ಸರ್ಕಾರಿ ಸಾಮ್ಯದ ಒಂದು ಸಂಸ್ಥೆಯಾಗಿ ಇಸ್ರೋ ನಡೆದುಬಂದ ಹಾದಿ ಅಸಾಧಾರಣವಾದದ್ದು
( ಚಂದ್ರಯಾನದ ಸಂಭ್ರಮವೂ ಚರಿತ್ರೆಯ ಹೆಜ್ಜೆಗಳೂ
ದಾರ್ಶನಿಕ ನಾಯಕತ್ವವೂ ಭಾರತದ ಬಾಹ್ಯಾಕಾಶ ಪಯಣವೂ
ಬಾಹ್ಯಾಕಾಶ ನಡಿಗೆಯೂ – ಮೊದಲ ಹೆಜ್ಜೆಗಳ ನೆನಪುಗಳೂ
ಸ್ವತಂತ್ರ ಭಾರತದ ಮೊದಲ ವೈಜ್ಞಾನಿಕ ತ್ರಿ-ವಿಕ್ರಮ ಹೆಜ್ಜೆಗಳು
ವಸಾಹತು ಕಾಲದಿಂದ ಅಮೃತಕಾಲದತ್ತ ಇಸ್ರೋ ನಡಿಗೆ
ಈ ಲೇಖನಗಳ ಮುಂದುವರೆದ ಭಾಗ )
-ನಾ ದಿವಾಕರ
1969ರಲ್ಲಿ ತನ್ನ ಮೂಲ ಸಾಂಸ್ಥಿಕ ಸ್ವರೂಪವನ್ನು ಉಳಿಸಿಕೊಂಡೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO-ಇಸ್ರೋ) ಎಂದು ಮರುನಾಮಕರಣಗೊಂಡ ನಂತರ ಈ ಸಂಸ್ಥೆ ಭಾರತದ ಬಾಹ್ಯಾಕಾಶ ವಿಜ್ಞಾನ ಹಾಗೂ ತಂತ್ರಜ್ಞಾನ ಸಂಸ್ಥೆಯಾಗಿ ವಿಶ್ವಮಾನ್ಯತೆ ಗಳಿಸಿದೆ. ಚಂದ್ರಯಾನ-3ರ ಯಶಸ್ಸಿನ ನಂತರ ಇಸ್ರೋ ಹೊಸ ಇತಿಹಾಸವನ್ನು ಸೃಷ್ಟಿಸಿದ್ದು ತನ್ನ ಮೂಲ ಧ್ಯೇಯೋದ್ದೇಶಗಳು ಹಾಗೂ ವೈಜ್ಞಾನಿಕ ಗುರಿಯನ್ನು ತಲುಪುವ ನಿಟ್ಟಿನಲ್ಲಿ ಹೊಸ ಹೆಜ್ಜೆಗಳನ್ನು ಶೋಧಿಸುತ್ತಿದೆ. ಮೂಲತಃ ಸಂಶೋಧನೆ, ಬೇಹುಗಾರಿಕೆ, ಸಂವಹನ ಹಾಗೂ ಎಲ್ಲ ರೀತಿಯ ಬಾಹ್ಯಾಕಾಶ ಆಧಾರಿತ ಅನ್ವಯಿಕೆಗಳನ್ನು ಅನ್ವೇಷಿಸುವುದು ಇಸ್ರೋದ ಪ್ರಥಮ ಆದ್ಯತೆ ಮತ್ತು ಉದ್ದೇಶವೂ ಆಗಿರುತ್ತದೆ. ಒಂದು ಅಭಿವೃದ್ಧಿ ಶೀಲ ರಾಷ್ಟ್ರವಾಗಿ ಭೌಗೋಳಿಕ ರಾಜಕಾರಣವನ್ನು ಆವರಿಸಿದ್ದ ಶೀತಲ ಸಮರದ ನಡುವೆಯೇ ಬೆಳೆದುಬಂದ ಇಸ್ರೋ ಸಂಸ್ಥೆಯ ಬಾಹ್ಯಾಕಾಶ ಕಾರ್ಯಕ್ರಮದ ಉದ್ದೇಶ ಮತ್ತು ಕಾರ್ಯಕ್ರಮದ ಬಗ್ಗೆ ಸಂಸ್ಥೆಯ ಸಂಸ್ಥಾಪಕ, ವಿಜ್ಞಾನಿ ವಿಕ್ರಂ ಸಾರಾಭಾಯ್ 1969ರಲ್ಲಿ ಹೀಗೆ ಹೇಳಿದ್ದರು. :
“ ನಮಗೆ, ಉದ್ದೇಶದ ಯಾವುದೇ ಅಸ್ಪಷ್ಟತೆ ಇಲ್ಲ. ಚಂದ್ರನ ಅಥವಾ ಗ್ರಹಗಳ ಅನ್ವೇಷಣೆಯಲ್ಲಿ ಅಥವಾ ಮಾನವಸಹಿತ ಬಾಹ್ಯಾಕಾಶ-ಹಾರಾಟದಲ್ಲಿ ಆರ್ಥಿಕವಾಗಿ ಮುಂದುವರಿದ ರಾಷ್ಟ್ರಗಳೊಂದಿಗೆ ಸ್ಪರ್ಧಿಸುವ ಕಲ್ಪನೆ ನಮ್ಮಲ್ಲಿಲ್ಲ. ಆದರೆ ನಾವು ರಾಷ್ಟ್ರೀಯ ನೆಲೆಯಲ್ಲಿ ಮತ್ತು ರಾಷ್ಟ್ರಗಳ ಸಮುದಾಯದಲ್ಲಿ ಅರ್ಥಪೂರ್ಣ ಪಾತ್ರವನ್ನು ವಹಿಸಬೇಕಾದರೆ, ನಮ್ಮ ದೇಶದಲ್ಲಿ ನಾವು ಕಂಡುಕೊಳ್ಳುವ ಮಾನವನ ಮತ್ತು ಸಮಾಜದ ನಿಜವಾದ ಸಮಸ್ಯೆಗಳಿಗೆ ಸುಧಾರಿತ ತಂತ್ರಜ್ಞಾನಗಳನ್ನು ಅನ್ವಯಿಸುವಲ್ಲಿ ನಾವು ಯಾರಿಗೂ ಕಡಿಮೆಯಿಲ್ಲ ಎಂದು ನಮಗೆ ಮನವರಿಕೆಯಾಗಿದೆ ಎನ್ನುವುದನ್ನು ನಿರೂಪಿಸಬೇಕಿದೆ. ಅಲ್ಲದೆ ನಮ್ಮ ಸಮಸ್ಯೆಗಳಿಗೆ ಅತ್ಯಾಧುನಿಕ ತಂತ್ರಜ್ಞಾನಗಳು ಮತ್ತು ವಿಶ್ಲೇಷಣೆಯ ವಿಧಾನಗಳ ಅನ್ವಯಿಕೆಯನ್ನು, ಬೃಹತ್ ಯೋಜನೆಗಳನ್ನು ಪ್ರಾರಂಭಿಸುವುದರ ಮೂಲಕ ಗೊಂದಲಗೊಳಿಸಬಾರದು ಎಂಬುದನ್ನು ನಾವು ಗಮನಿಸುತ್ತಿರಬೇಕು.”
ಇದೇ ಸಂದರ್ಭದಲ್ಲಿ DRDO ಸಂಸ್ಥೆಯ ಮಾಜಿ ಅಧ್ಯಕ್ಷರು, ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಈ ಮಾತುಗಳನ್ನೂ ಗಮನಿಸಬೇಕು :
“ತನ್ನ ಜನಸಂಖ್ಯೆಯನ್ನು ಪೋಷಿಸುವುದು ಕಷ್ಟಕರವಾಗಿರುವ ಹೊಸದಾಗಿ ಸ್ವತಂತ್ರಗೊಂಡ ರಾಷ್ಟ್ರದಲ್ಲಿ ಬಾಹ್ಯಾಕಾಶ ಚಟುವಟಿಕೆಗಳ ಪ್ರಸ್ತುತತೆಯನ್ನು ಸಂಕುಚಿತ ದೃಷ್ಟಿಕೋನದಿಂದ ಅನೇಕ ವ್ಯಕ್ತಿಗಳು ಪ್ರಶ್ನಿಸಿದರು. ಆದರೆ ಪ್ರಧಾನಿ ನೆಹರೂ ಅವರಿಗಾಗಲೀ, ವಿಕ್ರಂ ಸಾರಾಭಾಯ್ ಅವರಿಗಾಗಲೀ ಉದ್ದೇಶದ ಬಗ್ಗೆ ಯಾವುದೇ ಅಸ್ಪಷ್ಟತೆ ಇರಲಿಲ್ಲ. ಅವರ ದೃಷ್ಟಿಕೋನವು ಬಹಳ ಸ್ಪಷ್ಟವಾಗಿತ್ತು: ರಾಷ್ಟ್ರಗಳ ಸಮುದಾಯದಲ್ಲಿ ಭಾರತೀಯರು ಅರ್ಥಪೂರ್ಣ ಪಾತ್ರವನ್ನು ವಹಿಸಬೇಕಾದರೆ, ತಮ್ಮ ನಿಜ ಜೀವನದ ಸಮಸ್ಯೆಗಳಿಗೆ ಸುಧಾರಿತ ತಂತ್ರಜ್ಞಾನಗಳನ್ನು ಅನ್ವಯಿಸುವಲ್ಲಿ ಅವರು ಯಾರಿಗೂ ಕಡಿಮೆಯಿಲ್ಲ. ನಮ್ಮ ಶಕ್ತಿಯನ್ನು ಪ್ರದರ್ಶಿಸುವ ಸಾಧನವಾಗಿ ಅದನ್ನು ಬಳಸುವ ಉದ್ದೇಶ ಅವರಿಗೆ ಇರಲಿಲ್ಲ.”
ವಿಕ್ರಂ ಸಾರಾಭಾಯ್, ಹೋಮಿ ಜೆ ಭಾಭಾ ಮುಂತಾದ ವಿಜ್ಞಾನಿಗಳ ಮೂಲ ಪರಿಕಲ್ಪನೆ ಹಾಗೂ ಕನಸುಗಳು ಬದಲಾದ ಜಾಗತಿಕ ಸನ್ನಿವೇಶದಲ್ಲಿ ಕೊಂಚ ಮಟ್ಟಿಗಾದರೂ ರೂಪಾಂತರಗೊಂಡಿವೆ. ಇದು ವ್ಯಾಪಕ ಚರ್ಚೆಗೊಳಗಾಗಿರುವ ವಿಚಾರವೂ ಆಗಿದೆ. ಈ ನಡುವೆಯೇ ಈ ದಾರ್ಶನಿಕ ವ್ಯಕ್ತಿಗಳ ವೈಜ್ಞಾನಿಕ ಹೆಜ್ಜೆಗಳ ಮುಂದುವರಿಕೆಯಾಗಿ ಇಸ್ರೋ ಇಂದು ಚಂದ್ರಯಾನ-3 ಯಶಸ್ವಿಯಾಗಿ ಪೂರೈಸಿದ್ದು ಈ ಸಾಧನೆಯೊಂದಿಗೆ ಬಾಹ್ಯಾಕಾಶ ಪರಿಶೋಧನೆಯ ಹಾದಿಯಲ್ಲಿ ಭಾರತವನ್ನು ಒಂದು ಪ್ರಭಾವಶಾಲಿ ರಾಷ್ಟ್ರವನ್ನಾಗಿ ಸಾಬೀತುಪಡಿಸಿದೆ. ಚಂದ್ರಯಾನದ ಕಾರ್ಯಕ್ರಮ ಮತ್ತು ಯೋಜನೆಗಳನ್ನು ಆಯೋಜಿಸಿ ರೂಪಿಸುವ ಅವಧಿಯಲ್ಲಿ ಇಸ್ರೋ ಅಧ್ಯಕ್ಷರಾಗಿದ್ದ ಕಸ್ತೂರಿ ರಂಗನ್ ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಚಂದ್ರಯಾನ ಮತ್ತು ಮುಂಬರುವ ಗಗನಯಾನ, ಮಂಗಳಯಾನ ಯೋಜನೆಗಳನ್ನು ಭಾರತದ ವಿಜ್ಞಾನದ ಹೆಗ್ಗುರುತುಗಳು ಎಂದೇ ಭಾವಿಸುವ ಕಸ್ತೂರಿ ರಂಗನ್, ಅನ್ಯ ಗ್ರಹಗಳನ್ನು, ಚಂದ್ರನ ಅಂಗಳವನ್ನು ಭೌತಿಕವಾಗಿ ಪ್ರವೇಶಿಸುವ ಸಾಮರ್ಥ್ಯ ಹೊಂದಿರುವ ಕೆಲವೇ ದೇಶಗಳಲ್ಲಿ ಭಾರತವೂ ಒಂದಾಗುವ ಮೂಲಕ ತಂತ್ರಜ್ಞಾನದಲ್ಲಿ ದೇಶ ಮುನ್ನಡೆದಿರುವುದನ್ನು ಸಾಬೀತುಪಡಿಸಿದಂತಾಗುತ್ತದೆ ಎಂದು ಹೇಳುತ್ತಾರೆ. ಮುಂದಿನ ದಿನಗಳಲ್ಲಿ ಗ್ರಹಗಣ ಅನ್ವೇಷಣೆ ಹಾಗೂ ಬಾಹ್ಯಾಕಾಶದಿಂದ ಸಂಪನ್ಮೂಲಗಳನ್ನು ಹೊರತೆಗೆಯುವ ನಿರ್ಧಾರಗಳಲ್ಲಿ ಭಾರತವೂ ತನ್ನ ಪಾತ್ರ ನಿರ್ವಹಿಸುತ್ತದೆ.
ಕೆಲವೇ ವರ್ಷಗಳ ಹಿಂದೆ ಈ ಸಾಮರ್ಥ್ಯ ಹೊಂದಿದ್ದ ಜಾಗತಿಕ ವಿಜ್ಞಾನ ಕೂಟಗಳಿಂದ ಭಾರತ ಹೊರಗುಳಿದಿತ್ತು. ಇದರಿಂದ ಸಾಕಷ್ಟು ಮುಜುಗರವನ್ನೂ ಅನುಭವಿಸಬೇಕಾಗಿತ್ತು. ಪರಮಾಣು ಶಕ್ತಿ, ಬಾಹ್ಯಾಕಾಶ ಹಾಗೂ ಇತರ ವಿಜ್ಞಾನ ತಂತ್ರಜ್ಞಾನದ ನಿರ್ಣಾಯಕ ಕ್ಷೇತ್ರಗಳಲ್ಲಿ ಭಾರತಕ್ಕೆ ಪ್ರವೇಶವನ್ನೇ ನಿರಾಕರಿಸಿದ್ದ ಪ್ರಸಂಗಗಳನ್ನೂ ದೇಶ ಎದುರಿಸಿದ್ದನ್ನು ಸ್ಮರಿಸುವ ಕಸ್ತೂರಿರಂಗನ್, ಇದಕ್ಕೆ ಕಾರಣ ಭಾರತವು ಅನ್ಯ ರಾಷ್ಟ್ರಗಳನ್ನು ಅವಲಂಬಿಸಿದ್ದುದೇ ಆಗಿದೆ ಎಂದು ಹೇಳುತ್ತಾರೆ. ಆದರೆ ಕಳೆದ ಐದು ದಶಕಗಳಲ್ಲಿ ಇಸ್ರೋ ಸಂಸ್ಥೆಯ ಬೆಳವಣಿಗೆಯ ಮೂಲಕವೇ ಭಾರತ ವೈಜ್ಞಾನಿಕವಾಗಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಸಾಲಿನಲ್ಲಿ ಸರಿಸಮಾನವಾಗಿ ನಿಂತಿರುವುದು ಈ ದೇಶದ ವಿಜ್ಞಾನಿಗಳ ಮೇರು ಸಾಧನೆ ಎನ್ನುವುದನ್ನು ಒಪ್ಪಲೇಬೇಕಿದೆ.
ಇಲ್ಲಿ ಸೂಕ್ಷ್ಮವಾಗಿ ಗಮನಿಸಬೇಕಾದ ಅಂಶವೆಂದರೆ, 21ನೆಯ ಶತಮಾನದ ಭೌಗೋಳಿಕ ರಾಜಕಾರಣದಲ್ಲಿ ವಿವಿಧ ದೇಶಗಳ ನಡುವಿನ ಸಮೀಕರಣಗಳನ್ನು ನಿರ್ಧರಿಸುವಾಗ ಅಥವಾ ಅಂತಾರಾಷ್ಟ್ರೀಯ ಸಮುದಾಯದಲ್ಲಿ ದೇಶಗಳು ಹೊಂದಿರುವ ಪ್ರಭಾವವನ್ನು ನಿಷ್ಕರ್ಷೆ ಮಾಡುವಾಗ ಬಾಹ್ಯಾಕಾಶ ತಂತ್ರಜ್ಞಾನದ ಸಾಮರ್ಥ್ಯಗಳೇ ಪ್ರಧಾನವಾಗಿ ಪರಿಗಣಿಸಲ್ಪಡುತ್ತವೆ. ಹಾಗಾಗಿ ಭಾರತ ಜಗತ್ತಿನ ದೇಶಗಳ ವಿಶಾಲ ಸಮುದಾಯದ ನಡುವೆ ಶಕ್ತಿಶಾಲಿ ರಾಷ್ಟ್ರ ಎಂದು ನಿರೂಪಿಸುವ ನಿಟ್ಟಿನಲ್ಲಿ ಬಾಹ್ಯಾಕಾಶ ನಡಿಗೆ ಕೇಂದ್ರ ಪಾತ್ರ ವಹಿಸುತ್ತದೆ. ಮತ್ತೊಂದೆಡೆ ಬಡತನ, ಹಸಿವು, ಅಪೌಷ್ಟಿಕತೆ, ಅಸಮಾನತೆ ಮುಂತಾದ ಸಾಮಾಜಿಕ ಸಂಕೀರ್ಣತೆಗಳು ಉಲ್ಬಣವಾಗುತ್ತಿರುವುದನ್ನೂ ಗಮನಿಸಿದಾಗ, ಈ ವೈಜ್ಞಾನಿಕ ಹೆಗ್ಗುರುತಿನ ನಡುವೆಯೇ ಸಾಮಾಜಿಕವಾಗಿ ನಾವು ಸಾಗಬೇಕಾದ ಮುನ್ನಡೆಯ ಹಾದಿ ಇನ್ನೂ ಬಹಳಷ್ಟಿದೆ ಎನ್ನುವುದನ್ನೂ ಮನಗಾಣಬೇಕಿದೆ. ತಾಂಡವಾಡುತ್ತಿರುವ ಸಾಮಾಜಿಕ ಅಸಮಾನತೆ ಮತ್ತು ಪ್ರಾಚೀನ ಸಾಂಸ್ಕೃತಿಕ ಆಚರಣೆಗಳ ನೆಲೆಯಲ್ಲಿ ನಿಂತು ವೈಜ್ಞಾನಿಕ ಹೆಗ್ಗುರುತುಗಳನ್ನು ಗೌಣವಾಗಿಸುವ ಅವಶ್ಯಕತೆಯಂತೂ ಕಾಣುವುದಿಲ್ಲ.
ಈ ನಡುವೆಯೇ ಚಂದ್ರಯಾನದಿಂದ ಸಾಮಾನ್ಯ ಜನತೆಗೆ ಪ್ರಯೋಜನವೇನು ಎಂಬ ಪ್ರಶ್ನೆಯೂ ಸಹಜವಾಗಿಯೇ ಉದ್ಭವಿಸುತ್ತದೆ. ದೇಶದ ವೈಜ್ಞಾನಿಕ ಪ್ರಗತಿಗೆ ಸರಿಸಮಾನವಾಗಿ ಸಾಮಾಜಿಕ ಪ್ರಗತಿಯೂ, ಸಾಂಸ್ಕೃತಿಕ ಮುಂಗಾಣ್ಕೆಯೂ ಸಾಧ್ಯವಾಗದೆ ಇದ್ದಾಗ ಇಂತಹ ಜಟಿಲ ಪ್ರಶ್ನೆಗಳಿಗೆ ಉತ್ತರ ಶೋಧಿಸಲೂ ತಡಕಾಡಬೇಕಾಗುತ್ತದೆ. ಆದರೆ ಇಸ್ರೋ ಸಂಸ್ಥೆಯ ಬಾಹ್ಯಾಕಾಶ ನಡಿಗೆ ಹಾಗೂ ಭಾರತದ ವಿಜ್ಞಾನ ತಂತ್ರಜ್ಞಾನ ಕ್ಷೇತ್ರದ ಮೇರು ಸಾಧನೆಗೆ ಕಾರಣರಾಗಿರುವ ಸಾವಿರಾರು ವಿಜ್ಞಾನಿಗಳು, ತಂತ್ರಜ್ಞರು, ಇಂಜಿನಿಯರುಗಳು ಹಾಗೂ ಇತರ ಸಿಬ್ಬಂದಿಗಳು ದೇಶ ಸಾಧಿಸಿರುವ ಸಾಮಾಜಿಕ ಪ್ರಗತಿಯ ಸಂಕೇತವಾಗಿಯೇ ಕಾಣುತ್ತಾರಲ್ಲವೇ ? ಬಹುಮುಖ್ಯವಾಗಿ ದೇಶದ ಬಾಹ್ಯಾಕಾಶ ಸಾಧನೆಯಲ್ಲಿ ಅಪ್ರತಿಮ ಸಾಧನೆಗೈದಿರುವ ಮಹಿಳೆಯರನ್ನು ಗಮನಿಸಿದಾಗ, ಇಂದಿಗೂ ವ್ಯಾಪಕವಾಗಿ ತಾಂಡವಾಡುತ್ತಿರುವ ಲಿಂಗಭೇದ, ದೌರ್ಜನ್ಯ, ತಾರತಮ್ಯ, ಅಸಮಾನತೆ ಮತ್ತು ಅತ್ಯಾಚಾರಗಳ ನಡುವೆ, ಈ ಮಹಿಳೆಯರು ಬಾಹ್ಯ ಸಮಾಜದಲ್ಲಿ, ಕುಟುಂಬ ಜೀವನದಲ್ಲಿ ಇವೆಲ್ಲವನ್ನು ಸಹಿಸಿಕೊಂಡೇ ದೇಶದ ವೈಜ್ಞಾನಿಕ ಪ್ರಗತಿಗೆ ಸೇತುವೆಗಳಾಗಿರುವುದು ಹೆಮ್ಮೆಯ ವಿಚಾರ ಅಲ್ಲವೇ ? ( ಮಹಿಳಾ ವಿಜ್ಞಾನಿಗಳ-ತಂತ್ರಜ್ಞರ ಬಗ್ಗೆ ಮುಂದಿನ ಭಾಗಗಳಲ್ಲಿ).
ವಿಕ್ರಂ ಲ್ಯಾಂಡರ್ ಸಾಧನೆಯಿಂದ ಗುರುತಿಸಬಹುದಾದ ಪ್ರಯೋಜನಗಳ ಬಗ್ಗೆ ಮಾಜಿ ಇಸ್ರೋ ಅಧ್ಯಕ್ಷ ಡಾ. ಕಸ್ತೂರಿ ರಂಗನ್ ಅವರು ಹೀಗೆ ಹೇಳುತ್ತಾರೆ : “ ಚಂದ್ರಯಾನ -3 ಪೂರ್ಣ ಪ್ರಮಾಣದ ಗ್ರಹಗಳ ಪರಿಶೋಧನಾ ಕಾರ್ಯತಂತ್ರವನ್ನು ಪ್ರದರ್ಶಿಸುತ್ತದೆ. ಇದರ ಅರ್ಥವೇನೆಂದರೆ, ಉಪಗ್ರಹವನ್ನು ಯಾವುದೇ ಅನ್ಯಗ್ರಹ ಅಥವಾ ಚಂದ್ರನ ಸಮೀಪಕ್ಕೆ ಕೊಂಡೊಯ್ಯುವ, ಚಂದ್ರನ ಸುತ್ತ ಹೋಗಲು ಅನುವು ಮಾಡಿಕೊಡುವ ಮತ್ತು ಛಾಯಾಗ್ರಹಣ ಅಥವಾ ಇತರ ವಿಧಾನಗಳಿಂದ ಅದರ ಪರಿಸರ ಮತ್ತು ಮೇಲ್ಮೈಯನ್ನು ನಾವು ಅರ್ಥಮಾಡಿಕೊಳ್ಳುತ್ತೇವೆ ಎಂದು ಖಚಿತಪಡಿಸಿಕೊಳ್ಳುವ ಸಾಮರ್ಥ್ಯವನ್ನು ಇಸ್ರೋ ಪ್ರದರ್ಶಿಸಿದೆ ಮತ್ತು ಅಂತಿಮವಾಗಿ ಚಂದ್ರನ ಮೇಲೆ ಇಳಿಯುವ ಸಾಮರ್ಥ್ಯವನ್ನು ಹೊಂದಿದೆ. ಆದ್ದರಿಂದ, ಮೊದಲ ಬಾರಿಗೆ, ನಾವು ಚಂದ್ರನಿಗೆ ನೇರ ಭೌತಿಕ ಪ್ರವೇಶವನ್ನು ಹೊಂದಿದ್ದೇವೆ, ಇದು ಸಂಪನ್ಮೂಲಗಳ ಪರಿಶೋಧನೆ ಮತ್ತು ಶೋಷಣೆಯ ಭವಿಷ್ಯಕ್ಕೆ ಸಂಬಂಧಿಸಿದಂತೆ ತನ್ನದೇ ಆದ ಪ್ರಮುಖ ಪರಿಣಾಮಗಳನ್ನು ಹೊಂದಿದೆ. ಗ್ರಹಗಳ ಪರಿಶೋಧನಾ ಕಾರ್ಯತಂತ್ರದ ದೃಷ್ಟಿಯಿಂದ ಇದು ಒಟ್ಟು ಕಥೆಯಾಗುತ್ತದೆ. ”.
ಚಂದ್ರಯಾನ-3ರ ಯಶಸ್ಸಿನ ನಂತರ ಉಳಿದಿರುವ ಒಂದು ಪ್ರಮುಖ ಹೆಜ್ಜೆ ಎಂದರೆ ಸಹಜವಾಗಿ ಭೂಮಿಗೆ ಮರಳಲು ಒಂದು ಮಿಷನ್ ಸಿದ್ಧಪಡಿಸುವುದಾಗಿದೆ. ಈ ನಿಟ್ಟಿನಲ್ಲಿ ಇಸ್ರೋ ಸಂಸ್ಥೆ ಈಗಾಗಲೇ ಗಗನಯಾನ (ಮಾನವ ಬಾಹ್ಯಾಕಾಶ ಯಾನ ಕಾರ್ಯಕ್ರಮ)ವನ್ನು ಆಯೋಜಿಸುತ್ತಿದ್ದು ಅಲ್ಲಿಯೂ ಯಶಸ್ವಿಯಾಗುವ ವಿಶ್ವಾಸವನ್ನು ಕಸ್ತೂರಿ ರಂಗನ್ ವ್ಯಕ್ತಪಡಿಸುತ್ತಾರೆ. ವಿಕ್ರಂ ಸಾರಾಭಾಯ್ ಅವರು ಇಸ್ರೋ ಸಂಸ್ಥೆಯನ್ನು ಸ್ಥಾಪಿಸಿದಾಗ ಭಾರತಕ್ಕೆ ಬಾಹ್ಯಾಕಾಶ ನಡಿಗೆಯಲ್ಲಿ ಯಾವುದೇ ದೇಶದೊಂದಿಗೆ ಸ್ಪರ್ಧಿಸುವ ಕಲ್ಪನೆ ಹೊಂದಿರಲಿಲ್ಲ ಬದಲಾಗಿ ಸಾಮಾನ್ಯ ಜನತೆಯ ಉಪಯೋಗಗಳಿಗಾಗಿ ಬಳಕೆಯಾಗಬೇಕು ಎಂದು ಆಶಿಸಿದ್ದರು ಎಂದೂ ಹೇಳಲಾಗುತ್ತದೆ. ಸಾರಾಭಾಯ್ ಅವರು ಬಾಹ್ಯಾಕಾಶ ತಂತ್ರಜ್ಞಾನಗಳನ್ನು ಭಾರತದ ಅಭಿವೃದ್ಧಿಯ ಅವಶ್ಯಕತೆಗಳನ್ನು ಪೂರೈಸುವ ಸಾಧನವಾಗಿ ನೋಡಿದ್ದರು ಎನ್ನುವುದು ದಿಟ. ಭಾರತದಂತಹ ಅಭಿವೃದ್ಧಿಶೀಲ ದೇಶದಲ್ಲಿ, ಬಾಹ್ಯಾಕಾಶ ತಂತ್ರಜ್ಞಾನವು ಸೀಮಿತ ಸಂಪನ್ಮೂಲಗಳ ಗರಿಷ್ಠ ಬಳಕೆ ಮತ್ತು ನಿರ್ವಹಣೆಯನ್ನು ಖಚಿತಪಡಿಸುತ್ತದೆ ಎಂದು ವಾದಿಸುತ್ತಿದ್ದ ಸಾರಾಭಾಯ್ ನಮ್ಮ ನಿರ್ಣಾಯಕ ಸಂಪನ್ಮೂಲಗಳ ಬಗ್ಗೆ ಸಮಯೋಚಿತ, ನಿಖರ ಮತ್ತು ನಿಖರವಾದ ಮಾಹಿತಿ ಅತ್ಯಗತ್ಯ ಎಂದು ಬಲವಾಗಿ ನಂಬಿದ್ದರು.
ಹಳೆಯ ಕಾಲದ ಸಂವಹನ ಸಾಧನಗಳನ್ನು ಹೊಂದಿದ್ದ ಭಾರತದಲ್ಲಿ ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆಗಳಲ್ಲಿ ಭಾರಿ ಸುಧಾರಣೆಗಳ ಅಗತ್ಯತೆ ಇದ್ದುದನ್ನು ಸಾರಾಭಾಯ್ ಮನಗಂಡಿದ್ದರು. ದೇಶದ ಕೃಷಿ ಚಟುವಟಿಕೆಗಳನ್ನು ಯೋಜಿಸಲು ಮಳೆಯನ್ನು ಊಹಿಸಬಲ್ಲ ಹವಾಮಾನಶಾಸ್ತ್ರದಲ್ಲಿ ನಮಗೆ ಉತ್ತಮ ಮಾಹಿತಿಯ ಅಗತ್ಯವಿತ್ತು. ಹಾಗಾಗಿ ವಿಕ್ರಂ ಸಾರಾಭಾಯ್ ತಮ್ಮ ಭಾವೋದ್ರಿಕ್ತ ಸಮರ್ಥನೆಯೊಂದಿಗೆ ಈ ಉದ್ದೇಶಗಳನ್ನು ಕೇಂದ್ರೀಕರಿಸಿಯೇ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಹೂಡಿಕೆ ಮಾಡಲು ಸರ್ಕಾರವನ್ನು ಮನವೊಲಿಸುವಲ್ಲಿ ಯಶಸ್ವಿಯಾದರು. ಆ ಕಾರಣದಿಂದಲೇ ಭಾರತವು ಸಂಪೂರ್ಣವಾಗಿ ಶಾಂತಿಯುತ ವಿಧಾನದೊಂದಿಗೆ ಬಾಹ್ಯಾಕಾಶ ಕಾರ್ಯಕ್ರಮವನ್ನು ಪ್ರಾರಂಭಿಸಿದ ದೇಶ ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು. ಬಹುಶಃ ಜಪಾನ್ ಮತ್ತೊಂದು ರಾಷ್ಟ್ರವಾಗಿತ್ತು. ಹಾಗೂ ತನ್ನ ಭೌತಿಕ ಅಗತ್ಯಗಳ ಮೇಲೆ ಸಂಪೂರ್ಣವಾಗಿ ಕೇಂದ್ರೀಕರಿಸಿತ್ತು .
ವಿಕ್ರಂ ಸಾರಾಭಾಯ್, ಸತೀಶ್ ಧವನ್, ಯು.ಆರ್. ರಾವ್ ಮುಂತಾದವರು ಈ ತಾತ್ವಿಕ ನೆಲೆಯಲ್ಲೇ ಭಾರತದ ಬಾಹ್ಯಾಕಾಶ ನಡಿಗೆಯನ್ನು ಇಸ್ರೋ ಸಂಸ್ಥೆಯ ಮೂಲಕ ನಿರ್ವಹಿಸಿದ್ದರು. ಭೌಗೋಳಿಕ ರಾಜಕಾರಣವು ಬಾಹ್ಯಾಕಾಶಕ್ಕೂ ವಿಸ್ತರಿಸುತ್ತಿದ್ದು ಸಾಮ್ರಾಜ್ಯಶಾಹಿ ಶಕ್ತಿಗಳು ಬಂಡವಾಳಶಾಹಿ ಕಾರ್ಪೋರೇಟ್ ಮಾರುಕಟ್ಟೆಯ ಹಿತಾಸಕ್ತಿಗಳಿಗಾಗಿ ಬಾಹ್ಯಾಕಾಶ ತಂತ್ರಜ್ಞಾನವನ್ನೂ ಬಳಸಿಕೊಳ್ಳುತ್ತಿರುವ ಪ್ರಸ್ತುತ ಸಂದರ್ಭದಲ್ಲಿ, ವೈಜ್ಞಾನಿಕ ಮುನ್ನಡೆಯ ನೆಲೆಯಲ್ಲಿ ಇಸ್ರೋ ಕ್ರಮಿಸಿದ ಹಾದಿಯನ್ನು ಗಮನಿಸಬೇಕಿದೆ. ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆ ಮಾನವ ಸಮಾಜದ ಭೌತಿಕ ಉನ್ನತಿಗೆ ಪೂರಕವಾಗುವುದೋ ಅಥವಾ ಮನುಕುಲವನ್ನೇ ವಿನಾಶದೆಡೆಗೆ ಕೊಂಡೊಯ್ಯುವ ಸಾಧನವಾಗುವುದೋ ಎಂಬ ಜಟಿಲ ಪ್ರಶ್ನೆಯೊಂದಿಗೇ ಭಾರತದ ಚಂದ್ರಯಾನವನ್ನೂ ಪರಾಮರ್ಶಿಸಬೇಕಿದೆ. ಈ ಪ್ರಶ್ನೆಗೆ ಉತ್ತರ ಶೋಧಿಸುವಾಗ ಇಸ್ರೋ ಸಂಸ್ಥೆಯ ಹಾಗೂ ಭಾರತದ ವಿಜ್ಞಾನಿಗಳ ಸಾಧನೆಯನ್ನು ನೇಪಥ್ಯಕ್ಕೆ ಸರಿಸುವ ಅವಶ್ಯಕತೆಯಂತೂ ಇಲ್ಲ. ಈ ದೃಷ್ಟಿಯಿಂದಲೇ ಇಸ್ರೋ ನಡಿಗೆಯನ್ನು ಮತ್ತಷ್ಟು ಒಳಹೊಕ್ಕು ನೋಡಬಹುದು.
(ಕಸ್ತೂರಿ ರಂಗನ್ ಅವರ ಅಭಿಪ್ರಾಯಗಳಿಗೆ ಆಧಾರ ಸಂದರ್ಶನ ಇಂಡಿಯನ್ ಎಕ್ಸ್‌ಪ್ರೆಸ್ 28 ಆಗಸ್ಟ್ 2023
ಚಂದ್ರಯಾನದ ತಯಾರಿ ಮತ್ತು ಇಸ್ರೋ ಹೆಜ್ಜೆಗಳು – ಮುಂದಿನ ಭಾಗದಲ್ಲಿ
-೦-೦-೦-೦-೦