ಕಳೆದ ವರ್ಷದ ಗಣರಾಜ್ಯೋತ್ಸವದಂದು ಕೆಂಪು ಕೋಟೆಯ ಮೇಲೆ ಧ್ವಜ ಹಾರಿಸಿದ್ದ ಪಂಜಾಬಿ ನಟ ಹಾಗೂ ಹೋರಾಟಗಾರ ದೀಪ್ ಸಿಧು ರಸ್ತೆ ಅಪಘಾತದಲ್ಲಿ ದುರ್ಮರಣಕ್ಕೀಡಾಗಿದ್ದಾರೆ.
ಸೋನೆಪತ್ ಬಳಿಯ ಕುಂಡ್ಲಿ-ಮನೇಸರ್-ಪಲ್ವಾಲ್ (ಕೆಎಂಪಿ) ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಅವರ ಕಾರು ಟ್ರಕ್‌ನ ಹಿಂಭಾಗಕ್ಕೆ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ ಎಂದು ಸೋನೆಪತ್‌ನ ಕಾನೂನು ಮತ್ತು ಸುವ್ಯವಸ್ಥೆಯ ಡಿಎಸ್‌ಪಿ ವೀರೇಂದ್ರ ಸಿಂಗ್ ಖಚಿತ ಪಡಿಸಿದ್ದಾರೆ.
ಸಿಧು ಅವರು ತಮ್ಮ ವಾಹನದಲ್ಲಿ ಹರಿಯಾಣದ ಖಾರ್ಖೋಡಾ ಪ್ರದೇಶದ ಕೆಎಂಪಿಯ ಪೀಪ್ಲಿ ಟೋಲ್ ಬೂತ್ ಬಳಿ ರಾತ್ರಿ 9 ಗಂಟೆಗೆ ಪಂಜಾಬಿ ನಟಿ ರೀನಾ ಅವರೊಂದಿಗೆ ಪಂಜಾಬಿಗೆ ಸ್ಕಾರ್ಪಿಯೋದಲ್ಲಿ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ವರದಿಯಲ್ಲಿ ತಿಳಿಸಿದ್ದಾರೆ.
ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಟ್ರಕ್‌ನ ಹಿಂಭಾಗಕ್ಕೆ ವಾಹನ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಸ್ಕಾರ್ಪಿಯೋ ಚಾಲಕನ ಭಾಗದಲ್ಲಿ ಕಾರು ನುಜ್ಜುಗುಜ್ಜಾಗಿದೆ. ಕಾರು ಚಲಾಯಿಸುತ್ತಿದ್ದ ಸಿಧು ಗೆ ಗಂಭೀರ ಗಾಯಗಳಾಗಿ, ಆಸ್ಪತ್ರೆಗೆ ದಾಖಲಿಸಿದರೂ ಚಿಕತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಅವರ ಜೊತೆಗಿದ್ದ ನಟಿ ಪ್ರಾಣಾಪಾಯದಿಂದ ಪಾರಾಗಿದ್ದು ಆಸ್ಪತ್ರೆಯಲ್ಲಿ ಚಿಕತ್ಸೆ ಪಡೆಯುತ್ತಿದ್ದಾರೆ.
ಕಳೆದ ವರ್ಷ ರಾಷ್ಟ್ರ ರಾಜಧಾನಿಯಲ್ಲಿ ರೈತರ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಮರುದಿನ ಕೆಂಪು ಕೋಟೆ ಮೇಲೆ ಧ್ವಜ ಹಾರಿಸಿದ್ದು ದೀಪ್ ಸಿಧು ಭಾವಚಿತ್ರ ಎಲ್ಲಡೇ ವೈರಲ್ ಆಗಿತ್ತು. ದೆಹಲಿ ಪೊಲೀಸರು ಕೆಂಪು ಕೋಟೆಗೆ ನುಗ್ಗಿ ಆಸ್ತಿ ಧ್ವಂಸ ಮಾಡಿದ ಆರೋಪದ ಮೇಲೆ ರೈತ ಸಂಘದ ಮುಖಂಡರು ಮತ್ತು ಪ್ರತಿಭಟನಾಕಾರರ ವಿರುದ್ಧ 25 ಎಫ್‌ಐಆರ್‌ಗಳನ್ನು ದಾಖಲಿಸಿದ್ದರು. ಆ ವೇಳೆ ಸಿಧು ವಿರುದ್ಧ ಪ್ರಕರಣ ದಾಖಲಾಗಿತ್ತು.
ಏಪ್ರಿಲ್‌ನಲ್ಲಿ ದೆಹಲಿ ನ್ಯಾಯಾಲಯವು ಸಿಧು ಅವರಿಗೆ ಜಾಮೀನು ನೀಡಿತ್ತು. ಆದರೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ಸಲ್ಲಿಸಿದ ದೂರಿನ ಮೇರೆಗೆ ದಾಖಲಿಸಲಾದ ಪ್ರಕರಣದಲ್ಲಿ ಕೆಂಪು ಕೋಟೆಗೆ “ಹಾನಿ” ಮಾಡಿದ ಆರೋಪದ ಮೇಲೆ ತಿಹಾರ್ ಜೈಲಿನಿಂದ ದೆಹಲಿ ಪೊಲೀಸರ ಅಪರಾಧ ವಿಭಾಗದಿಂದ ಪುನಃ ಅವರನ್ನು ಬಂಧಿಸಲಾಯಿತು.
ದೆಹಲಿ ಪೊಲೀಸರು, ಅವರ ಬಂಧನದ ವಿಚಾರಣೆಯ ಸಂದರ್ಭದಲ್ಲಿ, ಸಿಧು “ಮುಖ್ಯ ಗಲಭೆ ಮತ್ತು ಪ್ರಚೋದಕ” ಮತ್ತು ಜನವರಿ 26 ರಂದು ಹಿಂಸಾಚಾರದ ಸಂದರ್ಭದಲ್ಲಿ ಕತ್ತಿಗಳು, ಕೋಲುಗಳು ಮತ್ತು ಧ್ವಜಗಳೊಂದಿಗೆ ವೀಡಿಯೊದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಹೇಳಿದ್ದರು.
ಜಾಮೀನು ಆದೇಶದಲ್ಲಿ, ಅವರ ಪರ ವಕೀಲರು ಜನಪ್ರಿಯರಾಗಿದ್ದರಿಂದ ಅವರ ಉದಾಹರಣೆಯನ್ನು ನೀಡಲು ಪ್ರಯತ್ನಿಸಿದ್ದಾರೆ. ಆದರೆ ಇದು “ನ್ಯಾಯದ ವೈಫಲ್ಯಕ್ಕೆ ಅಪಾಯವನ್ನುಂಟುಮಾಡುತ್ತದೆ” ಮತ್ತು ಅವರ ನಿರಂತರ ಬಂಧನವು ಅವರ ಜೀವನ ಮತ್ತು ಸ್ವಾತಂತ್ರ್ಯದ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ನ್ಯಾಯಾಲಯದ ಗನಮನಕ್ಕೆ ತಂದಿದ್ದರು. ಹೀಗಾಗಿ ಕೆಲವು ದಿನಗಳ ನಂತರ ಎರಡನೇ ಪ್ರಕರಣದಲ್ಲಿ ನ್ಯಾಯಾಲಯವು ಅವರಿಗೆ ಜಾಮೀನು ನೀಡಿತ್ತು.
ಸಿಧು ಅವರ ಮರಣದ ನಂತರ ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಟ್ವೀಟ್ ನಲ್ಲಿ ಮಾಡಿ “ಖ್ಯಾತ ನಟ ಮತ್ತು ಸಾಮಾಜಿಕ ಕಾರ್ಯಕರ್ತ # ದೀಪ್ ಸಿಧು ಅವರ ದುರದೃಷ್ಟಕರ ನಿಧನದ ಸುದ್ದಿ ತಿಳಿದು ತೀವ್ರ ದುಃಖವಾಯಿತು. ನನ್ನ ಆಲೋಚನೆಗಳು ಮತ್ತು ಪ್ರಾರ್ಥನೆಗಳು ದುಃಖಿತ ಕುಟುಂಬ ಮತ್ತು ಅಭಿಮಾನಿಗಳೊಂದಿಗೆ ಇವೆ,” ಎಂದಿದ್ದಾರೆ.