ಚಿಲುಮೆ ಸಂಸ್ಥೆ ನಡೆಸಿದ ಅಕ್ರಮ ಈಗ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಬೆಂಗಳೂರು ಬಿಬಿಎಂಪಿ ಚುನಾವಣೆ ನೆನೆಗುದಿಗೆ ಬಿದ್ದಿದ್ರೂ ಶೀಘ್ರವೇ ನಡೆಯುವ ನಿರೀಕ್ಷೆ ಇದೆ. ಈ ಮಧ್ಯೆ ಚಿಲುಮೆ ಸಂಸ್ಥೆಯ ಅಕ್ರಮಕ್ಕೆ ಬೆದರಿದ ಕಾರ್ಪೊರೇಟರ್ ಟಿಕೆಟ್ ಅಕಾಂಕ್ಷಿಗಳು ಸರ್ವೇ ಮಾಡಲು ಮುಂದಾಗಿದ್ದಾರೆ.
ಚುನಾವಣಾ ಆಯೋಗದ ನಿಯಮ ಗಾಳಿಗೆ ತೂರಿದ ಚಿಲುಮೆ ಸಂಸ್ಥೆಗೆ ಸಂಕಷ್ಟ ಎದುರಾಗಿದೆ. ಒಂದೆಡೆ ಪೊಲೀಸರು ತೀರ್ವ ತನಿಖೆ ಕೈಗೆತ್ತಿಕೊಂಡಿದ್ದಾರೆ. ಆದ್ರೆ ಇತ್ತ ಈ ಅದ್ವಾನದ ಬೆನ್ನಲ್ಲೇ ಬಿಬಿಎಂಪಿ ಚುನಾವಣಾ ಟಿಕೆಟ್ ಆಕಾಂಕ್ಷಿಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಸರ್ವೇಗೆ ಮುಂದಾಗಿದ್ದಾರೆ. ಬೆಂಗಳೂರಿನಲ್ಲಿ ಆರುವರೆ ಲಕ್ಷ ಮತದಾರ ಪಟ್ಟಿ ಡಿಲೀಟ್ ಮಾಡಲಾಗಿದೆ. ಈ ಹಿನ್ನೆಲೆ ಚಿಲುಮೆ ಸಂಸ್ಥೆಯ ಗೋಲ್ ಮಾಲ್ ಗೆ ಬೆದರಿದ ಅಭ್ಯರ್ಥಿಗಳು ತಮ್ಮ ಏರಿಯಾದ ವೋಟರ್ ಲಿಸ್ಟ್ ಅನ್ನು ಮತ್ತೊಮ್ಮೆ ಪರಿಶೀಲನೆ ಮಾಡಲು ಮುಂದಾಗಿದ್ದಾರೆ.
ತಮ್ಮ ಕ್ಷೇತ್ರದಲ್ಲಿ ವೋಟರ್ ಡಿಲೀಟ್ ಆದವರ ಪರಿಶೀಲನೆ ಮಾಡಲು ಮುಂದಾದ ಅಕಾಂಕ್ಷಿಗಳು.!!
ಇತ್ತೀಚಿಗಷ್ಟೆ ಮತದಾರರ ಪಟ್ಟಿ ಪರಿಷ್ಕರಣೆ ಆದವರ ಹೆಸರು ಡಿಲೀಟ್ ಆಗಿತ್ತು. ಇದರಲ್ಲಿ ವಾರ್ಡ್ ಪುನರ್ ವಿಂಗಡಣೆಯೂ ಆಗಿರುವುದರಿಂದ ಕೆಲವು ಭಾಗದಲ್ಲಿ ಹೊಸ ವಾರ್ಡ್ ಗಳಿಗೆ ಮತದಾರರು ಸೇರಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಈ ಪ್ರಕರಣ ಬೆಳಕಿಗೆ ಬಂದಿದ್ದು, ಆಯಾ ವಾರ್ಡ್, ಏರಿಯಾದಲ್ಲಿ ಮತದಾರರ ಪಟ್ಟಿ ಪುನರ್ ಪರಿಶೀಲನೆಗೆ ಮುಂದಾಗಿದ್ದು ಸದ್ಯಕ್ಕೆ ಇದೀಗ ಎರಡು ವಿಧಾನಸಭಾ ಕ್ಷೇತ್ರ, 20ಕ್ಕೂ ಹೆಚ್ಛು ವಾರ್ಡ್ ಗಳಲ್ಲಿ ಪರಿಶೀಲನೆ ನಡೆಸಲು ಈ ಭಾಗದ ಆಕಾಂಕ್ಷಿಗಳು ಮುಂದಾಗಿದ್ದಾರೆ.
ತಮ್ಮ ಮತದಾರರ ಪಟ್ಟಿ ಪರಿಶೀಲಿಸಲು ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ಕೈ ನಾಯಕರ ಓಡಾಟ ನಡೆಸುತ್ತಿದ್ದಾರೆ. ಶಾಸಕ ದಿನೇಶ್ ಗುಂಡೂರಾವ್ ಸೂಚನೆ ಮೇರೆಗೆ ಸ್ಥಳೀಯ ನಾಯಕರ ಮೂಲಕ ಮತದಾರ ಪಟ್ಟಿಯಲ್ಲಿ ಡಿಲೀಟ್ ಆದವರ ಪರಿಶೀಲನಾ ಸರ್ವೆ ನಡೆಯುತ್ತಿದೆ. ಈ ವೇಳೆ ವಿನಾ ಕಾರಣ ಪಟ್ಟಿಯಿಂದ ಕಾಂಗ್ರೆಸ್ ಮತದಾರರ ಹೆಸರು ಕಿತ್ತು ಹಾಕಿರುವುದು ದೃಢ ಅಗಿದೆಯಂತೆ.
ಅದೇ ರೀತಿ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿಯೂ ಪರಿಶೀಲಿಸಲಾಗುತ್ತಿದ್ದು, ಮಾಜಿ ಮೇಯರ್ ಗಂಗಾಂಬಿಕೆ ವಾರ್ಡ್ ಸೇರಿದಂತೆ ತಮ್ಮ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರ ಮೂಲಕ ಮತದಾರ ಡಿಲೀಟ್ ಆದ ಮಾಹಿತಿ ಕಲೆಹಾಕಲಾಗುತ್ತಿದೆ. ಹೀಗೆ ಮತದಾರ ಹೆಸರು ಡಿಲೀಟ್ ಆದ ಮಾಹಿತಿ ಪಡೆದು, ಎಲ್ಲಾ ಪರಿಶೀಲನೆ ಬಳಿಕ ಬಿಬಿಎಂಪಿ, ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಲು ಕೈ ನಾಯಕರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.