• Home
  • About Us
  • ಕರ್ನಾಟಕ
Friday, July 11, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಸಾಮಾನ್ಯ ಜನತೆಯ ಜೀವನಮಟ್ಟ ಅರಿಯದೆ ಸಾಮಾಜಿಕ ನ್ಯಾಯ ಸಾಧಿಸಲು ಸಾಧ್ಯವೇ? – ನಾ ದಿವಾಕರ ಅವರ ಬರಹ

Any Mind by Any Mind
October 23, 2023
in ದೇಶ
0
ಸಾಮಾನ್ಯ ಜನತೆಯ ಜೀವನಮಟ್ಟ ಅರಿಯದೆ ಸಾಮಾಜಿಕ ನ್ಯಾಯ ಸಾಧಿಸಲು ಸಾಧ್ಯವೇ? – ನಾ ದಿವಾಕರ ಅವರ ಬರಹ
Share on WhatsAppShare on FacebookShare on Telegram

ADVERTISEMENT

2020ರಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭಾರತಕ್ಕೆ ಅಧಿಕೃತ ಭೇಟಿ ನೀಡಿದ್ದಾಗ ಭಾರತ ಸರ್ಕಾರ ಅವರಿಗೆ ಅಭೂತಪೂರ್ವ ಸ್ವಾಗತ ಕೋರಿತ್ತು. ಅಭಿವೃದ್ಧಿ ಹೊಂದುತ್ತಿರುವ ಭಾರತವನ್ನು ವಿಶ್ವದ ದೊಡ್ಡಣ್ಣ ಮುಂದೆ ಪ್ರದರ್ಶಿಸುವ ತವಕ ಬಹುಮಟ್ಟಿಗೆ ಎಲ್ಲ ಸರ್ಕಾರಗಳ ಆಳ್ವಿಕೆಯಲ್ಲೂ ಗುರುತಿಸಬಹುದು. ಇದೇ ಪರಂಪರೆಯ ಮುಂದುವರಿಕೆಯಾಗಿ 2020ರ ಟ್ರಂಪ್‌ ಭೇಟಿಯನ್ನೂ ಸಂಭ್ರಮಿಸುವ ಹಾದಿಯಲ್ಲಿ ಭಾರತ ಸರ್ಕಾರ “ನಮಸ್ತೆ ಟ್ರಂಪ್‌ ” ಕಾರ್ಯಕ್ರಮವನ್ನೂ ಹಮ್ಮಿಕೊಂಡಿತ್ತು. ಸಹಜವಾಗಿಯೇ ಭಾರತದ ಅಭಿವೃದ್ಧಿ ಮಾದರಿ ಎಂದರೆ ʼ ಗುಜರಾತ್‌ ಮಾದರಿ ʼ ಎಂದೇ ಜನಜನಿತವಾಗಿರುವುದರಿಂದ ಅಹಮದಾಬಾದ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಭವ್ಯ ಸಮಾರಂಭವನ್ನೂ ಏರ್ಪಡಿಸಲಾಗಿತ್ತು.

ಆದರೆ ವಿದೇಶಿ ಗಣ್ಯರಿಗೆ ಬಡ ಭಾರತವನ್ನು ತೋರಿಸಲು ಸಹಜವಾಗಿಯೇ ಸರ್ಕಾರಗಳಿಗೆ ಮುಜುಗರವಾಗುವುದರಿಂದ, ಟ್ರಂಪ್‌ ಸಾಗಿ ಬರುವ ಹಾದಿಯ ಅರ್ಧ ಕಿಲೋಮೀಟರ್‌ ವ್ಯಾಪ್ತಿಯಲ್ಲಿ ಅಕ್ಕಪಕ್ಕದಲ್ಲಿದ್ದ ಕೊಳೆಗೇರಿಗಳನ್ನು ಮರೆಮಾಚಲು ಸರ್ಕಾರ ನಾಲ್ಕು ಅಡಿ ತಾತ್ಕಾಲಿಕ ಗೋಡೆಯನ್ನು ನಿರ್ಮಿಸಬೇಕಾಯಿತು. 2000ಕ್ಕೂ ಹೆಚ್ಚು ಬಡ ಜನತೆ ವಾಸಿಸುವ ಈ ಪ್ರದೇಶ ಟ್ರಂಪ್‌ ಕಣ್ಣಿಗೆ ಬೀಳಲಿಲ್ಲ. ಆದರೆ ಈ ಉಪಗ್ರಹ ಸಂವಹನ ಯುಗದಲ್ಲಿ ಇಂತಹ ಬಡತನದ ಕೂಪಗಳಿಗೆ ಪೂರ್ಣ ಹೊದಿಕೆಯನ್ನಂತೂ ಹೊದಿಸಲಾಗುವುದಿಲ್ಲ. ಭದ್ರತೆಯ ದೃಷ್ಟಿಯಿಂದ ಗೋಡೆ ಕಟ್ಟಲಾಯಿತು ಎಂದು ಸರ್ಕಾರ ಹೇಳಿದರೂ ಅದು ಅರ್ಧಸತ್ಯ ಎನ್ನುವುದೇ ವಾಸ್ತವ. ಇದೇ ರೀತಿ ಇತ್ತೀಚೆಗೆ ದೆಹಲಿಯಲ್ಲಿ ನಡೆದ ಜಿ-20 ಶೃಂಗಸಭೆಯ ಸಂದರ್ಭದಲ್ಲೂ ದೆಹಲಿಯಲ್ಲಿ ಪ್ರಾಯೋಜಿತ ಸ್ಥಳದ ಸಮೀಪದಲ್ಲಿದ್ದ ಕೊಳೆಗೇರಿಗಳನ್ನು ಅಕ್ರಮ ಒತ್ತುವರಿ ಎಂಬ ಕಾರಣ ನೀಡಿ ನಾಲ್ಕು ತಿಂಗಳ ಮುನ್ನವೇ ತೆರವುಗೊಳಿಸಲಾಗಿತ್ತು. ಜಿಂಕ್‌ಷೀಟ್‌ಗಳಿಂದ ಕಟ್ಟಿಕೊಳ್ಳಲಾಗಿದ್ದ ಪುಟ್ಟ ಗುಡಿಸಲುಗಳನ್ನು ನೆಲಸಮ ಮಾಡಲಾಯಿತು.

ಇಂತಹ ಪ್ರಸಂಗಗಳು ಅಪರೂಪವೇನೂ ಅಲ್ಲ. ಇಲ್ಲಿ ಪ್ರಶ್ನೆ ಇರುವುದು ತಳಮಟ್ಟದ ಸಮಾಜದಲ್ಲಿ ಜನತೆಯನ್ನು, ವಿಶೇಷವಾಗಿ ಶ್ರಮಿಕ ವರ್ಗಗಳನ್ನು ಕಾಡುವ ಬಡತನ, ಹಸಿವು, ನಿರ್ಗತಿಕತೆ ಹಾಗೂ ನಾಳೆಗಳ ಚಿಂತೆ. ಭಾರತದ ಸಂವಿಧಾನದ ವೈಶಿಷ್ಟ್ಯ ಇರುವುದು ಅಲ್ಲಿ ಅಂತರ್ಗತವಾಗಿರುವ ಸಾಮಾಜಿಕ ನ್ಯಾಯ-ಸಮಾನತೆ ಮತ್ತು ಆರ್ಥಿಕ ಸಮಾನತೆಯ ಆಶಯಗಳಲ್ಲಿ. ಸಾಮಾಜಿಕ ನ್ಯಾಯ ಮತ್ತು ಆರ್ಥಿಕ ಸಮಾನತೆಯನ್ನು ಸಾಧಿಸುವ ನಿಟ್ಟಿನಲ್ಲಿ ಕಳೆದ 75 ವರ್ಷಗಳಿಂದಲೂ ಸರ್ಕಾರಗಳು ನೂರಾರು ಯೋಜನೆಗಳನ್ನು ಜಾರಿಗೊಳಿಸುತ್ತಲೇ ಬಂದಿವೆ. 1970ರ ದಶಕದ ಗರೀಬಿ ಹಠಾವೋ ಅಭಿಯಾನದಿಂದ 2022ರ ಸಬ್‌ ಕಾ ಸಾತ್‌ ಸಬ್‌ ಕಾ ವಿಕಾಸ್‌ವರೆಗೆ ಈ ಕಾರ್ಯಯೋಜನೆಗಳು ಜಾರಿಯಲ್ಲಿವೆ. ಆದರೆ ಇದು ಭಾರತವನ್ನು ಬಡತನ ಮುಕ್ತ-ಹಸಿವು ಮುಕ್ತ ದೇಶವನ್ನಾಗಿ ಮಾಡಲು ಸಾಧ್ಯವಾಗಿದೆಯೇ ? ಈ ಸಂಕೀರ್ಣ ಪ್ರಶ್ನೆಗೆ ದೊರೆಯಬಹುದಾದ ಉತ್ತರಗಳು ಇನ್ನೂ ಜಟಿಲವಾಗಿಯೇ ಇರಲು ಸಾಧ್ಯ.

ಭರವಸೆಯ ಹಾದಿಯ ತೊಡಕುಗಳು

ಇತ್ತೀಚಿನ ಸಮಾರಂಭವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಇನ್ನು 25 ವರ್ಷಗಳಲ್ಲಿ ಭಾರತ ಬಡತನವನ್ನು ನಿವಾರಿಸಿ ಅಭಿವೃದ್ಧಿಹೊಂದಿದ ರಾಷ್ಟ್ರವಾಗುತ್ತದೆ ಎಂಬ ಭರವಸೆಯ ಮಾತುಗಳನ್ನಾಡಿದ್ದಾರೆ. ಇದನ್ನು ಸ್ವಾಗತಿಸುತ್ತಲೇ ರಾಜಕೀಯ ಪಕ್ಷಗಳು ಹಾಗೂ ಸರ್ಕಾರಗಳು 75 ವರ್ಷಗಳ ಸ್ವತಂತ್ರ ಆಳ್ವಿಕೆಯ ನಂತರವೂ ಭಾರತ ಬಡತನದ ಬೇಗೆಯಿಂದ ಮುಕ್ತವಾಗಿಲ್ಲ ಅಥವಾ ಹಸಿವೆಯಿಂದ ವಿಮೋಚನೆ ಪಡೆದಿಲ್ಲ ಎಂಬ ವಾಸ್ತವವನ್ನು ಒಪ್ಪಿಕೊಳ್ಳಬೇಕಿದೆ. ಆದರೆ ನಮ್ಮ ರಾಜಕೀಯ ನಾಯಕರಲ್ಲಿ ಸ್ವವಿಮರ್ಶೆಯ ಪ್ರಜ್ಞೆ ಕೊಂಚ ಕಡಿಮೆ ಇರುವುದರಿಂದ ಈ ವಾಸ್ತವವನ್ನು ಒಪ್ಪಿಕೊಳ್ಳುವುದಿಲ್ಲ. ಇತ್ತೀಚೆಗೆ ಬಿಡುಗಡೆಯಾದ ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತ ನಾಲ್ಕು ಸ್ಥಾನಗಳಷ್ಟು ಕುಸಿದಿರುವುದರ ಬಗ್ಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಪ್ರತಿಕ್ರಿಯೆಯನ್ನು ಸಾಂಕೇತಿಕವಾಗಿ ನೋಡಬಹುದು. ಏನೇ ಇರಲಿ ಸರ್ಕಾರದ ವಿವಿಧ ಸಂಸ್ಥೆಗಳೇ ಒದಗಿಸುವ ಅಧಿಕೃತ ದತ್ತಾಂಶಗಳನ್ನೇ ನಿರಾಕರಿಸುವ ಹೊತ್ತಿನಲ್ಲಿ ಇದೇನೂ ವಿಶೇಷ ಎನಿಸುವುದಿಲ್ಲ.

ವಾಸ್ತವ ಎಂದರೆ ಹಸಿವೆ/ಬಡತನವನ್ನು ಮುಚ್ಚಿಡಬಹುದು ಏಕೆಂದರೆ ಹೊರಗಿನ ಸಮಾಜಕ್ಕೆ ಅದು ಕೇವಲ ಅಂಕಿ ಅಂಶಗಳಲ್ಲಿ ಮಾತ್ರವೇ ಕಾಣಿಸುತ್ತದೆ. ಆದರೆ ಹಸಿದವರನ್ನು, ಬಡತನದಲ್ಲಿ ಬೇಯುತ್ತಿರುವವರನ್ನು ಮುಚ್ಚಿಡಲಾಗುವುದಿಲ್ಲ. ನಿತ್ಯ ಜೀವನದ ಓಡಾಟದ ನಡುವೆಯೇ ಸಮಾಜವನ್ನು ಸುಡುತ್ತಿರುವ ಹಸಿವೆಯನ್ನು, ನಿರ್ಗತಿಕತೆಯನ್ನು, ವಸತಿಹೀನತೆಯನ್ನು ಹಾಗೂ ಬಡತನವನ್ನು ನಾವು ಕಾಣಬಹುದು. ಅನುಕಂಪ ಮತ್ತು ಸಹಾನುಭೂತಿ ಇರುವ ಯಾವುದೇ ಮಾನವೀಯ ಸಮಾಜಕ್ಕೆ ಈ ದೃಶ್ಯಗಳು ಅರಗಿಸಿಕೊಳ್ಳಲಾಗದ ಸತ್ಯದಂತೆಯೇ ಕಾಣಬೇಕು. ಆದರೆ ಕಣ್ಣೆದುರಿನ ಸುಡು ವಾಸ್ತವಗಳನ್ನೂ ರಾಜಕೀಯ ಮಸೂರದ ಮೂಲಕ ನೋಡುವ ಒಂದು ಪ್ರವೃತ್ತಿ ಹಿತವಲಯದ ಜನತೆಯನ್ನು ಇಂತಹ ಕಟುಸತ್ಯಗಳಿಂದ ದೂರ ಸರಿಸುತ್ತಲೇ ಇದೆ. ಶೋಷಿತ-ಅವಕಾಶವಂಚಿತ ಜನರು ಎದುರಿಸುವ ಭೌತಿಕ ಯಾತನೆ ಹಾಗೂ ಮಾನಸಿಕ ವೇದನೆಯ ಕಾರಣಗಳನ್ನು ಆಗಿಹೋದ ದಿನಗಳಲ್ಲಿ, ಆಳಿ ಹೋದ ಪಕ್ಷಗಳಲ್ಲಿ ಅಥವಾ ಅಳಿಸಿಹೋಗಿರುವ ಆಡಳಿತ ನೀತಿಗಳಲ್ಲಿ ಕಾಣುವ ಮೂಲಕ , ಸಮಕಾಲೀನ ಸಮಾಜ ತನ್ನ ಮನುಜ ಸೂಕ್ಷ್ಮತೆಯನ್ನೂ ಕಳೆದುಕೊಳ್ಳುತ್ತಿದೆ.

ಈ ಸಮಾಜವನ್ನು ಪ್ರತಿನಿಧಿಸುವ ಭಾರತದ ದೃಶ್ಯ-ಶ್ರವ್ಯ-ಮುದ್ರಣ ಮಾಧ್ಯಮಗಳೂ ಸಹ, ಬಹುಮಟ್ಟಿಗೆ, ಬಡತನವನ್ನು ಪೋಷಿಸುವ ಮಾರುಕಟ್ಟೆ ಆರ್ಥಿಕತೆಯ ಫಲಾನುಭವಿಗಳಾಗಿರುವುದರಿಂದ ನವ ಉದಾರವಾದಿ ಆರ್ಥಿಕ ನೀತಿಗಳ ವಕ್ತಾರರಾಗಿಯೂ ಕಾರ್ಯನಿರ್ವಹಿಸುತ್ತಿವೆ. ಕೋವಿದ್‌ ಸಂದರ್ಭದ ವಲಸೆ ಕಾರ್ಮಿಕರ ಬವಣೆ ಹಾಗೂ ಅವೈಜ್ಞಾನಿಕ ಲಾಕ್‌ ಡೌನ್‌ ಸನ್ನಿವೇಶದ ಸ್ಥಿತಿಗತಿಗಳನ್ನು ಹೇಗೆ ಮಾಧ್ಯಮಗಳು ವ್ಯಾಖ್ಯಾನಿಸಿದ್ದವು ಎಂದು ಸ್ಮರಿಸಬಹುದು. ಆದರೆ ಇದಾವುದೂ ಹಸಿವೆ-ಬಡತನವನ್ನು ಮುಚ್ಚಿಡಲಾಗುವುದಿಲ್ಲ. ಏಕೆಂದರೆ ಹಸಿವು ಮನುಷ್ಯನನ್ನು ಅಸಹಾಯಕನನ್ನಾಗಿ ಮಾಡಿ ಸಾವಿನಂಚಿಗೆ ದೂಡುವಷ್ಟೇ ಪ್ರಮಾಣದಲ್ಲಿ ಆಕ್ರೋಶ-ಪ್ರತಿರೋಧದ ಶಕ್ತಿಯನ್ನಾಗಿಯೂ ಮಾಡುತ್ತದೆ. ಹಾಗಾಗಿಯೇ ಆಡಳಿತಾರೂಢ ಸರ್ಕಾರಗಳು ಆಯಾ ಕಾಲಕ್ಕೆ ಸಮೀಕ್ಷೆಗಳನ್ನು ನಡೆಸುವ ಮೂಲಕ ದತ್ತಾಂಶಗಳನ್ನು ಸಂಗ್ರಹಿಸಿ ವಾಸ್ತವ ಸ್ಥಿತಿಗತಿಗಳನ್ನು ಅವಲೋಕನ ಮಾಡುತ್ತಿರುತ್ತವೆ.

ಸಮೀಕ್ಷೆ-ದತ್ತಾಂಶ ಮತ್ತು ನೀತಿನಿರೂಪಣೆ

ಇಂತಹ ಒಂದು ಪ್ರಕ್ರಿಯೆಗೆ ಭಾರತದಲ್ಲಿ ಅಧಿಕೃತ ಚಾಲನೆ ದೊರೆತದ್ದು 1992-93ರಲ್ಲಿ “ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ”ಯ (NFHS) ಮೂಲಕ. ಮುಂಬೈನಲ್ಲಿರುವ ʼಅಂತಾರಾಷ್ಟ್ರೀಯ ಜನಸಂಖ್ಯಾ ವಿಜ್ಞಾನ ಸಂಸ್ಥೆಯʼ ಸುಪರ್ದಿಯಲ್ಲಿ ಪ್ರತಿ ನಾಲ್ಕೈದು ವರ್ಷಗಳಿಗೊಮ್ಮೆ ನಡೆಸುವ NFHS ಸಮೀಕ್ಷೆ ವೈಜ್ಞಾನಿಕ ತಳಹದಿಯಲ್ಲಿ, ಕೆಲವು ನಿರ್ದಿಷ್ಟ ಮಾನದಂಡಗಳನ್ನು ಅನುಸರಿಸುವ ಮೂಲಕ ತಳಮಟ್ಟದ ಸಮಾಜದಲ್ಲಿ ಸುಪ್ತವಾಗಿರಬಹುದಾದ ಜನತೆಯ ಜೀವನ-ಜೀವನೋಪಾಯ ಹಾಗೂ ಜೀವನಮಟ್ಟವನ್ನು ಅಳತೆ ಮಾಡುತ್ತದೆ. 2019-20ರಲ್ಲಿ ನಡೆಸಲಾದ ಈ ಸಮೀಕ್ಷೆಯ ವರದಿಯನ್ನು 2021ರಲ್ಲಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಇದರ ಎರಡನೆ ಆವೃತ್ತಿಯನ್ನೂ ಸರ್ಕಾರವೇ 2022ರಲ್ಲಿ ಬಿಡುಗಡೆ ಮಾಡಿತ್ತು. ಈಗ ಸಮೀಕ್ಷೆಯ ಆರನೆಯ ಆವೃತ್ತಿ ಸಿದ್ಧವಾಗುತ್ತಿದೆ.

ಮೂಲತಃ ಈ ವರದಿಯಲ್ಲಿ ಕುಟುಂಬ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಸರ್ಕಾರಗಳು ಜಾರಿಗೊಳಿಸುವ ಕಾರ್ಯಯೋಜನೆಗಳ ಅನುಷ್ಠಾನ ಪ್ರಮಾಣ ಮತ್ತು ವಿನಿಯೋಗಿಸಲಾದ ಅನುದಾನಗಳ ಸಮರ್ಪಕ ಬಳಕೆಯ ಬಗ್ಗೆ ದತ್ತಾಂಶಗಳನ್ನು ಒದಗಿಸಲಾಗುತ್ತದೆ. ಐದನೆಯ NFHS ವರದಿಯಲ್ಲಿ, ದೇಶದ ಸಮಸ್ತರಿಗೂ ಅಡುಗೆ ಅನಿಲ ಸಂಪರ್ಕ ಒದಗಿಸುವ ಕೇಂದ್ರ ಸರ್ಕಾರದ ಬಹುಮಹತ್ವಾಕಾಂಕ್ಷಿ ಉಜ್ವಲ ಯೋಜನೆಯಡಿ , ಸರ್ಕಾರವು ಅಧಿಕೃತವಾಗಿ ಘೋಷಿಸಿರುವಂತೆ ಸಾಧನೆ ಮಾಡಲಾಗಿಲ್ಲ ಎಂದು ಹೇಳಲಾಗಿದೆ. ಕೇಂದ್ರ ಸರ್ಕಾರ ಶೇ. 99ರಷ್ಟು ಜನತೆಗೆ ಅಡುಗೆ ಅನಿಲ ಒದಗಿಸಲಾಗಿದೆ ಎಂದು ಹೇಳಿದ್ದರೂ ವಾಸ್ತವವಾಗಿ ನವಂಬರ್‌ 2021ರ ವೇಳೆಗೆ ಇನ್ನೂ ಶೇ. 41ರಷ್ಟು ಜನರು ಅಡುಗೆ ಅನಿಲ ವಂಚಿತರಾಗಿದ್ದಾರೆ ಎಂದು ಸಮೀಕ್ಷೆ ಹೇಳುತ್ತದೆ. ಇದೇ ಅಂಕಿಅಂಶವನ್ನು ನೀತಿ ಆಯೋಗದ ವರದಿಯಲ್ಲೂ ಅನುಮೋದಿಸಲಾಗಿತ್ತು. ಎಲ್ಲ ಮನೆಗಳಿಗೂ ವಿದ್ಯುತ್‌ ಸಂಪರ್ಕ ನೀಡಲಾಗಿದೆ ಎಂಬ ವರದಿಯೂ ಅರ್ಧಸತ್ಯವೇ ಆಗಿದ್ದು ಶೇ. 3ಕ್ಕೂ ಹೆಚ್ಚು ಮನೆಗಳಲ್ಲಿ ವಿದ್ಯುತ್ ಲಭ್ಯತೆ ಇಲ್ಲವಾಗಿದೆ.

ಕೇಂದ್ರ ಸರ್ಕಾರದ ಮತ್ತೊಂದು ಮಹತ್ವಾಕಾಂಕ್ಷಿ ಸ್ವಚ್ಛಭಾರತ್‌ ಯೋಜನೆಯಡಿ ದೇಶವನ್ನು “ ಬಯಲುಶೌಚ ಮುಕ್ತ ” ಮಾಡುವ ಉದ್ದೇಶ ಇದ್ದು 2019ರಲ್ಲೇ ಕೇಂದ್ರ ಸರ್ಕಾರವು ಭಾರತವು ಬಯಲು ಬಹಿರ್ದೆಸೆ ಮುಕ್ತವಾಗಿದೆ ಎಂದು ಅಧಿಕೃತವಾಗಿ ಘೋಷಿಸಿತ್ತು. ಆದರೆ NFHS ವರದಿಯ ಅನುಸಾರ ದೇಶದ ಶೇ 29.9ರಷ್ಟು ಜನರಿಗೆ ಶೌಚಾಲಯ ಸೌಲಭ್ಯ ಇಲ್ಲದಿರುವುದು ಅಥವಾ ಬಳಸದೆ ಇರುವುದು ಕಂಡುಬಂದಿದೆ. ಬಯಲುಶೌಚ ಮುಕ್ತ ಎಂದು ಘೋಷಿಸಬೇಕಾದರೆ ಶೌಚಾಲಯ ಲಭ್ಯತೆ, ಬಳಕೆ, ಅಗತ್ಯ ನೀರಿನ ಸಂಪರ್ಕ, ತ್ಯಾಜ್ಯ ವಿಲೇವಾರಿ ಸೌಲಭ್ಯ ಇವೆಲ್ಲವೂ ಗಣನೆಗೆ ಬರುತ್ತವೆ. ಈ ನಿಟ್ಟಿನಲ್ಲಿ ಸರ್ಕಾರದ ಅಧಿಕೃತ ಘೋಷಣೆಗೂ ಸಮೀಕ್ಷೆಯ ವರದಿಗೂ ಅಜಗಜಾಂತರ ವ್ಯತ್ಯಾಸ ಇರುವುದನ್ನು ಗಮನಿಸಬಹುದು. ಇಲ್ಲಿ ರಾಜಕೀಯ ಇಚ್ಛಾಶಕ್ತಿ-ಅನುದಾನಗಳ ಸದ್ಬಳಕೆ ಹಾಗೂ ಪ್ರಾಮಾಣಿಕ ಅನುಷ್ಠಾನದ ಕೊರತೆಯನ್ನೂ ಗುರುತಿಸಬೇಕಾಗುತ್ತದ್.

NFHS ವರದಿಯಲ್ಲಿ ಢಾಳಾಗಿ ಕಾಣುವ ಮತ್ತೊಂದು ಅಂಶ ಎಂದರೆ ತಳಮಟ್ಟದ ಜನತೆಯಲ್ಲಿ ಹೆಚ್ಚಾಗುತ್ತಿರುವ ಅಪೌಷ್ಟಿಕತೆ ಮತ್ತು ರಕ್ತಹೀನತೆ. ಹಲವು ವರ್ಷಗಳಿಂದ ಸರ್ಕಾರಗಳು ಈ ಸಮಸ್ಯೆಯನ್ನು ನೀಗಲು, ಅಲ್ಪ ಯಶಸ್ಸಿನೊಂದಿಗೆ, ಹಲವು ಕಾರ್ಯಯೋಜನೆಗಳನ್ನು ಹಮ್ಮಿಕೊಳ್ಳುತ್ತಿದ್ದರೂ 2015-16ರಲ್ಲಿ ದೇಶದ ಮಹಿಳೆಯರಲ್ಲಿ ರಕ್ತಹೀನತೆಯಿಂದ ಬಳಲುವವರ ಪ್ರಮಾಣ ಶೇ. 53ರಷ್ಟಿದ್ದುದು 2019ರ ವೇಳೆಗೆ ಶೇ. 67ಕ್ಕೆ ಏರಿದೆ. ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ರಕ್ತಹೀನತೆಯಿಂದ ಬಳಲುವ ಮಕ್ಕಳ ಪ್ರಮಾಣ ಇದೇ ಅವಧಿಯಲ್ಲಿ ಶೇ. 53.1 ರಿಂದ ಶೇ. 57ಕ್ಕೆ ಏರಿಕೆಯಾಗಿರುವುದಾಗಿ ಸಮೀಕ್ಷೆಯಲ್ಲಿ ಹೇಳಲಾಗಿದೆ. ಪುರುಷರಲ್ಲೂ ಸಹ ಈ ಪ್ರಮಾಣ ಶೇ. 22.7 ರಿಂದ ಶೇ. 25ಕ್ಕೆ ಏರಿದೆ. ರಕ್ತಹೀನತೆ ಉಂಟಾಗುವುದು ಪೌ಼ಷ್ಟಿಕ ಆಹಾರದ ಕೊರತೆಯಿಂದ ಎನ್ನುವ ವೈಜ್ಞಾನಿಕ ಸತ್ಯವನ್ನು ಮನಗಂಡು ಯೋಚಿಸಿದಾಗ, ಭಾರತದ ಅರ್ಧದಷ್ಟು ಮಹಿಳೆಯರು ಇದರಿಂದ ವಂಚಿತರಾಗಿರುವುದು ಸ್ಪಷ್ಟವಾಗುತ್ತದೆ. ಈ ವರದಿಯನ್ನು ಕೇಂದ್ರ ಸರ್ಕಾರ ನಿರಾಕರಿಸಿದ್ದು ಸಮೀಕ್ಷೆಯ ಮುಂದಾಳತ್ವ ವಹಿಸಿದ್ದ ನಿರ್ದೇಶಕ ಕೆ. ಜೆ. ಜೇಮ್ಸ್‌ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಹಸಿವೆಯ ಮಾನವೀಯ ಮಾಪನ

ಹಸಿವೆಯನ್ನು ಅಳೆಯುವುದು ಹೇಗೆ ? ಈ ಪ್ರಶ್ನೆಗೆ ವೈದ್ಯಕೀಯ ಶಾಸ್ತ್ರದಲ್ಲಿ ಉತ್ತರಗಳು ಹೊಳೆಯಬಹುದು. ಆದರೆ ಮನುಷ್ಯನಿಗೆ ಹಸಿವೆ ಎನ್ನುವುದು ಸದಾ ಕಾಡುವ ಸಮಸ್ಯೆ. ಬಡತನದಿಂದ ಬಳಲುವ ಶ್ರಮಜೀವಿಗಳಿಗೆ ಹಸಿವು ಜೀವನದ ಒಂದು ಅಂಶಿಕ ಭಾಗವಾಗಿರುತ್ತದೆ. ಜಾತಿ ಪೀಡಿತ ಭಾರತೀಯ ಸಮಾಜದಲಿ ಹಸಿವು ಮತ್ತು ಅಪಮಾನ ಒಟ್ಟೊಟ್ಟಿಗೇ ಸಾಗುವುದರ ಮೂಲಕ, ತಳಸಮುದಾಯಗಳಲ್ಲಿ ತಾಂಡವಾಡುವ ಹಸಿವು ಸದಾ ನಿರ್ಲಕ್ಷ್ಯಕ್ಕೊಳಗಾಗುವುದನ್ನು ಗಮನಿಸಬಹುದು. ಈ ವಂಚಿತ ಜನಸಮುದಾಯಗಳಲ್ಲಿ ಇರಬಹುದಾದ ಹಸಿವಿನ ಪ್ರಮಾಣವನ್ನು ಅಳೆಯಲು ಕೆಲವು ಜಾಗತಿಕ ಸಂಸ್ಥೆಗಳು ವೈಜ್ಞಾನಿಕ ಮಾನದಂಡಗಳನ್ನು ಅನುಸರಿಸಿ ಪ್ರತಿವರ್ಷ ವರದಿ ಸಲ್ಲಿಸುತ್ತವೆ. ಇಲ್ಲಿ ಹಸಿವು ಎಂದರೆ ಕೇಂದ್ರ ಸಚಿವೆ ಹೇಳಿದಂತೆ ಹೊಟ್ಟೆ ಖಾಲಿಯಾಗಿರುವ ಸನ್ನಿವೇಶವಾಗಲೀ, ಆಹಾರದ ಅಲಭ್ಯತೆಯಾಗಲೀ ಅಲ್ಲ. ಬದಲಾಗಿ ವ್ಯಕ್ತಿಯ ದೇಹಕ್ಕೆ ಅಗತ್ಯವಾದ ಪೌಷ್ಟಿಕಾಂಶಗಳ ಹಾಗೂ ಕ್ಯಾಲೊರಿಯಷ್ಟು ಆಹಾರ ದೊರೆಯದೆ ಇರುವ ಪರಿಸ್ಥಿತಿಯನ್ನು ʼ ಹಸಿವೆ ʼ ಎಂದು ಪರಿಗಣಿಸಲಾಗುತ್ತದೆ.

2022ರ ಜಾಗತಿಕ ಹಸಿವಿನ ಸೂಚ್ಯಂಕ (GHI) ವರದಿಯ ಅನುಸಾರ ಭಾರತದಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವವರ ಸಂಖ್ಯೆ ಶೇ. 16.6ರಷ್ಟಿದೆ, ಐದು ವರ್ಷದ ಕೆಳಗಿನ ಮಕ್ಕಳಲ್ಲಿ ಕುಂಠಿತ ಬೆಳವಣಿಗೆಯ ಮಕ್ಕಳ ಪ್ರಮಾಣ ಶೇ. 35.5ರಷ್ಟಿದೆ. ಎತ್ತರಕ್ಕೆ ತಕ್ಕ ತೂಕ ಇಲ್ಲದ ಮಕ್ಕಳ ಪ್ರಮಾಣ ಶೇ. 18.7ರಷ್ಟಿದೆ. ಮಹಿಳೆಯರಲ್ಲಿನ ಪೌಷ್ಟಿಕಾಂಶದ ಕೊರತೆ ಮತ್ತು ರಕ್ತಹೀನತೆಯ ಪರಿಣಾಮ ಉಂಟಾಗುವ ಶಿಶುಮರಣ ಪ್ರಮಾಣ ಶೇ. 3.1ರಷ್ಟಿದೆ. ಅಂದರೆ ಸಾವಿರ ಮಕ್ಕಳಲ್ಲಿ 31 ಮಕ್ಕಳು ಸಾಯುತ್ತವೆ ಎಂದರ್ಥ. ಭಾರತದ್ದೇ ಆದ NFHS ಸಮೀಕ್ಷೆಯ ದತ್ತಾಂಶಗಳೂ ಹೆಚ್ಚು ಕಡಿಮೆ ಇದೇ ಮಾಹಿತಿಯನ್ನು ನೀಡುತ್ತವೆ. ಈ ದತ್ತಾಂಶಗಳನ್ನು ಸಂಗ್ರಹಿಸಲು ಕೆಲವು ವೈಜ್ಞಾನಿಕ ಮಾನದಂಡಗಳನ್ನು ಅನುಸರಿಸಲಾಗುತ್ತದೆ. Random ಸಮೀಕ್ಷೆಯೇ ಆದರೂ ಇದು ಶೇ.95ರಷ್ಟು ನಿಖರ ಮಾಹಿತಿ ನೀಡುತ್ತದೆ ಎನ್ನುವುದನ್ನು ವಿಶ್ವದ ಬಹುತೇಕ ರಾಷ್ಟ್ರಗಳು ಒಪ್ಪುತ್ತವೆ. ಇಂತಹ ಹಲವು ಸೂಚ್ಯಂಕಗಳನ್ನು ಅಧರಿಸಿಯೇ ವಿಶ್ವಸಂಸ್ಥೆ ಮತ್ತು ವಿಶ್ವ ಆರೋಗ್ಯ ಸಂಸ್ಥೆಯು ಜಗತ್ತಿನಾದ್ಯಂತ ಬಡತನ, ದಾರಿದ್ರ್ಯ, ಹಸಿವು ಮತ್ತು ನಿರ್ಗತಿಕತೆಯ ಪ್ರಮಾಣವನ್ನು ನಿಷ್ಕರ್ಷೆ ಮಾಡುತ್ತವೆ.

ಆದರೆ ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತವು 125 ದೇಶಗಳ ಪೈಕಿ 107 ರಿಂದ 111ನೆಯ ಸ್ಥಾನಕ್ಕೆ ಕುಸಿದಿರುವುದನ್ನು ಕೇಂದ್ರ ಸರ್ಕಾರ ಅಲ್ಲಗಳೆದಿದ್ದು, ಈ ಸಮೀಕ್ಷೆಯ ವೈಜ್ಞಾನಿಕ ಸತ್ಯಾಸತ್ಯತೆಯನ್ನೇ ಪ್ರಶ್ನಿಸಿದೆ. ಕಳೆದ ಹತ್ತು ವರ್ಷಗಳಲ್ಲಿ ದೇಶದ 13 ಕೋಟಿಗೂ ಹೆಚ್ಚು ಜನರು ಬಡತನ ರೇಖೆಯಿಂದ ಮೇಲೆ ಬಂದಿದ್ದಾರೆ ಎಂಬ ಅಂಕಿಅಂಶಗಳನ್ನು ಮುಂದಿಡುವ ಮೂಲಕ ಕೇಂದ್ರ ಸರ್ಕಾರವು ಈ ಸೂಚ್ಯಂಕದ ದತ್ತಾಂಶಗಳನ್ನು ನಿರಾಕರಿಸಿದೆ. ಈ ನಿರಾಕರಣೆಯ ನಡುವೆಯೇ ಭಾರತದ ನಾಗರಿಕ ವಲಯ ಗುರುತಿಸಬೇಕಾದ ವಾಸ್ತವಾಂಶ ಎಂದರೆ ನಮ್ಮ ನಡುವೆ ಬಡತನ , ದಾರಿದ್ರ್ಯ,, ಅನಕ್ಷರತೆ ಮತ್ತು ಹಸಿವು ತಾಂಡವಾಡುತ್ತಿದೆ. ಜನತೆಯ ಜೀವನ ಮತ್ತು ಜೀವನೋಪಾಯದ ಕೆಲವು ಮಾನದಂಡಗಳನ್ನಿಟ್ಟುಕೊಂಡು ಬಡತನದ ರೇಖೆಯನ್ನು ನಿರ್ಧರಿಸುವ ಆಡಳಿತ ವ್ಯವಸ್ಥೆಯಲ್ಲಿ ಸಾಮಾನ್ಯ ಶ್ರಮಿಕ ವರ್ಗಗಳ ಜೀವನ ಮಟ್ಟ ನಿಷ್ಕರ್ಷೆಯಾಗುವುದು ಜನತೆಯ ನಿತ್ಯ ಬದುಕಿನಲ್ಲಿ ಎಂಬ ವಾಸ್ತವವನ್ನು ಸರ್ಕಾರಗಳು ಅರ್ಥಮಾಡಿಕೊಳ್ಳಬೇಕಿದೆ.

ಬಂಡವಾಳಶಾಹಿ ಅರ್ಥವ್ಯವಸ್ಥೆಯಲ್ಲಿ ಬಡತನ ಮತ್ತು ಹಸಿವೆಯನ್ನು ನಿರ್ವಹಣೆ ಮಾಡಲಾಗುವ ಯೋಜನೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತದೆಯೇ ಹೊರತು ಬುಡಮಟ್ಟದ ನಿವಾರಣೆಗೆ ಅಲ್ಲ. ಹಾಗಾಗಿಯೇ ಬಡವ-ಶ್ರೀಮಂತ ಎಂಬ Binary ಆಯ್ಕೆಗಳ ನಡುವೆ ಅಪಾರ ಜನಸ್ತೋಮ ಸದ್ದಿಲ್ಲದೆ ನೇಪಥ್ಯಕ್ಕೆ ಸರಿದುಬಿಡುತ್ತದೆ. ಈ ಎರಡು ಅತಿರೇಕಗಳ ನಡುವೆ ಇರುವ ಜನತೆಯ ಪೈಕಿ ದೇಶದ ಅಭಿವೃದ್ಧಿಗಾಗಿ ಅಥವಾ ಜಿಡಿಪಿ ವೃದ್ಧಿಗಾಗಿ ಬೆವರಿಳಿಸುವ ಶ್ರಮಿಕರ ಸಂಖ್ಯೆಯೇ ಹೆಚ್ಚಾಗಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೊಳಿಸುವ ಕಾರ್ಯಯೋಜನೆಗಳು ಮತ್ತು ಆಡಳಿತ ನೀತಿಗಳು ಈ ನಿರ್ದಿಷ್ಟ ಜನತೆಯನ್ನು ಕೇಂದ್ರೀಕರಿಸಿದಾಗ ಮಾತ್ರ ಭಾರತವು ಮುಂದಿನ 25 ವರ್ಷಗಳಲ್ಲಿ ಬಡತನ ಮುಕ್ತ ರಾಷ್ಟ್ರವಾಗಲು ಸಾಧ್ಯ. ನವ ಉದಾರವಾದ, ಮಾರುಕಟ್ಟೆ ಆರ್ಥಿಕತೆ ಮತ್ತು ಬಂಡವಾಳಶಾಹಿ ಆರ್ಥಿಕ ನೀತಿಗಳು ಇದಕ್ಕೆ ತದ್ವಿರುದ್ಧ ದಿಕ್ಕಿನಲ್ಲೇ ಸಾಗುತ್ತಿರುವ ಹೊತ್ತಿನಲ್ಲಿ ನಾಳೆಯ ಭರವಸೆಯನ್ನು ಹೊತ್ತ ಬೃಹತ್‌ ಜನಸಮೂಹದ ವಿಶ್ವಾಸ ಗಳಿಸುವುದಾದರೂ ಹೇಗೆ ?

ಆಳುವ ಸರ್ಕಾರಗಳನ್ನು ಹಾಗೂ ಪ್ರಜ್ಞಾವಂತ ನಾಗರಿಕರನ್ನು ಈ ಪ್ರಶ್ನೆ ಕಾಡಲೇಬೇಕಲ್ಲವೇ ?
-೦-೦-೦-೦-

Tags: BJPCongress PartyCovid 19ಎಚ್ ಡಿ ಕುಮಾರಸ್ವಾಮಿಕರೋನಾಕೋವಿಡ್-19ನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ICC World Cup : ಕಿವಿಸ್ ವಿರುದ್ಧ ಗೆದ್ದು ವಿಶ್ವಕಪ್ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ “ಭಾರತ”

Next Post

24 ಗಂಟೆಯಲ್ಲಿ 10 ಮಂದಿ ದರ್ಮರಣ.. ನವರಾತ್ರಿ ಗರ್ಬಾ ನೃತ್ಯ.. ಯಾಕೆ..?

Related Posts

ಆಧಾರ್ ಕಾರ್ಡ್..ಪಡಿತರ ಚೀಟಿಯನ್ನೂ ಪರಿಗಣಿಸಬಹುದು – ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ 
Top Story

ಆಧಾರ್ ಕಾರ್ಡ್..ಪಡಿತರ ಚೀಟಿಯನ್ನೂ ಪರಿಗಣಿಸಬಹುದು – ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ 

by Chetan
July 11, 2025
0

ಇನ್ಮುಂದೆ ಮತದಾರರ ಪಟ್ಟಿ (Voters list) ಪರಿಷ್ಕರಣೆಗಾಗಿ ಮತದಾರರ ಆಧಾರ್ ಕಾರ್ಡ್ (Adhar card), ಮತದಾರರ ಗುರುತಿನ (Voter I’d ) ಚೀಟಿ ಮತ್ತು ಪಡಿತರ ಚೀಟಿಗಳನ್ನು...

Read moreDetails
CM Siddaramaiah: ಕರ್ನಾಟಕದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ,, ಕರ್ನಾಟಕದ ಮುಖ್ಯಮಂತ್ರಿ ನಾನೇ..!!

CM Siddaramaiah: ಕರ್ನಾಟಕದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ,, ಕರ್ನಾಟಕದ ಮುಖ್ಯಮಂತ್ರಿ ನಾನೇ..!!

July 10, 2025

DCM DK Shivakumar: ರಾಜ್ಯದ ಆರು ನೀರಾವರಿ ಯೋಜನೆಗಳಿಗೆ ₹11,122.76 ಕೋಟಿ ಅನುದಾನಕ್ಕಾಗಿ ಮನವಿ.

July 9, 2025

HD Kumarswamy: ಗ್ರೀನ್ ಸ್ಟೀಲ್ ವಲಯಕ್ಕೆ ಒತ್ತು; ಲೋಹ ತ್ಯಾಜ್ಯ ಮರುಬಳಕೆಗೆ ಆದ್ಯತೆ.

July 9, 2025

CM Siddaramaiah: ರಕ್ಷಣಾ ಸಚಿವ ರಾಜನಾಥಸಿಂಗ್‌ ಅವರನ್ನು ಬೇಟಿ ಮಾಡಿದ ಸಿಎಂ ಸಿದ್ದರಾಮಯ್ಯ..

July 9, 2025
Next Post
24 ಗಂಟೆಯಲ್ಲಿ 10 ಮಂದಿ ದರ್ಮರಣ.. ನವರಾತ್ರಿ ಗರ್ಬಾ ನೃತ್ಯ.. ಯಾಕೆ..?

24 ಗಂಟೆಯಲ್ಲಿ 10 ಮಂದಿ ದರ್ಮರಣ.. ನವರಾತ್ರಿ ಗರ್ಬಾ ನೃತ್ಯ.. ಯಾಕೆ..?

Please login to join discussion

Recent News

ಸಿಎಂ ಸಿದ್ದು ದಾಳಕ್ಕೆ ಡಿಕೆಶಿ ಥಂಡಾ..? – 5 ವರ್ಷ ನಾನೇ ಸಿಎಂ ಹೇಳಿಕೆಗೆ ಡಿಕೆ ಫುಲ್ ಸೈಲೆಂಟ್ ! 
Top Story

ಸಿಎಂ ಸಿದ್ದು ದಾಳಕ್ಕೆ ಡಿಕೆಶಿ ಥಂಡಾ..? – 5 ವರ್ಷ ನಾನೇ ಸಿಎಂ ಹೇಳಿಕೆಗೆ ಡಿಕೆ ಫುಲ್ ಸೈಲೆಂಟ್ ! 

by Chetan
July 11, 2025
ಆಧಾರ್ ಕಾರ್ಡ್..ಪಡಿತರ ಚೀಟಿಯನ್ನೂ ಪರಿಗಣಿಸಬಹುದು – ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ 
Top Story

ಆಧಾರ್ ಕಾರ್ಡ್..ಪಡಿತರ ಚೀಟಿಯನ್ನೂ ಪರಿಗಣಿಸಬಹುದು – ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ 

by Chetan
July 11, 2025
ಮಕ್ಕಳಿಗೆ ಸ್ವಲ್ಪ ಆದರೂ ಸಂಸ್ಕಾರ ಕಲಿಸಬೇಕಾದವರು ಯಾರು
Top Story

ಮಕ್ಕಳಿಗೆ ಸ್ವಲ್ಪ ಆದರೂ ಸಂಸ್ಕಾರ ಕಲಿಸಬೇಕಾದವರು ಯಾರು

by ಪ್ರತಿಧ್ವನಿ
July 11, 2025
CM Siddaramaiah: ಕರ್ನಾಟಕದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ,, ಕರ್ನಾಟಕದ ಮುಖ್ಯಮಂತ್ರಿ ನಾನೇ..!!
Top Story

CM Siddaramaiah: ಕರ್ನಾಟಕದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ,, ಕರ್ನಾಟಕದ ಮುಖ್ಯಮಂತ್ರಿ ನಾನೇ..!!

by ಪ್ರತಿಧ್ವನಿ
July 10, 2025
Top Story

ಹಾಸನದಲ್ಲಿ ಹಾರ್ಟ್‌ ಅಟ್ಯಾಕ್‌ ಹೆಚ್ಚಾಗಲು ಇದೇ ಕಾರಣನಾ ಡಾಕ್ಟರ್‌ ಏನಂದ್ರು..!

by ಪ್ರತಿಧ್ವನಿ
July 10, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಸಿಎಂ ಸಿದ್ದು ದಾಳಕ್ಕೆ ಡಿಕೆಶಿ ಥಂಡಾ..? – 5 ವರ್ಷ ನಾನೇ ಸಿಎಂ ಹೇಳಿಕೆಗೆ ಡಿಕೆ ಫುಲ್ ಸೈಲೆಂಟ್ ! 

ಸಿಎಂ ಸಿದ್ದು ದಾಳಕ್ಕೆ ಡಿಕೆಶಿ ಥಂಡಾ..? – 5 ವರ್ಷ ನಾನೇ ಸಿಎಂ ಹೇಳಿಕೆಗೆ ಡಿಕೆ ಫುಲ್ ಸೈಲೆಂಟ್ ! 

July 11, 2025
ಆಧಾರ್ ಕಾರ್ಡ್..ಪಡಿತರ ಚೀಟಿಯನ್ನೂ ಪರಿಗಣಿಸಬಹುದು – ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ 

ಆಧಾರ್ ಕಾರ್ಡ್..ಪಡಿತರ ಚೀಟಿಯನ್ನೂ ಪರಿಗಣಿಸಬಹುದು – ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ 

July 11, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada