ಪ್ರಗತಿಪರತೆಯನ್ನು ಪರ-ವಿರೋಧಿ ನೆಲೆಯಲ್ಲಿ ನಿಷ್ಕರ್ಷಿಸುವುದರಿಂದ ಸ್ವ ಹಿತಾಸಕ್ತಿಗಳು ಹೆಚ್ಚಾಗುತ್ತವೆ
ಪ್ರಗತಿಪರತೆಯ ಆಂತರಿಕ ಬೇಗುದಿ
ಎರಡನೆಯ ಅಂಶವೆಂದರೆ ಪ್ರಗತಿಪರ ಎಂಬ ವಿಶಾಲ ಚೌಕಟ್ಟಿನೊಳಗೆ ಇರುವ ಸಾಂಘಿಕ-ಸಾಂಸ್ಥಿಕ ಒಡನಾಡಿಗಳ ನಡುವಿನ ಬಾಂಧವ್ಯ ಮತ್ತು ಒಂದುಗೂಡಿಸುವ ಸೇತುವೆಗಳತ್ತ ನಾವು ಗಮನಹರಿಸಬೇಕಾಗುತ್ತದೆ. ಸಾಮಾನ್ಯವಾಗಿ ಪ್ರಗತಿಪರತೆ ಎನ್ನುವ ಒಂದು ವಿದ್ಯಮಾನವೇ ಸಾರ್ವಕಾಲಿಕ-ಸಾರ್ವತ್ರಿಕ ಲಕ್ಷಣಗಳನ್ನು ಹೊಂದಿರುತ್ತದೆ. ಎಲ್ಲರನ್ನೂ ಒಳಗೊಳ್ಳುವ ಪ್ರಕ್ರಿಯೆಯಲ್ಲಿ ಎಲ್ಲ ಭಿನ್ನ ನೆಲೆಯ ಸಿದ್ಧಾಂತಗಳನ್ನೂ, ತಾತ್ವಿಕ ಚಿಂತನೆಗಳನ್ನೂ, ಅಧಿಕಾರೇತರ ರಾಜಕೀಯ ನೆಲೆಗಳನ್ನೂ ಪ್ರತಿನಿಧಿಸುವ ಪ್ರಗತಿಪರತೆ ಮೂಲತಃ ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವವನ್ನು ಪ್ರತಿನಿಧಿಸುತ್ತದೆ. ಇಲ್ಲಿ ಎಡಪಂಥೀಯ, ಅಂಬೇಡ್ಕರ್‌ವಾದಿ, ಸಮಾಜವಾದಿ, ಸ್ತ್ರೀವಾದಿ ನೆಲೆಗಳನ್ನು ಅಪ್ಪಿಕೊಳ್ಳುವ ಯಾವುದೇ ತಾತ್ವಿಕ ಆಲೋಚನೆಗಳೊಂದಿಗೆ, ಮಹಿಳೆಯರು, ತುಳಿತಕ್ಕೊಳಗಾದವರು, ಅನ್ಯಾಯಕ್ಕೊಳಗಾದವರು, ತಾರತಮ್ಯ-ದೌರ್ಜನ್ಯಕ್ಕೊಳಗಾದವರು, ಅವಕಾಶವಂಚಿತರು, ಅಂಚಿಗೆ ತಳ್ಳಲ್ಪಟ್ಟವರು, ಬಾಹ್ಯ ಸಮಾಜದಿಂದ ಬಹಿಷ್ಕೃತರಾದವರು ಹಾಗೂ ಸಾಂವಿಧಾನಿಕ ಸವಲತ್ತುಗಳಿಂದ ಹೊರತಾದ ವ್ಯಕ್ತಿ-ಸಮಾಜ-ಜನಸಮುದಾಯಗಳ ಹಿತಾಸಕ್ತಿಗಳ ರಕ್ಷಣೆಗಾಗಿ ಆಳುವ ವರ್ಗಗಳ/ವ್ಯವಸ್ಥೆಯ ವಿರುದ್ಧ ಹೋರಾಡುವ ಮನಸ್ಥಿತಿಯನ್ನು ಪ್ರಗತಿಪರತೆಯ ಚೌಕಟ್ಟಿನೊಳಗೆ ವ್ಯಾಖ್ಯಾನಿಸಬಹುದಾಗಿದೆ.
ಹಾಗಾಗಿ ಸಾಂಘಿಕ ಐಕಮತ್ಯಕ್ಕಾಗಿ ಹಪಹಪಿಸುವ ಪ್ರಗತಿಪರ ಮನಸುಗಳ ನಡುವೆ ಸಂಬಂಧಗಳನ್ನು ಬೆಸೆಯುವಾಗ ವಿವಿಧ ಆಲೋಚನೆಗಳ ಅಥವಾ ಸೈದ್ಧಾಂತಿಕ ನೆಲೆಗಳಲ್ಲಿ ಕಾಣಬಹುದಾದ ಭಿನ್ನತೆಯನ್ನೂ, ವೈವಿಧ್ಯತೆಯನ್ನೂ, ವಿರೋಧಾಭಾಸಗಳನ್ನೂ ಮೀರಿದ ಒಂದು ಉದಾತ್ತ ಚಿಂತನಾವಾಹಿನಿ ಮುಖ್ಯವಾಗುತ್ತದೆ. ಭಾರತದ ಸಾಂಸ್ಕೃತಿಕ ವೈವಿಧ್ಯತೆಯಷ್ಟೇ ವೈವಿಧ್ಯಮಯವಾಗಿರುವ ಚಿಂತನಾಧಾರೆಗಳನ್ನು ಒಂದು ನಿರ್ದಿಷ್ಟ ಚೌಕಟ್ಟಿನೊಳಗೆ ಬೆಸೆದು ಬಂಧಿಸುವ ಸವಾಲು ಸಹ ನಮ್ಮ ಮುಂದಿರುತ್ತದೆ. ಮಾರ್ಕ್ಸ್, ಅಂಬೇಡ್ಕರ್, ಲೋಹಿಯಾ, ಗಾಂಧಿ ಮತ್ತು ವಿವೇಕಾನಂದರನ್ನೂ ಒಳಗೊಂಡಂತೆ ಭಾರತದ ತತ್ವಶಾಸ್ತ್ರೀಯ ನೆಲೆಗಳನ್ನು ಮರುವಿಮರ್ಶೆ ಮಾಡುವ ಮೂಲಕ ಅಥವಾ ಪುನರ್‌ಮನನ ಮಾಡಿಕೊಳ್ಳುವ ಮೂಲಕ ನಾವು ಸಮಕಾಲೀನ ಸಂದರ್ಭದ ರಾಜಕೀಯ-ಸಾಮಾಜಿಕ-ಸಾಂಸ್ಕೃತಿಕ ಸನ್ನಿವೇಶಗಳಿಗೆ ಮುಖಾಮುಖಿಯಾಗಬೇಕಾಗುತ್ತದೆ. ಹೀಗಿರುವಾಗ ನಮ್ಮ ವೈಚಾರಿಕ ನೆಲೆಗಳು ಈ ಎಲ್ಲ ಸಿದ್ಧಾಂತಗಳನ್ನೂ ಮೀರಿ ನಿಲ್ಲಬೇಕಾದ ಅನಿವಾರ್ಯತೆಯನ್ನೂ ಎದುರಿಸುತ್ತವೆ. ಭಾರತದ ಸಂದರ್ಭದಲ್ಲಿ ಈ ಸನ್ನಿವೇಶ ಜಟಿಲವಾಗಿ ಕಾಣಲು ಕಾರಣವೆಂದರೆ ನಮ್ಮ ಸಮಾಜದಲ್ಲಿ ಅಂತರ್ಗತವಾಗಿರುವ ಸಾಂಸ್ಕೃತಿಕ ಶ್ರದ್ಧಾ ನಂಬಿಕೆಗಳು ಹಾಗೂ ಆಚರಣೆಗಳು. “ ಎಲ್ಲರನ್ನೂ/ಎಲ್ಲವನ್ನೂ ಒಳಗೊಳ್ಳುವ ” ಔನ್ನತ್ಯದೊಂದಿಗೇ ಸಾಗುವ ಪ್ರಗತಿಪರ ಚಳುವಳಿಗಳು ಈ ವೈವಿಧ್ಯತೆಯನ್ನು ಮಾನ್ಯ ಮಾಡುತ್ತಲೇ, ತಮ್ಮೊಳಗಿರಬಹುದಾದ ಸಾಂಸ್ಕೃತಿಕ ಭಿನ್ನತೆಗಳನ್ನೂ ಒಪ್ಪಿಕೊಂಡು ಮುನ್ನಡೆಯಬೇಕಾಗುತ್ತದೆ.
ಸಮಕಾಲೀನ ಸಂದರ್ಭದಲ್ಲಿ ನಮಗೆ ತೊಡಕಾಗಿ ಕಾಣುವ ಬಹುಮುಖ್ಯ ಅಂಶ ಎಂದರೆ ಈ ಸಾಂಘಿಕ ಚೌಕಟ್ಟುಗಳಲ್ಲಿ ಆಳವಾಗಿ ಬೇರೂರುವಂತಹ ಅಸ್ಮಿತೆಯ ನೆಲೆಗಳು. ಸಾಂಘಿಕ ಅಥವಾ ಸಾಂಸ್ಥಿಕ ಅಸ್ಮಿತೆಗಳನ್ನು ಮೀರಿ ವಿಶಾಲ ಸಮಾಜದ ಸಮಷ್ಟಿ ಪ್ರಜ್ಞೆಯೊಂದಿಗೆ “ಒಳಗೊಳ್ಳುವ” ರಾಜಕೀಯ ಪ್ರಜ್ಞೆಯೊಂದಿಗೆ ಮುನ್ನಡೆದಾಗ ಮಾತ್ರವೇ ಪ್ರಗತಿಪರ ಚಿಂತನೆಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡು, ಸಮಾಜದ ಕಟ್ಟಕಡೆಯ ವಂಚಿತ ವ್ಯಕ್ತಿಗೆ ನಿಲುಕುವಂತಾಗುತ್ತದೆ. ಸಹಜವಾಗಿಯೇ ಭಾರತದ ಸಂದರ್ಭದಲ್ಲಿ ಮಾರ್ಕ್ಸ್, ಲೋಹಿಯಾ ಮತ್ತು ಅಂಬೇಡ್ಕರ್‌ವಾದಿಗಳಿಗೆ ಗಾಂಧಿವಾದ ಸಮಾನ ನೆಲೆಯಲ್ಲಿ ಮುಖಾಮುಖಿಯಾಗುತ್ತದೆ. ಎಡಪಂಥೀಯರಲ್ಲೇ ಇರಬಹುದಾದ ತಾತ್ವಿಕವಾದ ಭಿನ್ನ ನೆಲೆಗಳಲ್ಲಿ ಮಾರ್ಕ್ಸ್ ಸಮಾನ ಸ್ವೀಕೃತ ಎಳೆಯಾದರೂ ಸಾಂಘಿಕವಾಗಿ ಅನುಸರಿಸುವ ಸೈದ್ಧಾಂತಿಕ ಧೋರಣೆಯೇ ಕೆಲವೊಮ್ಮೆ ಅಡ್ಡಗೋಡೆಯಾಗಿ ಪರಿಣಮಿಸುತ್ತದೆ. ಇತ್ತೀಚಿನ ವರ್ಷಗಳಲ್ಲಿ ಸತತ ವಿಘಟನೆಗೊಳಗಾಗುತ್ತಿರುವ ಅಂಬೇಡ್ಕರ್‌ವಾದಿಗಳಲ್ಲೂ ಸಹ ಇದೇ ರೀತಿಯಾದ ಅಪಸವ್ಯಗಳನ್ನು ಕಾಣುತ್ತಿದ್ದೇವೆ. ಇಲ್ಲಿ ಸಾಂಘಿಕ/ಸಾಂಸ್ಥಿಕ ಅಸ್ಮಿತೆಗಳನ್ನೂ ಮೀರಿ ವಿಶಾಲ ಸಮಾಜದ ಒಳಿತಿಗಾಗಿ ಶ್ರಮಿಸುವ ಅನಿವಾರ್ಯತೆ ನಮಗೆ ಎದುರಾಗಿದೆ.
ಸಮಾನ ಗುರಿ – ಸಮಾನ ಮನಸ್ಸು
ಒಂದು ಸಮಾನ ಗುರಿಯೊಂದಿಗೆ, ಸಮಾನ ಮನಸ್ಕರೆಂದು ಗುರುತಿಸಿಕೊಳ್ಳುವ ಪ್ರಗತಿಶೀಲರ ನಡುವೆಯೂ ಈ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಸಹಜವಾಗಿಯೇ ಇರುತ್ತವೆ. ಇವೆಲ್ಲವನ್ನೂ ಮೀರಿ ನಿಲ್ಲುವ ಒಂದು ಸಂವೇದನಾಶೀಲ ಸಂಯಮ ಪ್ರಗತಿಪರರಲ್ಲಿ ಇರಬೇಕಾಗುತ್ತದೆ. ಈ ಸಂಯಮ ಇರುವುದೇ ಆದರೆ ನಾವು ʼ ಭಿನ್ನ ʼ ಎಂದು ಗುರುತಿಸುವ ತಾತ್ವಿಕ ನೆಲೆಗಳನ್ನು ʼ ಅನ್ಯ ʼ ಎಂದು ಗುರುತಿಸಕೂಡದು ಎಂಬ ಎಚ್ಚರಿಕೆಯೂ ಇರಬೇಕಾಗುತ್ತದೆ. ʼ ಅನ್ಯ ʼರನ್ನು ಸೃಷ್ಟಿಸುವುದಾಗಲೀ, ಗುರುತಿಸುವುದಾಗಲೀ ವೈಚಾರಿಕ ಪ್ರಜ್ಞೆಗೆ ವ್ಯತಿರಿಕ್ತವಾದ ಮನೋಭಾವ ಎನಿಸಿಕೊಳ್ಳುತ್ತದೆ. ʼ ಅನ್ಯರು ʼ ಸೃಷ್ಟಿಯಾಗುತ್ತಾ ಹೋದಂತೆಲ್ಲಾ ಪ್ರತ್ಯೇಕತೆಯ ಭಾವನೆಗಳೂ ವಿಸ್ತರಿಸುತ್ತಲೇ ಹೋಗುತ್ತವೆ. “ ಒಳಗೊಳ್ಳುವಿಕೆ ”ಯಲ್ಲಿ ವಿಶ್ವಾಸವಿಟ್ಟು ಸಮಷ್ಟಿಯ ನೆಲೆಯಲ್ಲಿ ಸಮಾನತೆ ಮತ್ತು ಸಮನ್ವಯದ ಹಾದಿಯನ್ನು ಕ್ರಮಿಸುವ ಯಾವುದೇ ಪ್ರಗತಿಪರ ಪ್ರಯತ್ನಗಳು ಚಲನಶೀಲತೆಯೊಂದಿಗೆ ಸೃಜನಶೀಲತೆಯನ್ನು ರೂಢಿಸಿಕೊಳ್ಳಬೇಕಾಗುತ್ತದೆ. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ʼ ಭಿನ್ನರನ್ನು ʼ ಸೃಷ್ಟಿಸಬೇಕೇ ಹೊರತು ʼ ಅನ್ಯರನ್ನು ʼ ಸೃಷ್ಟಿಸಕೂಡದು. ಆಗಲೇ ಪುರೋಗಾಮಿಗೂ ಪ್ರತಿಗಾಮಿಗೂ ಇರುವ ವ್ಯತ್ಯಾಸವನ್ನು ಗುರುತಿಸಲು ಸಾಧ್ಯ. ಪ್ರಗತಿಪರ ಮನಸುಗಳು ಪುರೋಗಾಮಿಯಾಗಿ ಇದ್ದರೆ ಮಾತ್ರ “ ಒಳಗೊಳ್ಳುವ ” ಪ್ರಯತ್ನಗಳು ಸಫಲವಾಗುತ್ತವೆ.
ಈ ಪ್ರಯತ್ನಗಳ ನಡುವೆಯೇ ಜಾಗ್ರತೆಯಿಂದಿರಬೇಕಾದ ಮತ್ತೊಂದು ಅಂಶವೆಂದರೆ ಅಧಿಕಾರ ರಾಜಕಾರಣ ಮತ್ತು ಆಡಳಿತ ವ್ಯವಸ್ಥೆಯೊಡಗಿನ ಸಂಬಂಧಗಳು. ಆಳುವ ಸರ್ಕಾರಗಳ ಸೈದ್ಧಾಂತಿಕ-ತಾತ್ವಿಕ ನೆಲೆಗಳು ಎಷ್ಟೇ ಜನಪರ ಎನಿಸಿದರೂ ಸಹ ಅದು ಮೂಲತಃ ವಿಶಾಲ ಆಳುವ ವ್ಯವಸ್ಥೆಯ ಪ್ರಾತಿನಿಧಿತ್ವವನ್ನೇ ವಹಿಸಿಕೊಂಡಿರುತ್ತದೆ. ಹಾಗಾಗಿ ಅಲ್ಲಿ ಮುಖ್ಯವಾಗುವ ಹಿತಾಸಕ್ತಿಗಳು ಬಹುಪಾಲು ಸನ್ನಿವೇಶಗಳಲ್ಲಿ ಜನಸಾಮಾನ್ಯರ ಸಾರ್ವತ್ರಿಕ ಹಿತಾಸಕ್ತಿಗಳಿಗೆ ವ್ಯತಿರಿಕ್ತವಾಗಿರುವ ಸಾಧ್ಯತೆಗಳು ಇರುತ್ತವೆ. ಮಾರುಕಟ್ಟೆ, ಬಂಡವಾಳ ಮತ್ತು ಸಮಾಜದ ಮೇಲ್ಪದರದ ಹಿತಾಸಕ್ತಿಗಳನ್ನು ಕಾಪಾಡುವುದು ಬಂಡವಾಳಶಾಹಿ ಆಳ್ವಿಕೆಯ ಮುಖ್ಯ ಲಕ್ಷಣವೂ ಆಗಿರುತ್ತದೆ. ಹಾಗಾಗಿ ಪ್ರಗತಿಪರರು ಸಾಕಾರಗೊಳಿಸಬಯಸುವ ಸಮ ಸಮಾಜದ ನಿರ್ಮಾಣಕ್ಕೆ ಆಡಳಿತ ನೀತಿಗಳು ಕೆಲವೊಮ್ಮೆ ಪೂರಕವಾಗಿ ಕಂಡರೂ ಕೆಲವು ಸನ್ನಿವೇಶಗಳಲ್ಲಿ ವ್ಯತಿರಿಕ್ತವಾಗಿರುತ್ತದೆ. ಪ್ರಗತಿಪರ ಎಂದು ಗುರುತಿಸಿಕೊಳ್ಳುವ ಯಾವುದೇ ವ್ಯಕ್ತಿ/ಸಂಘಟನೆಗಳಿಗೆ ಇಂತಹ ಸನ್ನಿವೇಶದಲ್ಲಿ ಆಡಳಿತಾರೂಢ ಸರ್ಕಾರದ ಪ್ರಭಾವಿತವಾಗದೆ ಸ್ವಾಯತ್ತತೆಯನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ಇರಬೇಕಾಗುತ್ತದೆ. ಕರ್ನಾಟಕದ ಪ್ರಸ್ತುತ ಸಂದರ್ಭದಲ್ಲಿ ಇದನ್ನು ಸೂಕ್ಷ್ಮವಾಗಿ ಗಮನದಲ್ಲಿಟ್ಟುಕೊಳ್ಳಬೇಕಿದೆ.
ಹಾಗಾದಲ್ಲಿ ಮಾತ್ರ ನಾವು ಸಮಾಜದಲ್ಲಿ ಆಳವಾಗಿ ಬೇರೂರಿರುವ ಹಾಗೂ ಸಕಲ ದಿಕ್ಕುಗಳಿಂದಲೂ ಆವರಿಸಿರುವ ದ್ವೇಷ, ಅಸೂಯೆ, ಅನುಮಾನ ಹಾಗೂ ಅಪನಂಬಿಕೆಗಳ ಗೋಡೆಗಳನ್ನು ಹಂತಹಂತವಾಗಿ ಕೆಡವಲು ಸಾಧ್ಯವಾಗುತ್ತದೆ. ಈ ಗೋಡೆಗಳನ್ನು ಕಾಲಕ್ರಮೇಣ ಮುಳ್ಳು ಬೇಲಿಗಳಾಗಿ ಪರಿವರ್ತಿಸುವ ಸಾಂಸ್ಕೃತಿಕ-ರಾಜಕೀಯ ಆಲೋಚನಾ ವಿಧಾನಗಳು ಎಷ್ಟೇ ವ್ಯಾಪಕವಾಗಿ ಬೆಳೆಯುತ್ತಿದ್ದರೂ ಇದರ ನಡುವೆಯೇ ಒಂದು ಸುಂದರ ಸಮಾಜದ ಕನಸನ್ನು ಹೊತ್ತ ಸಮಾಜಮುಖಿ ಮಾರ್ಗವನ್ನು ರೂಪಿಸುವುದು ವರ್ತಮಾನದ ಅಗತ್ಯತೆಯಾಗಿದೆ. ದ್ವೇಷ ಎನ್ನುವುದನ್ನು ಸಾಪೇಕ್ಷವಾಗಿ ನೋಡಿದಾಗ ದ್ವೇಷಿಸುವುದೂ ಸಹ ಸ್ವೀಕೃತ ಮನೋವೃತ್ತಿಯಾಗಿಬಿಡುತ್ತದೆ. ಆದರೆ ಮನುಜ ಪ್ರೀತಿಯನ್ನು ಸಾರ್ವತ್ರೀಕರಿಸಿ ನೋಡಿದಾಗ ದ್ವೇಷ ಎನ್ನುವುದು ಅನಪೇಕ್ಷಿತ ಎನಿಸುತ್ತದೆ. ಪ್ರಗತಿಪರ ಎನಿಸಿಕೊಳ್ಳುವ ಯಾವುದೇ ಮನಸ್ಸು, ವ್ಯಕ್ತಿ, ಸಂಘಟನೆ ಅಥವಾ ಸಂಸ್ಥೆ ಈ ಮನುಜ ಪ್ರೀತಿಯನ್ನು ವಿಸ್ತರಿಸುವ, ಆಳಕ್ಕಿಳಿಸುವ ಹಾಗೂ ಮುಂದಿನ ತಲೆಮಾರಿಗೆ ಸಾಗಿಸುವ ಜವಾಬ್ದಾರಿ ಹೊತ್ತು ಮುನ್ನಡೆದಾಗ ರಾಷ್ಟ್ರಕವಿ ಕುವೆಂಪು ಅವರ “ ಸರ್ವಜನಾಂಗದ ಶಾಂತಿಯ ತೋಟ ” ದ ಕನಸು ಸಾಕಾರಗೊಳ್ಳಲು ಸಾಧ್ಯ.
-೦-೦-೦-೦