2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದೆ. ಈಗಾಗಲೇ ಪಕ್ಷದ ನಾಯಕರು, ಮುಖಂಡರು ಆಯಾ ಪಕ್ಷಗಳ ಪರ ಭರ್ಜರಿ ಮತ ಪ್ರಚಾರ ಮಾಡ್ತಿದ್ದಾರೆ. ಈ ಮಧ್ಯೆ ಕೆಲ ನಾಯಕರ ಮಧ್ಯೆ ಜಟಾಪಟಿ ಶುರುವಾಗಿದೆ. ಇದೀಗ ಕರ್ನಾಟಕ ಕಂಡ ಭ್ರಷ್ಟ ಸರ್ಕಾರ ನಿಮ್ಮದು ಎಂದು ಹೇಳುವ ಮೂಲಕ ವಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ಸಿಎಂ ಬಸವರಾಜ ಬೊಮ್ಮಾಯಿ ಟಾಂಗ್ ಕೊಟ್ಟಿದ್ದಾರೆ.

ಲಿಂಗಾಯತ ಸಮುದಾಯದ ಮುಖ್ಯಮಂತ್ರಿಯವರು ಭ್ರಷ್ಟರು ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಟ್ವೀಟ್ ಮೂಲಕ ತಿರುಗೇಟು ನೀಡಿದ ಅವರು, ʻಸಿದ್ದರಾಮಯ್ಯನವರೇ ಕರ್ನಾಟಕ ಕಂಡಂತ ಭ್ರಷ್ಟ ಸರ್ಕಾರ ನಿಮ್ಮದು. 2013-18 ರವರೆಗೆ ಭ್ರಷ್ಟ ಸರ್ಕಾರ ನಡೆಸಿದವರು ನೀವು. ಬಿಡಿಎಯಲ್ಲಿ ರಿಡೂ ಭ್ರಷ್ಟಾಚಾರ, ಸಣ್ಣ ಹಾಗೂ ಬೃಹತ್ ನಿರಾವರಿ, ಎಸ್ಸಿ ಎಸ್ಟಿ ಮಕ್ಕಳಿಗೆ ನೀಡುವ ಹಾಸಿಗೆ ದಿಂಬಿನಲ್ಲಿಯೂ ಬಿಡಲಿಲ್ಲ. ಲೋಕಾಯುಕ್ತವನ್ನು ಸಂಪೂರ್ಣ ನಿಷ್ಕ್ರಿಯ ಮಾಡಿದ ಖ್ಯಾತಿ ನಿಮ್ಮದು. ಎಸಿಬಿ ಮಾಡಿ ಎಲ್ಲ ಹಗರಣ ಮುಚ್ಚಿ ಹಾಕುವ ಕೆಲಸ ಮಾಡಿದಿರಿ, ಭ್ರಷ್ಟ ಅಧಿಕಾರಿ ಹಾಗೂ ರಾಜಕರಣಿಗಳನ್ನು ರಕ್ಷಣೆ ಮಾಡಿದ್ದೀರಿ. ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಕಾಂಗ್ರೆಸ್ಗೆ ನೈತಿಕ ಅಧಿಕಾರ ಇಲ್ಲ. ನಿಮ್ಮಿಂದ ಸರ್ಟಿಫಿಕೇಟ್ ಪಡೆಯುವ ಅವಶ್ಯಕತೆಯಿಲ್ಲ” ಅಂತ ಸಿಎಂ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.












