ನೀವು ಈ ವೀಕೆಂಡ್ ಪ್ರವಾಸಕ್ಕಾಗಿ ಕಾಫಿ ನಾಡು ಚಿಕ್ಕಮಗಳೂರು ಕಡೆ ಹೊರಟಿದ್ದರೆ ಕೊಂಚ ಈ ಸುದ್ದಿ ಗಮನಿಸಿ.
ಚಿಕ್ಕಮಗಳೂರಿನ ಪ್ರಮುಖ ಪ್ರವಾಸಿ ಆಕರ್ಷಣೆಯಾದ ಮುಳ್ಳಯ್ಯನ ಗಿರಿ ಸೇರಿದಂತೆ ಹಲವು ಗಿರಿಧಾಮ ಮತ್ತು ಧಾರ್ಮಿಕ ಕೇಂದ್ರಗಳಿಗೆ ಇಂದಿನಿಂದ (ಡಿ.16) ಐದು ದಿನಗಳ ಕಾಲ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಹಾಗಾಗಿ ಜನಪ್ರಿಯ ಗಿರಿಧಾಮ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಮಾಣಿಕ್ಯಧಾರಾ, ಹೊನ್ನಮ್ಮನಹಳ್ಳಿ ಬೆಟ್ಟ ಮತ್ತು ಶ್ರೀ ಗುರು ದತ್ತಾತ್ರೇಯ ಬಾಬಾಬುಡನ್ ದರ್ಗಾಕ್ಕೆ ಹೋಗುವ ಯೋಜನೆ ಇದ್ದರೆ, ನೀವು ಇನ್ನೊಂದು ವಾರದ ಮಟ್ಟಿಗೆ ನಿಮ್ಮ ಪ್ರವಾಸವನ್ನು ಮುಂದೂಡುವುದು ಅನಿವಾರ್ಯ.
ಕಾರಣವೇನು?
ಪ್ರವಾಸಿಗರಿಗೆ ನಿರ್ಬಂಧ ಎಂದ ಕೂಡಲೇ ಕೋವಿಡ್ ಮೂರನೇ ಅಲೆಯ ಭಯ ಬೇಡ. ಏಕೆಂದರೆ ಈ ನಿರ್ಬಂಧವನ್ನು ಹೇರಲು ಕಾರಣ ಬೇರೆ ಇದೆ. ಅದೇನೆಂದರೆ, ನಾಳೆಯಿಂದ (ಡಿ. 17) ಡಿ.19 ರ ವರೆಗೆ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗ ದಳ ದತ್ತ ಜಯಂತಿ ಕಾರ್ಯಕ್ರಮವನ್ನ ಹಮ್ಮಿಕೊಂಡಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಈ ನಿರ್ಬಂಧ ಕ್ರಮವನ್ನು ಕೈಗೊಂಡಿದೆ.
ಚಿಕ್ಕಮಗಳೂರು ತಾಲ್ಲೂಕು ಶ್ರೀ ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ ಡಿ.17 ರಿಂದ 19 ರವರೆಗೆ ದತ್ತಜಯಂತಿ ಕಾರ್ಯಕ್ರಮ ಇರುವ ಕಾರಣ ದಿನಾಂಕ 16-12-2021 ರ ಬೆಳಗ್ಗೆ 06:00 ಗಂಟೆಯಿಂದ ದಿನಾಂಕ: 20-12-2021 ರ ಬೆಳಗ್ಗೆ 0500 ಗಂಟೆಯವರೆಗೆ ಚಿಕ್ಕಮಗಳೂರು ತಾಲ್ಲೂಕಿನ ಪ್ರವಾಸಿ ತಾಣಗಳಾದ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಮಾಣಿಕ್ಯಧಾರಾ, ಹೊನ್ನಮ್ಮನಹಳ್ಳಿ ಮತ್ತು ಶ್ರೀ ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಪೀಠದ ಭಾಗಗಳಿಗೆ ಪ್ರವಾಸಿಗರು ಹಾಗೂ ಯಾರ್ತಾರ್ಥಿಗಳ ಭೇಟಿ ನಿರ್ಬಂಧಿಸಲಾಗಿದೆ ಎಂದು ಚಿಕ್ಕಮಗಳೂರು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಈ ಪ್ರದೇಶಗಳನ್ನು ಹೊರತುಪಡಿಸಿ ಜಿಲ್ಲೆಯ ಇತರೆ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಯಾವುದೇ ನಿರ್ಬಂಧ ಇರುವುದಿಲ್ಲ ಹಾಗೂ ಹೋಟೆಲ್, ಹೋಂ ಸ್ಟೇ ಮತ್ತು ರೆಸಾರ್ಟ್ಗಳಲ್ಲಿ ಈಗಾಗಲೇ ವಾಸ್ತವ್ಯ ಕಾಯ್ದಿರಿಸಿಕೊಂಡಿರುವವರು ವಾಸ್ತವ್ಯ ಮಾಡಲು ಸಹ ಯಾವುದೇ ನಿರ್ಬಂಧ ಇರುವುದಿಲ್ಲ ಎಂದೂ ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಒಟ್ಟು ಐದು ದಿನಗಳ ಕಾಲ ಪ್ರವಾಸಿಗರಿಗೆ ನಿರ್ಬಂಧ ಹೇರಿದ್ದು, ಮುಳ್ಳಯ್ಯನಗಿರಿ ಭಾಗಕ್ಕೆ ವೀಕೆಂಡ್ ಟೂರ್ ಪ್ಲಾನ್ ಮಾಡುವವರು ಪರ್ಯಾಯ ಯೋಜನೆ ಹಾಕಿಕೊಳ್ಳುವುದು ಈ ಅದೇಶ ಗಮನಿಸುವುದು ಒಳ್ಳೆಯದು!