಿನಿಮಾ ಶೂಟಿಂಗ್ ವೇಳೆ ದೂರುದಾರನಿಗೆ ರಂಜಿತ್ ಪರಿಚಯ ಆಗಿದ್ದ. ಆ ನಂತರ ಬೆಂಗಳೂರು ಏರ್ಪೋರ್ಟ್ ಬಳಿಯ ತಾಜ್ ಹೋಟೆಲ್ಗೆ ಬರುವಂತೆ ಫೋನ್ ಮಾಡಿ ಸೂಚನೆ ಕೊಡಲಾಗಿತ್ತು. ದೂರುದಾರ ಹೋಟೆಲ್ಗೆ ಹೋದಾಗ ದೂರುದಾರನ ಫೋಟೋ ತೆಗೆದು ಮಲಯಾಳಂನ ನಟಿ ರೇವತಿಗೂ ಕಳುಹಿಸಿ ಕೊಟ್ಟಿದ್ನಂತೆ. ಇನ್ನು ರಾತ್ರಿಪೂರ್ತಿ ದೂರುದಾರನನ್ನ ಲೈಂಗಿಕ ಕ್ರಿಯೆಗೆ ಬಳಸಿಕೊಂಡ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಜಸ್ಟೀಸ್ ಹೇಮಾ ಕಮಿಟಿ ಮುಂದೆ ಅವಲತ್ತುಕೊಂಡ ನಂತರ ಕೇರಳಾದ ಕಸಬಾ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಐಪಿಸಿ ಸೆಕ್ಷನ್ 377 ಮತ್ತು ಐಟಿ ಕಾಯ್ದೆ 66 ಅಡಿಯಲ್ಲಿ ಕೇಸ್ ದಾಖಲು ಆಗಿದ್ದು, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಇನ್ನಷ್ಟೇ ವಿಚಾರಣೆ ನಡೆಯಬೇಕಿದ್ದು, ಮೊದಲಿಗೆ ದೂರುದಾರನ ಹೇಳಿಕೆ ದಾಖಲಿಸಿ ಹೋಟೆಲ್ ರೂಂ ಹಾಗು ಇತರೆ ಮಾಹಿತಿ ಪಡೆದ ಬಳಿಕ ತನಿಖೆ ಮುಂದುವರಿಯಬೇಕಿದೆ. ವಿಶೇಷ ಅಂದರೆ ಮಹಿಳೆಯರು, ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿರುವ ಬಗ್ಗೆ ವರದಿ ನೀಡಲು ರಚಿಸಲಾಗಿದ್ದ ಜಸ್ಟೀಸ್ ಹೇಮಾ ಕಮಿಟಿ ಎದುರು ಪುರುಷನೂ ದೂರು ನೀಡಿರುವುದು ವಿಶೇಷ. ಕರ್ನಾಟಕದಲ್ಲೂ ಈ ರೀತಿಯ ಆರೋಪಗಳು ಕೇಳಿ ಬಂದರೂ ರಾಜ್ಯ ಸರ್ಕಾರ ಚಿತ್ರತಂಡದ ಒತ್ತಡಕ್ಕೆ ಮಣಿದು ಸಮಿತಿ ರಚನೆಯಿಂದ ಹಿಂದೆ ಸರಿದಂತೆ ಕಾಣ್ತಿದೆ.