
ಚೆನ್ನೈ:ಸಿಎನ್ ಅಣ್ಣಾದೊರೈ ಅವರು ಆರಂಭಿಸಿದ ಪಕ್ಷವನ್ನು ನಂತರ ಕರುಣಾನಿಧಿ ಅವರು ಯಶಸ್ವಿಯಾಗಿ ಮುನ್ನಡೆಸಿದರು.ಕರುಣಾನಿಧಿ ಅವರ ಅಧಿಕಾರಾವಧಿಯ ನಂತರ ಹಾಲಿ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರು ಪಕ್ಷದ ಸಾರಥ್ಯವನ್ನು ವಹಿಸಿಕೊಂಡಿದ್ದು ಗೊತ್ತೆ ಇದೆ. ಸದ್ಯ ಸಂಪುಟದಲ್ಲಿ ಸಚಿವರಾಗಿದ್ದ ಸ್ಟಾಲಿನ್ ಅವರ ಪುತ್ರ ಉದಯನಿಧಿ ಸ್ಟಾಲಿನ್ ಅವರಿಗೆ ಉಪಮುಖ್ಯಮಂತ್ರಿಯಾಗಿ ಬಡ್ತಿ ನೀಡಲಾಗಿದೆ.

ಉದಯನಿಧಿ ಸ್ಟಾಲಿನ್ ಅವರನ್ನು ಉಪಮುಖ್ಯಮಂತ್ರಿಯಾಗಿ ನೇಮಿಸಿದ ನಂತರ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ)ನ ನಾಲ್ವರು ಶಾಸಕರು ಭಾನುವಾರ(ಸೆಪ್ಟೆಂಬರ್ 29) ತಮಿಳುನಾಡು ರಾಜ್ಯಪಾಲ ಆರ್ ಎನ್ ರವಿ ಅವರಿಂದ ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.ಪ್ರಮಾಣ ವಚನ ಸ್ವೀಕರಿಸಿದವರಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇತ್ತೀಚೆಗೆ ಸುಪ್ರೀಂ ಕೋರ್ಟ್‌ನಿಂದ ಜಾಮೀನು ಪಡೆದಿರುವ ಡಿಎಂಕೆ ನಾಯಕ ವಿ ಸೆಂಥಿಲ್ ಬಾಲಾಜಿ ಕೂಡ ಇದ್ದಾರೆ. ಇವರನ್ನು ಹೊರತುಪಡಿಸಿ ಆರ್ ರಾಜೇಂದ್ರನ್ (ಸೇಲಂ-ಉತ್ತರ), ಗೋವಿ ಚೆಜಿಯಾನ್ (ತಿರುವಿಡೈಮರುದೂರು), ಮತ್ತು ಎಸ್‌ಎಂ ನಾಸರ್ (ಅವಡಿ) ಈ ಮೂವರು ಶಾಸಕರು ಪ್ರಮಾಣ ವಚನ ಸ್ವೀಕರಿಸಿದರು.

ತಮಿಳುನಾಡಿನ ಮುಖ್ಯಮಂತ್ರಿಗಳ ಶಿಫಾರಸಿನ ಮೇರೆಗೆ ರಾಜ್ಯದ ಗೌರವಾನ್ವಿತ ರಾಜ್ಯಪಾಲರು ಹೊಸದಾಗಿ ಪ್ರಮಾಣ ವಚನ ಸ್ವೀಕರಿಸಿದ ಸಚಿವರಿಗೆ ವಿಷಯ ಹಂಚಿಕೆ ಮತ್ತು ಹುದ್ದೆಯನ್ನು ಅನುಮೋದಿಸಿದ್ದಾರೆ ಎಂದು ತಮಿಳುನಾಡಿನ ರಾಜಭವನ ಬಿಡುಗಡೆ ಮಾಡಿದ ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಈ ಹಿಂದೆ ಯುವಜನ ಕಲ್ಯಾಣ ಮತ್ತು ಕ್ರೀಡಾ ಅಭಿವೃದ್ಧಿ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದ ಉದಯನಿಧಿ ಸ್ಟಾಲಿನ್ ಅವರನ್ನು ಶನಿವಾರ ಉಪಮುಖ್ಯಮಂತ್ರಿಯಾಗಿ ಪದೋನ್ನತಿಗೊಳಿಸಲಾಯಿತು.
ಈ ಬಗ್ಗೆ ಮಾತನಾಡಿದ ಅವರು, ಈ ವಿಚಾರವಾಗಿ ಖಂಡಿತವಾಗಿಯೂ ಟೀಕೆಗಳಿವೆ. ಎಲ್ಲಾ ಟೀಕೆಗಳನ್ನು ಸ್ವೀಕರಿಸಲು ಮತ್ತು ಸಾರ್ವಜನಿಕರಿಗೆ ನನ್ನ ಕೈಲಾದಷ್ಟು ಕೆಲಸ ಮಾಡಲು ಪ್ರಯತ್ನಿಸುತ್ತೇನೆ. ನಿಮ್ಮ ಎಲ್ಲಾ ಟೀಕೆಗಳನ್ನು ನಾನು ಸ್ವೀಕರಿಸುತ್ತೇನೆ ಮತ್ತು ನನ್ನ ಕೆಲಸದ ಮೂಲಕ ಅವುಗಳಿಗೆ ಉತ್ತರಿಸುತ್ತೇನೆ ಎಂದು ಹೇಳಿದರು.










