ಮಡಿಕೇರಿ: ಜಿಲ್ಲೆಯ ಏಕೈಕ ನಗರಸಭೆ ಇರುವ ಮಡಿಕೇರಿಯಲ್ಲಿ ಇದೀಗ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ೨ನೇ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ಮೀಸಲಾತಿ ಘೋಷಣೆಯಾಗುತ್ತಿದ್ದಂತೆ ಸದಸ್ಯರುಗಳು ಅಧಿಕಾರದ ಚುಕ್ಕಾಣಿ ಹಿಡಿಯಲು ತೆರೆಮರೆ ಕಸರತ್ತು ಮೆಲ್ಲನೆ ಆರಂಭಿಸಿದ್ದಾರೆ. ೨ನೇ ಅವಧಿ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮೀಸಲಾತಿ ಕಳೆದೆರಡು ದಿನಗಳ ಹಿಂದೆ ಘೋಷಣೆ ಆದ ಬೆನ್ನಲೇ ರಾಜಕೀಯ ಪೈಪೋಟಿಗಳು ಪ್ರಾರಂಭಗೊಂಡಿದ್ದು, ಮತ್ತೊಮ್ಮೆ ಮಹಿಳಾ ಅಧ್ಯಕ್ಷೆ ಮಡಿಕೇರಿಯ ಪ್ರಥಮ ಪ್ರಜೆಯಾಗಲಿದ್ದಾರೆ.
ಈ ಮುನ್ನ ನೆರವಂಡ ಅನಿತಾ ಪೂವಯ್ಯ ಅಧ್ಯಕ್ಷ, ಸವಿತಾ ರಾಕೇಶ್ ಉಪಾಧ್ಯಕ್ಷರಾಗಿದ್ದರು. ೨೩ ಚುನಾಯಿತ ಸದಸ್ಯರ ಸಂಖ್ಯಾಬಲ ಹೊಂದಿರುವ ನಗರಸಭೆsಯಲ್ಲಿ ೧೬ ಬಿಜೆಪಿ, ೫ ಎಸ್‌ಡಿಪಿಐ, ೧ ಕಾಂಗ್ರೆಸ್ ಹಾಗೂ ೧ ಜೆಡಿಎಸ್ ಸದಸ್ಯರಿದ್ದಾರೆ. ಸಾಮಾನ್ಯ ಮಹಿಳಾ ಸದಸ್ಯರಿಗೆ ಈ ಬಾರಿ ಅಧ್ಯಕ್ಷ ಸ್ಥಾನ ಮೀಸಲಾಗಿರುವ ಕಾರಣ ಅಧಿಕಾರಕ್ಕಾಗಿ ಮಹಿಳೆಯರ ನಡುವೆ ಜಟಾಪಟಿ ಏರ್ಪಟ್ಟಿದೆ.
ಬಿಜೆಪಿ ಸ್ಪಷ್ಟಬಹುಮತ ಹೊಂದಿರುವ ಹಿನ್ನೆಲೆ ಬಿಜೆಪಿ ಮತ್ತೇ ಅಧಿಕಾರ ಮರುಸ್ಥಾಪಿಸುವುದು ನಿಶ್ಚಿತವಾಗಿದೆ. ೧೬ ಬಿಜೆಪಿ ಸದಸ್ಯರ ಪೈಕಿ ನೆರವಂಡ ಅನಿತಾ ಪೂವಯ್ಯ, ಸವಿತಾ ರಾಕೇಶ್, ಶ್ವೇತಾ ಪ್ರಶಾಂತ್, ಸಬಿತಾ, ಮಂಜುಳಾ ಮುರುಗಾ, ಉಷಾ ಕಾವೇರಪ್ಪ, ಕಲಾವತಿ, ಚಿತ್ರಾವತಿ, ಶಾರದಾ ನಾಗರಾಜ್ ಮಹಿಳಾ ಸದಸ್ಯರಿದ್ದು, ಇವರೆಲ್ಲಾರು ಅಧ್ಯಕ್ಷ ಸ್ಥಾನಕ್ಕೆ ಅರ್ಹರಿದ್ದಾರೆ. ಇವರಲ್ಲಿ ಅನಿತಾ ಪೂವಯ್ಯ ಕಳೆದ ಅವಧಿಯ ಅಧ್ಯಕ್ಷೆಯಾಗಿದ್ದ ಕಾರಣಕ್ಕಾಗಿ ಅವರು ಕಣದಿಂದ ಹಿಂದೆ ಸರಿಯುವ ಸಾಧ್ಯತೆ ಹೆಚ್ಚಿದೆ. ಉಳಿದಂತೆ ಕಳೆದ ಅವಧಿಯ ಉಪಾಧ್ಯಕ್ಷರಾಗಿದ್ದ ಸವಿತಾ ರಾಕೇಶ್, ಶ್ವೇತಾ ಪ್ರಶಾಂತ್, ಸಬಿತಾ ಅಧ್ಯಕ್ಷ ಸ್ಥಾನದ ಮೇಲೆ ಹೆಚ್ಚಿನ ಆಕಾಂಕ್ಷೆ ಹೊತ್ತು ತಮ್ಮ ಪ್ರಾಬಲ್ಯ ಸಾಧಿಸಲು ಮುಂದಾಗಿದ್ದಾರೆ.
ಇತರೆ ಸದಸ್ಯರು ಕೂಡ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದು, ವರಿಷ್ಠರ ಗಮನ ಸೆಳೆಯುವ ನಿಟ್ಟಿನಲ್ಲಿ ಕಾರ್ಯತಂತ್ರಗಳನ್ನು ನಡೆಸುತ್ತಿದ್ದಾರೆ.ಕಳೆದ ಅವಧಿಯಲ್ಲಿ ಕೊಡವ ಸಮುದಾಯದ ಮಹಿಳೆಗೆ ಅವಕಾಶ ನೀಡಿರುವ ಕಾರಣ ಬೇರೆ ಸಮು ದಾಯಕ್ಕೆ ಅವಕಾಶ ನೀಡಬೇಕೆಂಬ ಕೂಗನ್ನು ಸದಸ್ಯರು ಎತ್ತಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಮಹಿಳೆಯರ ನಡುವೆ ಸ್ಪರ್ಧೆ ಎದುರಾಗಿದೆ. ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ೧೬ ಮಂದಿ ಅರ್ಹರಾಗಿರುವ ಹಿನ್ನೆಲೆ ಪುರುಷ ಸದಸ್ಯರೊಂದಿಗೆ ಮಹಿಳಾ ಸದಸ್ಯರು ಅಧ್ಯಕ್ಷ ಸ್ಥಾನ ಕೈತಪ್ಪಿದರೆ ಉಪಾಧ್ಯಕ್ಷ ಸ್ಥಾನಕ್ಕೆ ಬೇಡಿಕೆಯೊಡ್ಡುವ ಸಾಧ್ಯತೆ ದಟ್ಟವಾಗಿದೆ.
ಉಪಾಧ್ಯಕ್ಷ ಸ್ಥಾನಕ್ಕೆ ನಗರಸಭಾ ಹಿರಿಯ ಸದಸ್ಯ ಕೆ.ಎಸ್. ರಮೇಶ್ ಹಾಗೂ ಅರುಣ್ ಶೆಟ್ಟಿ ಪ್ರಬಲ ಆಕಾಂಕ್ಷಿಯಾಗಿದ್ದು, ಇವರೊಂದಿಗೆ ಮಹೇಶ್ ಜೈನಿ, ಕಾಳಚಂಡ ಅಪ್ಪಣ್ಣ, ಎಸ್.ಸಿ. ಸತೀಶ್, ಉಮೇಶ್ ಸುಬ್ರಮಣಿ ಅವರುಗಳು ಸ್ಪರ್ಧಾ ಕಣದಲ್ಲಿ ಮುಂಚೂಣಿಯಲ್ಲಿದ್ದಾರೆ. ಕೊನೆಘಳಿಗೆಯಲ್ಲಿ ಚಂದ್ರಶೇಖರ್ ಕೂಡ ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಬಹುದು ಎನ್ನಲಾಗಿದೆ.ಸ್ಪಷ್ಟ ಬಹುಮತ ಸಾಧಿಸಿ ಅಧಿಕಾರದಲ್ಲಿರುವ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ‘ಬಹಿರಂಗ ರಹಸ್ಯ’ ಎಂಬ ಸ್ಥಿತಿ ಇದೆ. ಇದರ ಲಾಭ ಪಡೆದು ವಿಪಕ್ಷಗಳು ಒಗ್ಗೂಡಿ ಕಾರ್ಯತಂತ್ರ ರೂಪಿಸು ವುದನ್ನು ಅಲ್ಲಗೆಳೆಯುವಂತಿಲ್ಲ.೫ ಎಸ್.ಡಿ.ಪಿ.ಐ. ಸದಸ್ಯರಿದ್ದು, ತಲಾ ಒಂದೊಂದು ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರಿದ್ದಾರೆ. ಕಾಂಗ್ರೆಸ್ ಶಾಸಕರ ಮತವೂ ಗಣನೆಗೆ ಬರುವುದರಿಂದ ಅವಕಾಶ ವಂಚಿತ ೪-೫ ಸದಸ್ಯರನ್ನು ‘ಮನವೊಲಿಸಿ’ ರಾಜಕೀಯ ಲೆಕ್ಕಾಚಾರ ‘ಉಲ್ಟಾಪಲ್ಟ’ ಮಾಡಬಹುದಾದ ಸಾಧ್ಯತೆಯೂ ಇದ್ದು, ಇದರಿಂದ ಬಿಜೆಪಿ ಎಚ್ಚರಿಕೆಯ ನಡೆ ಅನುಸರಿಸುವುದು ಸಹಜವಾಗಿದೆ.
ಅಧಿಕಾರ ಯಾರಿಗೆ ನೀಡಬೇಕು ಎಂಬ ನಿರ್ಧಾರ ಬಿಜೆಪಿ ವರಿಷ್ಠರು ತೆಗೆದುಕೊಳ್ಳುವ ಹಿನ್ನೆಲೆ ಇದೀಗ ಚೆಂಡು ಅವರ ಅಂಗಳದಲ್ಲಿದೆ. ಮಾಜಿ ಶಾಸಕರು, ಜಿಲ್ಲಾ ಬಿಜೆಪಿ ಪದಾಧಿಕಾರಿಗಳು ಆಕಾಂಕ್ಷಿಗಳನ್ನು ಅಳೆದು ತೂಗಿ ಅಂತಿಮಗೊಳಿಸುವ ಹಿನ್ನೆಲೆ ಆಕಾಂಕ್ಷಿಗಳು ವರಿಷ್ಠರ ಗಮನ ಸೆಳೆಯುವ ಕೆಲಸಕ್ಕೆ ಮುಂದಾಗುತ್ತಿದ್ದಾರೆ. ಮಾಜಿ ಶಾಸಕರೊಂದಿಗೆ ಆತ್ಮೀಯ ಒಡನಾಟ ಹೊಂದಿರುವ ಸದಸ್ಯರುಗಳು ಮಾಜಿ ಶಾಸಕರ ಮೂಲಕ ಒತ್ತಡ ಹಾಕುವ ಕೆಲಸವೂ ಮುಂದಿನ ದಿನಗಳಲ್ಲಿ ಮಾಡಬಹುದು. ಈ ಕುರಿತು ಕೆಲ ಆಕಾಂಕ್ಷಿಗಳನ್ನು ಸಂಪರ್ಕಿಸಿದಾಗ ‘ಸ್ಥಾನ ನೀಡಲು ಮನವಿ ಮಾಡುತ್ತೇವೆ. ಮುಂದೆ ನಾಯಕರ ನಿರ್ಧಾರ’ ಎಂದು ಹೇಳಿಕೊಂಡಿದ್ದಾರೆ.