By :Krishnamani
ಮೈಸೂರು ಮುಡಾದಿಂದ ಸಿಎಂ ಪತ್ನಿಗೆ 14 ಸೈಟ್ಗಳನ್ನು muda ಪಡೆದಿದ್ದಾರೆ ಎಂದು ಇತ್ತೀಚಿಗೆ ದೊಡ್ಡ ಚರ್ಚೆ ಹುಟ್ಟು ಹಾಕಿತ್ತು. ಇದು ಸದನದಲ್ಲಿ ದೊಡ್ಡ ಗದ್ದಲ ಸೃಷ್ಟಿಸಿದ ಬಳಿಕ ವಿರೋಧ ಪಕ್ಷಗಳಾದ ಜೆಡಿಎಸ್ ಹಾಗು ಬಿಜೆಪಿ ನಾಯಕರು ಮೈಸೂರಿಗೆ ಪಾದಯಾತ್ರೆಯನ್ನೂ ಮಾಡಿದರು. ಜುಲೈ 26ರಂದು ಟಿ.ಜೆ ಅಬ್ರಹಾಂ ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದರು. ಅದೇ ದಿನ ಸರ್ಕಾರದ ಮುಖ್ಯಕಾರ್ಯದರ್ಶಿಗೆ ನೋಟಿಸ್ ಜಾರಿ ಮಾಡಿದ್ದರು ಎನ್ನುವುದು ಕಾಂಗ್ರೆಸ್ ನಾಯಕರ ಆರೋಪವಾಗಿತ್ತು. ಒಂದೇ ದಿನದಲ್ಲಿ ಎಷ್ಟು ಪುಟಗಳ ಅಧ್ಯಯನ ಮಾಡಿದ್ರಿ..? ಕೊಟ್ಟಿರುವ ಪತ್ರಗಳನ್ನು ಓದುವುದಕ್ಕಾದರೂ ಸೂಕ್ತ ಸಮಯ ಬೇಕಲ್ಲವೇ..? ದೂರು ಬರುತ್ತಿದ್ದ ಹಾಗೆ ನೋಟಿಸ್ ಕೊಡುವುದು ಸೂಕ್ತವೇ..? ಎಂದು ಪ್ರಶ್ನಿಸಿದ್ದರು.
ಇಷ್ಟೆಲ್ಲಾ ಮುಡಾ ಗದ್ದಲದ ನಡುವೆ ಸ್ನೇಹಮಯಿ ಕೃಷ್ಣ ಎಂಬುವರು ಜನಪ್ರತಿನಿಧಿಗಳ ಕೋರ್ಟ್ಗೆ ಖಾಸಗಿ ದೂರು ಕೊಟ್ಟಿದ್ದರು. ಅದರ ವಿಚಾರಣೆ ನಡೆದಿದ್ದು, ಆಗಸ್ಟ್ 20ಕ್ಕೆ ಆದೇಶ ಕಾಯ್ದಿರಿಸಲಾಗಿದೆ. ಮತ್ತೊಂದು ಕಡೆ ಟಿ.ಜೆ ಅಬ್ರಹಾಂ ಕೂಡ ಜನಪ್ರತಿನಿಧಿಗಳ ಕೋರ್ಟ್ಗೆ ಮತ್ತೊಂದು ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯೂ ವಿಚಾರಣೆ ನಡೆಯುತ್ತಿದೆ. ಆದರೆ ನಿನ್ನೆ ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ್ದಾರೆ. 16 ಪುಟಗಳ ಅನುಮತಿ ಪತ್ರದಲ್ಲಿ ಪ್ರದೀಪ್ ಕುಮಾರ್ ಎಂಬುವರನ್ನು ಮೊದಲ ದೂರುದಾರ ಎಂದು ಉಲ್ಲೇಖ ಮಾಡಲಾಗಿದೆ. ಆದರೆ ಪ್ರದೀಪ್ ಕುಮಾರ್ ರಾಜ್ಯಪಾಲರಿಗೆ ದೂರು ನೀಡಿದ್ದು ಯಾವಾಗ..? ಎನ್ನುವುದು ಮಾತ್ರ ಇಲ್ಲೀವರೆಗೂ ಯಾರಿಗೂ ಗೊತ್ತಿರಲಿಲ್ಲ. ಎಲ್ಲಿಯೂ ಬಹಿರಂಗ ಆಗಿರಲಿಲ್ಲ. ಆದರೆ ಏಕಾಏಕಿ ಉದ್ಬವಿಸಿದ್ದು ಹೇಗೆ..? ಅನ್ನೋದೇ ಅನುಮಾನ.
ರಾಜ್ಯಪಾಲರ ಕಚೇರಿಗೆ ಬಂದಿದ್ದ ಮೊದಲ ದೂರುದಾರ ಎನ್ನಲಾದ ಪ್ರದೀಪ್ ಕುಮಾರ್ ಎಂಬಾತ ನಾನೇ ಮೊದಲಿಗೆ ರಾಜ್ಯಪಾಲರಿಗೆ ದೂರು ನೀಡಿದ್ದೆ. ಅದೇ ಕಾರಣಕ್ಕೆ ನನ್ನನ್ನು ಮೊದಲ ದೂರುದಾರ ಎಂದು ಪರಿಗಣಿಸಿದ್ದಾರೆ. ನಾನು ಡಿಸೆಂಬರ್ 03, 2023ರಲ್ಲೇ ನಾನು ರಾಜ್ಯಪಾಲರಿಗೆ ದೂರು ನೀಡಿದ್ದೇನೆ ಎಂದಿದ್ದಾರೆ. ಆದರೆ ಅಂದಿನಿಂದ ಇಲ್ಲೀವರೆಗೂ ಎಲ್ಲಿಯೂ ಯಾಕೆ ಈ ಬಗ್ಗೆ ಪ್ರಸ್ತಾಪ ಮಾಡಿರಲಿಲ್ಲ..? ಬೇರೆಯವರು ಕೋರ್ಟ್ಗೆ ಹೋದಾಗಲೂ ಎಲ್ಲಿಯೂ ಈ ಬಗ್ಗೆ ಮಾತನಾಡದೆ ಏಕಾಏಕಿ ಬಂದಿದ್ದು ಹೇಗೆ..? ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಪ್ರದೀಪ್ ಕುಮಾರ್ ಎಂಬಾತ ಜೆಡಿಎಸ್ನ ಕಾನೂನು ಘಟಕದಲ್ಲಿದ್ದಾರೆ ಎನ್ನುವುದು ಹೊರಬಿದ್ದಿದೆ. ಆದರೆ ದೂರು ಕೊಟ್ಟಿರುವುದು ಸತ್ಯವೇ..? ಅನ್ನೋದು ಅನುಮಾನ.
ಟಿ.ಜೆ ಅಬ್ರಹಾಂ ದೂರು ಕೊಟ್ಟ ದಿನವೇ ರಾಜ್ಯಪಾಲರು ಶೋಕಾಸ್ ನೋಟಿಸ್ ಕೊಟ್ಟಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಆರೋಪ ಮಾಡಿದ್ದರು. ಹಾಗಾಗಿ ಏಳೆಂಟು ತಿಂಗಳ ಹಿಂದೆಯೇ ದೂರು ಬಂದಿತ್ತು ಎನ್ನುವುದನ್ನು ತಿಳಿಸಲು ಪ್ರದೀಪ್ ಕುಮಾರ್ನನ್ನು ಸೃಷ್ಟಿಸಿದ್ದಾರಾ..? ಎನ್ನುವುದು ಕಾಂಗ್ರೆಸ್ ಕಾರ್ಯಕರ್ತರನ್ನು ಕಾಡುತ್ತಿರುವ ಅನುಮಾನ. ಆದರೆ ರಾಜ್ಯಪಾಲರ ಬಳಿಗೆ ಹೋದವರು, ದೂರು ಕೊಟ್ಟವರ ಬಗ್ಗೆ ರಾಜ್ಯಪಾಲರ ಕಚೇರಿಯ ರಿಜಿಸ್ಟ್ರಾರ್ನಲ್ಲಿ ನಮೂದು ಆಗಿರುತ್ತದೆ. ಆದರೆ ಏಳೆಂಟು ತಿಂಗಳ ಹಿಂದೆಯೇ ದೂರು ಸಲ್ಲಿಸಿದ್ದರು ಎನ್ನುವುದಾದರೆ ಎಲ್ಲಿಯೂ ಹೇಳಿಕೊಳ್ಳಲಿಲ್ಲ. ಕೋರ್ಟ್ಗೂ ಹೋಗಲಿಲ್ಲ. ಆದರೆ ಇಂದು ಏಕಾಏಕಿ ಬಂದಿದ್ದು ಹೇಗೆ ಎನ್ನುವ ಅಚ್ಚರಿಗೆ ಮುಂದಿನ ದಿನಗಳಲ್ಲಿ ಉತ್ತರ ಸಿಗಬೇಕಿದೆ. ಇಲ್ಲೇನೋ ರಹಸ್ಯ ಅಡಗಿದೆ ಎನ್ನುವುದು ಕಾಂಗ್ರೆಸ್ ಮೂಲಗಳ ಮಾತು.
ಕೃಷ್ಣಮಣಿ