ಬೆಳಗಾವಿ, ಡಿಸೆಂಬರ್ 28 : ಕೈಗಾರಿಕಾ ಸಚಿವರಾಗಿ ಸುದೀರ್ಘ 10 ವರ್ಷ ಸೇವೆ ಸಲ್ಲಿಸಿದ ಕೀರ್ತಿ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಆರ್.ವಿ.ದೇಶಪಾಂಡೆಯವರಿಗೆ ಸಲ್ಲುತ್ತಿದ್ದು, ರಾಜ್ಯದಲ್ಲಿ ಕೈಗಾರಿಕಾ ಕ್ಷೇತ್ರದ ಅಭಿವೃದ್ಧಿಗೆ ಅಮೂಲ್ಯ ಕೊಡುಗೆ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬೆಳಗಾವಿ ವಿಧಾನಮಂಡಲ ಅಧಿವೇಶನದ ಸಂದರ್ಭದಲ್ಲಿ ಹಿರಿಯ ಶಾಸಕ ಆರ್. ವಿ. ದೇಶಪಾಂಡೆ ಅವರಿಗೆ 2022ರ ಅತ್ಯುತ್ತಮ ಶಾಸಕ ಪ್ರಶಸ್ತಿ ಪ್ರದಾನ ಮಾಡಿದ ನಂತರ ಮಾತನಾಡಿದ ಅವರು, ಕರ್ನಾಟಕದಲ್ಲಿ ಕೈಗಾರೀಕರಣ ಹಾಗೂ ಕೈಗಾರಿಕಾ ನೀತಿ ರೂಪಿಸುವುದರಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದಾರೆ. ಪ್ರಗತಿಪರವಾದ ಚಿಂತನೆಯುಳ್ಳವರು. ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಆರ್ಥಿಕತೆ ಬದಲಾವಣೆ, ಉದಾರೀಕರಣ ಹಾಗೂ ಜಾಗತೀಕರಣದ ಲಾಭವನ್ನು ರಾಜ್ಯಕ್ಕೆ ಲಭಿಸುವಂತೆ ಪ್ರಾಮಾಣಿಕ ಪರಿಶ್ರಮ ವಹಿಸಿದರು. ರಾಜ್ಯದಲ್ಲಿ ಟೊಯೊಟಾ ಕಾರ್ಖಾನೆಗೆ ರಿಯಾಯ್ತಿಗಳನ್ನು ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ರಾಜ್ಯದಲ್ಲಿ ದೊಡ್ಡ ಬದಲಾವಣೆಗಳನ್ನು ತರಲು ಶ್ರಮಿಸಿದ್ದಾರೆ ಎಂದರು.

ವಿವಿಧ ಖಾತೆಗಳಲ್ಲಿ ಸಚಿವರಾಗಿ ಸೇವೆ
ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದಾಗ, ಸಿದ್ದರಾಮಯ್ಯ, ದೇಶಪಾಂಡೆಯವರು, ಎಂಪಿಪ್ರಕಾಶ್ ಅವರನ್ನೂ ಸೇರಿದಂತೆ ತಮ್ಮ ತಮ್ಮ ಕ್ಷೇತ್ರದಲ್ಲಿ ಕೆಲಸಗಳನ್ನು ಮಾಡಿದ ದೊಡ್ಡ ತಂಡ 1983 ರಲ್ಲಿ ಬೆಳಕಿಗೆ ಬಂತು. ಇಡೀ ರಾಜಕಾರಣ ಬದಲಿಸಿದ ಸಮಯವಾಗಿತ್ತು. ಆ ತಂಡದಲ್ಲಿ ಆರ್.ವಿ.ದೇಶಪಾಂಡೆಯವರೂ ಒಬ್ಬರು. ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಯಾದ 2ನೇ ಮಂತ್ರಿಮಂಡಲ ವಿಸ್ತರಣೆಯಲ್ಲಿ ದೇಶಪಾಂಡೆಯವರನ್ನು ಸಚಿವರನ್ನಾಗಿ ಮಾಡಲಾಯಿತು. ಅಂದಿನಿಂದ ವಿವಿಧ ಖಾತೆಗಳಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ದಕ್ಷತೆ, ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿದ್ದಾರೆ.
ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಅವರು ಪ್ರಶಸ್ತಿ ಪ್ರದಾನ ಮಾಡಿದರು.











