ರೂಢಿಗತ ಆಲೋಚನೆಗಳಿಂದ ಮುಕ್ತವಾಗುವ ಸೂಕ್ಷ್ಮ ಸಂವೇದನೆ ಇಂದಿನ ತುರ್ತು
ನಾ ದಿವಾಕರ
ಭಾರತದಂತಹ ಶ್ರೇಣೀಕರಣಕ್ಕೊಳಗಾದ ಸಮಾಜದಲ್ಲಿ ಸಾಂಪ್ರದಾಯಿಕ ಆಲೋಚನಾ ವಿಧಾನಗಳು ಹಾಗೂ ಅಭಿವ್ಯಕ್ತಿ ಮಾಧ್ಯಮಗಳು ಕಾಲದಿಂದ ಕಾಲಕ್ಕೆ ತಮ್ಮದೇ ಆದ ಹೊಸ ಅರ್ಥಗಳನ್ನು ಪಡೆದುಕೊಳ್ಳುತ್ತಾ ಹೋಗುವುದು ಸಹಜ. ಸಮಾಜವು ಅಧುನಿಕತೆಗೆ ತೆರೆದುಕೊಳ್ಳುತ್ತಿದ್ದಂತೆಲ್ಲಾ ಜನಸಾಮಾನ್ಯರ ನಡುವಿನ ಬಳಕೆಯ ಭಾಷೆಯೂ ತನ್ನ ಪ್ರಾಚೀನ ಪೊರೆಯನ್ನು ಕಳಚಿಕೊಳ್ಳುತ್ತಲೇ ಹೋಗುತ್ತದೆ. ಸಮಾಜವೇ ರೂಪಿಸುವ ಒಂದು ಬಳಕೆಯ ಭಾಷೆ ಕಾಲಕ್ರಮೇಣ ಅದೇ ಸಮಾಜದ ಮನ್ವಂತರದ ಒಂದು ಭಾಗವಾಗಿ ತನ್ನ ಅರ್ಥವನ್ನು ಕಳೆದುಕೊಳ್ಳುವಂತೆಯೇ ಮತ್ತೊಂದೆಡೆ ವಿಭಿನ್ನ ಅರ್ಥಗಳನ್ನು ಪಡೆದುಕೊಳ್ಳುತ್ತಾ ಹೋಗುತ್ತದೆ. ಭಾರತೀಯ ಸಮಾಜವು ಮೂಲತಃ ಜಾತಿ ಶ್ರೇಣೀಕರಣದ ನೆಲೆಯಲ್ಲೇ ತನ್ನ ಸಾಮಾಜಿಕ-ಸಾಂಸ್ಕೃತಿಕ ಚೌಕಟ್ಟುಗಳನ್ನು ನಿರ್ಮಿಸಿಕೊಳ್ಳುವುದರಿಂದ, ಈ ಜಾತಿ ವ್ಯವಸ್ಥೆಯೊಳಗಿನ ವಿಭಿನ್ನ ಸ್ತರಗಳೇ ಸಮಾಜದ ಸಾರ್ವಜನಿಕ ಸಂವಹನದ ಭಾಷಾ ಇತಿಮಿತಿಗಳನ್ನೂ ನಿರ್ಧರಿಸುತ್ತದೆ.
ಸಾರ್ವಜನಿಕ ವಲಯದಲ್ಲಿ ಬಳಸಲಾಗುವ ಭಾಷೆ ಮತ್ತು ಪರಿಭಾಷೆ ಮೂಲತಃ ಉಗಮಿಸುವುದು ಜನಜೀವನದಿಂದಲೇ ಆದರೂ ಅದು ನೆಲೆಯೂರುವುದು ಸಮಾಜದ ಮೇಲೆ ಹಿಡಿತ ಸಾಧಿಸಿರುವ ಪ್ರಬಲ ವರ್ಗಗಳಿಂದ. ಭಾರತದ ಸಂದರ್ಭದಲ್ಲಿ ಇದು ಜಾತಿ ಶ್ರೇಣಿಯಿಂದಲೂ ನಿರ್ಧರಿಸಲ್ಪಡುತ್ತದೆ. ಸಂಪ್ರದಾಯ, ಪರಂಪರೆ ಮತ್ತು ಜನಸಾಮಾನ್ಯರ ನಿತ್ಯ ಬದುಕಿನ ನಡೆನುಡಿಗಳನ್ನು ಒಂದು ನಿರ್ದಿಷ್ಟ ಸಾಂಸ್ಕೃತಿಕ ಅಥವಾ ಧಾರ್ಮಿಕ ಚೌಕಟ್ಟಿನೊಳಗೆ ಬಂಧಿಸಲು ಯತ್ನಿಸುವ ಪ್ರಬಲ ವರ್ಗಗಳು ತಮ್ಮ ಸಾಮಾಜಿಕ ಪ್ರಾಬಲ್ಯ, ಆರ್ಥಿಕ ಸ್ಥಾನಮಾನ ಹಾಗೂ ಸಾಂಸ್ಕೃತಿಕ ಪಾರಮ್ಯದ ಬಲವನ್ನೇ ಆಧರಿಸಿ, ಕೆಲವು ಆಡು ನುಡಿಗಳನ್ನೂ ಚಾಲ್ತಿಯಲ್ಲಿರಿಸುತ್ತವೆ. ಇದು ಎಲ್ಲ ಸಮಾಜಗಳಲ್ಲೂ ಸಹಜವಾಗಿ ಕಾಣಬಹುದಾದ ವಿದ್ಯಮಾನ. ಹಾಗಾಗಿಯೇ ಜಗತ್ತಿನಾದ್ಯಂತ ಯಾವುದೇ ಸಮಾಜದೊಳಗೆ ಹೊಕ್ಕು ನೋಡಿದರೂ ಅಲ್ಲಿನ ದುರ್ಬಲ ವರ್ಗಗಳು ಅಥವಾ ಅಂಚಿಗೆ ತಳ್ಳಲ್ಪಟ್ಟ ಸಮುದಾಯಗಳು ಅವಹೇಳನ, ಅಪಮಾನ, ನಿರ್ಲಕ್ಷ್ಯ ಅಥವಾ ಅವಗಣನೆಗೆ ತುತ್ತಾಗುವಂತಹ ಮಾತುಗಳಿಗೆ ಮುಖಾಮುಖಿಯಾಗುವುದನ್ನು ಗುರುತಿಸಬಹುದು.
ಭಾಷೆ ಮತ್ತು ವ್ಯವಸ್ಥೆಯ ನಂಟು
ಭಾರತೀಯ ಸಮಾಜವು ಮುಖ್ಯತಃ ಜಾತಿ ಶ್ರೇಣೀಕರಣ ಮತ್ತು ಪಿತೃಪ್ರಧಾನತೆಯಿಂದಲೇ ರೂಪುಗೊಂಡಿರುವುದರಿಂದ ನಮ್ಮ ನಡುವಿನ ಸಾಮಾಜಿಕ ಸಂವಹನದಲ್ಲಿ ಮಹಿಳೆ ಮತ್ತು ಕೆಳ ಶ್ರೇಣಿಯ ಜಾತಿಗಳು ಈ ಸನ್ನಿವೇಶಗಳಿಗೆ ಮುಖಾಮುಖಿಯಾಗುತ್ತವೆ. ಸಮಾಜವು ಬೌದ್ಧಿಕವಾಗಿ ಮುನ್ನಡೆ ಸಾಧಿಸುತ್ತಿರುವಂತೆಯೇ ಈ ಸಂವಹನದ ಮಾದರಿಗಳು ಬದಲಾಗುತ್ತಲೇ ಹೋಗುವುದು ಸಾಮಾನ್ಯ ಸಂಗತಿ. ಆಧುನಿಕ ನಾಗರಿಕತೆಯನ್ನು ಮೈಗೂಡಿಸಿಕೊಂಡ ಸಮಾಜವೊಂದು ತನ್ನ ಶೈಕ್ಷಣಿಕ ಪ್ರಗತಿ ಹಾಗೂ ಬೌದ್ಧಿಕ ಮುಂಗಾಣ್ಕೆಯ ಮೂಲಕ ತನ್ನ ಸಾಂಪ್ರದಾಯಿಕತೆಯನ್ನು ಕಳಚಿಕೊಂಡು ಬದಲಾದ ಸಂದರ್ಭಕ್ಕೆ ಸೂಕ್ತವಾದ ಸಂವಹನ ಮಾದರಿಗಳನ್ನು ಬಳಸಿಕೊಳ್ಳಬೇಕಾಗುತ್ತದೆ. ನಾವು ಬಳಸುವ ಭಾಷೆಯೂ ಸಹ ಆಧುನಿಕೀಕರಣಕ್ಕೊಳಗಾಗುವುದು ಅನಿವಾರ್ಯವೂ ಆಗುತ್ತದೆ. ಇಲ್ಲಿಯೇ ಜಾತಿ ಶ್ರೇಷ್ಠತೆಯ ನೆಲೆಯಲ್ಲಿ ಸಾಂಪ್ರದಾಯಿಕವಾಗಿ ರೂಪುಗೊಂಡ ನಿತ್ಯ ಬಳಕೆಯ ಭಾಷೆಯೂ ಸಹ ಪರಿಷ್ಕೃತವಾಗುವುದು ಅನಿವಾರ್ಯವಾಗುತ್ತದೆ. ನಮ್ಮ ನಡುವೆ ಪ್ರಚಲಿತವಾಗಿರುವ ಸಾವಿರಾರು ಗಾದೆ ಮಾತುಗಳು ಮತ್ತು ನಾಣ್ಣುಡಿಗಳಲ್ಲಿ ಜಾತಿ ಹಾಗೂ ಲಿಂಗ ಸೂಚಕ ಪದಗಳನ್ನು ಹೇರಳವಾಗಿ ಕಾಣಬಹುದು.
ಬದಲಾದ ಸಾಮಾಜಿಕ ಸಂದರ್ಭದಲ್ಲಿ ಈ ಲಿಂಗ-ಜಾತಿ ಸೂಚಕ ಪದಗಳು ತಮ್ಮ ಅರ್ಥವನ್ನು ಕಳೆದುಕೊಳ್ಳದೆ ಹೋದರೆ ನಾವು ನಡೆದುಬಂದ ಹಾದಿಯಲ್ಲೇ ಲೋಪ ಇದೆ ಎಂದು ಒಪ್ಪಿಕೊಳ್ಳಬೇಕಾಗುತ್ತದೆ. ಐದಾರು ದಶಕಗಳ ಹಿಂದೆ ಸಾರ್ವಜನಿಕ ಸಂವಹನದಲ್ಲಿ ಬಳಸಲಾಗುತ್ತಿದ್ದ ಅನೇಕ ಜಾತಿ ಸೂಚಕ ಪದಗಳು ಇಂದು ಕಾನೂನುಬದ್ಧವಾಗಿ ನಿಷೇಧಕ್ಕೊಳಗಾಗಿವೆ. ಕೆಲವು ಲಿಂಗಸೂಚಕ ಪದಗಳನ್ನೂ ಸಹ ಬದಲಿಸುವಂತೆ ಇತ್ತೀಚೆಗೆ ಸುಪ್ರೀಂಕೋರ್ಟ್ ಆದೇಶ ಹೊರಡಿಸಿದೆ. ಆದರೂ ಪರಂಪರಾನುಗತವಾಗಿ ಬಳಕೆಯಲ್ಲಿರುವಂತಹ ಗಾದೆ ಮಾತುಗಳನ್ನು ಅಕ್ಷರಶಃ ಪರಿಷ್ಕರಿಸಲಾಗುವುದಿಲ್ಲ. ಹಾಗಾಗಿ ಈ ಗಾದೆಗಳನ್ನು ಬಳಸುವವರಲ್ಲಿ ಸಾಮಾಜಿಕ ಸೂಕ್ಷ್ಮತೆ ಮತ್ತು ಸಂವೇದನೆ ಜಾಗೃತವಾಗಿರುವುದು ಅತ್ಯವಶ್ಯ. ಹಲವಾರು ಸಾಹಿತ್ಯ ಕೃತಿಗಳಲ್ಲಿ ಇದೇ ಗಾದೆ ಮಾತುಗಳನ್ನು ಸಾಂದರ್ಭಿಕವಾಗಿ ಬಳಸಲಾಗಿದ್ದರೂ ಆ ಸಂಭಾಷಣೆಯ ಮೂಲಸ್ಥಾಯಿ ಭಿನ್ನವಾಗಿರುತ್ತದೆ. ಆದರೆ ಬಾಹ್ಯ ಸಮಾಜದ ಸಂವಹನದಲ್ಲಿ ಬಳಸುವಾಗ ನಮ್ಮಲ್ಲಿ ಸೂಕ್ಷ್ಮತೆ ಇರಬೇಕಾಗುತ್ತದೆ.
ಗಾದೆಗಳು ಒಂದು ನಿರ್ದಿಷ್ಟ ಕಾಲಘಟ್ಟದ ಅಥವಾ ಯುಗದ ಸಾಮಾಜಿಕ ಚೌಕಟ್ಟಿನೊಳಗೇ ಜನಸಾಮಾನ್ಯರ ನಿತ್ಯ ಬದುಕಿನ ನಡುವೆ ಹುಟ್ಟಿಕೊಂಡರೂ, ಈ ಸಾರ್ವಜನಿಕ ಸಂವಹನದ ಮೇಲೆ ಆಯಾ ಕಾಲದ ಸಾಂಸ್ಕೃತಿಕ-ಧಾರ್ಮಿಕ ವಾತಾವರಣ ಹಾಗೂ ಈ ವಲಯಗಳಲ್ಲಿ ಪ್ರಾಬಲ್ಯ ಸಾಧಿಸಿರುವ ವರ್ಗಗಳು ಸೃಷ್ಟಿಸುವ ಜೀವನ ಶೈಲಿಗಳು ಗಾಢವಾದ ಪ್ರಭಾವ ಬೀರುತ್ತವೆ. ಹಾಗಾಗಿಯೇ ನಿಕೃಷ್ಟವಾಗಿ ಕಾಣಲ್ಪಡುವ ಕೆಳಸ್ತರದ ಜನಸಮುದಾಯಗಳೇ ಗಾದೆ ಮಾತುಗಳಲ್ಲಿನ ಜಾತಿ ಸೂಚಕಗಳಿಗೂ, ಸಾಮಾನ್ಯ ಬೈಗುಳಗಳಿಗೂ ಮೂಲ ಧಾತುಗಳಾಗುತ್ತವೆ. ಪಿತೃಪ್ರಧಾನತೆಯೂ ಜಾತಿ ಪಾರಮ್ಯದ ಒಂದು ಅಂಶವಾಗಿರುವುದರಿಂದ ಲಿಂಗ ಸೂಚಕ ಪದಗಳೂ ಸಹ ಇಲ್ಲಿ ಸೇರಿಕೊಳ್ಳುತ್ತವೆ. ಆದ್ದರಿಂದಲೇ ನಾವು ಬಳಸುವ ಬೈಗುಳಗಳಲ್ಲೂ, ನಿಂದನಾತ್ಮಕ ಭಾಷೆಗಳಲ್ಲೂ, ಸಾಮಾಜಿಕ-ಸಾಂಸ್ಕೃತಿಕ ಅಂತಸ್ತು ಮತ್ತು ಶ್ರೇಣಿಯನ್ನು ಸೂಚಿಸುವ ಮಾತುಗಳಲ್ಲೂ ಮಹಿಳೆ ನಕಾರಾತ್ಮಕವಾಗಿ ಕಂಡುಬರುತ್ತಾಳೆ. ಅಥವಾ ಕೆಳಶ್ರೇಣಿಯ ಜಾತಿಗಳು ಕಂಡುಬರುತ್ತವೆ.
ವರ್ತಮಾನದ ಅವಶ್ಯಕತೆಗಳು
ಹಾಗಾಗಿ ನಮ್ಮ ಸಂವಹನ ವಿಧಾನಗಳನ್ನು, ಅಭಿವ್ಯಕ್ತಿ ಮಾದರಿಗಳನ್ನು ವರ್ತಮಾನದ ಸಾಮಾಜಿಕ ಬದುಕಿಗೆ ಅನುಗುಣವಾಗಿ ಬದಲಿಸಿಕೊಳ್ಳುವುದು ಅನಿವಾರ್ಯವೂ ಆಗುತ್ತದೆ. ಹಾಗೆಯೇ ಶಿಕ್ಷಣದ ಮೂಲಕ, ವಿಭಿನ್ನ ಜ್ಞಾನವಾಹಿನಿಗಳ ಮೂಲಕ , ಬೌದ್ಧಿಕ ವಿಕಸನದ ಮೂಲಕ ಸಮಾಜದಲ್ಲಿ ಲಿಂಗ ಸೂಕ್ಷ್ಮತೆಯನ್ನೂ, ಜಾತಿ ಸೂಕ್ಷ್ಮತೆಯನ್ನೂ ಬೆಳೆಸುವ ಜವಾಬ್ದಾರಿ ಇಡೀ ಸಮಾಜದ ಮೇಲಿರುತ್ತದೆ. ನಾಗರಿಕ ಸಮಾಜದ ವಿವಿಧ ಸಂಸ್ಥೆಗಳು, ಸಾಂಸ್ಕೃತಿಕ-ಸಾಹಿತ್ಯಕ ವಲಯದ ಮೂಲಕ ಈ ಸಂವೇದನಾಶೀಲತೆಯನ್ನು ಬೆಳೆಸುವ ಪ್ರಯತ್ನಗಳನ್ನು ಮಾಡಬೇಕಿದೆ. ಚಿತ್ರ ನಟ ಉಪೇಂದ್ರ ಅವರು ಬಳಸಿದ ಗಾದೆಯೊಂದರ ಸುತ್ತ ಎದ್ದಿರುವ ವಿವಾದವನ್ನು ಗಮನಿಸಿದಾಗ, ನಮ್ಮ ಸುಶಿಕ್ಷಿತ ಸಮಾಜವೂ ಸಹ ಈ ಸೂಕ್ಷ್ಮತೆಗಳನ್ನು ರೂಢಿಸಿಕೊಂಡಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಯಃಕಶ್ಚಿತ್ ಗಾದೆಗಾಗಿ ಇಷ್ಟೊಂದು ದ್ವೇಷವೇ ಎಂಬ ಪ್ರಶ್ನೆ ಚರ್ಚೆಗೊಳಗಾಗಿರುವ ಸಂದರ್ಭದಲ್ಲೇ ಉಪೇಂದ್ರ ಬಳಸಿದ ಗಾದೆ ಮಾತಿನಲ್ಲಿರುವ ಜಾತಿ ನಿಕೃಷ್ಟತೆಯ ಸೂಕ್ಷ್ಮದ ಪರಿವೆಯೂ ಸಮಾಜಕ್ಕೆ ಇರಬೇಕಾಗುತ್ತದೆ.
ಉಪೇಂದ್ರ ಪ್ರಕರಣದಲ್ಲಿ ಎಫ್‌ಐಆರ್, ಹೈಕೋರ್ಟ್ ತಡೆಯಾಜ್ಞೆ, ಕ್ಷಮಾ ಯಾಚನೆ ಹಾಗೂ ಅಂತಿಮ ಶಿಕ್ಷೆಗಳ ಚೌಕಟ್ಟಿನಿಂದ ಹೊರನಿಂತು ಯೋಚಿಸಿದಾಗ ವಿಶಾಲ ಸಮಾಜಕ್ಕೆ ಕಾಣಬೇಕಿರುವುದು ನಮ್ಮಲ್ಲಿ ಇಂದಿಗೂ ಬೇರೂರಿರುವ ಜಾತಿ-ಲಿಂಗ ಕೇಂದ್ರಿತ ಸಂವಹನದ ಮಾಧ್ಯಮಗಳು ಹಾಗೂ ಈ ಮಾಧ್ಯಮಗಳ ಮೂಲಕ ಅಭಿವ್ಯಕ್ತಗೊಳ್ಳುವ ಅಭಿಪ್ರಾಯಗಳು. ನಿರಂತರವಾಗಿ ನಡೆಯುತ್ತಿರುವ ಮಹಿಳೆಯರ ಮೇಲಿನ ಅತ್ಯಾಚಾರ-ದೌರ್ಜನ್ಯಗಳ ಸಂದರ್ಭಗಳಲ್ಲಿ ಈ ಅಸೂಕ್ಷ್ಮತೆಯು ಢಾಳಾಗಿ ಕಾಣುತ್ತದೆ. ಗಾದೆ ಮಾತುಗಳಲ್ಲಷ್ಟೇ ಅಲ್ಲದೆ, ಹಾಸ್ಯದ ಪರಿಭಾಷೆಯಲ್ಲಿ, ನುಡಿಗಟ್ಟುಗಳಲ್ಲೂ ಸಹ ಮಹಿಳೆಯನ್ನು ನಿಕೃಷ್ಟವಾಗಿ ಕಾಣುವಂತಹ ಲಿಂಗ ಸೂಚಕ ಪದಗಳು ಹೇರಳವಾಗಿ ಬಳಕೆಯಾಗುತ್ತಲೇ ಇರುತ್ತವೆ. ಸುಶಿಕ್ಷಿತ ಸಮಾಜದಲ್ಲೂ ಸಹ ಇಂತಹ ಅಭಿವ್ಯಕ್ತಿ ಮಾದರಿಗಳು ಅಪರಾಧ ಎನಿಸುವುದೇ ಇಲ್ಲ. ಏಕೆಂದರೆ ಪರಂಪರಾನುಗತವಾಗಿ ನಮ್ಮ ಪಿತೃಪ್ರಧಾನ ವ್ಯವಸ್ಥೆ ಈ ಪದಬಳಕೆಯನ್ನು ಸಾಮಾನ್ಯೀಕರಿಸಿ, ಸಾರ್ವತ್ರೀಕರಿಸಿ, ಸ್ವೀಕೃತಗೊಳಿಸಿರುತ್ತದೆ.
ಕೆಳ ಶ್ರೇಣಿಯ ಜಾತಿ ಸಮುದಾಯಗಳನ್ನು ನಿಕೃಷ್ಟವಾಗಿ ಕಾಣುವ ಮನಸ್ಥಿತಿ ಇರುವವರೆಗೂ ಈ ಪದಬಳಕೆಯೂ ಸಹ ಜೀವಂತವಾಗಿಯೇ ಉಳಿದಿರುತ್ತದೆ. ಕಾನೂನು, ಶಾಸನ ಮತ್ತು ಶಿಕ್ಷೆಯ ಭೀತಿ ಈ ಪದಗಳ ಬಳಕೆಯನ್ನು ತಪ್ಪಿಸಬಹುದಾದರೂ, ಖಾಸಗಿ ಸಂವಹನದಲ್ಲಿ, ಕಚೇರಿಗಳಲ್ಲಿ, ಕೌಟುಂಬಿಕ ವಲಯಗಳಲ್ಲಿ ಹಾಗೂ ಕೆಲವು ನಿರ್ದಿಷ್ಟ ಸಮುದಾಯಗಳ ಚರ್ಚಾಕೂಟಗಳಲ್ಲಿ ಈ ಮನಸ್ಥಿತಿಯ ಬೌದ್ಧಿಕ ಅವತಾರಗಳನ್ನು ಸುಲಭವಾಗಿ ಗುರುತಿಸಬಹುದು. ಲಕ್ಷಾಂತರ ಜನರನ್ನು ತಲುಪುವ ಸಿನೆಮಾ, ಟಿವಿ, ರಂಗಭೂಮಿ ಹಾಗೂ ಇತರ ಸಾಂಸ್ಕೃತಿಕ ಕ್ಷೇತ್ರಗಳನ್ನು ಪ್ರತಿನಿಧಿಸುವವರಲ್ಲಿ ತಮ್ಮ ಸುತ್ತಲಿನ ಸಮಾಜದ ಈ ವಿಲಕ್ಷಣಗಳ ಪರಿಚಯವಿದ್ದರೆ ಅಂತಹ ಕಲಾವಿದರು ಸಂವಹನ ಸೂಕ್ಷ್ಮತೆಯನ್ನು ಬೆಳೆಸಿಕೊಂಡಿರುತ್ತಾರೆ. ಈ ಸೂಕ್ಷ್ಮ ಸಂವೇದನೆಯನ್ನು ಬೆಳೆಸಿಕೊಳ್ಳುವುದು ಸಾಂಸ್ಕೃತಿಕ ವಲಯದ ಪ್ರತಿಯೊಬ್ಬರಿಗೂ ಅತ್ಯವಶ್ಯವಾಗಿರುತ್ತದೆ.
ಸಾಮಾಜಿಕ ಸಂವಹನದ ಮಾದರಿ
ಉಪೇಂದ್ರ ಅವರ ವಿವಾದದಲ್ಲಿ ನಾವು ಗುರುತಿಸಬೇಕಾಗಿರುವುದು ಈ ಸೂಕ್ಷ್ಮ ಸಂವೇದನೆಯ ಕೊರತೆಯನ್ನು. ಅವರ ಹೇಳಿಕೆ ಉದ್ದೇಶಪೂರ್ವಕವೋ, ಬಾಯ್ತಪ್ಪಿ ನುಡಿದಿರುವುದೋ ಅಥವಾ ಅವರ ವ್ಯಕ್ತಿಗತ ಮನೋಭಾವದ ದ್ಯೋತಕವೋ ಎನ್ನುವ ಪ್ರಶ್ನೆಯನ್ನು ಬದಿಗಿಟ್ಟು, ವಸ್ತುನಿಷ್ಠವಾಗಿ ಯೋಚಿಸಿದಾಗ ನಮಗೆ ಕನ್ನಡ ಸಿನಿಮಾ ರಂಗದ ಸಂವಹನ ಮಾದರಿಗಳತ್ತ ಗಮನಹರಿಸುವುದು ಅನಿವಾರ್ಯವಾಗುತ್ತದೆ. ಡಾ. ರಾಜ್ ನಂತರದ ಪೀಳಿಗೆಯ ವಾಣಿಜ್ಯ ಚಿತ್ರಗಳಲ್ಲಿ ಢಾಳಾಗಿ ಕಾಣಿಸುವಂತಹ ಒಂದು ಲಕ್ಷಣ ಎಂದರೆ ಮನುಜ ಸೂಕ್ಷ್ಮತೆಯ ಕೊರತೆ, ವಿಶೇಷವಾಗಿ ಲಿಂಗ ಸೂಕ್ಷ್ಮತೆಯ ಕೊರತೆ. ಹಾಸ್ಯದ ಹೆಸರಿನಲ್ಲಿ ದ್ವಂದ್ವಾರ್ಥದ ಸಂಭಾಷಣೆಗಳನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ಚಿತ್ರರಂಗದಲ್ಲಿ ಖ್ಯಾತಿ (?) ಪಡೆದ ನಾಯಕರೂ ನಮ್ಮ ನಡುವೆ ಇದ್ದಾರೆ. ಹಾಗೆಯೇ ಸಮಾಜದಲ್ಲಿನ ಹಿಂಸೆ, ಕ್ರೌರ್ಯ ಮತ್ತು ದೌರ್ಜನ್ಯಗಳನ್ನು ಬಿಂಬಿಸುವ ನೆಪದಲ್ಲಿ ಹೆಣ್ಣಿನ ದೇಹವನ್ನು ಮಾರುಕಟ್ಟೆ ಸರಕಿನಂತೆ ಬಳಸುವ ಸಿನೆಮಾಗಳಿಗೂ ನಮ್ಮಲ್ಲೇನೂ ಕೊರತೆಯಿಲ್ಲ.
ಒಂದು ಸಮಾಜವಾಗಿ ಈ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ನಮಗೆ ಉಪೇಂದ್ರ ವಿವಾದದ ಹಿಂಬದಿಯಲ್ಲಿ ಅಡಗಿರುವ ವಾಸ್ತವಗಳೂ ಅರಿವಾಗುತ್ತದೆ. ಜಾತಿವ್ಯವಸ್ಥೆಯ ಶ್ರೇಣೀಕರಣವನ್ನು ಸದ್ದಿಲ್ಲದೆ ಕಾಪಾಡುವಂತಹ ನಾಗರಿಕ ಜೀವನಶೈಲಿಯನ್ನು ಅಳವಡಿಸಿಕೊಂಡಿರುವ ಭಾರತದ ಮಹಾನಗರಗಳು ಬೌದ್ಧಿಕ ನೆಲೆಯಲ್ಲಿ ಈ ಜಾತಿ ಶ್ರೇಷ್ಠತೆಯ ಮನಸ್ಥಿತಿಯನ್ನು ಕಾಪಾಡುವಲ್ಲಿಯೂ ಸಹ ತನ್ನದೇ ಆದ ಸಾಂಸ್ಥಿಕ ನೆಲೆಗಳನ್ನು ಸೃಷ್ಟಿಸಿಕೊಂಡಿವೆ. ಆಧುನಿಕ ಬಡಾವಣೆಗಳು, ಐಷಾರಾಮಿ ಅಪಾರ್ಟ್‌ಮೆಂಟ್‌ಗಳು ಮತ್ತು ಗೇಟೆಡ್ ಕಮ್ಯುನಿಟಿ ಎನ್ನಲಾಗುವ ಅತ್ಯಾಧುನಿಕ ಕಾಲೋನಿಗಳು ಆಹಾರ, ಅಂತಸ್ತು ಹಾಗೂ ಸಾಂಸ್ಕೃತಿಕ ಆಲೋಚನೆಗಳಿಗೆ ಅನುಗುಣವಾಗಿ ತಮ್ಮದೇ ಆದ ಸಾಮಾಜಿಕ ಚೌಕಟ್ಟುಗಳನ್ನು ನಿರ್ಮಿಸಿಕೊಳ್ಳುತ್ತಿವೆ. ಈ ಪರಿಸರದಲ್ಲೇ ಕಾರ್ಪೋರೇಟ್ ವಲಯಗಳು ಸೃಷ್ಟಿಸುತ್ತಿರುವ ಶೈಕ್ಷಣಿಕ ಸಂಸ್ಥೆಗಳು ಮೇಲ್ಪದರದ ಸಮಾಜವನ್ನು ಪೋಷಿಸುವಂತಹ ಮಠಗಳಂತೆ ವಿಸ್ತರಿಸುತ್ತಿವೆ. ಇಲ್ಲಿ ಮೇಲು-ಕೀಳಿನ ಮನಸ್ಥಿತಿಯು ಸುಪ್ತಾವಸ್ಥೆಯಲ್ಲಿರುವುದರಿಂದ ಬಾಹ್ಯ ಸಮಾಜಕ್ಕೆ ಗೋಚರಿಸುವುದಿಲ್ಲ.
ಈ ನಡುವೆ ಕೆಳಸ್ತರದ ಜಾತಿ ಸಮುದಾಯಗಳು ಶತಮಾನಗಳಿಂದ ಅನುಭವಿಸುತ್ತಲೇ ಬಂದಿರುವ ಅಪಮಾನಗಳು ರೂಪಾಂತರಗೊಂಡು ವಿವಿಧ ಸ್ವರೂಪದಲ್ಲಿ ವ್ಯಕ್ತವಾಗುತ್ತಲೇ ಇವೆ. ದಲಿತರು, ಮಹಿಳೆಯರು, ಶೋಷಿತ ಸಮುದಾಯಗಳು ಭೌತಿಕವಾಗಿ ನಿರಂತರ ದೌರ್ಜನ್ಯ, ದಬ್ಬಾಳಿಕೆಗೆ ಒಳಗಾಗುತ್ತಿರುವಂತೆಯೇ ಈ ಸಮುದಾಯಗಳ ಸುತ್ತ ಬಳಸಲಾಗುತ್ತಿರುವ ಸಂವಹನ ಮಾಧ್ಯಮಗಳೂ ಸಹ ಮನುಜ ಸೂಕ್ಷ್ಮತೆಯನ್ನು ಕಳೆದುಕೊಳ್ಳುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಬಂಡವಾಳ ಮತ್ತು ಮಾರುಕಟ್ಟೆಯ ನಿಯಂತ್ರಣದಲ್ಲಿರುವ ಚಲನಚಿತ್ರ ರಂಗವು ಸಹಜವಾಗಿಯೇ ಈ ಸೂಕ್ಷ್ಮತೆಗಳಿಗೆ ಆದ್ಯತೆ ನೀಡುವುದಿಲ್ಲ. ಬದಲಾಗಿ ಸುಲಭವಾಗಿ ತಳಮಟ್ಟವನ್ನು ತಲುಪುವ ಹಾದಿಗಳನ್ನು ಹುಡುಕುತ್ತದೆ. ಇದರಿಂದ ಅತಿಯಾಗಿ ಪ್ರಭಾವಿತವಾಗುವ ಯುವ ಸಮುದಾಯ ಸಹಜವಾಗಿಯೇ ದಿಕ್ಕುತಪ್ಪುತ್ತದೆ. ಮತೀಯವಾದದ ಅಮಲು ತೀವ್ರವಾಗಿ ಕಾಡುತ್ತಿರುವ ಯುವ ಸಮೂಹದಲ್ಲಿ ಜಾತಿ-ಲಿಂಗ ಸೂಕ್ಷ್ಮ ಸಂವೇದನೆಗಳೇ ಇಲ್ಲವಾಗುತ್ತಿರುವುದಕ್ಕೆ ಇದೂ ಒಂದು ಕಾರಣವಾಗಿದೆ.
ಈ ಸೂಕ್ಷ್ಮ ಸಂವೇದನೆಯನ್ನು ಜಾಗೃತಗೊಳಿಸುವ ಸಾಂಸ್ಕೃತಿಕ-ಸಾಮಾಜಿಕ ಜವಾಬ್ದಾರಿಯನ್ನು ಪ್ರಜ್ಞಾವಂತ ಸಮಾಜ ನಿಭಾಯಿಸಬೇಕಿದೆ. ಜಾತಿ-ಮತ-ಧರ್ಮ ಶ್ರೇಣಿಯ ಅಸ್ಮಿತೆಗಳು ಗಟ್ಟಿಯಾಗುತ್ತಿರುವ ಪ್ರಸ್ತುತ ಸನ್ನಿವೇಶದಲ್ಲಿ ಮನುಜ ಸೂಕ್ಷ್ಮತೆಯೇ ಶಿಥಿಲವಾಗುತ್ತಿರುವ ಅಪಾಯವನ್ನೂ ಸಹ ಎದುರಿಸಬೇಕಿದೆ. ಇದು ನಮ್ಮ ಮುಂದಿರುವ ಬೌದ್ಧಿಕ-ಸಾಂಸ್ಕೃತಿಕ ಸವಾಲು ಸಹ ಆಗಿದೆ.