ಇಡೀ ದೇಶಕ್ಕೆ ಕಲ್ಲಿದ್ದಲು ಗಣಿಗಳಿಂದ ನಿರೀಕ್ಷಿತ ಮಟ್ಟದಲ್ಲಿ ಕಲ್ಲಿದ್ದಲು ಪೂರೈಕೆಯಾಗುತ್ತಿಲ್ಲ. ಹೀಗಾಗಿ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲಿನ ಭಾರೀ ಅಭಾವ ಉಂಟಾಗಿದೆ. ಕರ್ನಾಟಕವೂ ಸೇರಿ ದೇಶದ 135 ಉಷ್ಣ ಸ್ಥಾವರಗಳಲ್ಲಿ ವಿದ್ಯುತ್ ಉತ್ಪಾದನೆ ಕುಂಠಿತವಾಗಿದ್ದು, ಇಡಿ ದೇಶವೇ ಕತ್ತಲಲ್ಲಿ ಮುಳುಗೋ ಆತಂಕ ಎದುರಾಗಿದೆ.
ಕೆಲವೇ ದಿನಗಳ ಹಿಂದೆ ಡ್ರ್ಯಾಗನ್ ರಾಷ್ಟ್ರ ಚೀನಾ ವಿದ್ಯುತ್ ಸಮಸ್ಯೆಯಿಂದಾಗಿ ಕತ್ತಲಲ್ಲಿ ಮುಳುಗಿರುವ ಸುದ್ದಿ ಜಗತ್ತಿನ ಗಮನ ಸೆಳೆದಿತ್ತು. ಸದ್ಯ ಅದೇ ಪರಿಸ್ಥಿತಿ ಭಾರತದಲ್ಲೂ ನಿರ್ಮಾಣವಾಗೋ ಆತಂಕ ಎದುರಾಗಿದೆ. ದೇಶದ ಶೇ.70ರಷ್ಟು ವಿದ್ಯುತ್ ಬೇಡಿಕೆಯನ್ನು ಪೂರೈಸುವ ಉಷ್ಣ ಸ್ಥಾವರಗಳಲ್ಲಿ ಕಲ್ಲಿದ್ದಲ್ಲಿನ ಭಾರೀ ಅಭಾವ ಉಂಟಾಗಿದೆ.
ಕರ್ನಾಟಕವೂ ಸೇರಿದಂತೆ ದೇಶದ 135 ಪ್ಲಾಂಟ್ಗಳಲ್ಲಿ ಕಲ್ಲಿದಲ್ಲಿನ ಕೊರತೆ ಉಂಟಾಗಿದ್ದು, ವಿದ್ಯುತ್ ಉತ್ಪಾದನೆಯಲ್ಲಿ ಭಾರಿ ಕಡಿತವಾಗಿದೆ. ಕರ್ನಾಟಕದ ರಾಯಚೂರು ಹಾಗೂ ಬಳ್ಳಾರಿ ಉಷ್ಣ ವಿದ್ಯುತ್ ಸ್ಥಾವರಗಳಲ್ಲೂ ಕಲ್ಲಿದ್ದಲ್ಲಿನ ಕೊರತೆ ಉಂಟಾಗಿದ್ದು, ಕರುನಾಡನ್ನು ಕಾರ್ಗತ್ತಲು ಆವರಿಸಿಕೊಳ್ಳೋ ಸಾಧ್ಯತೆ ದಟ್ಟವಾಗಿದೆ.
ರಾಯಚೂರು ಉಷ್ಣ ವಿದ್ಯುತ್ ಸ್ಥಾವರದಲ್ಲಿ ಕಲ್ಲಿದ್ದಲಿನ ಕೊರತೆ ಉಂಟಾಗಿದೆ. 1750 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯವಿರೋ ಸ್ಥಾವರದಲ್ಲಿ ಸದ್ಯ 400 ರಿಂದ 500 ಮೆಗಾ ವ್ಯಾಟ್ ವಿದ್ಯುತ್ ಅಷ್ಟೇ ಉತ್ಪಾದಿಸಲಾಗುತ್ತಿದೆ. ಬಳ್ಳಾರಿ ಥರ್ಮಲ್ ಪವರ್ ಸೆಂಟರ್ನಲ್ಲೂ ಕಲ್ಲಿದ್ದಲ್ಲಿನ ಕೊರತೆ ಉಂಟಾಗಿದೆ. 1700 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಸಾಮರ್ತ್ಯದ ಬಿಟಿಪಿಎಸ್ನಲ್ಲಿ ಸದ್ಯ ಪ್ರತಿನಿತ್ಯ 500 ಮೆಗಾ ವ್ಯಾಟ್ ವಿದ್ಯತ್ತನಷ್ಟೇ ಉತ್ಪಾದಿಸಲಾಗುತ್ತಿದೆ. ಈ ಎರಡು ವಿದ್ಯುತ್ ಸ್ಥಾವರಗಳು ಕಲ್ಲಿದ್ದಲಿನ ಮೇಲೆ ಅವಲಂಬಿತವಾಗಿವೆ. ಸದ್ಯ ಕಲ್ಲಿದ್ದಲಿನ ಕೊರತೆಯಿಂದಾಗಿ ವಿದ್ಯುತ್ ಉತ್ಪಾದನೆ ಕುಂಠಿತವಾಗಿದೆ.
ಇನ್ನು ರಾಜ್ಯದ ವಿದ್ಯುತ್ ಬೇಡಿಕೆಯ ಬಹುಪಾಲು ರಾಯಚೂರು ಹಾಗೂ ಬಳ್ಳಾರಿಯ ಉಷ್ಣ ವಿದ್ಯುತ್ ಸ್ಥಾವರಗಳಿಂದಲೇ ಪೂರೈಕೆಯಾಗುತ್ತದೆ. ಆದ್ರೆ ಸದ್ಯ ಕಲ್ಲಿದ್ದಲಿನ ಕೊರತೆ ರಾಜ್ಯದ ವಿದ್ಯುತ್ ಉತ್ಪಾದನೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಹಾಗಾದ್ರೆ ಕಲ್ಲಿದ್ದಲು ಕೊರತೆಗೆ ಕಾರಣಗಳೇನು ಅನ್ನೋದನ್ನ ನೋಡೋದಾದ್ರೆ
ಕಲ್ಲಿದ್ದಲು ಕೊರತೆಗೆ ಕಾರಣಗಳೇನು?
• ನಿರಂತರ ಸುರಿಯುತ್ತಿರೋ ಮಳೆಯಿಂದಾಗಿ ಕತ್ತಲೆಯತ್ತ ಕರ್ನಾಟಕ
• ಸಿಂಗರೇಣಿ, ನಾಗ್ಪುರ, ಮಹಾನದಿ, ವೆಸ್ಟರ್ನ್ ಗಣಿ ಕಲ್ಲಿದ್ದಲು ಪೂರೈಕೆ
• ಮಳೆಯಿಂದಾಗಿ ಕಲ್ಲಿದ್ದಲು ಪೂರೈಸುವ ಗಣಿಗಳ ಕಾರ್ಯವೂ ಸ್ಥಗಿತ
• ವಿದ್ಯತ್ ಉತ್ಪನ್ನ ಸ್ಥಾವರಗಳಿಗೆ ಪೂರೈಕೆಯಾಗುತ್ತಿಲ್ಲ ಕಲ್ಲಿದ್ದಲ್ಲು
• ಕಲ್ಲಿದ್ದಲು ಕೊರತೆಯಿಂದ ಉತ್ಪಾದನೆ ನಿಲ್ಲಿಸಿದ ಉಷ್ಣ ಸ್ಥಾವರಗಳು
• ಕಲ್ಲಿದ್ದಲು ಕೊರತೆಗೆ ಅಧಿಕಾರಿಗಳ ಬೇಜವಾಬ್ದಾರಿತನವೂ ಕಾರಣ
• ಮಳೆಯ ಸೂಚನೆಯಿದ್ರೂ ಕಲ್ಲಿದ್ದಲು ದಾಸ್ತಾನು ಮಾಡದ ಅಧಿಕಾರಿಗಳು
ನಿರಂತರವಾಗಿ ಸುರಿಯುತ್ತಿರೋ ಮಳೆಯಿಂದಾಗಿ ಕತ್ತಲೆಯತ್ತ ಕರ್ನಾಟಕ ಹೊರಳುತ್ತಿದೆ. ಸಿಂಗರೇಣಿ, ನಾಗ್ಪುರ, ಮಹಾನದಿ ಹಾಗೂ ವೆಸ್ಟರ್ನ್ ಗಣಿಗಳಿಂದ ರಾಜ್ಯಕ್ಕೆ ಕಲ್ಲಿದ್ದಲು ಪೂರೈಕೆಯಾಗುತ್ತಿತ್ತು. ಆದರೆ ಮಳೆಯಿಂದಾಗಿ ಕಲ್ಲಿದ್ದಲು ಪೂರೈಸುವ ಗಣಿಗಳ ಕಾರ್ಯವೂ ಸ್ಥಗಿತವಾಗಿದೆ. ಹೀಗಾಗಿ ವಿದ್ಯುತ್ ಉತ್ಪಾದನಾ ಸ್ಥಾವರಗಳಿಗೆ ಕಲ್ಲಿದ್ದಲು ಪೂರೈಕೆಯಾಗುತ್ತಿಲ್ಲ. ಕಲ್ಲಿದ್ದಲು ಕೊರತೆಯಿಂದ ಉಷ್ಣ ಸ್ಥಾವರಗಳು ವಿದ್ಯುತ್ ಉತ್ಪಾದನೆಯನ್ನು ನಿಲ್ಲಿಸಿವೆ. ಕಲ್ಲಿದ್ದಲು ಕೊರತೆಗೆ ಅಧಿಕಾರಿಗಳ ಬೇಜವಾಬ್ದಾರಿತನವೂ ಕಾರಣವಾಗಿದೆ. ಮಳೆಯ ಸೂಚನೆಯಿದ್ರೂ ಅಧಿಕಾರಿಗಳು ಕಲ್ಲುದ್ದಲು ದಾಸ್ತಾನು ಮಾಡಿಕೊಂಡಿರಲಿಲ್ಲ.
ಇನ್ನು ದೆಹಲಿಗೆ ತೆರಳಿದ್ದ ಸಿಎಂ ಬೊಮ್ಮಾಯಿ ರಾಜ್ಯದಲ್ಲಿ ಕಲ್ಲಿದ್ದಲಿನ ಕೊರತೆ ಉಂಟಾಗಿರೋದ್ರ ಬಗ್ಗೆ ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿಯನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಕಲ್ಲಿದ್ದಲಿನ ಕೊರತೆ ನೀಗಿಸುವಂತೆ ಕೇಂದ್ರ ಸಚಿವರಲ್ಲಿ ಸಿಎಂ ಬೊಮ್ಮಾಯಿ ಮನವಿ ಮಾಡಿದ್ದಾರೆ.
ಇನ್ನು ಮಳೆಗಾಲ ಆದ್ದರಿಂದ ಕಲ್ಲಿದ್ದಲು ಉತ್ಪಾದನೆಯಲ್ಲಿ ವ್ಯತ್ಯಯವಾಗಿದೆ. ಕೇಂದ್ರ ಸಚಿವರೊಂದಿಗೆ ಮಾತನಾಡಿದ್ದು, ನಾಲ್ಕೈದು ದಿನಗಳಲ್ಲಿ ಸಮಸ್ಯೆ ಬಗೆಹರಿಯಲಿದೆ ಅನ್ನೋದು ಇಂಧನ ಸಚಿವ ಸುನೀಲ್ ಕುಮಾರ್ ಮಾತು.
ಜಲಶಕ್ತಿ, ಸೌರಶಕ್ತಿಗಳಿಂದಲೂ ವಿದ್ಯುತ್ ಉತ್ಪಾದನೆ ಮಾಡಲಾಗುತ್ತೆಯಾದ್ರೂ ಹೆಚ್ಚಿನ ವಿದ್ಯುತ್ ಉತ್ಪಾದನೆಯಾಗೋದು ಉಷ್ಣ ಸ್ಥಾವರಗಳಲ್ಲೇ. ಒಂದು ವೇಳೆ ಕಲ್ಲಿದ್ದಲಿನ ಕೊರತೆ ಹೀಗೆ ಮುಂದುವರಿದ್ರೆ ಕರುನಾಡು ಕತ್ತಲಿನ ಕಣಿವೆಗೆ ಜಾರುವುದು ನಿಶ್ಚಿತ.