ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿರುವ ಅಭ್ಯರ್ಥಿಗಳಲ್ಲಿ ಕ್ಷೇತ್ರಕ್ಕೆ ಸೂಕ್ತವಾದ ವಿದ್ಯಾವಂತ ಹಾಗೂ ಸಭ್ಯತೆಯ ಅಭ್ಯರ್ಥಿ ಸಿಎಂಆರ್ ಶ್ರೀನಾಥ್ ಮಾತ್ರವೇ ಆಗಿದ್ದು ಅಂತಹ ವ್ಯಕ್ತಿಯನ್ನು ಚುನಾವಣೆಯಲ್ಲಿ ಶಾಸಕನಾಗಿ ಗೆಲ್ಲಿಸುವಂತೆ ಜೆಡಿಎಸ್ ಪಕ್ಷದ ರಾಜ್ಯ ವಕ್ತಾರ ಅರಿಕೆರೆ ಮಂಜುನಾಥಗೌಡ ಕ್ಷೇತ್ರದ ಮತದಾರರಲ್ಲಿ ಮನವಿ ಮಾಡಿದರು. ಕೋಲಾರ ನಗರದ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿರುವ ಎರಡು ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳಿಗೆ ನಾಲಿಗೆ ಮೇಲೆ ಹಿಡಿತವಿಲ್ಲ ಆದರೆ ಜೆಡಿಎಸ್ ಅಭ್ಯರ್ಥಿ ಸಿಎಂಆರ್ ಶ್ರೀನಾಥ್ ಅವರಿಗೆ ಮಾತು ಕಡಿಮೆ ಆದರೆ ಕೆಲಸ ಜಾಸ್ತಿ. ಇವತ್ತು ಕ್ಷೇತ್ರದಲ್ಲಿ ಜನರ ಕಷ್ಟಗಳಿಗೆ ಸ್ಪಂದಿಸದೇ ಯಾವುದೇ ಜನಸೇವೆ ಮಾಡದೆ ಕೇವಲ ದುಡ್ಡಿನಿಂದ ಮತದಾರರನ್ನು ಕೊಂಡುಕೊಳ್ಳುವ ಮೂಲಕ ಶಾಸಕನಾಗಬಹುದು ಅಂತ ಬಂದಿದ್ದಾರೆ ಅಂತಹ ವ್ಯಕ್ತಿಗಳಿಗೆ ಚುನಾವಣೆಯಲ್ಲಿ ತಿರಸ್ಕರಿಸಿ ಸಿಎಂಆರ್ ಶ್ರೀನಾಥ್ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೊತ್ತೂರು ಮಂಜುನಾಥ್ ದಲಿತರನ್ನು ಹಾಗೂ ಹೋರಾಟಗಾರರನ್ನು ತಾನು ಹಾಕುವ ಲೆಲೇಕರ್ ಶೂಗೆ ಹೋಲಿಸಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ನೇರವಾಗಿ ಕೋಮುವಾದಿ ಬಿಜೆಪಿ ಪಕ್ಷವನ್ನು ಬೆಂಬಲಿಸಿ ಇವತ್ತು ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡಿದ್ದಾರೆ ಕ್ಷೇತ್ರದ ಜನ ಪ್ರಬುದ್ದರಿದ್ದು ಯಾವುದೇ ಕಾರಣಕ್ಕೂ ದಲಿತರು, ಅಲ್ಪಸಂಖ್ಯಾತರು ಹಾಗೂ ಹಿಂದುಳಿದವರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬಾರದು ಎಂದರು.ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವು ಇಲ್ಲ. ನಾನು ಕೂಡ ಹಿಂದೆ ಪ್ರವಾಸ ಮಾಡಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆ ಇಲ್ಲ ಎಂಬುದು ಗೊತ್ತಾಯಿತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಕೋಲಾರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಗೆಲವು ಸಾಧ್ಯವಿಲ್ಲ ಎಂಬ ಮಾಹಿತಿ ಪಡೆದು ವಾಪಸು ಹೋಗಿದ್ದಾರೆ ಹಣದಿಂದ ಮತ ಕೊಂಡುಕೊಳ್ಳುಬಹುದು ಅಂತ ಕೊತ್ತೂರು ಮಂಜುನಾಥ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಂದಿದ್ದಾರೆ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಇನ್ನೂ ಬಿಜೆಪಿ ಪಕ್ಷದ ಅಭ್ಯರ್ಥಿ ವರ್ತೂರ್ ಪ್ರಕಾಶ್ ರವರು ಪಕ್ಷೇತರರಾಗಿ ಹಿಂದೆ ಗೆದ್ದಿದ್ದರೂ ಬಿಜೆಪಿ ಪಕ್ಷಕ್ಕೆ ಅವರು ಸೇರಿರುವುದರಿಂದ ಅವರಿಗೂ ಹಾಗೂ ಜೆಡಿಎಸ್ ಪಕ್ಷಕ್ಕೂ ನೇರ ಚುನಾವಣೆ ನಡೆಯಲಿದ್ದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪಂಚರತ್ನ ಯೋಜನೆಗಳ ಮೂಲಕ ರಾಜ್ಯದಲ್ಲಿ ಅಭಿವೃದ್ಧಿ ಕಾಣಲಿದೆ ಎಂಬುದನ್ನು ಅರಿತಿರುವ ಮತದಾರರು ಈ ಬಾರಿ ಜೆಡಿಎಸ್ ಪಕ್ಷವನ್ನು ಬೆಂಬಲಿಸುವ ಮೂಲಕ ರಾಜ್ಯದಲ್ಲಿ ಅಧಿಕಾರಕ್ಕೆ ತರಲಿದ್ದಾರೆಂದರು. ಹಿಂದೆ ನಾನು ಪ್ರವಾಸ ಮಾಡುವ ಸಂದರ್ಭದಲ್ಲಿ ವರ್ತೂರ್ ಪ್ರಕಾಶ್ ಒಂದು ಮಾತು ಹೇಳಿದ್ದರು ಅರಿಕೆರೆ ಮಂಜುನಾಥಗೌಡ ಇನ್ನೂ ಎರಡು ಮೂರು ದಿನದಲ್ಲಿ ಕೊಂಡರಾಜನಹಳ್ಳಿಯಿಂದಲೇ ಹಿಂದಿರುಗುತ್ತಾನೆ ಎಂದು ಹಗುರವಾಗಿ ಮಾತಾಡಿದ್ದರು. ಮೇ 13ರ ಫಲಿತಾಂಶದ ನಂತರ ಕ್ಷೇತ್ರದ ಜನತೆ ಯಾರನ್ನು ಕೊಂಡರಾಜನಹಳ್ಳಿಯಿಂದ ಹೊರಗೆ ಕಳುಹಿಸುತ್ತಾರೆ ಎಂಬುದನ್ನು ಅವರಿಗೆ ಮನವರಿಕೆಯಾಗುತ್ತದೆ ಎಂದರು. ಕೋಲಾರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಿಎಂಆರ್ ಶ್ರೀನಾಥ್ ಅವರು ಶಾಸಕರಾದರೆ ಕ್ಷೇತ್ರದ ಘನತೆ ಉಳಿಸುವ ಕೆಲಸ ಮಾಡುತ್ತಾರೆ. ನನ್ನ ಚಿಂತನೆಗಳಂತೆ ಅವರು ಕೂಡ ಕೆಲಸ ಮಾಡುತ್ತಾ ಇದ್ದಾರೆ. ಕೆ.ಸಿ ವ್ಯಾಲಿ ನೀರನ್ನು ಮೂರನೇ ಹಂತದ ಶುಧ್ಧೀಕರಣ, ಪಿ.ನಂಬರ್ ಗಳನ್ನು ತೆಗೆದು ಪೋಡಿ ಮಾಡುವುದು, ಜಯದೇವ ಮಾದರಿಯಲ್ಲಿ ಆಸ್ಪತ್ರೆ, ಮಾವು ಸಂಸ್ಕರಣ ಘಟಕ ಪ್ರಾರಂಭಿಸುವುದು, ಟಮೋಟ ಶೀತಲೀಕರಣ ಘಟಕಗಳನ್ನು ಕುಮಾರಸ್ವಾಮಿಯವರು ಮುಖ್ಯಮಂತ್ರಿ ಆದ ತಕ್ಷಣ ಮಂಜೂರು ಮಾಡುತ್ತಾರೆ ಅದರಿಂದ ಜೆಡಿಎಸ್ ಪಕ್ಷವನ್ನು ಗೆಲ್ಲಿಸುವಂತೆ ಮನವಿ ಮಾಡಿದರು. ಈ ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಪಕ್ಷದ ಮುಖಂಡರಾದ ಅಮ್ಮನಲ್ಲೂರು ಜಯರಾಮ್, ಕಡಗಟ್ಟೂರು ವಿಜಯಕುಮಾರ್, ರಾಮಸಂದ್ರ ತಿರುಮಲೇಶ್, ಮನೋಹರ್, ಪ್ರೀತಮ್, ಶ್ರೀನಾಥ್, ಕುತುಬ್ ಮುಂತಾದವರು ಉಪಸ್ಥಿತರಿದ್ದರು.