ಸೌತ್‌ನ ಸ್ಟಾರ್ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ ಹೀರೋಗಳಿಗೆ ಬಗೆಬಗೆ ಸ್ಟೆಪ್ಸ್ ಹಾಕಿಸಿ ಖ್ಯಾತಿ ಗಿಟ್ಟಿಸಿಕೊಂಡವರು. ಇದೀಗ ಇದೇ ಕೋರಿಯೋಗ್ರಾಫರ್ ತೆರೆಮೇಲೆ ಮಿಂಚಲು ಸಿದ್ಧರಾಗಿದ್ದಾರೆ.
“ಯಥಾ ರಾಜ ತಥಾ ಪ್ರಜಾ” ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಹೀರೋ ಆಗಿ ಪದಾರ್ಪಣೆ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಈ ಚಿತ್ರದ ಮುಹೂರ್ತ ನೆರವೇರಿದ್ದು, ತೆಲುಗು ನಟ ಶರ್ವಾನಂದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರೆ, ಸಲ್ಮಾನ್ ಖಾನ್ ಬಾಮೈದ ಆಯುಷ್ ಶರ್ಮಾ ಕ್ಯಾಮರಾಕ್ಕೆ ಚಾಲನೆ ನೀಡಿದ್ದಾರೆ.
ನಿರ್ದೇಶಕ ಕರುಣಾ ಕುಮಾರ್ ಮೊದಲ ದೃಶ್ಯವನ್ನು ನಿರ್ದೇಶಿಸಿದ್ದಾರೆ. ಇತ್ತೀಚೆಗಷ್ಟೇ ಕಿಚ್ಚ ಸುದೀಪ್ ನಟನೆಯ “ವಿಕ್ರಾಂತ್ ರೋಣ” ಚಿತ್ರದ ಯಕ್ಕಾ ಸಕ್ಕಾ ಹಾಡಿನ ಹುಕ್ ಸ್ಟೆಪ್ ಮೂಲಕವೇ ಎಲ್ಲರನ್ನು ಕುಣಿಸಿದ್ದ ಜಾನಿ ಮಾಸ್ಟರ್ ಇದೀಗ ನಾಯಕನಾಗಿ ಅದೃಷ್ಟ ಪರೀಕ್ಷೆಗಳಿದಿದ್ದಾರೆ.

“ಯಥಾ ರಾಜ ತಥಾ ಪ್ರಜಾ” ಸಿನಿಮಾದಲ್ಲಿ ಜಾನಿ ಮಾಸ್ಟರ್ ಜತೆಗೆ “ಸಿನಿಮಾ ಬಂಡಿ” ಮೂಲಕ ಗುರುತಿಸಿಕೊಂಡ ವಿಕಾಸ್ ಸಹ ಮುಖ್ಯಭೂಮಿಕೆಯಲ್ಲಿರಲಿದ್ದಾರೆ. ಶ್ರಷ್ಟಿ ವರ್ಮಾ ಈ ಚಿತ್ರದನಾಯಕಿಯಾಗಿದ್ದು. ಶ್ರೀನಿವಾಸ ವಿಟ್ಟಲ ಈ ನಿರ್ದೇಶಿಸಲಿರುವ ಈ ಚಿತ್ರವನ್ನು ಹರೇಶ್ ಪಟೇಲ್ ಜತೆ ಸೇರಿ ಬಂಡವಾಳ ಹೂಡುತ್ತಿದ್ದಾರೆ. ಓಂ ಮೂವಿ ಕ್ರಿಯೇಶನ್ಸ್ ಮತ್ತು ಶ್ರೀ ಕೃಷ್ಣ ಮೂವಿ ಕ್ರಿಯೇಶನ್ಸ್ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣವಾಗಲಿದೆ.
ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದು ಹರೇಶ್ ಪಟೇಲ್ ಅವರೊಟ್ಟಿಗೆ ಸೇರಿ ಸಿನಿಮಾ ನಿರ್ಮಾಣ ಮಾಡುತ್ತಿದ್ದೇನೆ. ಈ ಕಥೆಗೆ ಜಾನಿ ಮಾಸ್ಟರ್ ಸೂಟ್ ಆಗ್ತಾರೆ. ಆ ಕಾರಣಕ್ಕೆ ಅವರಿಗೂ ೨೦ ನಿಮಿಷದಲ್ಲಿ ಸಿನಿಮಾದ ಕಥೆ ಹೇಳಿದೆ. ಕಥೆ ಕೇಳಿ ಅವರಿಂದಲೂ ಓಕೆ ಎಂಬ ಉತ್ತರ ಸಿಕ್ಕಿತು. ಈ ಹಿಂದೆ ಟಿವಿಯಲ್ಲಿ ಕೇವಲ ೧೦ ನಿಮಿಷ ಮಾತ್ರ ರಾಜಕೀಯ ಸುದ್ದಿಗಳು ಪ್ರಸಾರವಾಗುತ್ತಿದ್ದವು. ಇದೀಗ ಅದು ೨೪/೭ ಆಗಿದೆ. ಹಾಗಾಗಿ ನಮ್ಮ ಈ ಸಿನಿಮಾ ಸಹ ರಾಜಕೀಯ ಹಿನ್ನೆಲೆಯಲ್ಲಿ ಮೂಡಿಬರಲಿರುವ ಕಮರ್ಷಿಯಲ್ ಸಿನಿಮಾ. ಸಮಾಜಕ್ಕೆ ಮಹತ್ವದ ಸಂದೇಶವೂ ಇದರಲ್ಲಿದೆ ಎಂದು ನಿರ್ದೇಶಕ ಶ್ರೀನಿವಾಸ್ ವಿಟ್ಟಲ ಚಿತ್ರದ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.
ತೆಲುಗು,ತಮಿಳು ಮತ್ತು ಕನ್ನಡ ಭಾಷೆಗಳಲ್ಲಿ ಮೂಡಿಬರಲಿರುವ “ಯಥಾ ರಾಜ ತಥಾ ಪ್ರಜಾ” ಸಿನಿಮಾ ಸೆಪ್ಟೆಂಬರ್ 15ರಿಂದ ಶೂಟಿಂಗ್ ಶುರುವಾಗಲಿದ್ದು, ಮೂರು ಶೆಡ್ಯೂಲ್‌ನಲ್ಲಿ ಸಿನಿಮಾ ಮುಗಿಸುವ ಯೋಜನೆಯನ್ನು ಚಿತ್ರತಂಡ ಹಾಕಿಕೊಂಡಿದೆ. ಚಿತ್ರದಲ್ಲಿ ನಾಲ್ಕು ಹಾಡುಗಳಿರಲಿದ್ದು, ರಾಧನ ಈ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ.
ಮೆಗಾಸ್ಟಾರ್ ಚಿರಂಜೀವಿ ಅವರ ಬರ್ತ್‌ಡೇ ದಿನದಂದೇ ನಮ್ಮ ಸಿನಿಮಾ ಮುಹೂರ್ತ ಕಂಡಿರುವುದು ಖುಷಿ ವಿಚಾರ. ಶ್ರೀನಿವಾಸ್ ಅವರು ಕಥೆ ಹೇಳಿದ ರೀತಿಯೇ ಚೆನ್ನಾಗಿತ್ತು. ಅದೇ ರೀತಿ ವಿಕಾಸ್ ನಟಿಸಿರುವ “ಸಿನಿಮಾ ಬಂಡಿ” ಸಿನಿಮಾ ನೋಡಿದ್ದೇನೆ. ಇದೀಗ ಅವರೊಂದಿಗೆ ನಟಿಸುತ್ತಿದ್ದೇನೆ. ನಾಗೇಶ್ ಅವರೇ ಈ ಚಿತ್ರಕ್ಕೆ “ಯಥಾ ರಾಜ ತಥಾ ಪ್ರಜಾ” ಎಂಬ ಶೀರ್ಷಿಕೆ ನೀಡಿದ್ದಾರೆ. ಒಟ್ಟು ಮೂರು ಭಾಷೆಗಳಲ್ಲಿ ಈ ಸಿನಿಮಾ ಸಿದ್ಧವಾಗಲಿದೆ ಎಂದು ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ ಹೇಳಿದ್ದಾರೆ.
