ಆಗಸ್ಟ್ 23ರಿಂದ ಶಾಲೆಗಳು ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳು ಆತಂಕಕ್ಕೆ ಒಳಗಾಗದೇ ಶಾಲೆಗಳಿಗೆ ಹಾಜರಾಗುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕರೆ ನೀಡಿದ್ದಾರೆ.
ಶಾಲೆ ಆರಂಭಕ್ಕೆ ಎಲ್ಲ ರೀತಿಯ ತಯಾರಿ ಮಾಡಿಕೊಳ್ಳಲಾಗಿದೆ. ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೆ ನಿರ್ದೇಶನ ನೀಡಲಾಗಿದೆ. ಮಕ್ಕಳನ್ನು ಶಾಲೆಗೆ ಕಳಿಸಲು ಪಾಲಕರ ಅನುಮತಿ ಪತ್ರ ಕಡ್ಡಾಯ, ಶಾಲೆಗಳನ್ನು ಸ್ಯಾನಿಟೈಸ್ ಮಾಡಲಾಗುವುದು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಕೋವಿಡ್ ಸುರಕ್ಷತೆಯೊಂದಿಗೆ ಶಾಲೆಗಳಲ್ಲಿ ಪಾಠ ಮಾಡಲಾಗುವುದು . ಪರ್ಯಾಯ ದಿನಗಳಲ್ಲಿ ಅಥವಾ ಶಿಫ್ಟ್ನಲ್ಲಿ ತರಗತಿಗಳನ್ನು ನಡೆಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
ಆಗಸ್ಟ್ 23 ರಂದು ಬೆಳಿಗ್ಗೆ ಶಿಕ್ಷಣ ಸಚಿವರೊಂದಿಗೆ ಕೆಲವು ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಲಿದ್ದೇನೆ. ಶಾಲೆಗಳನ್ನು ಪ್ರಾರಂಭಿಸುವಲ್ಲಿ ಅತ್ಯಂತ ಕಾಳಜಿಯನ್ನು ವಹಿಸಲಾಗುವುದು. ಮಕ್ಕಳು ಶಾಲೆಗೆ ಬರಬೇಕು. ಅದರ ಜೊತೆಗೆ ಕೋವಿಡ್ ಸುರಕ್ಷತೆಯ ಬಗ್ಗೆಯು ಗಮನ ನೀಡಬೇಕು. ಪಾಲಕರು ತಪ್ಪದೇ ಲಸಿಕೆ ಹಾಕಿಸಿಕೊಳ್ಳಬೇಕು. ಶಾಲೆಗೆ ಆಗಮಿಸುವ ಮಕ್ಕಳಿಗೆ ಧೈರ್ಯ ತುಂಬಿ, ಮಕ್ಕಳ ಆರೋಗ್ಯದ ಬಗ್ಗೆ ಗಮನ ವಹಿಸಿ. ಶಾಲೆಗಳಲ್ಲಿ ಹಂತಹಂತವಾಗಿ ಮಕ್ಕಳ ಹಾಜರಾತಿ ಹೆಚ್ಚಬೇಕು ಎಂದು ಅವರು ಹೇಳಿದ್ದಾರೆ .