ಬಿ ಎಸ್ ಯಡಿಯೂರಪ್ಪ ಸಿಎಂ ಸ್ಥಾನದಿಂದ ಇಳಿದು ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಪದವಿ ಹುದ್ದೆಗೆ ಏರಿದಾಗಿನಿಂದ ರಾಜ್ಯದಲ್ಲಿ ಕೋಮು ಧ್ರುವೀಕರಣ ವಿಪರೀತವಾಗುತ್ತಿದೆ. ಹಿಂದೂ ಸಂಘಟನೆಗಳು ದಿನಕ್ಕೊಂದು ಮುಸ್ಲಿಂ k ವಿಷಯಗಳನ್ನು ವಿವಾದವನ್ನಾಗಿ ಮಾಡಿ ಮತೀಯ ಆತಂಕ ಸೃಷ್ಟಿಸುತ್ತಿದೆ. ಆ ಮೂಲಕ ಅಲ್ಪಸಂಖ್ಯಾತ ಸಮುದಾಯವನ್ನು ಅಭದ್ರತೆಯಲ್ಲಿಟ್ಟು ಹಿಂದೂ ಮತಗಳ ಕ್ರೋಢೀಕರಣ ಮಾಡಲು ಹೊಂಚು ಹಾಕಿದೆ.
ಉತ್ತರ ಭಾರತದಲ್ಲಿ ʼಹಿಂದೂ ಮಹಾ ಪಂಚಾಯತ್ʼ , ಧರ್ಮ ಸಂಸದ್ ಮೊದಲಾದ ಕಾರ್ಯಕ್ರಮಗಳನ್ನು ಆಯೋಜಿಸಿ, ಮುಸ್ಲಿಂ ಜನಾಂಗೀಯ ನಿರ್ಮೂಲನೆಗೆ, ಮುಸ್ಲಿಂ ಮಹಿಳೆಯರ ಬಲಾತ್ಕಾರಕ್ಕೆ ಕಾವಿಧಾರಿಗಳು ಬಹಿರಂಗವಾಗಿ ಕರೆ ನೀಡುತ್ತಾ ಮುಸ್ಲಿಂ ಹತ್ಯಾಕಾಂಡಕ್ಕೆ ಪ್ರಚೋದಿಸುತ್ತಿದ್ದಾರೆ. ಪೊಲೀಸರು ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳದೆ ಇರುವುದರ ಹಿಂದೆ ಅಲ್ಲಿನ ಸರ್ಕಾರಗಳ ಹಿತಾಸಕ್ತಿ ಇದೆ ಎನ್ನುವುದರಲ್ಲಿ ಸಂಶಯವೇನಿಲ್ಲ. ಅದೇ ವೇಳೆ, ದಕ್ಷಿಣ ಭಾರತದಲ್ಲಿ, ಬಿಜೆಪಿ ಅಧಿಕಾರದಲ್ಲಿರುವ ಒಂದೇ ಒಂದು ರಾಜ್ಯದಲ್ಲಿ ಕೋಮು ಧ್ವೇಷವನ್ನು ಹುಲುಸಾಗಿ ಬೆಳೆಯಲು ಬಿಡಲಾಗಿದೆ.
ಇತ್ತೀಚೆಗೆ ಪ್ರತಿಪಕ್ಷ ನಾಯಕರಾದ ಸಿದ್ದರಾಮಯ್ಯ, ಹೆಚ್‌ಡಿಕೆ ಸೇರಿ 60 ಕ್ಕೂ ಹೆಚ್ಚಿನ ಬುದ್ಧಿಜೀವಿಗಳ, ಚಿಂತಕರ ವಿರುದ್ಧ ಬಂದ ಬೆದರಿಕೆ ಪತ್ರವನ್ನೂ ಇದೇ ಹಿನ್ನೆಲೆಯಲ್ಲಿಟ್ಟು ನೋಡಬೇಕು. ಅದು ಮಾತ್ರವಲ್ಲ, ಹಿಂದುತ್ವ ಸಂಘಟನೆಗಳು ನಾಡಿನ ಯಾವ ಮೂಲೆಯಲ್ಲಿಯೂ ಕಾನೂನು ಕೈಗೆತ್ತಿಕೊಳ್ಳಲು ಹಿಂದೆ ಮುಂದೆ ನೋಡುತ್ತಿಲ್ಲ. ದಕ್ಷಿಣ ಕನ್ನಡ ಸೇರಿ ಕರಾವಳಿಯಾದ್ಯಂತ ಹೆಚ್ಚಿರುವ ಹಿಂದುತ್ವ ನೈತಿಕ ಗೂಂಡಾಗಿರಿ ಇರಬಹುದು, ಧಾರವಾಡದಲ್ಲಿ ಶ್ರೀರಾಮಸೇನೆ ಕಾರ್ಯಕರ್ತರು ಮುಸ್ಲಿಂ ವರ್ತಕರ ಕಲ್ಲಂಗಡಿಗಳನ್ನು ಒಡೆದು ಹಾಕಿ ರಾದ್ಧಾಂತ ಮಾಡುವಾಗಲೂ ಕಾನೂನಿನ ಭಯ ಇಲ್ಲದಂತೆ ವರ್ತಿಸುತ್ತಿದ್ದಾರೆ. ಬಹುಷ, ಬೊಮ್ಮಾಯಿ ಗೃಹಸಚಿರಾಗಿದ್ದಾಗ ʼಹಿಂದುತ್ವ ಗೂಂಡಾಗಳ ಬಳಿ ನಿಮ್ಮ ಮೇಲಿನ ಪ್ರಕರಣಗಳನ್ನು ಹಿಂಪಡೆಯುತ್ತೇನೆʼ ಎಂದು ಹೇಳಿದ್ದು, ಅವರೇ ಇದೀಗ ಸಿಎಂ ಆಗಿರುವುದರಿಂದ ಈ ಗೂಂಡಾಗಳಿಗೆ ಇನ್ನಷ್ಟು ಬಲ ಬಂಧಂತಾಗಿದೆ.
ಮಾತ್ರವಲ್ಲದೆ, ಬಹುಸಂಖ್ಯಾತ ಕೋಮುವಾದದ ಗೂಂಡಾಗಿರಿಯನ್ನು ʼಕ್ರಿಯೆಗೆ ಪ್ರತಿಕ್ರಿಯೆʼ ಎಂದು ಸರಳೀಕರಿಸಿ ನರೇಟಿವ್ ಅನ್ನು ಸ್ವತಃ ಸಿಎಂ ಕಟ್ಟಿಕೊಟ್ಟಿರುವಾಗ, ಗೂಂಡಾಗಿರಿಗೆ ಅಧಿಕೃತ ಒಪ್ಪಿಗೆ ಸಿಕ್ಕಂತಾಯಿತಲ್ಲವೇ? ಅದರ ಪರಿಣಾಮವನ್ನೇ ರಾಜ್ಯದ ಜನತೆ ಈಗ ಅನುಭವಿಸುತ್ತಿರುವುದು.
ಅದು ಹಿಜಾಬ್ ಇರಲಿ, ಹಲಾಲ್, ಆಜಾನ್, ವಕ್ಫ್, ವ್ಯಾಪಾರ ಏನೇ ಇರಲಿ.. ಮುಸ್ಲಿಮರ ಮೇಲೆ ಸಂಘಟಿತ ದಾಳಿ ನಡೆಸಲು ಬಹುಸಂಖ್ಯಾತ ಕೋಮುವಾದಿಗಳಿಗೆ ಬೇಕಾದ ಎಲ್ಲಾ ಪೂರಕ ವಾತಾವರಣವನ್ನು ದಿವಂಗತ ಎಸ್ ಆರ್ ಬೊಮ್ಮಾಯಿ ಅವರ ಪುತ್ರ ಸಿಎಂ ಬೊಮ್ಮಾಯಿ ನೇತೃತ್ವದ ಸರ್ಕಾರ ಮಾಡಿ ಕೊಟ್ಟಿದೆ. ಸ್ವಂತ ಬಲದಲ್ಲಿ ಸರ್ಕಾರ ರಚಿಸುವಷ್ಟು ತಾಕತ್ತು ಇಲ್ಲದ ಸಿಎಂ ಬೊಮ್ಮಾಯಿಗೆ ಓರ್ವ ಆಡಳಿತಾಧಿಕಾರಿಗೆ ಇರಬೇಕಾದ ಕನಿಷ್ಟ ಲಜ್ಜೆಯೂ, ನಾಗರಿಕ ಜವಾಬ್ದಾರಿಯೂ ಇದ್ದಂತೆ ಕಾಣಿಸುತ್ತಿಲ್ಲ. ಹಾಗಾಗಿ, ತಮ್ಮ ತಂದೆಯವರ ಹೆಸರಿಗೆ ಮಸಿ ಬಳಿದಂತಾಗುತ್ತದೆ ಎಂಬ ಅರಿವಾದರೂ ಅವರನ್ನು ಇಂತಹ ಕುಟಿಲ ರಾಜಕಾರಣದಿಂದ ತಡೆದು ನಿಲ್ಲಿಸಲಿ ಎಂಬ ಉದ್ಧೇಶಕ್ಕಾಗಿ ಅವರ ತಂದೆಯ ಹೆಸರನ್ನು ಇಲ್ಲಿ ಉಲ್ಲೇಖಿಸಬೇಕಾಯಿತು ಅಷ್ಟೇ.!
ಸಿಎಂ ಬೊಮ್ಮಾಯಿ ಆಡಳಿತ ರಾಜ್ಯದ ಸಾಮಾಜಿಕ ವಾತಾವರಣವನ್ನು ಯಾವ ಮಟ್ಟಿಗೆ ಕುಲಗೆಡಿಸಿದೆಯೋ ಅದೇ ಮಟ್ಟಕ್ಕೆ ರಾಜ್ಯದ ಆರ್ಥಿಕ ಸ್ಥಿತಿಗತಿಯ ಮೇಲೂ ಪರಿಣಾಮ ಬೀರಿದೆ. ಸಾಮಾಜಿಕ-ರಾಜಕೀಯ-ಆರ್ಥಿಕ ಹಾಗೂ ಸಾಂಸ್ಕೃತಿಕ ವೇದಿಕೆಗಳೂ ಒಂದಕ್ಕೊಂದು ಬೆಸೆದುಕೊಂಡಿರುವಾಗ ಒಂದರ ಪರಿಣಾಮ ಇನ್ನೊಂದರ ಮೇಲೆ ಬೀರುವುದು ಸಹಜವೇ ಆಗಿದೆ. ಮುಸ್ಲಿಂ ವ್ಯಾಪಾರಸ್ಥರನ್ನು, ಚಾಲಕರನ್ನು ಬಹಿಷ್ಕರಿಸಿ ಎಂದು ಈಗಾಗಲೇ ಆಂದೋಲನ ಮಾಡಿರುವುದರಿಂದ ಇದುವರೆಗೂ ಮುಂದುವರೆದಿದ್ದ ಸಾಂಪ್ರದಾಯಿಕ ಅಭ್ಯಾಸಗಳ ಮೇಲೆ ತೀವ್ರ ಪೆಟ್ಟು ಬೀಳುತ್ತದೆ. ಇದು ಮೇಲೆ ಹೇಳಿದ ಎಲ್ಲಾ ಕ್ಷೇತ್ರಗಳ ಮೇಲೂ ಪರಿಣಾಮ ಬೀರಿದೆ. ಉದಾಹರಣೆಗೆ, ಹಲಾಲ್ ಮಾಂಸ ಕೊಳ್ಳಬೇಡಿ ಎಂಬ ಹಿಂದುತ್ವದ ಅಭಿಯಾನದಿಂದ ಆತಂಕಿತರಾಗಿರುವ ಬಹುಪಾಲು ಮುಸ್ಲಿಂ ವರ್ತಕರು ತಮ್ಮ ವ್ಯಾಪಾರದ ವ್ಯಾಪ್ತಿಯನ್ನು ಸೀಮಿತಗೊಳಿಸಿದ್ದಾರೆ. ಮುಸ್ಲಿಂ ವರ್ತಕರನ್ನು ಹಾಗೂ ರಂಜಾನ್ ಅವಧಿಯನ್ನೇ ಗಮನದಲ್ಲಿಟ್ಟು ಕುರಿ, ಕೋಳಿ ಸಾಕಿದ ಹೈನುಗಾರರು ಇದೀಗ ಕೊಳ್ಳುವವರಿಲ್ಲದೆ ಹೊಡೆತ ಅನುಭವಿಸಿದ್ದಾರೆ.
ಈ ಹಿಂದೆ ಗೋ ಹತ್ಯೆ ನಿಷೇಧವನ್ನು ಜಾರಿಗೆ ತಂದಾಗಲೂ ಇದರ ನೇರ ಪರಿಣಾಮವನ್ನು ಅನುಭವಿಸಿದ್ದು ತಳಸ್ತರದಲ್ಲಿ ಹಸುಗಳನ್ನು ಪೋಷಿಸುವ ರೈತ ಸಮುದಾಯ. ಆದರೆ, ಹಿಂದೂ ಭಾವನೆಗಳು ಎಂಬ ಭ್ರಮೆಯನ್ನು ತೇಲಿಸಿ ಆ ಸಮುದಾಯ ತಮಗಾಗುತ್ತಿರುವ ಕಷ್ಟವನ್ನು ಬಹಿರಂಗವಾಗಿ ಹೇಳದಂತಹ ವಾತಾವರಣವನ್ನು ಇಲ್ಲಿ ವ್ಯವಸ್ಥಿತವಾಗಿ ಸೃಷ್ಟಿಸಲಾಗಿತ್ತು.
ಒಂದು ಪಕ್ಷವನ್ನು ವಿರೋಧಿಸಿದರೆ ಧರ್ಮ ದ್ರೋಹಿಯೆಂದೂ, ಅದರ ನೀತಿಗಳನ್ನು ವಿರೋಧಿಸಿದರೆ ದೇಶದ್ರೋಹಿಗಳೆಂದು ಕರೆದು ಬಾಯಿ ಮುಚ್ಚಿಸುವಾಗ ಸಾಮಾನ್ಯ ಜನರು ಹೇಗೆ ಪ್ರತಿಕ್ರಿಯಿಸಬೇಕೆಂದು ಗೊತ್ತಾಗದೆ ದಿಕ್ಕು ತೋಚಿದ್ದಾರೋ ಅಥವಾ ಜನಪ್ರಿಯಗೊಳ್ಳುತ್ತಿರುವ ಧ್ವೇಷದ ಅಲೆಯಲ್ಲಿ ತಾವೂ ಕೊಚ್ಚಿಕೊಂಡಿ ಹೋಗಿದ್ದಾರೋ ಅನ್ನುವುದಕ್ಕೆ ಕಾದು ನೋಡಬೇಕು. ಅದೇನೇ ಇದ್ದರೂ, ಹಿಂದುತ್ವ ಪಡೆಯ ಅತಿರೇಕದ ಬಹಿಷ್ಕಾರಗಳಿಂದ ನೇರ ಸಂತ್ರಸ್ತರಾಗುತ್ತಿರುವ ಹಿಂದೂ ಸಮುದಾಯವೇ ದೊಡ್ಡ ಮಟ್ಟದ ಪ್ರತಿರೋಧ ತೋರುವುದು ಎಲ್ಲೂ ಕಂಡು ಬಂದಿಲ್ಲ.
ವಿಷಯ ಇರುವುದು ಅದಲ್ಲ. ಎಷ್ಟೇ ಮುಸ್ಲಿಂ ವಿರೋಧಿ ಮನಸ್ಥಿತಿಯನ್ನು ವ್ಯಾಪಕಗೊಳಿಸಿದರೂ ಸರ್ಕಾರಕ್ಕೆ ತನ್ನ ನಿಜದ ವೈಫಲ್ಯವನ್ನು ಬಚ್ಚಿಡಲು ಸಾಧ್ಯವಾಗುತ್ತಿಲ್ಲ. ಏರುತ್ತಿರುವ ಬೆಲೆಗಳು, ನಿರುದ್ಯೋಗ ಸಮಸ್ಯೆಗಳ ಬಗೆಗಿನ ಚರ್ಚೆಗಳನ್ನು ಪ್ರತಿಪಕ್ಷಗಳು ಚಾಲ್ತಿಗೆ ತರಲು ಒಂದೆಡೆ ಪ್ರಯತ್ನಿಸುತ್ತಿದ್ದಂತೆಯೇ, ಇನ್ನೊಂದೆಡೆ ಕೋಮುವಾದದ ಅನಿವಾರ್ಯತೆ ಇಲ್ಲದಿರುವ ಬಂಡವಾಳಶಾಹಿ ವ್ಯವಸ್ಥೆಯೂ ಸರ್ಕಾರಕ್ಕೆ ಗಂಟಲ ಮುಳ್ಳಾಗುವಂತಹ ಚರ್ಚೆಗಳನ್ನು ಚಾಲ್ತಿಗೆ ತರುತ್ತಿದೆ.
ಹಲವು ವಿಚಾರಗಳಲ್ಲಿ ಮೋದಿ ನಿಲುವಿನ ಪರವಿದ್ದ ಉದ್ಯಮಿ ಟಿಎ ಮೋಹನದಾಸ ಪೈ ಅಂತವರೂ ಬೆಂಗಳೂರನ್ನು ದೆಹಲಿ ಕಡೆಗಣಿಸುತ್ತಿದೆ ಎಂದು ಹೇಳಿಕೆ ನೀಡಿದ್ದರೆ, ಇನ್ನೋರ್ವ ಉದ್ಯಮಿ ಕಿರಣ್ ಮಜುಮ್ದಾರ್ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಕೋಮು ಧ್ವೇಷದ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಯುವ ಉದ್ಯಮಿಗಳಾದ ರವೀಶ್ ನರೇಶ್, ನಿಖಿಲ್ ಕುಮಾರ್ ಮೊದಲಾದವರೂ ಬೆಂಗಳೂರಿನ ಮೂಲಭುತ ಸೌಕರ್ಯಗಳ ಕೊರತೆಯನ್ನು ಎತ್ತಿ ತೋರಿಸಿ ತಮ್ಮ ಕಾಳಜಿಯನ್ನು ವ್ಯಕ್ತಪಡಿಸಿದ್ದಾರೆ. ಉದ್ಯಮಿಗಳ ಅಹವಾಲನ್ನು ಮುಂದಿಟ್ಟೇ ಪಕ್ಕದ ತೆಲಂಗಾಣ, ತಮಿಳುನಾಡು ಸರ್ಕಾರಗಳು ಬೆಂಗಳೂರಿನಿಂದ ಅವರ ರಾಜ್ಯಗಳಿಗೆ ಉದ್ದಿಮೆಗಳಿಗೆ ಆಹ್ವಾನ ನೀಡಿದ್ದಾರೆ. ರಾಜಧಾನಿಯಿಂದ ಅವಕಾಶಗಳು ಪಕ್ಕದ ರಾಜ್ಯಗಳ ಪಾಲಾಗುತ್ತವೋ ಇಲ್ಲವೋ ಕರ್ನಾಟಕದ ಬಗೆಗಿನ ನೋಟಕ್ರಮಗಳು ನೆರೆ ರಾಜ್ಯದವರಲ್ಲಿ ಬದಲಾಗುತ್ತಿದೆ, ವಿಶ್ವ ದರ್ಜೆಯ ನಗರವನ್ನು ರಾಜಧಾನಿಯಾಗಿ ಹೊಂದಿರುವ ರಾಜ್ಯವನ್ನು ʼದಕ್ಷಿಣದ ಉತ್ತರಪ್ರದೇಶʼ ಎಂದು ಹೇಳುವಂತಹ ಅಧೋಗತಿಗೆ ತಂದಿಟ್ಟ ಕರ್ನಾಟಕ ಬಿಜೆಪಿ ಸರ್ಕಾರಕ್ಕೆ ಎಲ್ಲ ರೀತಿಯ ಧನ್ಯವಾದ..!