ಕರ್ನಾಟಕ ವೀರಶೈವ ಲಿಂಗಾಯತರನ್ನು ಒಬಿಸಿ ಪಟ್ಟಿಗೆ ಸೇರಿಸುವ ಸಂಬಂಧ ಕೇಂದ್ರಕ್ಕೆ ಶಿಫಾರಸು ಮಾಡಲು ಮುಂದಾದ ಸಿಎಂ ಬಿಎಸ್ ಯಡಿಯೂರಪ್ಪರ ನಡೆ ಸುತ್ತ ಪರ-ವಿರೋಧ ಚರ್ಚೆಗಳು ನಡೆಯುತ್ತಲೇ ಇವೆ. ಈಗಾಗಲೇ ಬಿಜೆಪಿ ಹೈಕಮಾಂಡ್ ಆದೇಶದ ಮೇರೆಗೆ ಈ ನಿರ್ಧಾರದಿಂದ ಬಿಎಸ್ ಯಡಿಯೂರಪ್ಪ ಹಿಂದೆ ಸರಿದಿದ್ದರೂ ತೆರೆಮರೆಯಲ್ಲಿ ಇದರ ಪ್ರಯತ್ನಗಳು ಮುಂದುವರಿದಿವೆ ಎನ್ನಲಾಗುತ್ತಿದೆ. ಹಾಗಾಗಿಯೇ ಯಡಿಯೂರಪ್ಪ ವಿರುದ್ಧ ಬಿಜೆಪಿ ಹೈಕಮಾಂಡ್‌ಗೆ ರಾಜ್ಯ ಬಿಜೆಪಿ ನಾಯಕರು ದೂರು ನೀಡಿದ್ದಾರೆ. ಹೀಗಿರುವಾಗಲೇ ಸಿಎಂ ಸ್ಥಾನದಿಂದ ಯಡಿಯೂರಪ್ಪರನ್ನು ಕೆಳಗಿಳಿಸುವ ಯತ್ನವೂ ನಡೆಯುತ್ತಿದೆ ಎಂದೇಳಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಯಡಿಯೂರಪ್ಪರ ಬೆನ್ನಿಗೆ ತನ್ನ ಇಡೀ ಸಮುದಾಯ ಮತ್ತು ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ನಿಂತಿದ್ದಾರೆ. ಬಿ.ಎಸ್.ಯಡಿಯೂರಪ್ಪ ಅವರೇ ನಿಮಗೇನೂ ಆಗದು, ಧೈರ್ಯದಿಂದ ಇರಿ ಎಂದು ಅಭಯ ನೀಡಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಎರಡು ದಿನಗಳ ಹಿಂದೆ ಚಿತ್ರದುರ್ಗದಲ್ಲಿ ಮುರುಘಾ ಮಠದ ಮುರುಘಾಶ್ರೀ ಮ್ಯೂಸಿಯಂ ಉದ್ಘಾಟನಾ ಸಮಾರಂಭದಲ್ಲಿ ಮಾತಾಡಿದ ಶರಣರು, ಲಿಂಗಾಯತ ವೀರಶೈವ ಸಮುದಾಯದಲ್ಲೂ ಬಡವರು ಇದ್ದಾರೆ. ಇಂತಹ ಸಮುದಾಯವನ್ನು ಒಬಿಸಿ ಪಟ್ಟಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸು ಮಾಡಲು ಮುಂದಾಗಿದ್ದೀರಿ. ನಿಮ್ಮ ನಿರ್ಧಾರ ನಮಗೆ ಸಂತಸ ತಂದಿದೆ. ಈ ಕಾರ್ಯವನ್ನು ಆದಷ್ಟೂ ಬೇಗ ಪೂರ್ಣಗೊಳಿಸಿ. ಇದು ನಿಮ್ಮಿಂದಲೇ ಸಾಧ್ಯ. ಇದಕ್ಕಾಗಿ ನೀವು ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರೆಯಬೇಕಿದೆ ಎಂದರು.
ಯಾವುದೇ ಕಾರಣಕ್ಕೂ ಹೆದರಬೇಡಿ. ಒಬಿಸಿ ಪಟ್ಟಿಗೆ ಸೇರ್ಪಡೆ ಮಾಡಲು ನೀವು ಧೈರ್ಯದಿಂದ ದೆಹಲಿಗೆ ಹೋಗಿ. ನಿಮ್ಮೊಂದಿಗೆ ನಾವಿದ್ದೇವೆ, ಇಡೀ ಸಮುದಾಯ ಇದೆ. ನಿಮ್ಮ ಕಾರ್ಯವನ್ನು ಮುಂದುವರಿಸಿ. ನಾವು ನಿಮ್ಮ ಬೆಂಬಲಕ್ಕೆ ಇದ್ದೇವೆ ಎಂದರು. ಶರಣರ ಅಭಿಪ್ರಾಯಕ್ಕೆ ವೇದಿಕೆ ಮೇಲಿದ್ದ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಹಾಗೂ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಒಪ್ಪಿಗೆ ಸೂಚಿಸಿದರು.
ಬಿಜೆಪಿಯಲ್ಲಿ ಮುಖ್ಯಮಂತ್ರಿ ಬದಲಾವಣೆ ಕೂಗು ಮತ್ತೊಮ್ಮೆ ಮುನ್ನಲೆಗೆ ಬಂದಿದೆ. ಹೀಗಾಗಿ ಯಾವ ಕ್ಷಣದಲ್ಲಿ ಬೇಕಾದರೂ ಸಿಎಂ ಸ್ಥಾನದಿಂದ ಬಿಎಸ್ ಯಡಿಯೂರಪ್ಪರನ್ನು ಕೆಳಗಿಳಿಸಬಹುದು. ಆದ್ದರಿಂದ ಯಡಿಯೂರಪ್ಪ ವೀರಶೈವ ಲಿಂಗಾಯರಿಗೆ ಓಬಿಸಿ ಮೀಸಲಾತಿ ಕೊಡಿಸಿ ತನ್ನ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಈ ವಿಚಾರ ಬಿಜೆಪಿ ಬಿಸಿ ತುಪ್ಪವಾಗಲಿದೆ. ಹಾಗಾಗಿ ಸಿಎಂ ಯಡಿಯೂರಪ್ಪರ ಶಕ್ತಿ ಪ್ರದರ್ಶನಕ್ಕೆ ಸೆಡ್ಡು ಹೊಡೆಯಲು ಬಿಜೆಪಿ ಹೈಕಮಾಂಡ್ ಮಧ್ಯಪ್ರವೇಶಿಸಿ ಈ ನಿರ್ಧಾರದಿಂದ ಹಿಂದೆ ಸರಿಯುವಂತೆ ಮಾಡಿದೆ.
Also Read: ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ CM ರಾಜಕೀಯ ಕಾರ್ಯದರ್ಶಿ ಆತ್ಮಹತ್ಯೆ ಯತ್ನ
ಈ ಎಲ್ಲಾ ಬೆಳವಣಿಗೆಗಳನ್ನು ಅರಿತ ಸಿಎಂ ಯಡಿಯೂರಪ್ಪ ತನ್ನ ಸಮುದಾಯವನ್ನು ಮುಂದಿಟ್ಟುಕೊಂಡು ಮುಖ್ಯಮಂತ್ರಿ ಕುರ್ಚಿ ಉಳಿಸಲು ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಇದಕ್ಕಾಗಿ ಸಮುದಾಯದ ಮುಂಖಡರು ಮತ್ತು ಸ್ವಾಮೀಜಿಗಳಿಂದ ಸಾಲು ಸಾಲು ಹೇಳಿಕೆಗಳನ್ನು ಕೊಡಿಸಲು ಯೋಜನೆ ರೂಪಿಸಿದ್ದಾರೆ. ಈ ಮೂಲಕ ತಾನು ಲಿಂಗಾಯತ ಸಮುದಾಯದ ಪ್ರಶ್ನಾತೀತ ನಾಯಕ, ನನ್ನ ಸಿಎಂ ಸ್ಥಾನದಿಂದ ಕೆಳಗಿಳಿಸಿದರೇ ಬಿಜೆಪಿಗೆ ಉಳಿಗಾಲವಿಲ್ಲ ಎಂದು ಹೈಕಮಾಂಡ್‌ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಂದೇಶ ಸಾರುತ್ತಿದ್ದಾರೆ.
ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಕೆಡವಿ ಸಿಎಂ ಸ್ಥಾನಕ್ಕೇ ಪಟ್ಟಕ್ಕೇರಿದ ಬಿ.ಎಸ್. ಯಡಿಯೂರಪ್ಪರ ಸ್ಥಾನಕ್ಕೆ ಸಮರ್ಥರನ್ನು ಕೂರಿಸಲು ಮುಂದಾಗಿರುವ ಬಿಜೆಪಿ ಹೈಕಮಾಂಡ್ ಉತ್ತರಾಧಿಕಾರಿಗೆ ಹುಡುಕಾಟ ನಡೆಸಿದ್ದಾರೆ. ಈ ಆಯ್ಕೆಯನ್ನು ಯಡಿಯೂರಪ್ಪ ಮರ್ಜಿಗೆ ಬಿಡಲಾಗುತ್ತದೆಯೋ ಅಥವಾ ವರಿಷ್ಠರು ಸೂಚಿಸಿದವರೇ ಅಧಿಕಾರ ಸೂತ್ರ ಹಿಡಿಯುತ್ತಾರೋ ಎಂಬುದು ಬಿಜೆಪಿಯಲ್ಲೀಗ ಚರ್ಚೆಯ ಪ್ರಮುಖ ವಿಷಯ. ಈ ಮಧ್ಯೆ ವರಿಷ್ಠರ ಸೂಚನೆ ಧಿಕ್ಕರಿಸುವ ಯಡಿಯೂರಪ್ಪ, ಯಾವುದೇ ಕಾರಣಕ್ಕೂ ಕುರ್ಚಿ ಬಿಟ್ಟು ಕೊಡಲ್ಲ’ ಎಂದು ಖಡಕ್ ಮಾತುಗಳನ್ನಾಡಿದ್ದಾರೆ.
Also Read: ವೀರಶೈವ ಲಿಂಗಾಯತರಿಗೆ ಒಬಿಸಿ ಮೀಸಲಾತಿ; BSY ಬ್ರಹ್ಮಾಸ್ತ್ರಕ್ಕೆ ಹೈಕಮಾಂಡ್ ಬ್ರೇಕ್
ಆಡಳಿತ ನಿರ್ವಹಣೆಯಲ್ಲಿ ಸೋಲು, ಎಲ್ಲದರಲ್ಲೂ ಮಗ ಬಿ.ವೈ. ವಿಜಯೇಂದ್ರ ಹಸ್ತಕ್ಷೇಪವೇ ಸಿಎಂ ಬದಲಾವಣೆಗೆ ಪ್ರಮುಖ ಕಾರಣ. ಇನ್ನೊಂದೆಡೆ ಕರ್ನಾಟಕದಲ್ಲಿ ಪಕ್ಷ ಕಟ್ಟಿ, ಅಧಿಕಾರಕ್ಕೆ ತಂದ ಯಡಿಯೂರಪ್ಪ ಮೇಲೆ ಗೌರವ ಇಟ್ಟಿರುವ ಬಿಜೆಪಿ ಹೈಕಮಾಂಡ್ ಶುಭ ವಿದಾಯದ ರೀತಿಯಲ್ಲಿ ಸಿಎಂ ಸ್ಥಾನ ಕುರ್ಚಿ ತ್ಯಾಗ ಮಾಡಲಿ ಎಂಬ ಅಪೇಕ್ಷೆ ಹೊಂದಿದ್ದಾರೆ. ಇದಕ್ಕೆ ಯಡಿಯೂರಪ್ಪ ಒಪ್ಪುವುದಾದರೇ, ಇವರು ಹೇಳಿದವರನ್ನೇ ಮೊದಲ ಆದ್ಯತೆಯಾಗಿ ಪರಿಗಣಿಸಿ ಸಿಎಂ ಮಾಡಲು ಹೈಕಮಾಂಡ್ ಸಿದ್ದವಿದೆ.
ನಾಯಕತ್ವ ಬದಲಾವಣೆ ಮಾಡಲೇಬೇಕೆಂದು ಕುಳಿತಿರುವ ಬಿಜೆಪಿ ಹೈಕಮಾಂಡ್, ಇದನ್ನು ಯಾವ ರೀತಿ ಸ್ವೀಕರಿಸಲಿದ್ದಾರೆ ಎಂಬುದು ಸದ್ಯದ ಕುತೂಹಲ.