ಕನ್ನಡ ಚಿತ್ರ ಪ್ರೇಮಿಗಳಲ್ಲಿ ತಮ್ಮ ಸಿನಿಮಾಗಳ ಮೂಲಕ ಹೊಸ ಭರವಸೆಯನ್ನ ಮೂಡಿಸಿದ್ದ ಚಿರಂಜೀವಿ ಸರ್ಜಾ ಪ್ರತಿಭಾನ್ವಿತ ನಟ ಎಂದು ಹೆಸರು ಗಳಿಸಿದ್ದರು.
ತಮ್ಮ ನಟನೆಯಿಂದ ಜನಮನ ಗೆದ್ದ ನಟ ಚಿರಂಜೀವಿ ಸರ್ಜಾ. ಚಿಕ್ಕ ವಯಸ್ಸಿನಲ್ಲೇ ಹೃದಯಾಘಾತದಿಂದ ತಮ್ಮ ಉಸಿರು ಚೆಲ್ಲಿದ್ದರು, ಇದು ಕನ್ನಡ ಚಿತ್ರರಂಗಕ್ಕೆ ಬಹುದೊಡ್ಡ ಆಘಾತವನ್ನು ಉಂಟುಮಾಡಿತು
ಚಿರು ತಮ್ಮ ನಿಧನಕ್ಕೂ ಮುಂಚೆ “ರಾಜಮಾರ್ತಾಂಡ” ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ್ದರು. ಚಿತ್ರೀಕರಣ ಸಹ ಮುಕ್ತಾಯವಾಗಿತ್ತು. ಆದರೆ ಡಬ್ಬಿಂಗ್ ಮಾತ್ರ ಬಾಕಿಯಿತ್ತು. ಅಣ್ಣನ ಪಾತ್ರಕ್ಕೆ ತಮ್ಮ ಧ್ರುವ ಸರ್ಜಾ ಧ್ವನಿ(ಡಬ್ಬಿಂಗ್) ನೀಡಿದರು. ಚಿತ್ರವನ್ನು ಪೂರ್ಣ ಮಾಡಲು ಮೇಘನಾರಾಜ್ ಸರ್ಜಾ ಅವರು ನೀಡಿದ ಸಹಕಾರ ಮರೆಯುವ ಹಾಗಿಲ್ಲ.
ಶಿವಕುಮಾರ್ ಅವರು ನಿರ್ಮಿಸಿರುವ, ರಾಮನಾರಾಯಣ್ ನಿರ್ದೇಶಿಸಿರುವ ಹಾಗೂ ಚಿರಂಜೀವಿ ಸರ್ಜಾ ನಾಯಕನಾಗಿ ನಟಿಸಿರುವ “ರಾಜ ಮಾರ್ತಾಂಡ” ಚಿತ್ರ ಬಿಡುಗಡೆಗೆ ಸಿದ್ದವಾಗಿದೆ. ಅಣ್ಣ ಚಿರು ಎಂದರೆ ತಮ್ಮ ಧ್ರುವ ಅವರಿಗೆ ತುಂಬಾ ಪ್ರೀತಿ. ಹಾಗಾಗಿ “ರಾಜ ಮಾರ್ತಾಂಡ” ಚಿತ್ರವನ್ನು ಧ್ರುವ ಸರ್ಜಾ ಅವರ ಹುಟ್ಟುಹಬ್ಬದ ದಿನದಂದು ಬಿಡುಗಡೆ ಮಾಡಲು ನಿರ್ಮಾಪಕ ಹಾಗೂ ನಿರ್ದೇಶಕರು ನಿರ್ಧರಿಸಿದ್ದಾರೆ.
ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಧರ್ಮವಿಶ್ ಹಿನ್ನೆಲೆ ಸಂಗೀತ, ಕೆ.ಗಣೇಶ್ ಛಾಯಾಗ್ರಹಣ, ವೆಂಕಟೇಶ್ ಯು ಡಿ ವಿ ಸಂಕಲನ, ವಿನೋದ್, ಪಳನಿರಾಜ್ ಸಾಹಸ ನಿರ್ದೇಶನ ಹಾಗೂ ಭೂಷಣ್, ಹರ್ಷ ಅವರ ನೃತ್ಯ ನಿರ್ದೇಶನ ಈ ಚತ್ರಕ್ಕಿದೆ.
ಚಿರಂಜೀವಿ ಸರ್ಜಾ ಅವರಿಗೆ ನಾಯಕಿಯರಾಗಿ ದೀಪ್ತಿ ಸಾತಿ, ಮೇಘಶ್ರೀ, ತ್ರಿವೇಣಿ (ಟಗರು) ಅಭಿನಯಿದ್ದಾರೆ. ಭಜರಂಗಿ ಲೋಕಿ, ಚಿಕ್ಕಣ್ಣ, ದೇವರಾಜ್, ಸುಮಿತ್ರ, ಶಂಕರ್ ಅಶ್ವಥ್, ವಿನೀತ್ ಕುಮಾರ್ (ಬಾಂಬೆ) ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.