ನವದೆಹಲಿ: ತಂಬಾಕು ಉತ್ಪನ್ನಗಳು ಹಾಗೂ ಪಾನ್ ಮಸಾಲಾ ಬಳಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ(Central Government) ಮಹತ್ವದ ನಿರ್ಧಾರ ಕೈಗೊಂಡಿದ್ದು, ಫೆಬ್ರವರಿ 1ರಿಂದ ಈ ಉತ್ಪನ್ನಗಳ ಮೇಲೆ ಹೆಚ್ಚುವರಿ ಅಬಕಾರಿ ಸುಂಕ ಮತ್ತು ಹೊಸ ಸೆಸ್ ವಿಧಿಸಲು ಬುಧವಾರ ಅಧಿಕೃತ ಅಧಿಸೂಚನೆ ಹೊರಡಿಸಿದೆ.

ಸರ್ಕಾರದ ಅಧಿಸೂಚನೆಯ ಪ್ರಕಾರ, ತಂಬಾಕು, ಸಿಗರೇಟ್ ಹಾಗೂ ಪಾನ್ ಮಸಾಲಾ ಸೇರಿದಂತೆ ‘ಪಾಪ ಸರಕುಗಳು’ ಎಂದು ಗುರುತಿಸಲ್ಪಡುವ ಉತ್ಪನ್ನಗಳ ಮೇಲೆ ಇನ್ನುಮುಂದೆ ಜಿಎಸ್‌ಟಿ ದರಕ್ಕಿಂತ ಹೆಚ್ಚುವರಿ ತೆರಿಗೆ ವಿಧಿಸಲಾಗಲಿದೆ. ಇದುವರೆಗೆ ಈ ವಸ್ತುಗಳ ಮೇಲೆ ಜಾರಿಯಲ್ಲಿದ್ದ ಪರಿಹಾರ ಸೆಸ್ ಅನ್ನು ರದ್ದುಪಡಿಸಿ, ಅದರ ಬದಲಾಗಿ ಹೊಸ ಅಬಕಾರಿ ಸುಂಕ ಹಾಗೂ ಸೆಸ್ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ.

ಫೆಬ್ರವರಿ 1ರಿಂದ ಪಾನ್ ಮಸಾಲಾ, ಸಿಗರೇಟ್, ತಂಬಾಕು ಹಾಗೂ ತಂಬಾಕು ಆಧಾರಿತ ಇತರೆ ಉತ್ಪನ್ನಗಳಿಗೆ ಶೇ. 40ರಷ್ಟು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅನ್ವಯವಾಗಲಿದೆ. ಆದರೆ ಬೀಡಿಗಳ ಮೇಲೆ ಮಾತ್ರ ಶೇ. 18ರಷ್ಟು ಜಿಎಸ್‌ಟಿ ವಿಧಿಸಲಾಗುತ್ತದೆ ಎಂದು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ.

ಹೊಸ ತೆರಿಗೆ ವ್ಯವಸ್ಥೆಯಿಂದ ತಂಬಾಕು ಹಾಗೂ ಪಾನ್ ಮಸಾಲಾ ಉತ್ಪನ್ನಗಳ ಬೆಲೆಗಳಲ್ಲಿ ಗಮನಾರ್ಹ ಏರಿಕೆಯಾಗುವ ಸಾಧ್ಯತೆ ಇದೆ. ಇದರಿಂದ ಗ್ರಾಹಕರ ಮೇಲೆ ನೇರ ಪರಿಣಾಮ ಬೀರುವುದರ ಜೊತೆಗೆ, ಈ ಉತ್ಪನ್ನಗಳ ಬಳಕೆಯನ್ನು ಕಡಿಮೆ ಮಾಡುವ ಉದ್ದೇಶ ಸರ್ಕಾರದ ಕ್ರಮದ ಹಿಂದಿದೆ ಎನ್ನಲಾಗಿದೆ.

ತಂಬಾಕು ಸೇವನೆಯಿಂದ ಉಂಟಾಗುವ ಕ್ಯಾನ್ಸರ್ ಸೇರಿದಂತೆ ಗಂಭೀರ ಆರೋಗ್ಯ ಸಮಸ್ಯೆಗಳ ಹಿನ್ನೆಲೆಯಲ್ಲಿ, ತಂಬಾಕು ಬಳಕೆಯನ್ನು ನಿಯಂತ್ರಿಸಲು ಸರ್ಕಾರ ಈ ಕಠಿಣ ಕ್ರಮ ಕೈಗೊಂಡಿದೆ. ಹೆಚ್ಚಿನ ತೆರಿಗೆ ವಿಧಿಸುವ ಮೂಲಕ ಯುವಜನತೆ ಮತ್ತು ಹೊಸ ಬಳಕೆದಾರರನ್ನು ತಂಬಾಕು ಉತ್ಪನ್ನಗಳಿಂದ ದೂರವಿಡುವ ಗುರಿಯನ್ನು ಸರ್ಕಾರ ಹೊಂದಿದೆ.












