2024 ಆಗಸ್ಟ್ 1 ರಂದು ಬಂದ ಒಳಮೀಸಲಾತಿ ಕುರಿತಾದ ಐತಿಹಾಸಿಕ ತೀರ್ಪು ಪರಿಶಿಷ್ಟ ಜಾತಿಯೊಂದಿಗೆ ಪರಿಶಿಷ್ಟ ಪಂಗಡದಲ್ಲಿಯೂ ವರ್ಗೀಕರಣ ಆಗಬೇಕೆಂದು ಹೇಳಿತ್ತು . ಆದರೆ ಕರ್ನಾಟಕ ಸರ್ಕಾರ ಪರಿಶಿಷ್ಟ ಜಾತಿಗಳಿಗೆ ಮಾತ್ರ ಒಳಮೀಸಲಾತಿ ಜಾರಿ ಪ್ರಕ್ರಿಯೆ ನೆಡೆಸಿದೆ . ಪರಿಶಿಷ್ಟ ಪಂಗಡಗಳಿಗೂ ಒಳಮೀಸಲಾತಿ ವಿಸ್ತರಿಸಲು ಆಗತ್ಯ ಕ್ರಮ ಕೈಗೊಳ್ಳಬೇಕೆಂದು ಬೆಂಗಳೂರಿನ ಶಾಸಕರ ಭವನದಲ್ಲಿ ನೆಡೆದ ಆದಿವಾಸಿ ನಾಯಕರ ಸಭೆ ಆಗ್ರಹಿಸಿದೆ .

ಸಭೆಯ ತರುವಾಯ ಆದಿವಾಸಿ ನಾಯಕರು ಸಮಾಜ ಕಲ್ಯಾಣ ಸಚಿವರಾದ ಡಾ ಹೆಚ್ ಸಿ ಮಹದೇವಪ್ಪ , ಕಾನೂನು ಸಚಿವರಾದ ಹೆಚ್ ಕೆ ಪಾಟೀಲ್ ಹಾಗು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರನ್ನು ಭೇಟಿಯಾಗಿ ಅಹವಾಲು ಸಲ್ಲಿಸಲಾಯಿತು .

ಪರಿಶಿಷ್ಟ ಜಾತಿಗಳಿಗಿಂತ ಪರಿಶಿಷ್ಟ ಪಂಗಡದಲ್ಲಿ ಮೀಸಲಾತಿ ಜಾರಿಯಲ್ಲಿ ಸಮಸ್ಯೆ ಇದೆ . ಸಣ್ಣ ಬುಡಕಟ್ಟುಗಳು , ಸೂಕ್ಷ್ಮ ಬುಡಕಟ್ಟುಗಳು , ದುರ್ಬಲ ಬುಡಕಟ್ಟುಗಳು ಮತ್ತು ಪ್ರಬಲ ಸಮುದಾಯಗಳು ಒಂದೇ ತಟ್ಟೆಯಲ್ಲಿ ಉಣ್ಣುವಂತಾಗಿದೆ . ಹೀಗಾಗಿ ಸರ್ಕಾರದ ಮೀಸಲಾತಿ ವ್ಯವಸ್ಥೆಯಿಂದ ಎಷ್ಟೋ ಬುಡಕಟ್ಟುಗಳು ದೂರವೇ ಉಳಿದಿವೆ . ಸರ್ಕಾರ ತುರ್ತು ಈ ಬಗ್ಗೆ ನಿಗಾ ವಹಿಸಿ STಮೀಸಲಾತಿಯ ವೈಜ್ಞಾನಿಕ ಹಂಚಿಕೆಗಾಗಿ ನಿವೃತ್ತ ನ್ಯಾಯಾಧೀಶರ ಆಯೋಗ ರಚಿಸಬೇಕು . ಸಮಾನರು – ಅಸಮಾನರು ಒಂದೇ ಗುಂಪಿನಲ್ಲಿದ್ದರೆ ಮೀಸಲಾತಿ ಕೊನೆಯ ವ್ಯಕ್ತಿಗೆ ಮರೀಚಿಕೆಯಾಗುತ್ತದೆ ಎಂಬ ಸುಪ್ರೀಂಕೋರ್ಟ್ ತೀರ್ಪಿನ ಉಲ್ಲೇಖವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ .

ವಿಧಾನಪರಿಷತ್ ಸದಸ್ಯರಾದ ಶಾಂತಾರಾಮ್ ಸಿದ್ಧಿ ಪ್ರಾಧ್ಯಾಪಕರಾದ ಸೋಲಿಗರ ಡಾ ಜಡೆಯೇ ಗೌಡ , ಡಾ ಗಣೇಶ್ ಬೆಟ್ಟಕುರುಬ , ಹಸಳರ ಮುತ್ತಪ್ಪ , ಕುಡಿಯರ ಮಿಟ್ಟು ರಂಜನ್ , ಶಿವರಾಜ್ ಯೆರವ , ರಾಜು ಇರುಳಿಗ , ಹಕ್ಕಿಪಿಕ್ಕಿ ಕಾಮರಾಜ್ , ತ್ಯಾಗರಾಜು , ಮರಾಟಿ ನಾಯ್ಕ ಸಮುದಾಯದ ಹೆಚ್ ವಿ ಚಂದ್ರಶೇಖರ್ , ಎಸ್ ಎನ್ ಅಶೋಕ್ , ಕೆ ಎಸ್ ಮಹೇಶ್ , ಗೌಡ್ಲು ಚೇತನ್ , ಎಮ್ ಸಿ ಯೋಗಿಶ್ ಮತ್ತು ಸಾಮರಸ್ಯ ವೇದಿಕೆಯ ವಾದಿರಾಜ್ ನೇತೃತ್ವ ವಹಿಸಿದ್ದರು .

ಸಭೆಯಲ್ಲಿ 12 ಜಿಲ್ಲೆಗಳ ೩೦ಕ್ಕೂ ಹೆಚ್ಚು ಆದಿವಾಸಿ ನಾಯಕರು ಭಾಗವಹಿಸಿದ್ದರು .