ರಾಜ್ಯದ ಬಿಜೆಪಿ ಸರ್ಕಾರದಲ್ಲಿ ಸಚಿವ ಸಂಪುಟ ವಿಸ್ತರಣೆ, ಖಾತೆಗಳ ಹಂಚಿಕೆ ಮುಗಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇದೀಗ ಅವೆಲ್ಲಕ್ಕಿಂತ ಜಟಿಲವಾದ ಜಿಲ್ಲಾ ಉಸ್ತುವಾರಿ ಹಂಚಿಕೆ ಎಂಬ ಜೇನುಗೂಡಿಗೆ ಕೈಹಾಕುತ್ತಿದ್ದಾರೆ. ಮೇಲ್ನೋಟಕ್ಕೆ ಸಚಿವರಿಗೆ ಜಿಲ್ಲಾ ಉಸ್ತುವಾರಿ ವಹಿಸುವುದು ದೊಡ್ಡ ಕೆಲಸವಲ್ಲದೇ ಇದ್ದರೂ ಈ ಸರ್ಕಾರದಲ್ಲಿ ಹೊಸ ಮತ್ತು ವಲಸೆ ಸಚಿವರು ಎಂಬ ಎರಡು ಗುಂಪುಗಳಿರುವುದರಿಂದ ಸಚಿವರಿಗೆ ಜಿಲ್ಲೆಗಳ ಉಸ್ತುವಾರಿ ಹಂಚಿಕೆ ದೊಡ್ಡ ಸವಾಲೇ ಆಗಿದೆ. ಅದರಲ್ಲೂ ಬೆಳಗಾವಿ, ಬಳ್ಳಾರಿ,ಹಾವೇರಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಉಸ್ತುವಾರಿ ಬಿಸಿ ತುಪ್ಪವಾಗಿದ್ದು, ಇದು ಸರ್ಕಾರ ಮಾತ್ರವಲ್ಲ, ಪಕ್ಷದ ಮೇಲೂ ಪರಿಣಾಮ ಬೀರುವುದರಿಂದ ಸ್ವಲ್ಪ ಎಡವಿದರೂ ತಳಮಟ್ಟದಲ್ಲಿ ಬಿಜೆಪಿ ಪಕ್ಷಕ್ಕೆ ಮುಳುವಾಗುವ ಸಾಧ್ಯತೆ ಇದೆ.
ರಾಜ್ಯದಲ್ಲಿ 30 ಜಿಲ್ಲೆಗಳಿದ್ದು, ಇದುವರೆಗೆ ಮುಖ್ಯಮಂತ್ರಿ ಸೇರಿದಂತೆ 18 ಸಚಿವರಿಗೆ ಅವುಗಳನ್ನು ಹಂಚಿಕೆ ಮಾಡಲಾಗಿತ್ತು. ಇದೀಗ ಸಂಪುಟ ವಿಸ್ತರಣೆ ಬಳಿಕ ಸಚಿವ ಸಂಖ್ಯೆ 28 ಆಗಿದ್ದು, ಎರಡು ಜಿಲ್ಲೆ ಹೊರತಾಗಿ ಉಳಿದೆಲ್ಲಾ ಜಿಲ್ಲೆಯ ಉಸ್ತುವಾರಿಯನ್ನು ಒಬ್ಬರಿಗೆ ವಹಿಸಬಹುದು. ಆದರೆ, ಯಾರಿಗೆ ಯಾವ ಜಿಲ್ಲೆಯನ್ನು ನೀಡಬೇಕೆಂಬುದೇ ದೊಡ್ಡ ಸವಾಲಾಗಲಿದ್ದು, ಅದನ್ನು ಎದುರಿಸಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನೇಮಕ ಮಾಡಬಹುದಾದರೂ ಭವಿಷ್ಯದಲ್ಲಿ ಜಿಲ್ಲೆಗಳಲ್ಲಿ ಪಕ್ಷದ ಮೇಲೆ ಆ ಪ್ರಕ್ರಿಯೆ ಪರಿಣಾಮ ಬೀರುತ್ತದೆ. ಒಂದೊಮ್ಮೆ ಪ್ರತೀಕೂಲ ಪರಿಣಾಮ ಬೀರಿದರೆ ರಾಜಕೀಯವಾಗಿ ಹಿನ್ನಡೆ ಅನುಭವಿಸಬೇಕಾಗುತ್ತದೆ.
ಬೆಂಗಳೂರು ನಗರ ಜಿಲ್ಲೆಯಿಂದ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಸೇರಿದಂತೆ ಆರ್.ಅಶೋಕ, ವಿ.ಸೋಮಣ್ಣ, ಎಸ್.ಸುರೇಶ್ ಕುಮಾರ್, ಭೈರತಿ ಬಸವರಾಜು, ಕೆ.ಗೋಪಾಲಯ್ಯ, ಎಸ್.ಟಿ.ಸೋಮಶೇಖರ್ ಅವರು ಸಂಪುಟವನ್ನು ಪ್ರತಿನಿಧಿಸುತ್ತಿದ್ದಾರೆ. ಹಿಂದೆ ನಾಲ್ವರು ಸಚಿವರಿದ್ದಾಗಲೇ ಉಸ್ತುವಾರಿಗೆ ಪೈಪೋಟಿ ಹೆಚ್ಚಾಗಿದ್ದರಿಂದ ಮುಖ್ಯಮಂತ್ರಿಗಳೇ ಬೆಂಗಳೂರು ನಗರ ಜಿಲ್ಲೆಯ ಉಸ್ತುವಾರಿಯನ್ನು ಇಟ್ಟುಕೊಂಡಿದ್ದರು. ಬೆಂಗಳೂರು ನಗರಾಭಿವೃದ್ಧಿ ಖಾತೆಯೂ ಮುಖ್ಯಮಂತ್ರಿಗಳ ಬಳಿಯೇ ಇರುವುದರಿಂದ ಜಿಲ್ಲಾ ಉಸ್ತುವಾರಿಯನ್ನು ಅವರೇ ನೋಡಿಕೊಳ್ಳಬಹುದು.
ಇನ್ನು ಬೆಂಗಳೂರು ಗ್ರಾಮಾಂತರ ಮತ್ತು ಮಂಡ್ಯ ಜಿಲ್ಲೆಯ ಉಸ್ತುವಾರಿಯನ್ನು ಆರ್.ಅಶೋಕ ಅವರಿಗೆ ವಹಿಸಿದ್ದರು. ಇದೀಗ ಬೆಂಗಳೂರು ಗ್ರಾಮಾಂತರದಿಂದ ಯಾರೂ ಇಲ್ಲದ ಕಾರಣ ಈ ಉಸ್ತುವಾರಿ ಅಶೋಕ್ ಅವರಲ್ಲೇ ಇರಲಿದೆ. ಆದರೆ, ಮಂಡ್ಯ ಜಿಲ್ಲೆ ನಾರಾಯಣಗೌಡ ಅವರ ಪಾಲಾಗಬಹುದು. ಇನ್ನು ಬಾಗಲಕೋಟೆ ಜಿಲ್ಲೆಯಿಂದ ಗೋವಿಂದ ಕಾರಜೋಳ ಅವರೊಬ್ಬರೇ ಸಚಿವರಾಗಿದ್ದು, ಅಲ್ಲಿಯೂ ಸಮಸ್ಯೆಯಾಗದು. ಅದೇ ರೀತಿ ಚಿಕ್ಕಬಳ್ಳಾಪುರದಿಂದ ಡಾ.ಸುಧಾಕರ್ ಸಚಿವರಾಗಿದ್ದು, ಅವರಿಗೆ ಆ ಜಿಲ್ಲೆಯ ಉಸ್ತುವಾರಿ ಸಿಗಬಹುದು. ಕೋಲಾರ ಜಿಲ್ಲಾ ಉಸ್ತುವಾರಿ ಎಚ್.ನಾಗೇಶ್ ಅವರಲ್ಲೇ ಮುಂದುವರಿಯಲಿದೆ. ಕೊಪ್ಪಳ, ಶಿವಮೊಗ್ಗ, ದಾವಣಗೆರೆ, ಬೀದರ್, ಹುಬ್ಬಳ್ಳಿ-ಧಾರವಾಡ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ತುಮಕೂರು, ಹಾಸನ, ಗದಗ, ವಿಜಯಪುರ ಜಿಲ್ಲೆಗಳ ಉಸ್ತುವಾರಿ ಬಗ್ಗೆಯೂ ಯಾವುದೇ ಗೊಂದಲ ಇಲ್ಲ.
ನಾಲ್ಕು ಜಿಲ್ಲೆಗಳಲ್ಲಿ ಉಸ್ತುವಾರಿ ಸಚಿವರ ನೇಮಕ ಏಕೆ ಕಷ್ಟ?
ಆದರೆ, ಬೆಳಗಾವಿ, ಹಾವೇರಿ, ಬಳ್ಳಾರಿ, ಉತ್ತರ ಕನ್ನಡ ಮತ್ತು ಚಿತ್ರದುರ್ಗ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರ ನೇಮಕ ಮುಖ್ಯಮಂತ್ರಿಗಳ ಪಾಲಿಗೆ ಕಬ್ಬಿಣದ ಕಡಲೆಯಾಗುವುದರಲ್ಲಿ ಸಂಶಯವೇ ಇಲ್ಲ. ಏಕೆಂದರೆ, ಬೆಳಗಾವಿ ಜಿಲ್ಲೆಯಲ್ಲಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸೇರಿದಂತೆ ರಮೇಶ್ ಜಾರಕಿಹೊಳಿ, ಶಶಿಕಲಾ ಜೊಲ್ಲೆ, ಶ್ರೀಮಂತ ಪಾಟೀಲ್ ಸಚಿವರಾಗಿದ್ದಾರೆ. ಹಿಂದೆ ಲಕ್ಷ್ಮಣ ಸವದಿ ಅವರು ಸಚಿವರಾಗಿದ್ದರೂ ಅವರಿಗೆ ಬಳ್ಳಾರಿ ಜಿಲ್ಲೆಯ ಉಸ್ತುವಾರಿ ವಹಿಸಲಾಗಿತ್ತು. ಬೆಳಗಾವಿ ಜಿಲ್ಲಾ ಉಸ್ತುವಾರಿಯನ್ನು ಜಗದೀಶ್ ಶೆಟ್ಟರ್ ಅವರಿಗೆ ವಹಿಸಲಾಗಿತ್ತು. ಈ ಬಾರಿ ಸಚಿವರಿದ್ದರೂ ಶೆಟ್ಟರ್ ಅವರಲ್ಲೇ ಬೆಳಗಾವಿ ಜಿಲ್ಲಾ ಉಸ್ತುವಾರಿ ಮುಂದುವರಿಸಲು ಉಳಿದ ನಾಲ್ವರು ಒಪ್ಪುವುದು ಕಷ್ಟ. ಒಂದೊಮ್ಮೆ ರಮೇಶ್ ಜಾರಕಿಹೊಳಿ ಅವರಿಗೆ ಜಿಲ್ಲಾ ಉಸ್ತುವಾರಿ ವಹಿಸಿದರೆ ಲಕ್ಷ್ಮಣ ಸವದಿ ಅಸಮಾಧಾನಗೊಳ್ಳಬಹುದು. ಬಳ್ಳಾರಿ ಬದಲು ನನಗೇ ಬೆಳಗಾವಿ ಕೊಡಿ ಎಂದು ಕೇಳಬಹುದು. ಅದೇ ಜಿಲ್ಲೆಯ ಉಮೇಶ್ ಕತ್ತಿ ಈ ಬಾರಿ ಸಚಿವರಾಗಬೇಕಿತ್ತಾದರೂ ಕಾರಣಾಂತರಗಳಿಂದ ಅದು ಕೈತಪ್ಪಿದೆ. ಮುಂದಿನ ದಿನಗಳಲ್ಲಿ ಸಚಿವರಾಗುವ ಕನಸು ಕಾಣುತ್ತಿರುವ ಉಮೇಶ್ ಕತ್ತಿ, ಜಿಲ್ಲಾ ಉಸ್ತುವಾರಿಯನ್ನು ರಮೇಶ್ ಜಾರಕಿಹೊಳಿ ಅವರಿಗೆ ನೀಡಿದರೆ ಮುಖ್ಯಮಂತ್ರಿಗಳ ವಿರುದ್ಧ ತಿರುಗಿ ಬೀಳಬಹುದು. ಜಿಲ್ಲೆಯಲ್ಲಿ ಜಾರಕಿಹೊಳಿ ಮತ್ತು ಕತ್ತಿ ಕುಟುಂಬಗಳು ರಾಜಕೀಯವಾಗಿ ಎರಡು ಪ್ರಬಲ ಕುಟುಂಬಗಳಾಗಿದ್ದು, ಯಾವ ಕುಟುಂಬಕ್ಕೆ ಜಿಲ್ಲಾ ಉಸ್ತುವಾರಿ ಸಿಕ್ಕಿದರೂ ಇನ್ನೊಂದು ಕುಟುಂಬ ಅಸಮಾಧಾನಗೊಳ್ಳುತ್ತದೆ. ಹೀಗಾಗಿ ಬೆಳಗಾವಿಗೆ ಜಿಲ್ಲೆಯ ಯಾರನ್ನು ಉಸ್ತುವಾರಿ ಮಾಡುವುದು ಎಂಬುದು ಉತ್ತರ ಸಿಗದ ಪ್ರಶ್ನೆಯಾಗಿದೆ.
ಅದೇ ರೀತಿ ಹಾವೇರಿ ಜಿಲ್ಲೆಯಿಂದ ಬಸವರಾಜ ಬೊಮ್ಮಾಯಿ, ಬಿ.ಸಿ.ಪಾಟೀಲ್ ಸಚಿವರಾಗಿದ್ದಾರೆ. ಇದುವರೆಗೆ ಬಸವರಾಜ ಬೊಮ್ಮಾಯಿ ಅವರಿಗೆ ಹಾವೇರಿ ಜಿಲ್ಲಾ ಉಸ್ತುವಾರಿಯನ್ನು ಹೆಚ್ಚಿವರಿಯಾಗಿ ವಹಿಸಲಾಗಿತ್ತು. ಪ್ರಸ್ತುತ ಸಚಿವರಾಗಿರುವ ಬಿ.ಸಿ.ಪಾಟೀಲ್ ಅವರು ಹಾವೇರಿ ಜಿಲ್ಲಾ ಉಸ್ತುವಾರಿಯನ್ನು ಬಯಸುತ್ತಿದ್ದು, ಈಗಾಗಲೇ ಮುಖ್ಯಮಂತ್ರಿಗಳ ಮುಂದೆ ಬೇಡಿಕೆ ಇಟ್ಟಿದ್ದಾರೆ. ಬಸವರಾಜ ಬೊಮ್ಮಾಯಿ ಅವರಲ್ಲಿ ಹೆಚ್ಚುವರಿಯಾಗಿದ್ದ ಕೃಷಿ ಖಾತೆಯನ್ನು ತೆಗೆದು ಬಿ.ಸಿ.ಪಾಟೀಲ್ ಅವರಿಗೆ ವಹಿಸಿದಂತೆ ಹೆಚ್ಚುವರಿಯಾಗಿರುವ ಜಿಲ್ಲಾ ಉಸ್ತುವಾರಿಯನ್ನೂ ತೆಗೆದು ಪಾಟೀಲರಿಗೆ ಕೊಟ್ಟರೆ ಆಗ ಬಸವರಾಜ ಬೊಮ್ಮಾಯಿ ತಿರುಗಿ ಬೀಳುವುದು ಖಚಿತ. ಏಕೆಂದರೆ, ಒಂದೊಮ್ಮೆ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ತಪ್ಪಿದರೆ ಜಿಲ್ಲೆಯಲ್ಲಿ ತಮ್ಮ ಹತೋಟಿಯೂ ಕೈತಪ್ಪಿದಂತೆ. ಹೀಗಾಗಿ ತಮಗೆ ವಹಿಸಿರುವ ಉಡುಪಿ ಜಿಲ್ಲಾ ಉಸ್ತುವಾರಿಯನ್ನು ಬೇರೆಯವರಿಗೆ ಕೊಟ್ಟು ಹೆಚ್ಚುವರಿಯಾಗಿರುವ ಹಾವೇರಿ ಜಿಲ್ಲೆಯ ಉಸ್ತುವಾರಿಯನ್ನೇ ಖಾಯಂ ಮಾಡಿ ಎಂದು ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಗಳಲ್ಲಿ ಕೇಳಿಕೊಂಡಿದ್ದಾರೆ.
ಬಳ್ಳಾರಿ ಜಿಲ್ಲೆಯದ್ದೂ ಇದೇ ಪರಿಸ್ಥಿತಿ. ಮೂಲತಃ ಬಳ್ಳಾರಿ ಜಿಲ್ಲೆಯವರಾಗಿರುವ ಶ್ರೀರಾಮುಲು ಅವರು ಕಾರಣಾಂತರಗಳಿಂದ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಚಿತ್ರದುರ್ಗ ಜಿಲ್ಲೆಯಿಂದ ಸ್ಪರ್ಧಿಸಿ ಗೆದ್ದು ಸಚಿವರಾಗಿದ್ದಾರೆ. ಆದರೂ ಬಳ್ಳಾರಿ ಜಿಲ್ಲಾ ಉಸ್ತುವಾರಿಯನ್ನು ತಮಗೆ ನೀಡಬೇಕು ಎಂದು ಮೊದಲಿನಿಂದಲೂ ಕೇಳಿಕೊಂಡು ಬಂದಿದ್ದಾರೆ. ಜಿಲ್ಲೆಯ ಬಹುತೇಕ ಬಿಜೆಪಿ ಶಾಸಕರೂ ಶ್ರೀರಾಮುಲು ಅವರ ಪರವಾಗಿದ್ದಾರೆ. ಆದರೆ, ಆಗ ಬೆಳಗಾವಿ ಜಿಲ್ಲೆಯ ಲಕ್ಷ್ಮಣ ಸವದಿ ಅವರಿಗೆ ಬಳ್ಳಾರಿ ಜಿಲ್ಲೆಯ ಉಸ್ತುವಾರಿ ವಹಿಸಲಾಗಿತ್ತು. ಇದೀಗ ಬಳ್ಳಾರಿ ಜಿಲ್ಲೆಯಿಂದ ಆನಂದ್ ಸಿಂಗ್ ಸಚಿವರಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನವನ್ನೂ ಬಯಸಿದ್ದಾರೆ. ಒಂದೊಮ್ಮೆ ಜಿಲ್ಲೆಯಿಂದ ಗೆದ್ದಿದ್ದಾರೆ ಎಂಬ ಕಾರಣಕ್ಕೆ ಆನಂದ್ ಸಿಂಗ್ ಅವರಿಗೆ ಜಿಲ್ಲಾ ಉಸ್ತುವಾರಿ ನೀಡಿದರೆ ಆಗ ಶ್ರೀರಾಮುಲು ಮಾತ್ರವಲ್ಲ, ಬಳ್ಳಾರಿ ಜಿಲ್ಲೆಯಲ್ಲಿ ಶ್ರೀರಾಮುಲು ಬೆನ್ನಿಗೆ ನಿಂತಿರುವ ಬಿಜೆಪಿ ಶಾಸಕರು ತಿರುಗಿ ಬೀಳಬಹುದು. ಇದು ಭವಿಷ್ಯದಲ್ಲಿ ಪಕ್ಷದ ಮೇಲೆ ಪ್ರತೀಕೂಲ ಪರಿಣಾಮ ಬೀರಬಹುದು.
ಉತ್ತರ ಕನ್ನಡ ಜಿಲ್ಲೆಯದ್ದು ಸ್ವಲ್ಪ ಭಿನ್ನ ಪರಿಸ್ಥಿತಿ. ಇಲ್ಲಿ ಶಿವರಾಮ್ ಹೆಬ್ಬಾರ್ ಒಬ್ಬರೇ ಸಚಿವರಾಗಿದ್ದರೂ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸ್ಪೀಕರ್ ಆಗಿದ್ದಾರೆ. ಜಿಲ್ಲೆಯವರಿಗೇ ಉಸ್ತುವಾರಿ ನೀಡುವುದಾದರೆ ಅದು ಶಿವರಾಮ್ ಹೆಬ್ಬಾರ್ ಅವರಿಗೆ ಒಲಿಯುತ್ತದೆ. ಆದರೆ, ಜಿಲ್ಲೆಯ ಬಿಜೆಪಿ ಘಟಕದಲ್ಲಿ ಇದಕ್ಕೆ ವಿರೋಧವಿದೆ. ಕಾಂಗ್ರೆಸ್ ಮೂಲದವರಾದ ಶಿವರಾಮ್ ಹೆಬ್ಬಾರ್ ಬಿಜೆಪಿಗೆ ಬಂದಿರುವುದು ಅಧಿಕಾರಕ್ಕಾಗಿ. ಅಧಿಕಾರ ಇಲ್ಲದೇ ಇದ್ದರೆ ಅವರಿಗೆ ಯಾವ ಪಕ್ಷ ಎಂಬುದು ಮುಖ್ಯವಾಗುವುದಿಲ್ಲ. ಹೀಗಿರುವಾಗ ಅವರನ್ನು ಜಿಲ್ಲಾ ಉಸ್ತುವಾರಿಯಾಗಿ ನೇಮಿಸಿದರೆ ಪಕ್ಷದ ಕಾರ್ಯಕರ್ತರಿಗೆ ಸಮಾಧಾನವಾಗುವುದಿಲ್ಲ. ಆದ್ದರಿಂದ ಶಿವರಾಮ ಹೆಬ್ಬಾರ್ ಬದಲು ಬೇರೆಯವರನ್ನು ಉಸ್ತುವಾರಿಗಳಾಗಿ ನೇಮಕ ಮಾಡಿ ಎಂದು ಈಗಾಗಲೇ ಮುಖ್ಯಮಂತ್ರಿಗಳನ್ನು ಬಿಜೆಪಿ ಜಿಲ್ಲಾ ಘಟಕದವರು ಕೋರಿದ್ದಾರೆ. ಅದನ್ನು ಮೀರಿ ಶಿವರಾಮ್ ಹೆಬ್ಬಾರ್ ಅವರಿಗೆ ಜವಾಬ್ದಾರಿ ವಹಿಸಿದರೆ ಜಿಲ್ಲಾ ಮಟ್ಟದಲ್ಲಿ ಪಕ್ಷಕ್ಕೆ ಹಿನ್ನಡೆಯಾಗುವ ಆತಂಕವಿದೆ.
ಹೀಗಾಗಿ ಜಿಲ್ಲಾ ಉಸ್ತುವಾರಿಗಳ ನೇಮಕ ಎಂಬುದು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪಾಲಿಗೆ ಜೇನುಗೂಡಿಗೆ ಕೈಹಾಕವಂತಹ ಕೆಲಸವಾಗಿದ್ದು, ಸ್ವಲ್ಪ ಹೆಚ್ಚುಕಮ್ಮಿಯಾದರೂ ಜೇನುಗಳು ಎದ್ದು ಕಚ್ಚಬಹುದು. ಇಲ್ಲವೇ ಗೂಡು ಖಾಲಿ ಮಾಡಿ ಹೋಗಿ ಮುಂದೆ ಅಲ್ಲಿ ಜೇನು ಸಿಗದಂತ ಆಗಬಹುದು. ಸಂಪುಟ ವಿಸ್ತರಣೆ, ಖಾತೆ ಹಂಚಿಕೆ ಸವಾಲನ್ನು ಎದುರಿಸಿದ ಮುಖ್ಯಮಂತ್ರಿಗಳು ಈ ಸವಾಲನ್ನು ಹೇಗೆ ಎದುರಿಸುತ್ತಾರೆ ಎಂಬುದನ್ನು ಕಾದು ನೋಡಬೇಕು.