ಬೆಂಗಳೂರು: ಜೆಡಿಎಸ್ನಿಂದ(JDS) ಉಚ್ಛಾಟನೆಗೊಂಡಿದ್ದ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ(CM Ibrahim) ಹೊಸ ಪ್ರಾದೇಶಿಕ ಪಕ್ಷ ಅಸ್ತಿತ್ವಕ್ಕೆ ತರುವ ಬಗ್ಗೆ ಬಹಿರಂಗವಾಗಿ ಘೋಷಿಸಿದ್ದಾರೆ.

ಕಲಬುರಗಿಯಲ್ಲಿ ನಡೆದ ನವ ಕರ್ನಾಟಕ ಆಂದೋಲನದ ಸಭೆ ಬಳಿಕ ಮಾತನಾಡಿದ ಅವರು, ಸಮಾನ ಮನಸ್ಕರೊಂದಿಗೆ ಚರ್ಚೆ ನಡೆಸಿ 2026ರ ಜನವರಿ 24ರಂದು ಹೊಸ ಪಕ್ಷ ಘೋಷಣೆ ಮಾಡಿ, ಪಕ್ಷದ ಚಿಹ್ನೆಯನ್ನೂ ಬಿಡುಗಡೆ ಮಾಡಲಾಗುವುದು ಎಂದರು. ಅಲ್ಲದೇ ಬಸವಣ್ಣ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಅವರ ಆದರ್ಶಗಳ ಅನುಸರಿಸಿ ಹೊಸ ಪಕ್ಷ ರಚಿಸಲಾಗುವುದು ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ದಲಿತ ಮತ್ತು ಮುಸ್ಲಿಮರನ್ನು ಮುಖ್ಯಮಂತ್ರಿ ಮಾಡುವುದಾಗಿ ಹೇಳುವ ಧೈರ್ಯ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಿಗಿಲ್ಲ. ಇದೇ ಕಾರಣಕ್ಕಾಗಿ ಹೊಸ ಪಕ್ಷ ಸ್ಥಾಪಿಸಿ ನಮ್ಮ ಪಕ್ಷದಿಂದಲೇ ಮುಸ್ಲಿಂ ಮತ್ತು ದಲಿತರನ್ನು ಮುಖ್ಯಮಂತ್ರಿ ಮಾಡುತ್ತೇನೆ. ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್‌ನ ಹಲವಾರು ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ. ರಾಜ್ಯದ ಹಿತ ದೃಷ್ಟಿಯಿಂದ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳಿಗೆ ಪರ್ಯಾಯವಾಗಿ ತೃತೀಯ ರಂಗ ರಚಿಸಲಾಗುವುದು ಎಂದು ಹೇಳಿದ್ದಾರೆ.






