ಶಿವಮೊಗ್ಗ:ಶಿವಮೊಗ್ಗ ನಗರ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಅವರು ಮನೆ ಮನೆಗೆ ತೆರಳಿ ಮತಯಾಚನೆ ಮಾಡುವ ಮೂಲಕ ಅಧಿಕೃತವಾಗಿ ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ.
ನವುಲೆಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ನಡೆ ಗೆಲುವಿನ ಕಡೆ. ನನ್ನ ಗೆಲುವು ಹತ್ತಿರವಾಗುತ್ತಿದೆ ಎಂದು ಹೇಳಿದರು.

ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಪ್ರಚಾರ ಕಾರ್ಯ ಜೋರಾಗಿ ನಡೆಯುತ್ತಿದೆ. ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದೆ. ಪಕ್ಷಕ್ಕೆ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಜೊತೆಗೆ ಸಮುದಾಯಗಳ ಒಗ್ಗೂಡಿಸುವಿಕೆಯ ಕಾರ್ಯ ನಡೆಯುತ್ತಿದೆ. ಹೀಗಾಗಿ ನಾವು ಗೆಲುವಿಗೆ ತುಂಬಾ ಹತ್ತಿರ ಇದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್ ಮಾತನಾಡಿ, ಆಯನೂರು ಮಂಜುನಾಥ್ ಗೆದ್ದೇ ಗೆಲ್ಲುತ್ತಾರೆ. ಕಾಂಗ್ರೆಸ್ ಪಕ್ಷದಿಂದ ಜೆಡಿಎಸ್ಗೆ ಸೇರಿದ ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಮತ್ತರವರ ತಂಡ ಕಾಲಿಗೆ ಚಕ್ರ ಕಟ್ಟಿಕೊಂಡು ಪ್ರಚಾರ ಮಾಡುತ್ತಿದ್ದಾರೆ. ತಮ್ಮ ಬಹುದೊಡ್ಡ ತಂಡವನ್ನೇ ಕರೆದುಕೊಂಡು ಬರುತ್ತಿದ್ದಾರೆ. ಈ ಬಾರಿ ಜೆಡಿಎಸ್ಗೆ ಬಹುದೊಡ್ಡ ಅವಕಾಶವಿದೆ. ಶಿವಮೊಗ್ಗ ನಗರವಲ್ಲದೆ ಗ್ರಾಮಾಂತರ, ಭದ್ರಾವತಿ, ಸೊರಬ ಸೇರಿದಂತೆ ಜಿಲ್ಲೆಯಲ್ಲಿ ಮೂರರಿಂದ ನಾಲ್ಕು ಸ್ಥಾನವನ್ನು ನಾವು ಪಡೆದೇ ಪಡೆಯುತ್ತೇವೆ ಎಂದರು.
ಜೆಡಿಎಸ್ ಸೇರ್ಪಡೆಗೊಂಡ ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಮಾತನಾಡಿ, ರಾಷ್ಟ್ರೀಯ ಪಕ್ಷಗಳ ನಡುವೆ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಈ ಬಾರಿ ರಾಜ್ಯದಲ್ಲಿಯೇ ಅತಿಹೆಚ್ಚು ಸ್ಥಾನ ಗಳಿಸಲಿದೆ. ಕುಮಾರಸ್ವಾಮಿಯವರ ಸರ್ಕಾರ ಆಡಳಿತ ನಡೆಸುತ್ತದೆ ಎಂಬ ಬಲವಾದ ವಿಶ್ವಾಸವಿದೆ. ಮೋದಿಯ ಅಲೆ ಸ್ಥಳೀಯವಾಗಿ ನಡೆಯದು. ಲೋಕಸಭಾ ಚುನಾವಣೆಯೇ ಬೇರೆ. ವಿಧಾನಸಭೆ ಚುನಾವಣೆಯೇ ಬೇರೆ ಎಂದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಶ್ರೀಕಾಂತ್ ಮಾತನಾಡಿ, ಶಿವಮೊಗ್ಗದಲ್ಲಿ ಮೂರರಿಂದ ನಾಲ್ಕು ಕ್ಷೇತ್ರಗಳಲ್ಲಿ ಜೆಡಿಎಸ್ ಬರಲಿದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು. ಶಿವಮೊಗ್ಗ ನಗರ, ಶಿವಮೊಗ್ಗ ಗ್ರಾಮಾಂತರ, ಭದ್ರಾವತಿ ಹಾಗೂ ಸೊರಬದಲ್ಲಿ ಜನತಾದಳದ ಅಭ್ಯರ್ಥಿಗಳು ಆಯ್ಕೆಯಾಗಲಿದ್ದಾರೆ. ಆಯನೂರ್ ಮಂಜುನಾಥ್ ಸೇರ್ಪಡೆಯಿಂದ ಶಿವಮೊಗ್ಗ ನಗರದಲ್ಲಷ್ಟೇ ಅಲ್ಲ ಬೇರೆ ತಾಲೂಕಿನಲ್ಲೂ ಜೆಡಿಎಸ್ ಬಲವರ್ಧನೆಯಾಗಿದೆ ಎಂದರು.