ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಸೈಟ್ ವಾಪಸ್ ಮಾಡಿದ ವಿಚಾರವಾಗಿ ಕಾಂಗ್ರೆಸ್ ನಾಯಕರು ಸಿಎಂ ಸಿದ್ದರಾಮಯ್ಯ ಪರವಾಗಿ ಬ್ಯಾಟ್ ಮಾಡಿದ್ದಾರೆ. ಗೃಹ ಸಚಿವ ಪರಮೇಶ್ವರ್ ಮಾತನಾಡಿ, ಮುಡಾ ಸೈಟ್ ವಾಪಸ್ ನೀಡುವ ನಿರ್ಧಾರ ಮಾಡಿದ್ದಾರೆ. ಬಿಜೆಪಿ ರಾಜಕೀಯಕ್ಕೆ ಉಪಯೋಗ ಅಗ್ತಿದೆ ಅನ್ನೋದು ಖಾತ್ರಿ ಆಗಿದೆ. ಸೈಟ್ ವಾಪಸ್ ಮಾಡ್ತಿರೋದು ಒಳ್ಳೆಯ ನಿರ್ಧಾರ ಅನ್ನಿಸುತ್ತೆ. ಕಾನೂನು ದೃಷ್ಟಿಯಲ್ಲಿ ಮುಂದೆ ಏನಾಗುತ್ತೋ ಗೊತ್ತಿಲ್ಲ. ಸೈಟ್ ಸರೆಂಡರ್ ಮಾಡಿದ ಮೇಲೆ ಏನಾಗುತ್ತೆ ಅನ್ನೋದು ಗೊತ್ತಿಲ್ಲ. ಆದರೆ ಕೇಂದ್ರ ಇದನ್ನು ಅಸ್ತ್ರವಾಗಿ ಉಪಯೋಗಿಸಿಕೊಳ್ತಿದೆ. ಬಿಜೆಪಿ ದುರುದ್ದೇಶದಿಂದ ಇದನ್ನೆಲ್ಲ ಮಾಡಿಸ್ತಿದೆ ಎಂದಿದ್ದಾರೆ.
ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಮಾತನಾಡಿ, ಸಿಎಂ ಪತ್ನಿ ಪಾರ್ವತಿ ಪತ್ರ ರವಾನಿಸಿ ನಿವೇಶನಗಳನ್ನ ವಾಪಸ್ ನೀಡಿದ್ದಾರೆ. ಪತ್ರದ ಕೆಲ ವಿವರ ನೋಡಿದರೆ, ಅಪಪ್ರಚಾರದಿಂದ ನಿಜವಾಗಲೂ ಓರ್ವ ಗೃಹಿಣಿಗೆ ಆಗುವ ಆಘಾತವನ್ನ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕ ದೃಷ್ಟಿಯಿಂದ ಇಂತಹ ಅಪಪ್ರಚಾರ, ರಾಜಕೀಯ ದುರುದ್ದೇಶ ಸಂದರ್ಭದಲ್ಲಿ ಈ ರೀತಿಯ ಸ್ಪಂದನೆ ಮೆಚ್ಚುವಂತಹದ್ದು. ಜಾರಿ ನಿರ್ದೇಶನಾಲಯ ಅಧಿಕಾರಿಗಳು ಸುಮೋಟೊ ಕೇಸ್ ದಾಖಲಿಸಿ ಮುಂದುವರಿಯುತ್ತಿದ್ದಾರೆ. ಇಂತಹ ಕ್ರಮಗಳಿಂದ ಕೇಂದ್ರ ಸರ್ಕಾರ ಜನಾಕ್ರೋಶ ಎದುರಿಸಬೇಕಾಗುತ್ತದೆ ಎಂದಿದ್ದಾರೆ.
ಚಾಮರಾಜನಗರದಲ್ಲಿ ಸಿಎಂ ಆಪ್ತ ಶಾಸಕ ಪುಟ್ಟರಂಗಶೆಟ್ಟಿ ಮಾತನಾಡಿ, ಸಿಎಂ ಪತ್ನಿ ಮುಗ್ದ ಮಹಿಳೆ ನಾನೇ ಇದುವರೆಗೂ ಅವರ ಮುಖ ನೋಡಿಲ್ಲ. ಅವರಿಗೆ ನಿವೇಶನ ಪ್ರಾಮಾಣಿಕವಾಗಿ ಬಂದಿರುವುದು. ನಮ್ಮ ಹಿಂದೂಗಳಲ್ಲಿ ಹೆಣ್ಣು ಮಕ್ಕಳಿಗೆ ಅರಿಶಿಣ ಕುಂಕುಮ ಕೊಡುವ ಸಂಪ್ರದಾಯವಿದೆ. ಬಿಜೆಪಿಯವರು ಪ್ರಾಮಾಣಿಕ ಮುಖ್ಯಮಂತ್ರಿ ಮೇಲೆ ಈ ರೀತಿ ಆರೋಪ ಮಾಡ್ತಾರೆ ಅಂತ ಯಾರಿಗೆ ಗೊತ್ತಿತ್ತು. ಸೈಟ್ ವಾಪಸ್ ಕೊಟ್ಟ ಮೇಲೆ ಪ್ರಕರಣ ಮುಗಿದೆ ಹೋಯ್ತು ಎಂದಿದ್ದಾರೆ.
ಸಿಎಂ ಪತ್ನಿ ಸೈಟ್ ವಾಪಸ್ ಕೊಟ್ಟ ಬಗ್ಗೆ ಸಚಿವ ಹೆಚ್.ಸಿ ಮಹದೇವಪ್ಪ ಮಾತನಾಡಿ, ಅಣ್ಣ ತಂಗಿಗೆ ಕೊಟ್ಟಿರುವ ಅರಿಸಿಣ ಕುಂಕುಮದ ಭೂಮಿ ಬಗ್ಗೆ ತಕರಾರು ತೆಗೆದಿದ್ದಕ್ಕೆ ನೊಂದು ವಾಪಸ್ ಮಾಡಿದ್ದಾರೆ ಎಂದಿದ್ದಾರೆ. ಪಕ್ಷದ ಹೈಕಮಾಂಡ್ ಸಿದ್ದರಾಮಯ್ಯ ಪರ ಇದೆ. ಕಾನೂನು ತಜ್ಞರ ಜೊತೆಗೆ ಚರ್ಚೆ ಮಾಡ್ತೇವೆ. ಕಾನೂನು ಹೋರಾಟ ಇದ್ದೇ ಇರುತ್ತದೆ. ತಪ್ಪು ಮಾಡಿದ್ದೇವೆ ತೆಗೆದುಕೊಳ್ಳಿ ಎಂದು ಹೇಳಿಲ್ಲ. ತಮ್ಮ ಪತಿ 40 ವರ್ಷ ರಾಜಕೀಯ ಮಾಡಿದ್ದಾರೆ. ಅವರ ಮೇಲೆ ಎಲ್ಲೂ ಕಪ್ಪು ಚುಕ್ಕೆ ಇಲ್ಲ, ಹಾಗಾಗಿ ನಾನು ಸರೆಂಡರ್ ಮಾಡಿದ್ದೇನೆ ಅಂದಿದ್ದಾರೆ ಎಂದು ಸಚಿವ ಹೆಚ್.ಸಿ ಮಹದೇವಪ್ಪ ಸಮರ್ಥನೆ ಮಾಡಿಕೊಂಡಿದ್ದಾರೆ.