ಬಿಜೆಪಿಯ 2018 ರ ಚುನಾವಣಾ ಭರವಸೆ ಮತ್ತು ಸಂಘ ಪರಿವಾರದ ಯೋಜನೆಯಾಗಿರುವ ರಾಜ್ಯದ ದೇವಾಲಯಗಳಿಗೆ ಸರ್ಕಾರದ ನಿಯಂತ್ರಣದಿಂದ ಸ್ವಾಯತ್ತತೆ ನೀಡುವ ಯೋಜನೆಗಳನ್ನು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಘೋಷಿಸಿದ್ದು, ಹೊಸ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ. ಬಜೆಟ್ ಅಧಿವೇಶನಕ್ಕೂ ಮುನ್ನ ದೇವಸ್ಥಾನಗಳನ್ನು ಸರ್ಕಾರದ ಆಡಳಿತ ನಿಯಂತ್ರಣದಿಂದ ಮುಕ್ತಗೊಳಿಸುವ ಕಾನೂನನ್ನು ಮಂಡಿಸಲಾಗುವುದು ಎಂದು ಬೊಮ್ಮಾಯಿ ಇತ್ತೀಚೆಗೆ ಹೇಳಿದ್ದನ್ನು ಗಮನಿಸಬಹುದು.
“ನನ್ನ ಸರ್ಕಾರ ಇದನ್ನು ಖಂಡಿತವಾಗಿಯೂ ಮಾಡಲಿದೆ. ಕೆಲವು ನಿಯಮಗಳನ್ನು ಹೊರತುಪಡಿಸಿ, ಹಿಂದೂ ದೇವಾಲಯಗಳ ಆಡಳಿತ ಅಥವಾ ನಿಯಂತ್ರಣದ ಮೇಲೆ ಸರ್ಕಾರದ ಯಾವುದೇ ನಿರ್ಬಂಧವಿರುವುದಿಲ್ಲ. ಪೂರ್ಣ ಸ್ವಾತಂತ್ರ್ಯ ಮತ್ತು ಸ್ವಾಯತ್ತತೆ ಇರುತ್ತದೆ ಎಂದು ಬೊಮ್ಮಾಯಿ ರಾಜ್ಯ ಕಾರ್ಯಕಾರಿಣಿ ಸಭೆಯ ತಮ್ಮ ಭಾಷಣದಲ್ಲಿ ಹೇಳಿದ್ದಾರೆ. ಬೊಮ್ಮಾಯಿ ಅವರ ಭರವಸೆಯನ್ನು ಪಕ್ಷದ ಸದಸ್ಯರು ಸಂಭ್ರಮಾಚರಣೆಯ ಮೂಲಕ ಸ್ವಾಗತಿಸಿದ್ದಾರೆ.
ಇತರ ಧರ್ಮಗಳಿಗೆ ಸೇರಿರುವ ಆರಾಧನಾ ಸ್ಥಳಗಳನ್ನು ರಕ್ಷಿಸಲು ಮತ್ತು ಆಡಳಿತ ಸ್ವಾತಂತ್ರ್ಯವನ್ನು ನೀಡಲು ಪ್ರತ್ಯೇಕ ಕಾನೂನುಗಳಿವೆ ಎಂಬುದರ ಕುರಿತು ನಮ್ಮ ಹಿರಿಯರು ತಮ್ಮ ಅಭಿಪ್ರಾಯವನ್ನು ನನಗೆ ತಿಳಿಸಿದ್ದಾರೆ. ಆದರೆ ಹಿಂದೂ ದೇವಾಲಯಗಳನ್ನು ಮಾತ್ರ ಸರ್ಕಾರದ ನಿಯಂತ್ರಣದಲ್ಲಿ ಇರಿಸಲಾಗಿದೆ. ಅಧಿಕಾರಶಾಹಿ ಒಪ್ಪಿಗೆ ಇಲ್ಲದೆ ದೇವಸ್ಥಾನಗಳ ಸ್ವಂತ ಹಣವನ್ನು ಸಹ ಖರ್ಚು ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.
ಮಸೀದಿಗಳು ಮತ್ತು ಚರ್ಚ್‌ಗಳಂತೆ ಎಲ್ಲಾ ಹಿಂದೂ ದೇವಾಲಯಗಳಿಗೆ ಆಡಳಿತದಲ್ಲಿ ಮುಕ್ತ ಹಸ್ತವನ್ನು ನೀಡಬೇಕು ಮತ್ತು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸಬೇಕು ಎಂದು ಆರ್‌ಎಸ್‌ಎಸ್ ತುಂಬಾ ಹಿಂದಿನಿಂದಲೂ ಒತ್ತಾಯಿಸುತ್ತಾ ಬಂದಿರುವುದನ್ನು ಕಾಣಹುದು. ಅಲ್ಲದೆ ದೇವಸ್ಥಾನಗಳನ್ನು ದತ್ತಿ ಇಲಾಖೆಯಿಂದ ಮುಕ್ತಗೊಳಿಸುವುದು ಹಲವು ವರ್ಷಗಳ ಬಿಜೆಪಿಯ ಚುನಾವಣಾ ಪ್ರಣಾಳಿಕೆಯಲ್ಲಿನ ಪ್ರಮುಖ ವಿಚಾರವೂ ಹೌದು. ಅಕ್ಟೋಬರ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಮುಜರಾಯಿ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಅವರು ರಾಜ್ಯದ 34,563 ಹಿಂದೂ ದೇವಾಲಯಗಳು ಮತ್ತು ಸಂಸ್ಥೆಗಳನ್ನು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಮುಜರಾಯಿ ಇಲಾಖೆಯಿಂದ ನಿರ್ವಹಿಸಲಾಗುತ್ತಿದೆ ಎಂದು ಹೇಳಿದ್ದರು. ಕರ್ನಾಟಕದಲ್ಲಿ ಮುಜರಾಯಿ ಇಲಾಖೆಯು ದೇವಾಲಯಗಳ ಆಡಳಿತ, ಅಭಿವೃದ್ಧಿ, ಜೀರ್ಣೋದ್ಧಾರ ಮತ್ತು ನಿರ್ಮಾಣದ ಜವಾಬ್ದಾರಿಯನ್ನು ಹೊಂದಿದೆ. ಇದು ದೇವಾಲಯದ ಅರ್ಚಕರು ಮತ್ತು ಸಿಬ್ಬಂದಿಗೆ ಸಂಬಳವನ್ನು ನೀಡುತ್ತದೆ, ಬಜೆಟ್‌ಗಳನ್ನು ಅನುಮೋದಿಸುತ್ತದೆ, ಆಸ್ತಿಗಳನ್ನು ನಿರ್ವಹಿಸುತ್ತದೆ ಮತ್ತು ಲೆಕ್ಕಪರಿಶೋಧನೆಗಳನ್ನು ನಡೆಸುತ್ತದೆ.
ಇಲಾಖೆ ವ್ಯಾಪ್ತಿಯಲ್ಲಿ 34,563 ದೇವಸ್ಥಾನಗಳು
ಇಲಾಖೆ ವ್ಯಾಪ್ತಿಯಲ್ಲಿರುವ 34,563 ದೇವಸ್ಥಾನಗಳ ಪೈಕಿ 207 ದೇವಸ್ಥಾನಗಳು ‘ಎ’ ಕೆಟಗರಿಯಾಗಿದ್ದು, ವಾರ್ಷಿಕ ಆದಾಯ 25 ಲಕ್ಷ ರೂ. ಮೀರಿದ್ದರೆ, 139 ದೇವಸ್ಥಾನಗಳು ‘ಬಿ’ ಕೆಟಗರಿಯಲ್ಲಿದ್ದು, 5 ಲಕ್ಷದಿಂದ 25 ಲಕ್ಷ ರೂ.ವರೆಗೆ ಆದಾಯ ಹೊಂದಿವೆ . ‘ಸಿ’ ವರ್ಗದಲ್ಲಿ 34,217 ದೇವಸ್ಥಾನಗಳಿದ್ದು, ವಾರ್ಷಿಕ ಆದಾಯ 5 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿವೆ.
ಅಪ್ಪನ ಬದ್ಧತೆ ಕೈಬಿಟ್ಟ ಬೊಮ್ಮಾಯಿ!
ಜುಲೈನಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ಬಿಜೆಪಿಯ ಸೈದ್ಧಾಂತಿಕ ಮೂಲವಾದ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಬೇಡಿಕೆಗಳಿಗೆ ಅನುಗುಣವಾಗಿ ಬೊಮ್ಮಾಯಿ ಅವರು ಕೈಗೊಂಡ ಕ್ರಮಗಳಲ್ಲಿ ಇದು ಇದು ಕೂಡ ಒಂದಾಗಿದೆ. ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗ ಕರ್ನಾಟಕದ ಪ್ರಗತಿಪರ ವಲಯದ ಕೆಲವರು ದಿ. ಎಸ್ ಆರ್ ಬೊಮ್ಮಾಯಿಯ ಪುತ್ರರಾಗಿರುವುದರಿಂದ ಕೋಮು ಧ್ರುವೀಕರಣದ ರಾಜಕಾರಣಕ್ಕೆ ಬಸವರಾಜ ಬೊಮ್ಮಾಯಿ ಅವರು ಉತ್ತೇಜನ ನೀಡಲಾರರು ಎಂಬ ಆಶಾವಾದ ವ್ಯಕ್ತಪಡಿಸಿದ್ದರು. ಅವರಿಗಿರುವ ಸಮಾಜವಾದಿ ಹಿನ್ನಲೆ ಬಿಜೆಪಿಯಲ್ಲಿದ್ದರೂ ಅವರನ್ನು ಪ್ರತ್ಯೇಕವಾಗಿರಿಸಲಿದೆ ಎಂದೇ ನಂಬಿದ್ದರು. ಆದರೆ ಈ ಐದು ತಿಂಗಳುಗಳಲ್ಲಿ ಅವರು ಕೈಗೊಂಡ ಬಹುತೇಕ ನಿರ್ಧಾರಗಳ ಹಿಂದೆ ಆರ್‌ಎಸ್‌ಎಸ್ ಮೆಚ್ಚುಗೆ ಪಡೆಯುವ ಇರಾದೆ ಇರುವುದು ಸ್ಪಷ್ಟವಾಗಿಯೇ ಕಾಣಿಸುತ್ತಿದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಿಂಬಾಲಕರಾಗಿ ಗುರುತಿಸಿಕೊಂಡು ಮುಖ್ಯಮಂತ್ರಿ ಸ್ಥಾನಕ್ಕೇರಿದ ಅವರು ರಾಜ್ಯ ರಾಜಕಾರಣದಲ್ಲಿ ಬಹುಕಾಲದವರೆಗೆ ಪ್ರಸ್ತುತವಾಗಿರಬೇಕೆಂಬ ಕಾರಣಕ್ಕೆ ಆರ್‌ಎಸ್‌ಎಸ್ ಆಣತಿಗೆ ತಲೆಬಾಗುತ್ತಿದ್ದಾರೆ ಎನ್ನಲಾಗುತ್ತಿದೆ.
ಧಾರ್ಮಿಕ ಸ್ವಾತಂತ್ರ್ಯದ ಹಕ್ಕುಗಳ ರಕ್ಷಣಾ ಮಸೂದೆ, 2021 ಎಂದು ಕರೆಯಲಾಗುವ ಮತಾಂತರ ನಿಷೇಧ ಕಾಯಿದೆಯನ್ನು ರಾಜ್ಯ ವಿಧಾನಸಭೆಯಲ್ಲಿ ಅಂಗೀಕರಿಸಲಾಗಿದ್ದು, ವಿಧಾನ ಪರಿಷತ್ತಿನಲ್ಲಿ ಚರ್ಚೆಯಾಗಲಿಲ್ಲ. ಶಾಸಕಾಂಗದಿಂದ ಒಪ್ಪಿಗೆ ದೊರೆತ ನಂತರ ಮತಾಂತರ ತಡೆ ಕಾಯ್ದೆ ಜಾರಿಗಾಗಿ ವಿಶೇಷ ತಂಡ ರಚಿಸುವುದಾಗಿ ಬೊಮ್ಮಾಯಿ ಇದೇ ಸಭೆಯಲ್ಲಿ ತಿಳಿಸಿದ್ದನ್ನು ಗಮನಿಸಬಹುದು.
ಇತ್ತೀಚೆಗಷ್ಟೆ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದ ತಕ್ಷಣ ಮತಾಂತರ ವಿರೋಧಿ ಮಸೂದೆಯನ್ನು ಹಿಂಪಡೆಯುವುದಾಗಿ ಹೇಳಿದ್ದರು. ಈ ಬಗ್ಗೆಯೂ ಸಭೆಯಲ್ಲಿ ಮಾತಾಡಿರುವ ಬೊಮ್ಮಾಯಿ “ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದ ತಕ್ಷಣ ಮತಾಂತರ ವಿರೋಧಿ ಮಸೂದೆಯನ್ನು ಹಿಂಪಡೆಯುವುದಾಗಿ ಹೇಳಿದ್ದಾರೆ. ಆದರೆ ಅದು ಎಂದಿಗೂ ಸಾಧ್ಯವಾಗುವುದಿಲ್ಲ. ವಾಸ್ತವವಾಗಿ, ನಾನು ಕಾಯಿದೆಯನ್ನು ಜಾರಿಗೊಳಿಸಲು ವಿಶೇಷ ಕಾರ್ಯಪಡೆಯನ್ನು ಸ್ಥಾಪಿಸುತ್ತೇನೆ. ನಮ್ಮ ಅಜೆಂಡಾ ತುಂಬಾ ಸ್ಪಷ್ಟವಾಗಿದೆ” ಎಂದು ಹೇಳಿರುವುದನ್ನು ಕಂಡಾಗ ಬೊಮ್ಮಾಯಿ ಅವರ ಸ್ವಾಮಿನಿಷ್ಠೆ ಏನೆಂಬುದು ಅರ್ಥವಾಗುತ್ತದೆ.