ಖಾತೆ ಹಂಚಿಕೆ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಈಗ ಮತ್ತೊಂದು ಸಂಕಟದ ಪರಿಸ್ಥಿತಿ ಎದುರಾಗಿದೆ. ಸಚಿವರಿಗೆ ಸರ್ಕಾರಿ ಬಂಗಲೆಗಳನ್ನು ಹಂಚಿಕೆ ಮಾಡುವುದು ಬೊಮ್ಮಾಯಿ ಅವರಿಗೆ ತಲೆನೋವಾಗಿ ಪರಿಣಮಿಸಿದೆ.
ವಿಧಾನ ಪರಿಷತ್ ಸಭಾಪತಿಯವರಿಗೆ ಸರ್ಕಾರದ ಅಧಿಕೃತ ನಿವಾಸವನ್ನು ನೀಡಲು ಸಿಎಂ ಬೊಮ್ಮಾಯಿ ವಿಫಲರಾಗಿರುವುದು ಸಭಾಪತಿ ಬಸವರಾಜ್ ಹೊರಟ್ಟಿ ಅವರ ಅಸಮಾಧಾನಕ್ಕೆ ಕಾರಣವಾಗಿದೆ. ಸಭಾಪತಿಯ ಅಧಿಕೃತ ನಿವಾಸದ ಕುರಿತಂತೆ ಸತತ ಏಳು ಬಾರಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರೂ ಸಕರಾತ್ಮಕ ಸ್ಪಂದನೆ ಬಾರದಿರುವುದು ಹೊರಟ್ಟಿ ಅವರಿಗೆ ಬೇಸರ ತರಿಸಿದೆ.
ಫೆಬ್ರವರಿ 9 ರಿಂದ ವಿಧಾನ ಪರಿಷತ್ ಸಭಾಪತಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಬಸವರಾಜ್ ಹೊರಟ್ಟಿಯವರು, ಅಧಿಕಾರ ಸ್ವೀಕರಿಸಿಕೊಂಡಾಗಲೇ ಸಭಾಪತಿಯವರ ಅಧಿಕೃತ ನಿವಾಸವನ್ನು ತನಗೆ ನೀಡಬೇಕೆಂದು ಆಗಿನ ಮುಖ್ಯಮಂತ್ರಿಯಾಗಿದ್ದ ಬಿ ಎಸ್ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದರು.
ಕಳೆದ 12 ವರ್ಷಗಳಿಂದ ಸಭಾಪತಿಯವರಿಗೆ ನಿಗದಿ ಪಡಿಸಲಾಗಿದ್ದ ʼಕುಮಾರ ಕೃಪಾ ಬೆಂಗಳೂರು ನಗರ ದಕ್ಷಿಣ ಲೋಕೋಪಯೋಗಿ ವಸತಿ, ಗೃಹ ಸಂಖ್ಯೆ 3ʼ ಅನ್ನು ತಮಗೆ ಹಂಚಿಕೆ ಮಾಡಬೇಕೆಂಬ ಕೋರಿಕೆಯನ್ನು ಹೊರಟ್ಟಿಯವರು ಸಲ್ಲಿಸಿದ್ದರು. ಈ ಹಿಂದೆ ಸಭಾಪತಿಗಳಾಗಿದ್ದ ವೀರಣ್ಣ ಮತ್ತಿಕಟ್ಟಿ, ಡಿ ಹೆಚ್ ಶಂಕರಮೂರ್ತಿ ಆ ಬಳಿಕ ಕೆ ಪ್ರತಾಪಚಂದ್ರ ಶೆಟ್ಟಿ ಕೂಡಾ ಅದೇ ಬಂಗಲೆಯನ್ನು ತಮ್ಮ ಅಧಿಕೃತ ನಿವಾಸವನ್ನಾಗಿಸಿ ವಾಸ್ತವ್ಯ ಹೂಡಿದ್ದರು.
ಈ ಹಿನ್ನೆಲೆಯಲ್ಲಿ, ಆ ವಸತಿ ಗೃಹವನ್ನು ಸಭಾಪತಿಗಳಿಗೆ ಮೀಸಲಿಡಬೇಕು, ಹಾಗೂ ಅಲ್ಲಿ ತನ್ನ ವಾಸ್ತವ್ಯಕ್ಕೆ ಅನುಕೂಲ ಮಾಡಬೇಕೆಂದು ಸಂಬಂಧಪಟ್ಟವರಿಗೆ ಆದೇಶಿಸಬೇಕೆಂದು ಕೋರಿ ಫೆಬ್ರವರಿ 10 ರಂದು ಹೊರಟ್ಟಿ ಅವರು ಮೊದಲ ಪತ್ರ ಬರೆದಿದ್ದರು. ಮೊದಲ ಪತ್ರಕ್ಕೆ ಸಕರಾತ್ಮಕ ಸ್ಪಂದನೆ ಬರದಿದ್ದರಿಂದ ಅದೇ ತಿಂಗಳ 22 ರಂದು ಮತ್ತೆ ಪತ್ರ ಬರೆದಿದ್ದರು. ಆದರೆ, ಅದಕ್ಕೂ ಸರಿಯಾದ ಪ್ರತಿಕ್ರಿಯೆ ಬಾರದ್ದರಿಂದ ಮಾರ್ಚ್ ಮತ್ತು ಎಪ್ರಿಲ್ ತಿಂಗಳಿನಲ್ಲಿ ಹಾಗೂ ಜೂನ್ ತಿಂಗಳಲ್ಲಿ ಮತ್ತೆ ಪ್ರತ್ಯೇಕ ಪತ್ರಗಳನ್ನು ಬರೆದಿದ್ದರು. ಹೀಗೆ ಸಭಾಪತಿಯವರು ತಮ್ಮ ವಾಸ್ತವ್ಯಕ್ಕೆ ಅನುವು ಮಾಡಿಕೊಳ್ಳುವಂತೆ ಇದುವರೆಗೂ ಒಟ್ಟು ಏಳು ಪತ್ರಗಳನ್ನು ಮುಖ್ಯಮಂತ್ರಿಗಳಿಗೆ ಬರೆದಿದ್ದಾರೆ.
ಪತ್ರಗಳಿಂದ ತಮ್ಮ ಕೋರಿಕೆ ಈಡೇರುವುದಿಲ್ಲ ಎಂದರಿತಾಗ ಕೊನೆಗೆ, ಸ್ವತಃ ಹೊರಟ್ಟಿಯವರು ಖುದ್ದು (ಆಗಿನ) ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾಗಿ ತಮ್ಮ ಕೋರಿಕೆಯ ಕುರಿತು ಮನವರಿಕೆ ಮಾಡಿಕೊಟ್ಟಿದ್ದರು. ಆ ಸಂಧರ್ಭದಲ್ಲಿ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಅವರಲ್ಲಿ ಈ ಕುರಿತು ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಯಡಿಯೂರಪ್ಪ ಸೂಚಿಸಿದ್ದರು. ಆದರೆ, ಬೊಮ್ಮಾಯಿ ಅವರು ಸಭಾಪತಿ ನಿವಾಸವನ್ನು ಹೊರಟ್ಟಿ ಅವರಿಗೆ ಕೊಡಿಸಲು ವಿಫಲರಾಗಿದ್ದರು.
ಇದು ಹೊರಟ್ಟಿಯವರ ಬೇಸರಕ್ಕೆ ಕಾರಣವಾಗಿದ್ದು, ಸಭಾಪತಿ ಹುದ್ದೆಗೆ ಮಾಡಿರುವ ಅಪಮಾನ ಇದು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ʼನನ್ನ ಹುದ್ದೆಯ ಶಿಷ್ಟಾಚಾರವನ್ನು ಬದಿಗೊತ್ತಿ, ವೈಯಕ್ತಿಕವಾಗಿ ಭೇಟಿ ಮಾಡಿದ್ದರೂ ಅಧಿಕೃತ ನಿವಾಸವನ್ನು ಕೊಡಿಸದೆ ಅಪಮಾನ ಮಾಡಿದ್ದೀರಿ, ಇದು ಸಭಾಪತಿಯ ಹುದ್ದೆಗೆ ಧಕ್ಕೆ ತಂದಿದೆ. ಸಂವಿಧಾನಾತ್ಮಕ ಹುದ್ದೆಯಾಗಿರುವ ಸಭಾಪತಿ ಹುದ್ದೆಯ ಔಚಿತ್ಯವನ್ನೇ ಪ್ರಶ್ನಿಸುವಂತಾಗಿದೆ ಎಂಬ ಸಂದೇಶ ಹೋಗಿದೆʼ ಎಂದು ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಬರೆದಿದ್ದ ಪತ್ರದಲ್ಲಿ ಹೇಳಿದ್ದರು.
ಹೊರಟ್ಟಿಯವರು ಕೇಳುತ್ತಿರುವ ಸಭಾಪತಿಗಳಿಗೆಂದು ಮೀಸಲಾಗಿರುವ ಬಂಗಲೆಯಲ್ಲಿ ಕಳೆದ 12 ವರ್ಷಗಳಿಂದಲೂ ಸಭಾಪತಿಗಳೇ ವಾಸಿಸುತ್ತಿದ್ದರೂ, ಯಡಿಯೂರಪ್ಪ ಅವರ ಆಡಳಿತ ಅವಧಿಯಲ್ಲಿ ಅದನ್ನು ಮಾಜಿ ಪ್ರವಾಸೋದ್ಯಮ ಸಚಿವ ಸಿಪಿ ಯೋಗೇಶ್ವರ್ ಅವರಿಗೆ ಹಂಚಿಕೆ ಮಾಡಲಾಗಿತ್ತು.
ಕುಮಾರ ಕೃಪಾ, ವಸತಿ ಗೃಹ ಸಂಖ್ಯೆ 3ರನ್ನು ತನಗೇ ನೀಡಬೇಕೆಂದು ಹೊರಟ್ಟಿಯವರು ಕೋರಿದ ಹಿನ್ನೆಲೆಯಲ್ಲಿ, ಯಡಿಯೂರಪ್ಪ ಅವರು ಬೊಮ್ಮಾಯಿ ಅವರಿಗೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದರು. ಅದರಂತೆ ಆ ನಿವಾಸವನ್ನು ಸಭಾಪತಿಗಳಿಗೆ ಬಿಟ್ಟು ಕೊಡಬೇಕೆಂದು ಬೊಮ್ಮಾಯಿ ಅವರು ಯೋಗೇಶ್ವರ್ ಅವರನ್ನು ಭೇಟಿಯಾಗಿ ಕೇಳಿಕೊಂಡಿದ್ದರು. ಆದರೆ, ಆ ಬಂಗಲೆಯನ್ನು ಬಿಟ್ಟು ಕೊಡಲು ಯೋಗೇಶ್ವರ್ ಅಂದು ನಿರಾಕರಿಸಿದ್ದರು.
ನಿವಾಸ ತೆರವುಗೊಳಿಸುವಂತೆ ಕೇಳಿದ್ದ ಬೊಮ್ಮಾಯಿ ಅವರಲ್ಲಿ ʼಬೇಕಿದ್ದರೆ ಯಡಿಯೂರಪ್ಪ ಅವರೇ ತಮ್ಮ ಅಧಿಕೃತ ನಿವಾಸ ʼಕೃಷ್ಣಾʼವನ್ನು ಬಿಟ್ಟು ಕೊಡಲಿ, ನಾನು ಬಿಟ್ಟು ಕೊಡುವುದಿಲ್ಲʼ ಎಂದು ಸಿಪಿ ಯೋಗೇಶ್ವರ್ ಉಢಾಫೆಯಿಂದ ಹೇಳಿದ್ದರು ಎಂದು ಮೂಲಗಳು ಹೇಳಿವೆ.
ಸರ್ಕಾರದ ಅಧಿಕೃತ ಬಂಗಲೆಯಿಂದ ಸಚಿವರಿಗೆ ಹಂಚಿಕೆ ಮಾಡಿದ ಬಂಗಲೆಗಳಲ್ಲಿ, ಸಚಿವರು ತಮ್ಮ ಕಛೇರಿಗಳ ಕಾರ್ಯಾಚರಣೆ ಸ್ಥಗಿತಗೊಳಿಸಿದ ಎರಡು ತಿಂಗಳವರೆಗೆ ತಂಗಲು ಅವಕಾಶವಿರುವುದರಿಂದ ಯೋಗೇಶ್ವರ್ ಸೇರಿದಂತೆ ಹಲವು ಸಚಿವರು ಇನ್ನೂ ಸರ್ಕಾರದ ಅಧಿಕೃತ ಬಂಗಲೆಗಳಲ್ಲೇ ತಂಗಿದ್ದಾರೆ. ಎರಡು ತಿಂಗಳ ಬಳಿಕವೂ ಬಂಗಲೆಯನ್ನು ಬಿಟ್ಟುಕೊಡದಿದ್ದರೆ ಅವರಿಗೆ ಸರ್ಕಾರದ ಕಡೆಯಿಂದ ನೋಟೀಸ್ ಕಳುಹಿಸಲಾಗುತ್ತದೆ ಹಾಗೂ ದಂಡವನ್ನು ವಿಧಿಸಲಾಗುತ್ತದೆ.
ಪ್ರಸ್ತುತ, ಈಗಿನ ಸಿಎಂ ಬೊಮ್ಮಾಯಿಗೆ ಮತ್ತೊಂದು ಪತ್ರ ಬರೆದಿರುವ ಸಭಾಪತಿ ಹೊರಟ್ಟಿಯವರು, “ಕುಮಾರ ಕೃಪಾ ದಕ್ಷಿಣ, ವಸತಿ ಗೃಹ ಸಂಖ್ಯೆ 3 ಅನ್ನು ನನ್ನ ವಾಸ್ತವ್ಯಕ್ಕೆ ಹಂಚಿಕೆ ಮಾಡುವ ಕುರಿತಂತೆ ಈ ಹಿಂದಿನ ಮುಖ್ಯಮಂತ್ರಿಗಳೊಂದಿಗೆ ಪತ್ರ ವ್ಯವಹಾರ ನಡೆಸಿದ್ದೇನೆ. ಇದಕ್ಕೆ ಸಂಬಂಧಿಸಿದಂತೆ ಆಗ ಗೃಹ ಮಂತ್ರಿಗಳಾಗಿದ್ದ ನೀವು ಹಲವು ಬಾರಿ ಅಧಿಕಾರಿಗಳೊಡನೆ ಸಭೆ ನಡೆಸಿದ್ದೀರಿ. ಸದ್ಯ ನೀವೇ ಮುಖ್ಯಮಂತ್ರಿಗಳಾಗಿರುವುದರಿಂದ ಕೂಡಲೇ ಆ ಬಂಗಲೆಯನ್ನ ನನ್ನ ವಾಸ್ತವ್ಯಕ್ಕೆ ಹಂಚಿಕೆ ಮಾಡಬೇಕೆಂದು” ಕೋರಿದ್ದಾರೆ.
ಅದಾಗ್ಯೂ, ಈ ಬಂಗಲೆ ಸಭಾಪತಿಯವರ ವಾಸ್ತವ್ಯಕ್ಕೆ ದೊರಕುವ ಸಾಧ್ಯತೆ ತೀರಾ ಕಡಿಮೆ ಇದೆ. ನೂತನ ಗೃಹಮಂತ್ರಿ ಅರಗ ಜ್ಞಾನೇಂದ್ರ ಅವರಿಗೆ ಈ ನಿವಾಸ ಹೋಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಸಭಾಪತಿಗಳು ಹಲವು ಬಾರಿ ಪತ್ರ ಮುಖೇನ ಕೋರಿದರೂ, ಬಳಿಕ ವೈಯಕ್ತಿಕವಾಗಿ ಭೇಟಿ ನೀಡಿ ಕೋರಿಕೆ ಸಲ್ಲಿದ್ದಾಗ್ಯೂ ಅವರಿಗೆ ಆ ನಿವಾಸವನ್ನು ಕೊಡಲಾರದ ಔಚಿತ್ಯವೇನು ಎನ್ನುವುದು ಇನ್ನೂ ನಿಗೂಢವಾಗಿಯೇ ಉಳಿದಿದೆ.