ಸಿಎಂ ಲಾಠಿ ಹಿಡ್ಕೊಂಡು ಬೀದಿಯಲ್ಲಿ ನಿಲ್ಬೇಕಾ? ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ್ ಪ್ರಶ್ನಿಸಿದರು.
ಗದಗನಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸೌಹಾರ್ಧತೆಗಾಗಿ ಸರ್ಕಾರ ಎಲ್ಲಿ ಸುಮ್ನೆ ಕುಳಿತಿದೆ? ಸಿಎಂ ಬಸವರಾಜ್ ಬೊಮ್ಮಾಯಿನೂ ಹೌದು. ಬಸವಣ್ಣನೂ ಹೌದು. ಆದ್ರೆ ಮೂಕ ಬಸವಣ್ಣ ಅಲ್ಲ. ಹಾಗಂತ ಸಿಎಂ ಲಾಠಿ ಹಿಡ್ಕೊಂಡು ಬೀದಿಯಲ್ಲಿ ನಿಲ್ಬೇಕಾ? ಎಂದು ಪ್ರಶ್ನಿಸಿದ್ದಾರೆ.
ಯಾರೋ ಏನೋ ಹೇಳಿದ್ರೂ ಅಂತ ಬೀದಿಯಲ್ಲಿ ಸಿಎಂ ಹೋಗಿ ಲಾಠಿ ಹಿಡ್ಕೊಂಡು ನಿಲ್ಲೋಕೆ ಆಗಲ್ಲ, ಅದರ ಅಗತ್ಯತೆ ಇಲ್ಲ. ಕಾನೂನು ಸುವ್ಯವಸ್ಥೆ ಬಗ್ಗೆ ಏನೇನೂ ಕ್ರಮ ಕೈಗೊಳ್ಳಬೇಕು ಎಲ್ಲ ಕ್ರಮ ಸಿಎಂ ಕೈಗೊಂಡಿದ್ದಾರೆ. ಅದೆಲ್ಲವೂ ಅಧಿಕಾರಿಗಳು ಅನುಷ್ಠಾನಕ್ಕೆ ತರ್ತಾರೆ. ಮಧ್ಯೆ ರಸ್ತೆಯಲ್ಲಿ ನಿತ್ಕೊಂಡು ಸಿಎಂ ಮಾತೋಡೋ ಅವಶ್ಯಕತೆ ಇಲ್ಲ ಎಂದು ಕಿಡಿಕಾರಿದರು.
ಎಲ್ಲರೂ ಸೌಹಾರ್ದಯತವಾಗಿ ಬದುಕಬೇಕು ಅನ್ನೋದು ಎಲ್ಲರ ಆಶಯ. ಸಂವಿಧಾನ ಬದ್ಧವಾಗಿ ಎಲ್ಲರೂ ಅವರವರ ಧರ್ಮ ಆಚರಣೆ ಮಾಡಬಹುದು. ಆದ್ರೆ ಒಂದು ಧರ್ಮದವ್ರು ಇನ್ನೊಂದು ಧರ್ಮಕ್ಕೆ ತೊಂದರೆ ಕೊಡೋದು ಸರಿಯಲ್ಲ ಎಂದರು.

ರಾಜ್ಯದಲ್ಲಿ ನಡೆದಿರೋದು ಸರ್ಕಾರದ ಪ್ರಾಯೋಜಿತ ಹೋರಾಟ ಎಂಬ ಬಿ.ಕೆ. ಹರಿಪ್ರಸಾದ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ಅವರು, ಅವ್ರ ಪ್ರಶ್ನೆಗಳಿಗೆ ನಾನು ಉತ್ತರ ಕೊಡಬೇಕಾ? ಹರಿಪ್ರಸಾದ, ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಾಯಕರಿಗೆ ಮಾಡೋಕೆ ಕೆಲಸ ಇಲ್ಲ. ಹೀಗಾಗಿ ವಿನಾಕಾರಣ ಬಿಜೆಪಿ ಮೇಲೆ ಗೂಬೆ ಕೂರಿಸೋ ಕೆಲಸ ಮಾಡ್ತಾರೆ. ನಮಗೆ ಜನಸೇವೆ ಮಾಡೋಕೆ ಕೆಲಸವಿದೆ ಎಂದು ಹೇಳಿದ್ದಾರೆ.
ಉಕ್ರೇನ್, ರಷ್ಯಾ ಯುದ್ಧ ಹಿನ್ನೆಲೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಿದೆ. ಮುಂದಿನ ದಿನಗಳಲ್ಲಿ ಬೆಲೆ ಏರಿಕೆ ಕಡಿಮೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.