ಮೈಸೂರು: ರಾಜ್ಯ ನಾಯಕತ್ವ ಬದಲಾವಣೆಯ ವಿಚಾರ ಚರ್ಚೆಯಲ್ಲಿರುವಾಗಲೇ ಕಾಂಗ್ರೆಸ್‌ನ ಒಂದಿಷ್ಟು ನಾಯಕರು ಹೈಕಮಾಂಡ್ ಭೇಟಿಗಾಗಿ ದೆಹಲಿಗೆ ತೆರಳಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ಯಾರೂ ದೆಹಲಿಗೆ ಹೋಗಲೇಬಾರದು ಅಂತೇನಿಲ್ಲ ಎಂದು ಹೇಳಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಗೆ ಹೋಗಿರುವ ಚಲುವರಾಯಸ್ವಾಮಿ ಜೊತೆ ನಾನು ಮಾತಾಡಿದ್ದೇನೆ. ಕೇಂದ್ರ ಕೃಷಿ ಸಚಿವರ ಭೇಟಿಗೆ ಹೋಗಿದ್ದೇನೆ ಅಂತಾ ಹೇಳಿದ್ದಾರೆ. ಯಾರೂ ದೆಹಲಿಗೆ ಹೋಗಲೇಬಾರದು ಅಂತೇನಿಲ್ಲ. ಏನೇ ಇದ್ದರೂ ಪಕ್ಷದ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಹೈಕಮಾಂಡ್ ತೀರ್ಮಾನವನ್ನು ನಾನು ಕೇಳಬೇಕು, ಡಿ.ಕೆ ಶಿವಕುಮಾರ್ ಅವರು ಕೂಡ ಕೇಳಬೇಕು. ನಾನೇ ಸಿಎಂ ಆಗಿ ಮುಂದುವರಿಯುತ್ತೇನೆ. ನಾನೇ ಬಜೆಟ್ ಮಂಡಿಸುತ್ತೇನೆ. ನಾಳೆ ನಾನು ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡುತ್ತೇನೆ ಎಂದರು.

ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಟ್ಟ ಮಾತು ತಪ್ಪಲ್ಲ ಎನ್ನುವ ಮಾಜಿ ಸಂಸದ ಡಿ.ಕೆ ಸುರೇಶ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾನು ಈಗಲೂ ಕೊಟ್ಟ ಮಾತು ತಪ್ಪಿಲ್ಲ. ಈಗಲೂ ನಾನು ಗ್ಯಾರಂಟಿ ವಿಚಾರದಲ್ಲಿ ಮಾತು ತಪ್ಪಿಲ್ಲ ಎಂದು ಹೇಳಿದ್ದಾರೆ.













