ಬೆಂಗಳೂರಿಗೆ ರಸ್ತೆ ಗುಂಡಿಯಿಂದ ಯಾವಾಗ ಮುಕ್ತಿ..? ಎಂಬುವುದು ಒಂದು ಯಕ್ಷ ಪ್ರಶ್ನೆ. ಈಗ ಬಿಬಿಎಂಪಿ ಪವರ್ ಸೆಂಟರ್ ಗೆ ಹೊಸ ಸಾರಥಿ ಬಂದಿದ್ದರೂ, ನಗರದಲ್ಲಿ ಸಾಲು ಸಾಲು ಗುಂಡಿಗಳಿವೆ. ಇದಕ್ಕೊಂದು ಅಂತ್ಯ ಕಾಣಿಸಲು ಹೊಸ ಪ್ಲ್ಯಾನ್ ರೂಪಿಸಿಕೊಂಡಿದ್ದು ಶೀಘ್ರವೇ ರಸ್ತೆ ಗುಂಡ ಮುಕ್ತವಾಗಲಿದೆ ರಾಜಧಾನಿ ಎಂಬ ಭರಸವೆ ಮೂಡಿದೆ.
ಬೆಂಗಳೂರಿನಲ್ಲಿನ ರಸ್ತೆ ಮೇಲಿರುವ ರಸ್ತೆಗುಂಡಿಗಳಿಗೆ ಈ ಬಾರಿಯಾದರೂ ಸಿಗುತ್ತಾ ಮುಕ್ತಿ.?
ಬೆಂಗಳೂರಿಗೆ ಟ್ರಾಫಿಕ್ ಸಮಸ್ಯೆ ಹೇಗೆ ಒಂದು ಬಾಧೆಯೋ ರಸ್ತೆ ಗುಂಡಿಗಳು ಕೂಡ ಅಂಥದ್ದೇ ಒಂದು ಬಾಧೆ. ಎಷ್ಟೇ ಖರ್ಚು ಮಾಡಿದರೂ, ಏನೇ ಮಾಡಿದರೂ ಬಿಬಿಎಂಪಿಯಿಂದ ರಸ್ತೆ ಗುಂಡಿ ಮುಕ್ತ ಮಾಡಲು ಸಾಧ್ಯವಾಗುತ್ತಿಲ್ಲ. ಈಗ ಬಿಬಿಎಂಪಿಗೆ ಹೊಸದಾಗಿ ನೇಮಕವಾಗಿರುವ ಚೀಫ್ ಕಮೀಷನರ್ ತುಷಾರ್ ಗಿರಿನಾಥ್ ಕೂಡ ರಸ್ತೆ ಗುಂಡಿ ಪ್ರಕರಣಕ್ಕೆ ಆಧ್ಯತೆ ನೀಡಿದ್ದು, ಶೀಘ್ರವೇ ಬೆಂಗಳೂರನ್ನು ರಸ್ತೆ ಗುಂಡಿ ಮುಕ್ತ ಮಾಡುವ ಪಣ ತೊಟಿದ್ದಾರೆ. ಇದಕ್ಕಾಗಿ ಸಭೆ ಮೇಲೆ ಸಭೆ ನಡೆಸಿ ಹೊಸ ಪ್ಲ್ಯಾನ್ ರೂಪಿಸಲಾಗಿದೆ. ಹೌದು, ಬಿಬಿಎಂಪಿ ನೂತನ ಮುಖ್ಯ ಆಯುಕ್ತರಿಂದ ರಸ್ತೆಗುಂಡಿ ಮುಚ್ಚಲು ಹೊಸ ಪ್ಲ್ಯಾನ್ ರೂಪಿಸಿದ್ದಾರೆ. ತ್ವರಿತಗತಿಯಲ್ಲಿ ರಸ್ತೆಗುಂಡಿ ಮುಚ್ಚಲು ಬಿಬಿಎಂಪಿಯಿಂದ ಶೀಘ್ರವೇ ಆ್ಯಪ್ ಬಿಡುಗಡೆಯಾಗಲಿದೆ.
ಮೂರು ದಿನದಲ್ಲಿ ಆ್ಯಪ್ ಡಿಸೈನ್ ಮಾಡಿ ಸಾರ್ವಜನಿಕರ ಬಳಕೆಗೆ ಬಿಡಲಿರುವ ಪಾಲಿಕೆ!
ಬಿಬಿಎಂಪಿ ಅಧಿಕಾರಿಗಳು ಹುಡುಕಿ ರಸ್ತೆ ಗುಂಡಿಗಳು ಮುಚ್ಚುವ ಹೊತ್ತಿಗೆ ಮಳೆಗಾಲ ಬಂದು ಅನಾಹುತ ತಪ್ಪಿದ್ದಲ್ಲ ಎಂದರಿತುಕೊಂಡ ಪಾಲಿಕೆಯ ಹೊಸ ಕಮಿಷನರ್ ಈಗ ರಸ್ತೆಗುಂಡಿ ಮುಚ್ಚಲು ಸಾರ್ವಜನಿಕರ ಮೊರೆ ಹೋಗಿದ್ದಾರೆ. ಜನರೇ ಖುದ್ದಾಗಿ ರಸ್ತೆಗುಂಡಿಗಳ ಪೋಟೋ ತೆಗೆದು ಆ್ಯಪ್ ನಲ್ಲಿ ಅಪ್ಲೋಡ್ ಮಾಡಬಹುದು. ಜನರು ಫೋಟೋಸ್, ಲೊಕೇಶ್ ಅಪ್ಲೋಡ್ ಮಾಡಿದರೆ ಪಾಲಿಕೆಯಿಂದ ಗುಂಡಿ ಮುಚ್ಚುವ ಕೆಲಸ ಆಗಲಿದೆ. ಹೀಗಾಗಿ ರಸ್ತೆಗುಂಡಿಗಳ ಬದಲು ಎಷ್ಟು ರಸ್ತೆಯಲ್ಲಿ ಗುಂಡಿಗಳು ಇದ್ದಾವೆ ಅಂತಾ ಲೆಕ್ಕ ಹಾಕುತ್ತಿದೆ ಬಿಬಿಎಂಪಿ. ಎಷ್ಟು ರಸ್ತೆಗಳು ಗುಂಡಿಗಳಿಂದ ಮುಕ್ತ ಮತ್ತು ಎಷ್ಟು ರಸ್ತೆಗಳಲ್ಲಿ ಗುಂಡಿ ಇದ್ದಾವೆ ಎಂಬ ಮಾಹಿತಿಯ ಮೇರೆಗೆ ಪಾಲಿಕೆ ರಸ್ತೆ ಗುಂಡಿಗಳ ಕೆಲಸಕ್ಕೆ ಮುಂದಾಗಿದೆ.

ರಸ್ತೆ ಗುಂಡಿ ಮುಚ್ಚಲು ಬಿಬಿಎಂಪಿ ಹೊಸ ಕಮೀಷನರ್ ರಿಂದ ಹೊಸ ಪ್ಲ್ಯಾನ್!
ಗುಂಡಿಗಳು ಎಷ್ಟು ರಸ್ತೆಗಳಲ್ಲಿ ಬಿದ್ದಿವೆ ಅನ್ನೋ ಲೆಕ್ಕ ಮೂರು ದಿನಗಳಲ್ಲಿ ಸಿದ್ಧ ಪಡಿಸುವ ಭರವಸೆ ನೀಡಿರುವ ಬಿಬಿಎಂಪಿ, ಬೆಂಗಳೂರಿನಲ್ಲಿ ಒಟ್ಟಾರೆ 1,940 km ಆರ್ಟಿರಿಯಲ್ ಮತ್ತು ಸಬ್ ಆರ್ಟಿರಿಯಲ್ ರಸ್ತೆಗಳಿವೆ. ಇಷ್ಟು ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನ ಸಾರ್ವಜನಿಕರ ಸಹಕಾರದೊಂದಿಗೆ ಮುಚ್ಚಲು ಮುಂದಾಗಿದೆ. ಈ ಬಗ್ಗೆ ಹೇಳಿಕೆ ಕೊಟ್ಟ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ರಸ್ತೆ ಗುಂಡಿಗಳಿಂದ ಸಂಪೂರ್ಣವಾಗಿ ಮುಕ್ತಿ ಕೊಡಿಸುವ ನಿಟ್ಟಿನಲ್ಲಿ ರೂಪುರೇಷೆ ಸಿದ್ಧ ಮಾಡಲಾಗಿದೆ. ಕೇವಲ ಮೂರು ದಿನಗಳಲ್ಲಿ ರಸ್ತೆ ಗುಂಡಿಗಳ ಸಂಪೂರ್ಣ ಡೇಟಾ ಸಿದ್ಧವಾಗಲಿದೆ. ಇದಕ್ಕಂತಲೇ ಹೊಸ ಆ್ಯಪ್ ಡಿಸೈನ್ ಮಾಡಲಾಗಿದ್ದು, ಗುರುವಾರದ ಹೊತ್ತಿಗೆ ಜನರ ಬಳಕೆಗೆ ಸಿಗಲಿದೆ. ಎಷ್ಟು ಗುಂಡಿಗಳು ಇದಾವೆ ಅಂತಾ ಸರ್ವೆ ಮಾಡಿದ್ರೆ ಕೆಲಸನೂ ನಡೆಯಲ್ಲ, ಲೆಕ್ಕನು ಮುಗಿಯಲ್ಲ. ಹೀಗಾಗಿ ಎಷ್ಟು ರಸ್ತೆಗಳಲ್ಲಿ ಗುಂಡಿ ಬಿದ್ದಿದ್ದಾವೆ ಎಂದು ರಸ್ತೆಗಳ ಲೆಕ್ಕ ಹಾಕಲು ಸೂಚಿಸಲಾಗಿದೆ
ಕಳಪೆ ಕಾಮಗಾರಿ ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ!
ಇನ್ನು ರಸ್ತೆಗಳ ನಿರ್ಮಾಣ ಸೇರಿದಂತೆ ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಎಲ್ಲಾ ಕಾಮಗಾರಿಗಳ ಕ್ವಾಲಿಟಿ ಚೆಕ್ ಮಾಡುವಂತೆ ಹೊಸ ಚೀಫ್ ಕಮೀಷನರ್ ತುಷಾರ್ ಗಿರಿನಾಥ್ ಸೂಚಿಸಿದ್ದಾರೆ. ಕಳಪೆ ಕಾಮಗಾರಿ ಕಂಡು ಬಂದಲ್ಲಿ ಅಂಥಾ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆ ಕೊಟ್ಟಿದ್ದಾರೆ. ಇತ್ತೀಚೆಗೆ HSR ಲೇಔಟ್ ನಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣ ಒಂದೇ ಮಳೆಗೆ ಕುಸಿದು ಬಿದ್ದಿತ್ತು, ಅಕಾಲಿಕ ಮಳೆಗೆ ರಸ್ತೆ ಗಳು ಕಿತ್ತು ಬಂದಿತ್ತು. ಹೀಗಾಗಿ ಕ್ವಾಲಿಟಿ ಚೆಕ್ ಮಾಡುವಂತ ಇಂಜಿನಿಯರಿಂಗ್ ವಿಭಾಗಕ್ಕೆ ಮುಖ್ಯ ಆಯುಕ್ತರು ತಾಕೀತು ಮಾಡಿದ್ದಾರೆ.