ಮಿಲೆನಿಯಂ ಮಕ್ಕಳ ಭವಿಷ್ಯತ್ತು ವರ್ತಮಾನದ ಸಾಮಾಜಿಕ-ಸಾಂಸ್ಕೃತಿಕ ಕಾಳಜಿ ಆಗಬೇಕಿದೆ
ಹತ್ತೊಂಬತ್ತನೇ ಶತಮಾನದ ಉತ್ತರಾರ್ಧ ಭಾರತದ ಇತಿಹಾಸದಲ್ಲಿ ಸದಾ ಸ್ಮರಣೀಯವಾಗುವ ಒಂದು ಕಾಲಘಟ್ಟ. ನಾಲ್ಕು ದಶಕಗಳ ಅಂತರದಲ್ಲಿ ದೇಶದ ರಾಜಕೀಯ-ಸಾಮಾಜಿಕ-ಸಾಂಸ್ಕೃತಿಕ-ಆಧ್ಯಾತ್ಮಿಕ-ಆರ್ಥಿಕ ಹಾಗೂ ನಾಗರಿಕ ಪ್ರಜ್ಞೆಗೆ ಒಂದು ಸ್ಪಷ್ಟ ದಿಕ್ಸೂಚಿಯನ್ನು ಕಲ್ಪಿಸಿದ ಐವರು ಮಹನೀಯರು ಜನಿಸಿದ ಒಂದು ಕಾಲಘಟ್ಟ ಇದು. 1861ರಲ್ಲಿ ರವೀಂದ್ರನಾಥ ಠಾಗೋರ್, 1863ರಲ್ಲಿ ವಿವೇಕಾನಂದ, 1869ರಲ್ಲಿ ಮಹಾತ್ಮಾ ಗಾಂಧಿ 1889ರಲ್ಲಿ ಜವಹರಲಾಲ್ ನೆಹರೂ ಮತ್ತು 1891ರಲ್ಲಿ ಡಾ. ಬಿ.ಆರ್. ಅಂಬೇಡ್ಕರ್. ಈ ಐವರು ವರ್ತಮಾನದ ಭಾರತೀಯ ಸಮಾಜದಲ್ಲಿ ವಿವಿಧ ಆಯಾಮಗಳಲ್ಲಿ ಕಾಣಿಸಿಕೊಳ್ಳುತ್ತಲೇ ಇದ್ದಾರೆ. ಕೆಲವರನ್ನು ದೈವತ್ವಕ್ಕೆ ಏರಿಸುವ, ಕೆಲವರನ್ನು ಅಲ್ಲಗಳೆಯುವ, ಇನ್ನು ಕೆಲವರನ್ನು ಬಳಕೆಯ ಶಕ್ತಿಯನ್ನಾಗಿ ಪರಿಗಣಿಸುವ ಒಂದು ಸ್ವಾರ್ಥ ಸಮಾಜವು ಹೇಗೇ ಕಲ್ಪಿಸಿದರೂ, ಈ ಐವರು ಮಹನೀಯರ ದೂರದರ್ಶಿತ್ವ, ದೂರಗಾಮಿ ಚಿಂತನೆ, ಸೈದ್ಧಾಂತಿಕ ಮಾದರಿ ಹಾಗೂ ಸಾಮಾಜಿಕ ಆದರ್ಶಗಳನ್ನು ಅಲ್ಲಗಳೆಯಲಾಗುವುದಿಲ್ಲ.
ಇವರಲ್ಲೊಬ್ಬರಾದ ಜವಹರಲಾಲ್ ನೆಹರೂ ಇಂದು ಅಧಿಕಾರ ರಾಜಕಾರಣದಲ್ಲಿ ನಿರಾಕರಿಸಲಾಗದ ಆದರೆ ಸೈದ್ಧಾಂತಿಕ ರಾಜಕಾರಣದಲ್ಲಿ ನಿರಾಕರಿಸಲ್ಪಡುತ್ತಿರುವ ಒಂದು ಶಕ್ತಿಯಾಗಿ ಕಾಣುತ್ತಾರೆ. ಇಂದು ಈ ಮಹಾನ್ ನಾಯಕನ ಜನ್ಮದಿನವನ್ನು ದೇಶವು ಮಕ್ಕಳ ದಿನಾಚರಣೆಯಾಗಿ ಆಚರಿಸುತ್ತಿದೆ. ಭಾರತ ಬೆಳೆದು ನಿಂತಿದೆ ಎಂಬ ಭ್ರಮೆಯಲ್ಲಿ ನೆಹರೂ ಅವರನ್ನು ತಾತ್ವಿಕವಾಗಿ ಮೂಲೆಗುಂಪು ಮಾಡುವ ದುಷ್ಟ ಪರಂಪರೆಯ ನಡುವೆಯೇ ನೆಹರೂ ಆಧುನಿಕ ಭಾರತದ ಶಿಲ್ಪಿಯಾಗಿ ಎತ್ತರದಲ್ಲಿ ನಿಲ್ಲುವುದು ವಾಸ್ತವ. ಮಕ್ಕಳನ್ನು ಅತಿಯಾಗಿ ಪ್ರೀತಿಸುತ್ತಿದ್ದ, ಚಾಚಾ ನೆಹರೂ ಎಂದೇ ಖ್ಯಾತಿ ಪಡೆದಿದ್ದ ನೆಹರೂ ಅವರ ಜನ್ಮದಿನವನ್ನು ಸಂಭ್ರಮಿಸುವ ಸಂದರ್ಭದಲ್ಲಿ, ಅವರು ಪ್ರೀತಿಸಿದ ʼಮಕ್ಕಳುʼ 21ನೆಯ ಶತಮಾಜದ ಡಿಜಿಟಲ್ ಯುಗದಲ್ಲಿ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಗಮನಹರಿಸುವುದು ನಮ್ಮ ಆದ್ಯತೆಯಾಗಬೇಕಿದೆ.
ನಾಲ್ಕನೇ ಔದ್ಯೋಗಿಕ ಕ್ರಾಂತಿಯ ಡಿಜಿಟಲ್ ಯುಗದಲ್ಲಿ ಭಾರತ ವಿಶ್ವದ ಅಗ್ರಮಾನ್ಯ ರಾಷ್ಟ್ರವಾಗಲು ಸಜ್ಜಾಗುತ್ತಿದೆ. ಇದಕ್ಕಾಗಿಯೇ ದೇಶದ ಆರ್ಥಿಕತೆಯನ್ನು ಹೊಸ ದಿಕ್ಕಿನಲ್ಲಿ ಕರೆದೊಯ್ಯಲಾಗುತ್ತಿದೆ. ನವ ಉದಾರವಾದ ಮತ್ತು ಬಂಡವಾಳಶಾಹಿ ಅಭಿವೃದ್ಧಿ ಮಾರ್ಗದಲ್ಲಿ ನೆಹರೂ ಯುಗದ ಅಡಿಗಲ್ಲುಗಳೆಲ್ಲವನ್ನೂ ಹಂತಹಂತವಾಗಿ ಶಿಥಿಲಗೊಳಿಸುವ ಮೂಲಕ, ಸ್ವತಂತ್ರ ಭಾರತ ಒಪ್ಪಿಕೊಂಡು ಬಂದಂತಹ ಪ್ರಜಾಸತ್ತಾತ್ಮಕ ಧ್ಯೇಯಗಳನ್ನು ವಿಭಿನ್ನ ನೆಲೆಯಲ್ಲಿ ವ್ಯಾಖ್ಯಾನಿಸಲಾಗುತ್ತಿದೆ. ಇದೇ ನವಂಬರ್ 26ರಕ್ಕೆ 75 ವರ್ಷ ಪೂರೈಸಲಿರುವ ಸಂವಿಧಾನದ ಆಶಯಗಳನ್ನು ಮೌಖಿಕವಾಗಿ ಅನುಸರಿಸುತ್ತಲೇ ಮೌಲಿಕವಾಗಿ ಶಿಥಿಲಗೊಳಿಸುವತ್ತ ದೇಶ ಸಾಗುತ್ತಿದೆ. ಇದಕ್ಕೆ ಪೂರಕವಾಗಿ ತಳಮಟ್ಟದ ಸಮಾಜವನ್ನು ಪ್ರಧಾನವಾಗಿ ನಿರ್ದೇಶಿಸುವ ಸಾಂಸ್ಕೃತಿಕ ಜಗತ್ತನ್ನು ಅಪಭ್ರಂಶಗೊಳಿಸಲಾಗುತ್ತಿದೆ. ಆರಂಭದಲ್ಲಿ ಉಲ್ಲೇಖಿಸಿದ ಐವರು ಮಹನೀಯರ ಚಿಂತನೆಗಳ ನೆಲೆಯಲ್ಲಿ ಈ ಬೆಳವಣಿಗೆಗಳನ್ನು ಗಮನಿಸುತ್ತಲೇ, ಈ ವಿಕಸಿತ ಭಾರತವನ್ನು ಮುನ್ನಡಸಬೇಕಾದ “ ಮಿಲೆನಿಯಂ ಮಕ್ಕಳ ದಿನಾಚರಣೆ ”ಯನ್ನು ನಾವು ಆಚರಿಸುತ್ತಿದ್ದೇವೆ.
ಸಾಮಾನ್ಯವಾಗಿ 20ರ ವಯೋಮಾನದವರೆಗಿನವರನ್ನು ಮಕ್ಕಳು ಎಂದು ಭಾವಿಸುವುದಾದರೆ, ಮಕ್ಕಳ ದಿನದಂದು ನಾವು ಉದ್ದೇಶಿಸಬೇಕಾದ ಮಿಲೆನಿಯಂ ಮಕ್ಕಳನ್ನು ಎರಡು ಗುಂಪುಗಳಲ್ಲಿ ವಿಂಗಡಿಸಬಹುದು. ಮೊದಲನೆಯದು 2004ರಲ್ಲಿ ಜನಿಸಿ ಈಗ ಪ್ರೌಢಾವಸ್ಥೆಯನ್ನು ತಲುಪಿರುವ ಹಾಗೂ ಸುತ್ತಲ ಜಗತ್ತಿನ ಆಗುಹೋಗುಗಳಿಗೆ ಸಂಪೂರ್ಣವಾಗಿ ತೆರೆದುಕೊಂಡಿರುವ ಒಂದು ಗುಂಪು. ಮತ್ತೊಂದು 2014ರಲ್ಲಿ ಜನಿಸಿ ಈಗತಾನೇ ಆಂಡ್ರಾಯ್ಡ್ ಜಗತ್ತಿಗೆ ತೆರೆದುಕೊಂಡಿರುವಂತಹ ಎಳೆಯ ಮಕ್ಕಳ ಗುಂಪು. ಈ ಎರಡೂ ವರ್ಗದ ಮಕ್ಕಳನ್ನು ನಿರ್ದೇಶಿಸುತ್ತಿರುವ ಸಾಮಾಜಿಕ ಪರಿಸರ ಮತ್ತು ಸಾಂಸ್ಕೃತಿಕ ಜಗತ್ತು ನವ ಉದಾರವಾದ ಮತ್ತು ಬಲಪಂಥೀಯ ರಾಜಕಾರಣದ ವಿಕೃತಿಗಳಿಂದ ಆವೃತವಾಗಿವೆ. ತಿರುಚಿದ ಚರಿತ್ರೆ, ಭಾವುಕ ವರ್ತಮಾನ ಮತ್ತು ಕಲ್ಪಿತ ಭವಿಷ್ಯಕ್ಕೆ ತೆರೆದುಕೊಂಡಿರುವ ಈ ಮಕ್ಕಳು ಒಂದು ರೀತಿಯಲ್ಲಿ ಬೌದ್ಧಿಕವಾಗಿ ಅಜ್ಞಾತ ಸ್ಥಿತಿಯಲ್ಲಿರುವುದು ವಾಸ್ತವ.
ಹಿರಿಯ ಮಕ್ಕಳ ಮುಂಗಾಣ್ಕೆಗಾಗಿ
ಜಾಗತೀಕರಣದ ಭ್ರಮಾಲೋಕದಲ್ಲೇ ಜನಿಸಿ ಬೆಳೆದಿರುವ 20ರ ವಯೋಮಾನದ ಮಕ್ಕಳ ಭವಿಷ್ಯ ಇಂದು ಅನಿಶ್ಚಿತತೆಯತ್ತ ಸಾಗುತ್ತಿದೆ. ತಮ್ಮ ವಿದ್ಯಾರ್ಜನೆಯನ್ನು ಪೂರೈಸಿ ಶಾಲಾ ಕಾಲೇಜುಗಳಿಂದ ಹೊರಬರುವ ಈ ಮಕ್ಕಳು ನಗರ ಪ್ರದೇಶಗಳಲ್ಲಿ ಮಾರುಕಟ್ಟೆಯ ಸರಕುಗಳಂತೆ ಪರಿಗಣಿಸಲ್ಪಡುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳ ಈ ಮಕ್ಕಳು ತಮ್ಮ ಬದುಕಿನ ನೆಲೆ ಕಂಡುಕೊಳ್ಳುವ ಸಲುವಾಗಿ ನಗರಗಳನ್ನೇ ಆಶ್ರಯಿಸುವ ಅನಿವಾರ್ಯ ಸನ್ನಿವೇಶವನ್ನು ಎದುರಿಸುತ್ತಿದ್ದಾರೆ. ʼ ಸುಸ್ಥಿರ ಅಭಿವೃದ್ಧಿ ಮಾದರಿʼ (Sustained Development Model) ಎಂದು ಕರೆಯಲ್ಪಡುವ ಕಾರ್ಪೋರೇಟ್ ಮಾರುಕಟ್ಟೆಯ ಆರ್ಥಿಕತೆ ತಳಮಟ್ಟದ ಸಮಾಜದಲ್ಲಿ ಸುಸ್ಥಿರ ಬದುಕನ್ನು ರೂಪಿಸುವುದಿಲ್ಲ ಎಂಬ ವಾಸ್ತವವನ್ನು ಈ ಮಕ್ಕಳಿಗೆ ಮನದಟ್ಟು ಮಾಡಬೇಕಿದೆ. ಶ್ರಮದ ನಡುವೆಯೇ ಬದುಕುವ ತಳವರ್ಗಗಳಲ್ಲೂ ಸಹ ಶ್ರಮದೊಂದಿಗೆ ಮತ್ತು ಶ್ರಮಿಕನೂ ಸಹ ಮಾರುಕಟ್ಟೆಯ ಸರಕುಗಳಂತಾಗುತ್ತಿರುವುದರ ಬಗ್ಗೆ ಅರಿವು ಮೂಡಿಸಬೇಕಿದೆ.
ಜಾಗತೀಕರಣಕ್ಕೆ ಸಮಾನಾಂತರವಾಗಿ ಭಾರತೀಯ ಸಮಾಜವನ್ನು ಆವರಿಸಿ ನಿರ್ದೇಶಿಸುತ್ತಿರುವ ಸಾಂಸ್ಕೃತಿಕ ರಾಜಕಾರಣದ ನಿರೂಪಣೆಗಳು̈ (Narratives) ಈ ತಲೆಮಾರಿನ ಮಕ್ಕಳನ್ನು ಚರಿತ್ರೆಗೆ ಕುರುಡಾಗಿಸಿವೆ. ಭಾರತ ಹುಟ್ಟಿರುವುದೇ 2014ರಲ್ಲಿ ಎಂಬ ಒಂದು ಭಾವುಕ ಪ್ರಪಂಚದಲ್ಲಿರುವ ಈ ಮಕ್ಕಳಿಗೆ ಶತಮಾನಗಳ ಇತಿಹಾಸ ಇರುವ ಭಾರತದ ನೆಲ ಸಂಸ್ಕೃತಿ ಮತ್ತು ಅದರೊಳಗಿನ ಸೌಂದರ್ಯಗಳನ್ನು ಮುಟ್ಟಿಸುವ ಅವಶ್ಯಕತೆ ಇದೆ. ಸಂಸ್ಕೃತಿ ಎಂದರೆ ನಿರ್ದಿಷ್ಟ ಮತ ಅಥವಾ ಧರ್ಮ ಅಲ್ಲ ಎಂಬ ವಾಸ್ತವವನ್ನು ಸ್ಪಷ್ಟಪಡಿಸುವುದರೊಂದಿಗೇ, ಭಾರತದ ಜನಪದೀಯ ಸಾಂಸ್ಕೃತಿಕ ಮೌಲ್ಯಗಳನ್ನು ಸಮಕಾಲೀನಗೊಳಿಸಿ ಅರುಹಬೇಕಿದೆ. ಈ ಕೈಂಕರ್ಯಕ್ಕೆ ಅಡ್ಡಿಯಾಗುವ ಮತೀಯ ರಾಜಕಾರಣ ಮತ್ತು ಮೇಲ್ಪದರ ಸಮಾಜದ ಸಾಂಸ್ಕೃತಿಕ ನಿರೂಪಣೆಗಳ ವಿಕೃತಿಗಳನ್ನು ಒಳಹೊಕ್ಕು ನೋಡುವ ವ್ಯವಧಾನವನ್ನು ಈ ವರ್ಗದಲ್ಲಿ ಬೆಳೆಸಬೇಕಿದೆ. ಭಾರತದ ಸಂವಿಧಾನ ಮತ್ತು ಅದರಿಂದಲೇ ನಿರ್ದೇಶಿಸಲ್ಪಡಬೇಕಾದ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಈ ಪ್ರೌಢ ಮನಸ್ಸುಗಳಲ್ಲಿ ಬಿತ್ತುವ ಮೂಲಕ ನಶಿಸುತ್ತಿರುವ ಜೀವನಮೌಲ್ಯಗಳನ್ನು ಪುನರುಜ್ಜೀವನಗೊಳಿಸುವುದು ಹಿರಿಯ ತಲೆಮಾರಿನ ಆದ್ಯತೆಯಾಗಬೇಕಿದೆ.
ಈ ತಲೆಮಾರಿನ ಮಕ್ಕಳು ಆಧುನಿಕ ನಾಗರಿಕತೆಯ ಪರಿಸರದಲ್ಲೇ ಬೆಳೆದರೂ ಇಂದಿಗೂ ಸಹ ಅಸ್ಪೃಶ್ಯತೆಯಂತಹ ಹೀನಾಚರಣೆ̧ಗೆ ಮಹಿಳಾ ದೌರ್ಜನ್ಯಗಳನ್ನು ಪ್ರಚೋದಿಸುವ ಪಿತೃಪ್ರಧಾನ ಮೌಲ್ಯಗಳಿಗೆ ಮುಖಾಮುಖಿಯಾಗುತ್ತಿದ್ದಾರೆ. ತಳವರ್ಗದ ಶ್ರಮಜೀವಿಗಳ ಶೋಷಣೆಯನ್ನು ಸಹಜ ಎಂದು ಒಪ್ಪಿಕೊಳ್ಳುವ ಮಾರುಕಟ್ಟೆ ಆರ್ಥಿಕತೆಗೆ ತಮ್ಮನ್ನು ಅರ್ಪಿಸಿಕೊಳ್ಳುತ್ತಿದ್ದಾರೆ. ಇಂತಹ ಒಂದು ಸಮಾಜದಲ್ಲೇ ತಮ್ಮ ಭವಿಷ್ಯ ಕಾಣಲಿಚ್ಛಿಸುವ ಈ ಮಕ್ಕಳು ತಮ್ಮ ವ್ಯಕ್ತಿಗತ ಸರಕೀಕರಣ (Individual Commodification) ಮತ್ತು ವೈಯುಕ್ತಿಕ ಸಮ್ಮೋಹನಗೊಳಿಸುವಿಕೆಯ ಆರ್ಥಿಕ-ಸಾಂಸ್ಕೃತಿಕ ಪ್ರಕ್ರಿಯೆಯನ್ನು ಅರಿಯಬೇಕಾದರೆ, ಇವರಿಗೆ ಆರಂಭದಲ್ಲಿ ಉಲ್ಲೇಖಿಸಿದ ಐದೂ ಮಹನೀಯರ ಚಿಂತನೆಗಳನ್ನು ಮುಟ್ಟಿಸಬೇಕಾಗುತ್ತದೆ. ಹಾಗೆಯೇ ಸ್ವತಃ ಶೋಷಣೆಗೊಳಗಾಗಬಹುದಾದ ತಮ್ಮ ಭವಿಷ್ಯದಿಂದ ಪಾರಾಗಲು ಕಾರ್ಲ್ಮಾರ್ಕ್ಸ್ನ ತಾತ್ವಿಕತೆಯನ್ನೂ ಪರಿಚಯಿಸಬೇಕಾಗುತ್ತದೆ.
ಇತಿಹಾಸವನ್ನು ಅರಿಯದ, ವರ್ತಮಾನವನ್ನು ಗ್ರಹಿಸದ, ಭವಿಷ್ಯವನ್ನು ಊಹಿಸದ ಸ್ಥಿತಿಯಲ್ಲಿರುವ ಈ ತಲೆಮಾರಿನ ಮಕ್ಕಳಿಗೆ ತಮ್ಮ ಸುತ್ತಲೂ ಇಂದಿಗೂ ಸಹ ಬಡತನ, ಹಸಿವೆ, ನಿರ್ಗತಿಕತೆ, ನಿರ್ವಸತಿಕತೆ, ಶೋಷಣೆ ಮತ್ತು ಪುರುಷಾಧಿಪತ್ಯದ ಯಜಮಾನಿಕೆಯ ಸಂಸ್ಕೃತಿ ಜೀವಂತವಾಗಿದೆ ಎನ್ನುವುದನ್ನು ಮನದಟ್ಟು ಮಾಡಬೇಕಿದೆ. ಹಾಗೆಯೇ ಈ ಮೌಲ್ಯಗಳನ್ನು ಸಮರ್ಥಿಸಿ ಕಾಪಾಡುವಂತಹ ಪ್ರಾಚೀನ ಮನಸ್ಥಿತಿಯ ಆಲೋಚನಾ ಕ್ರಮಗಳನ್ನು ಭಂಗಗೊಳಿಸಿ, ಈ ಮಿಲೆನಿಯಂ ಮಕ್ಕಳಲ್ಲಿ, ತಮ್ಮನ್ನು ಆವರಿಸಿದ ಗೋಡೆಗಳಿಂದಾಚೆಗೂ ಇರುವ ಪ್ರಪಂಚವನ್ನು ನೋಡುವ ಬೌದ್ಧಿಕ ಪ್ರಜ್ಞೆಯನ್ನು ಬೆಳೆಸಬೇಕಿದೆ. ತತ್ವ-ಸಿದ್ಧಾಂತಗಳ ಭದ್ರಕೋಟೆಗಳನ್ನು ಭೇದಿಸಿ ಭವಿಷ್ಯ ಭಾರತದಲ್ಲಿ ಮಾನವತೆಯ ಹಾದಿಗಳನ್ನು ನಿರ್ಮಿಸುವ ಕಾರ್ಯಪಡೆಗಳಾಗಿ ಈ ಮಕ್ಕಳನ್ನು ತಯಾರು ಮಾಡಬೇಕಿದೆ. ಆಗ ಮಾತ್ರ ನಗರೀಕರಣಕ್ಕೊಳಗಾದ ಮಕ್ಕಳು ಆಂಡ್ರಾಯ್ಡ್ ಪ್ರಪಂಚದಿಂದಾಚೆ ಮತ್ತೊಂದು ಬದಿಯಲ್ಲಿರುವ ಲೌಕಿಕ ಕ್ರೌರ್ಯ, ಅಸಹಿಷ್ಣುತೆ, ಅಸಮಾನತೆ ಮತ್ತು ಶೋಷಣೆಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯ.
ಕಿರಿ ಮಕ್ಕಳ ಹೊಸ ಪ್ರಪಂಚದತ್ತ
ಮಕ್ಕಳ ದಿನದಂದು ನಾವು ತಲುಪಬೇಕಾದ ಮತ್ತೊಂದು ವರ್ಗ 2014ರ ನಂತರ ಜನಿಸಿ ಈಗತಾನೇ ಆಂಡ್ರಾಯ್ಡ್ ಪ್ರಪಂಚಕ್ಕೆ ಕಣ್ತೆರೆಯುವ ತಲೆಮಾರು. ಈ ಮಕ್ಕಳ ಪಾಲಿಗೆ ಮಕ್ಕಳ ದಿನ ಒಂದು ಸಂಭ್ರಮಿಸುವ ಗಳಿಗೆ. ಚಾಚಾ ನೆಹರೂ ಒಬ್ಬ ಆದರಣೀಯ, ಆದರ್ಶಪ್ರಾಯ ವ್ಯಕ್ತಿ. ಆದರೆ ” ಮಕ್ಕಳಿಸ್ಕೂಲು ಮನೇಲಲ್ವೇ”ಎಂಬ ಕೈಲಾಸಂ ಅವರನ್ನು ನೆನೆದು ಈ ಮಕ್ಕಳತ್ತ ನೋಡಿದಾಗ ನಮಗೆ ಕಾಣುವುದೇನು ? ಈ ಮನೆ ಎಂಬ ಇಸ್ಕೂಲು ಅಥವಾ ಶಾಲೆ, ಆಧುನಿಕ ಬದುಕಿಗೆ ಅಗತ್ಯವಾದ ವೈಚಾರಿಕತೆ, ವೈಜ್ಞಾನಿಕ ಮನೋಭಾವ ಮತ್ತು ಮಾನವೀಯ ಮೌಲ್ಯಗಳ ಆಗರವಾಗದೆ ಸಾಂಪ್ರದಾಯಿಕತೆಯ ಕೂಪಗಳಾಗುತ್ತಿವೆ. ಜಾತಿ ವ್ಯವಸ್ಥೆಯ ಮೇಲು ಕೀಳುಗಳ ಚೌಕಟ್ಟಿನೊಳಗೇ ಪೋಷಿಸಲ್ಪಡುವ ಮಕ್ಕಳಲ್ಲಿ ಜಾತಿ ಪ್ರಜ್ಞೆಯನ್ನು ಬೇರೂರುವಂತೆ ಮಾಡುವುದೇ ಅಲ್ಲದೆ, ಧಾರ್ಮಿಕ ಅನುಸರಣೆಯ ನೆಪದಲ್ಲಿ, ಶ್ರೇಷ್ಠತೆಯ ಸೋಗಿನಲ್ಲಿ, ಅಧ್ಯಾತ್ಮದ ನೆಪದಲ್ಲಿ ಈ ಅಂತಃಪ್ರಜ್ಞೆಯನ್ನೇ ರೂಢಿಸಿಕೊಳ್ಳುವಂತೆ ಮಾಡಲಾಗುತ್ತಿದೆ. ತನ್ಮೂಲಕ ಮನುಜ ಸಮಾಜಕ್ಕೆ ಘಾತುಕವಾದ ಭೇದಭಾವಗಳನ್ನು ಬಾಲ್ಯದಲ್ಲೇ ರೂಢಿಸಲಾಗುತ್ತಿದೆ.
ಹೊಸ ಡಿಜಿಟಲ್ ತಂತ್ರಜ್ಞಾನ ಯುಗಕ್ಕೆ ಬೇಕಾದ ಮನೋವೈಶಾಲ್ಯ ಮತ್ತು ವೈಜ್ಞಾನಿಕ ಗ್ರಹಿಕೆಯನ್ನು ಅದುಮಿಟ್ಟು ಅವೈಚಾರಿಕತೆಯನ್ನು ಬಾಲ್ಯದಿಂದಲೇ ಬೋಧಿಸುವ ಒಂದು ಸಮಾಜವನ್ನು ನಾವು ಕಾಣುತ್ತಿದ್ದೇವೆ. ಇಡೀ ಸಮಾಜವನ್ನು ಅಷ್ಟದಿಕ್ಕುಗಳಿಂದಲೂ ಆವರಿಸಿ ಪ್ರಭಾವಿಸುತ್ತಿರುವ ವಿದ್ಯುನ್ಮಾನ ಸಂವಹನ ಮಾಧ್ಯಮಗಳು ಈ ಅವೈಚಾರಿಕತೆಯನ್ನು ಪುಷ್ಟೀಕರಿಸಿ, ಸಾಂಸ್ಥೀಕರಿಸುವ ಮೂಲಕ ಈ ಮಕ್ಕಳನ್ನು ಕತ್ತಲ ಕೂಪಕ್ಕೆ ತಳ್ಳುತ್ತಿವೆ. ಸಹಜವಾಗಿಯೇ ಆಂಡ್ರಾಯ್ಡ್ ಪ್ರಪಂಚಕ್ಕೆ ಕಣ್ತೆರೆಯುತ್ತಲೇ ಈ ಮಿಲೆನಿಯಂ ಕಿರಿ ಮಕ್ಕಳಿಗೆ ತಾವು ನಿಂತ ನೆಲವೇ ಸರ್ವವೇದ್ಯವಾಗಿಬಿಡುತ್ತದೆ. ನಾವೇ ಕಟ್ಟಿಕೊಂಡ ಜಾತಿ-ಧರ್ಮಗಳ ಗೋಡೆಗಳಿಂದಾಚೆಗೆ ಇರುವ ಅವಕಾಶವಂಚಿತ ಮಕ್ಕಳ ಒಂದು ಕ್ರೂರ ಜಗತ್ತು ಈ ಮಕ್ಕಳಿಗೆ ಅಗೋಚರವಾಗಿಯೇ ಉಳಿದುಬಿಡುತ್ತದೆ. ಹಾಗಾಗಿ ಬಾಲ್ಯ ಎನ್ನುವ ಒಂದು ಜೀವನಘಟ್ಟವು ತನ್ನ ವೈಶಾಲ್ಯವನ್ನು ಕಳೆದುಕೊಂಡು ಸಂಕುಚಿತವಾಗಿಬಿಡುತ್ತದೆ. ನಗರೀಕರಣಗೊಂಡ ನಾಗರಿಕತೆಯಲ್ಲಿ ಗಮನಿಸಬಹುದಾದ ವಿಕೃತಿ ಇದು.
ಈ ವ್ಯವಸ್ಥೆಯನ್ನು ಕಾಪಾಡಲೆಂದೇ ಸಮಾಜ ಮತ್ತು ಅದನ್ನು ನಿರ್ದೇಶಿಸುವ ಸಾಂಸ್ಕೃತಿಕ-ರಾಜಕೀಯ ಶಕ್ತಿಗಳು , ಶೈಕ್ಷಣಿಕ ವಲಯವನ್ನೂ ಆಕ್ರಮಿಸಿ ತಮ್ಮ ಕಾರ್ಯಸೂಚಿಗಳನ್ನು ಸ್ಥಾಪಿಸಲೆತ್ನಿಸುತ್ತವೆ. ಹಿತವಲಯದ ಸಮಾಜ ತನ್ನೊಡಲಿನ ಮಕ್ಕಳನ್ನು ಇಂತಹ ಕೂಪದೊಳಗಿರಿಸಿ ಪೋಷಿಸುತ್ತಿರುವಾಗಲೇ ಸಮಾಜದ ಮತ್ತೊಂದು ಬದಿಯಲ್ಲಿ ಪೌಷ್ಟಿಕತೆ, ಶಿಕ್ಷಣ, ಆರೋಗ್ಯ ಮತ್ತು ಮನರಂಜನೆಯಿಂದಲೂ ವಂಚಿತರಾದ ಅಪಾರ ಸಂಖ್ಯೆಯ ಮಿಲೆನಿಯಂ ಮಕ್ಕಳು ತಮ್ಮ ನಾಳಿನ ದಿನಗಳಿಗಾಗಿ ಕನಸು ಕಾಣುತ್ತಾ ಕಾಲಕಳೆಯುತ್ತವೆ. ಈ ಎರಡೂ ಸಮಾಜಗಳನ್ನು ಒಂದು ವೇದಿಕೆಯ ಮೇಲೆ ತರುವ ಪ್ರಯತ್ನಗಳನ್ನು ಸಾಂಘಿಕವಾಗಿಯಾಗಲೀ, ಸಾಂಸ್ಥಿಕ ನೆಲೆಯಲ್ಲಾಗಲೀ ಮಾಡಲಾಗಿದೆಯೇ ? ತಳಸಮಾಜವನ್ನೇ ಗುರಿಯಾಗಿಸಿಕೊಂಡ ಜನಾಂದೋಲನಗಳಲ್ಲೂ ಈ ಪ್ರಯತ್ನದ ಅರಿವು ಇಲ್ಲದಿರುವುದು ವಿಪರ್ಯಾಸವಲ್ಲವೇ ?
ಭವಿಷ್ಯದ ಕನಸುಗಳತ್ತ
ಮಕ್ಕಳ ದಿನದಂದು ಹಿರಿಯ ತಲೆಮಾರಿನ ಸಮಾಜವನ್ನು ಕಾಡಬೇಕಾದ ಪ್ರಶ್ನೆಗಳು ಇವು. ಈ ಪ್ರಶ್ನೆಗಳಿಗೆ ಉತ್ತರ ಶೋಧಿಸುತ್ತಲೇ ಮಕ್ಕಳ ದಿನದಂದು ಈ ಮಿಲೆನಿಯಂ ಮಕ್ಕಳ ಭವಿಷ್ಯದ ಹಾದಿಗಳನ್ನು ಮಾನವೀಯಗೊಳಿಸಬೇಕಿದೆ. ಅಸಮಾನತೆಯನ್ನು ಸಹಜ ಎಂದೇ ಸ್ವೀಕರಿಸುವ ಮಾರುಕಟ್ಟೆ ಆರ್ಥಿಕತೆಯು ಮಿಲೆನಿಯಂ ಮಕ್ಕಳಲ್ಲಿ ಒಂದು ವರ್ಗಕ್ಕೆ ಸುಗಮ ಹಾದಿಗಳನ್ನು ನಿರ್ಮಿಸಿದರೆ ಮತ್ತೊಂದು ವರ್ಗ ದುರ್ಗಮ ರಸ್ತೆಗಳನ್ನು ದಾಟುವಂತೆ ಮಾಡುತ್ತದೆ. ಈ ಆರ್ಥಿಕ ಅಸಮಾನತೆಯನ್ನು ಯಥಾಸ್ಥಿತಿಯಲ್ಲಿರಿಸುವ ಸಲುವಾಗಿಯೇ ಪ್ರಾಚೀನ ಸಾಮಾಜಿಕ ಜೀವನ ಮೌಲ್ಯಗಳನ್ನು ಮತ್ತೆಮತ್ತೆ ಮಕ್ಕಳಲ್ಲಿ ಬಿತ್ತಲಾಗುತ್ತದೆ. ಜಾತಿ-ಮತ-ಧರ್ಮಗಳ ಪ್ರಾಚೀನ ಚಿಂತನಾ ಕ್ರಮಗಳನ್ನು ಈ ಮಕ್ಕಳಲ್ಲಿ ಬಿತ್ತುವ ಸಲುವಾಗಿಯೇ ಸಾಂಸ್ಕೃತಿಕ ಜಗತ್ತನ್ನೂ ಆಕ್ರಮಿಸಿರುವ ಸಾಂಪ್ರದಾಯಿಕ ಶಕ್ತಿಗಳು, ಸಂಸ್ಕೃತಿ ಮತ್ತು ಧರ್ಮದ ನಡುವಿನ ಅಂತರವನ್ನೇ ಅಳಿಸಿಹಾಕಿ ಮಕ್ಕಳನ್ನು ವಿಕೃತ ಸಾಂಸ್ಕೃತಿಕ ಜಗತ್ತಿನತ್ತ ಕರೆದೊಯ್ಯುತ್ತಿವೆ. ಈ ಹಾದಿಯಲ್ಲಿ ನವ ಉದಾರವಾದಿ ಮಾರುಕಟ್ಟೆಯು ಸಾಂಸ್ಥಿಕವಾಗಿಯೇ ಶೈಕ್ಷಣಿಕ-ಬೌದ್ಧಿಕ ವಲಯಗಳನ್ನು ನಿರ್ಮಿಸುತ್ತಿದೆ. ಮಿಲೆನಿಯಂ ಮಕ್ಕಳು ಈ ಸಾಂಪ್ರದಾಯಿಕ ಗೆರೆಗಳನ್ನು ದಾಟಿ ಮುನ್ನಡೆಯುವ ಕ್ಷಮತೆಯನ್ನು ಪಡೆಯಬೇಕಾದರೆ, ಹಿರಿಯ ತಲೆಮಾರಿನ ಪ್ರಜ್ಞಾವಂತಿಕೆ ಮತ್ತು ಸಮಾಜಮುಖಿ ಚಿಂತನೆಗಳು ಕ್ರಿಯಾಶೀಲವಾಗಿ ಸಮಾಜದ ಒಳನುಸುಳಬೇಕಾಗುತ್ತದೆ.
ಈ ಒಳನುಸುಳುವಿಕೆಯನ್ನು (Penetration) ಸಾಕಾರಗೊಳಿಸುವ ಹಾದಿಯಲ್ಲಿ ಇಡೀ ಸಮಾಜವನ್ನು ನಿರ್ದೇಶಿಸುವ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ ಚಿಂತನಾ ಧಾರೆಗಳನ್ನು ಠಾಗೋರ್, ವಿವೇಕಾನಂದ, ಗಾಂಧಿ, ಅಂಬೇಡ್ಕರ್, ನೆಹರೂ ಹಾಗೂ ಫುಲೆ, ಮಾರ್ಕ್ಸ್, ಬುದ್ಧ , ಬಸವರು ಬಿಟ್ಟುಹೋಗಿದ್ದಾರೆ. ಇದನ್ನು ಸಮರ್ಪಕವಾಗಿ ಬಳಸಿಕೊಂಡು ಸಮಾಜವನ್ನು ಪ್ರಾಚೀನತೆ ಮತ್ತು ಸಾಂಪ್ರದಾಯಿಕತೆಯ ಅಂಧಕೂಪದಿಂದ ಮೇಲೆತ್ತುವುದು ನಮ್ಮ ಸಾಮಾಜಿಕ ಜವಾಬ್ದಾರಿಯಾಗಿದೆ. ಮಕ್ಕಳ ದಿನಾಚರಣೆಯನ್ನು ಆಚರಿಸುವಾಗ ನಮ್ಮ ಕಣ್ಣೋಟ ಮಿಲೆನಿಯಂ ಮಕ್ಕಳ ಕಡೆಗೆ ಹರಿಯುವುದೇ ಆದರೆ ಈ ಎಳೆಯ ಜೀವಗಳಿಗೆ ನಾವು ನೀಡುವ ಮುಂಗಾಣ್ಕೆ ಆಶಾದೀವಿಗೆಯಾಗುತ್ತದೆ. ಈ ಜವಾಬ್ದಾರಿಯನ್ನು ಅರಿತೇ ನವಂಬರ್ 14ರ ದಿನವನ್ನು ಮಕ್ಕಳ ದಿನವನ್ನಾಗಿ ಆಚರಿಸೋಣ.
ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (BHEL) 2025 ನೇಮಕಾತಿ ಪ್ರಕ್ರಿಯೆಯನ್ನು ಘೋಷಿಸಿದ್ದು, ಒಟ್ಟು 400 ಹುದ್ದೆಗಳ ಭರ್ತಿಗೆ ಅಧಿಸೂಚನೆ ಬಿಡುಗಡೆ ಮಾಡಿದೆ. ಈ ನೇಮಕಾತಿಯಡಿ ಟ್ರೇನಿ ಇಂಜಿನಿಯರ್...