ಕಾಬೂಲ್ ವಿಮಾನ ನಿಲ್ದಾಣದಲ್ಲಿ ಮುಳ್ಳು ತಂತಿಯ ಮೇಲಿನಿಂದ ಬ್ರಿಟಿಷ್ ಸೈನಿಕರಿಗೆ ಮಗುವನ್ನು ಹಸ್ತಾಂತರಿಸುವ ವಿಡಿಯೋ ಒಂದು ವೈರಲ್ ಆಗಿದ್ದು ಇಡೀ ಜಗತ್ತು ಆ ದೃಶ್ಯ ನೋಡಿ ಬೆಚ್ಚಿಬಿದ್ದಿತ್ತು. ಇದೀಗ ಆ ಮಗುವನ್ನು ಸುರಕ್ಷಿತವಾಗಿ ಅದರ ತಂದೆಗೆ ಹಸ್ತಾಂತರಿಸಲಾಗಿದೆ ಎಂದು ANI ಸುದ್ದಿ ಸಂಸ್ಥೆ ವರದಿ ಮಾಡಿದೆ. “ಮಗು ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ ಪೋಷಕರು ಮಗುವನ್ನು ನೋಡಿಕೊಳ್ಳುವಂತೆ ನೌಕಾಪಡೆಗಳನ್ನು ಕೇಳಿಕೊಂಡಿದ್ದರು, ಹಾಗಾಗಿ ನೌಕಾಪಡೆಯು ಅದನ್ನು ವಿಮಾನ ನಿಲ್ದಾಣದಲ್ಲಿರುವ ನಾರ್ವೇಜಿಯನ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಮಗುವಿಗೆ ಚಿಕಿತ್ಸೆ ನೀಡಿದರು ಮತ್ತು ಮಗುವನ್ನು ಮಗುವಿನ ತಂದೆಗೆ ಹಿಂತಿರುಗಿಸಿದರು “ಯುಎಸ್ ರಕ್ಷಣಾ ಇಲಾಖೆಯ ವಕ್ತಾರ ಜಾನ್ ಕಿರ್ಬಿ ಶುಕ್ರವಾರ ಹೇಳಿರುವುದಾಗಿ ANI ವರದಿ ಮಾಡಿದೆ.
“ಇದು ಸಹಾನುಭೂತಿಯ ಕ್ರಿಯೆಯಾಗಿದೆ “ಎಂದು ಕಿರ್ಬಿ ಹೇಳಿದ್ದಾರೆ. ಇದು ಅಲ್ಲಿನ ಸೈನಿಕರ ವೃತ್ತಿಪರತೆಯನ್ನು ಪ್ರತಿನಿಧಿಸುತ್ತದೆ ಮತ್ತು ಚಿಕಿತ್ಸೆ ಪಡೆದ ನಂತರ ಅವರನ್ನು ತಮ್ಮ ತಂದೆಗೆ ಹಸ್ತಾಂತರಿಸಲಾಗಿರುವುದರಿಂದ ಮಗು ಈಗ ಎಲ್ಲಿದೆ ಎಂದು ತನಗೆ ತಿಳಿದಿಲ್ಲ ಎಂದು ಅವರು ಹೇಳಿದ್ದಾರೆ.
ಹತಾಶ ಅಫಘಾನ್ ಮಹಿಳೆಯರು ತಮ್ಮ ಮಕ್ಕಳನ್ನು ಕಾಬೂಲ್ ವಿಮಾನ ನಿಲ್ದಾಣದ ರೇಜರ್ ತಂತಿಯ ಮೇಲೆ ಎಸೆಯುತ್ತಿರುವುದು ಈ ಹಿಂದೆ ವರದಿಯಾಗಿತ್ತು. ದೇಶದಿಂದ ಹೊರಬರಲು ಮತ್ತು ತಪ್ಪಿಸಿಕೊಳ್ಳಲು ನೂರಾರರು ಜನರು ಕಾಬೂಲ್ ವಿಮಾನ ನಿಲ್ದಾಣದಲ್ಲಿ ಕಿಕ್ಕಿರಿದು ಸಹಾಯಕ್ಕಾಗಿ ಕೂಗುವುದು ವಿಮಾನನಿಲ್ದಾಣದಿಂದ ಕೇಳಿ ಬರುತ್ತಿತ್ತು ಎಂದು ಹಿರಿಯ ಬ್ರಿಟಿಷ್ ಅಧಿಕಾರಿಯೊಬ್ಬರು ‘ಸ್ಕೈ ನ್ಯೂಸ್’ ಜೊತೆ ಮಾತನಾಡುತ್ತಾ ಹೇಳಿದ್ದಾರೆ.

“ಮಹಿಳೆಯರು ತಮ್ಮ ಮಕ್ಕಳನ್ನು ರೇಜರ್ ತಂತಿಯ ಮೇಲೆ ಎಸೆದು ಬ್ರಿಟಿಷ್ ಸೈನಿಕರನ್ನು ತಮ್ಮ ಮಕ್ಕಳನ್ನು ಕರೆದೊಯ್ಯುವಂತೆ ಕೇಳುತ್ತಿದ್ದರು, ಕೆಲವು ಮಕ್ಕಳು ತಂತಿಯಲ್ಲಿ ಸಿಲುಕಿಕೊಂಡರು. ಇದೊಂದು ಭಯಾನಕ ದೃಶ್ಯ. ನನ್ನ ಸೈನಿಕರ ಬಗ್ಗೆ ನಾನು ಚಿಂತಿತನಾಗಿದ್ದೇನೆ, ಕೆಲವರಿಗೆ ಆಪ್ತ ಸಲಹೆ ನೀಡುತ್ತಿದ್ದೇನೆ, ನಿನ್ನೆ ರಾತ್ರಿ ಎಲ್ಲರೂ ಅಳುತ್ತಿದ್ದರು “ಎಂದು ಹಿರಿಯ ಬ್ರಿಟಿಷ್ ಅಧಿಕಾರಿ ಹೇಳಿದ್ದಾರೆ.
ನ್ಯಾಟೋ ಮತ್ತು ತಾಲಿಬಾನ್ ಅಧಿಕಾರಿಗಳ ಪ್ರಕಾರ, ಕಾಬೂಲ್ ವಿಮಾನ ನಿಲ್ದಾಣ ಮತ್ತು ಸುತ್ತಮುತ್ತ ಭಾನುವಾರದಿಂದ ಕನಿಷ್ಠ 12 ಜನರು ಸಾವನ್ನಪ್ಪಿದ್ದಾರೆ. ಬೈಡೆನ್ ಆಡಳಿತವು ಅಫ್ಘಾನಿಸ್ತಾನದಿಂದ ಸೈನ್ಯ ಹಿಂತೆಗೆದುಕೊಳ್ಳುವ ನಿರ್ಧಾರಕ್ಕೆ ಟೀಕೆಗಳನ್ನು ಎದುರಿಸಿದೆ. ಆದರೆ ತಮ್ಮ ನಿರ್ಧಾರದ ಬಗ್ಗೆ ಯಾವುದೇ ವಿಷಾದವಿಲ್ಲ ಎಂದಿರುವ ಬೈಡೆನ್ “ನಮ್ಮ ಮಿತ್ರರಾಷ್ಟ್ರಗಳ ವಿಶ್ವಾಸಾರ್ಹತೆಯ ಬಗ್ಗೆ ಅನುಮಾನಗಳಿಲ್ಲ. ನಾವು ನಮ್ಮ ಕ್ರಿಯೆಗೆ ಬದ್ಧರಾಗಿದ್ದೇವೆ ” ಶ್ವೇತಭವನದಲ್ಲಿ ಭಾಷಣ ಮಾಡಿದ ನಂತರ ಸುದ್ದಿಗಾರರಿಗೆ ತಿಳಿಸಿದ್ದಾರೆ. ಈ ಮೊದಲೂ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು ” ಅಮೆರಿಕದ ಮೇಲೆ ದಾಳಿ ಮಾಡಿದ ಅಕ್‌ಖೈದಾವನ್ನು ಸದೆಬಡಿಯಲು ನಾವು ಅಫ್ಘಾನಿಗೆ ಹೋಗಿದ್ದೆವು, ದೇಶ ಕಟ್ಟಲಲ್ಲ. ನಮ್ಮ ಉದ್ದೇಶ ಹಿಂದೆಯೇ ಈಡೇರಿದೆ” ಎಂದಿದ್ದರು.
| ReplyForward |











