ಸಿಐಡಿ (CID) ಎಸ್ ಪಿ ಆಗಿದ್ದ ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣವರ್ (Ravi D Channannavar) ಅವರನ್ನು ಬೊಮ್ಮಾಯಿ (Bommai) ಸರ್ಕಾರ ವರ್ಗಾವಣೆ ಮಾಡಿದ ಸಂಗತಿ ಎಲ್ಲರ ಮನೆಮಾತಾಗಿದೆ! ಸಾಮಾಜಿಕ ಜಾಲತಾಣಗಳಲ್ಲಿ ಅವರದ್ದೇ ಚರ್ಚೆ. ಚನ್ನಣ್ಣವರನ್ನು ಪೊಲೀಸ್ ಇಲಾಖೆಯಿಂದಲೇ ವರ್ಗಾವಣೆ ಮಾಡಲಾಗಿದ್ದರೂ ಈ ವರ್ಗಾವಣೆ ಹಿಂದಿನ ಒಳ ರಾಜಕಾರಣವೇ ಬೇರೆ ಇದೆ.
ಹೌದು. ಇಲ್ಲಿ ಗಮನಿಸಬೇಕಾದ ಮುಖ್ಯ ಸಂಗತಿ ಚನ್ನಣ್ಣವರ್ ವರ್ಗಾವಣೆಯಾದ ಜಾಗ. ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದ ನಿರ್ದೇಶಕರನ್ನಾಗಿ ವರ್ಗಾವಣೆ ಮಾಡಲಾಗಿದೆ. ಯಾವುದೇ ಲೆಕ್ಕಾಚಾರವಿಲ್ಲದೇ ಬಿಜೆಪಿ ಸರ್ಕಾರ (BJP Goverment) ಇಂಥ ನಿರ್ಧಾರವನ್ನು ತಗೆದುಕೊಳ್ಳುವುದಿಲ್ಲ ಎನ್ನುವುದಕ್ಕೆ ಇದೊಂದು ತಾಜಾ ಉದಾಹರಣೆ.
ಕರ್ನಾಟಕದಲ್ಲಿ ಲಿಂಗಾಯತ ಸಮುದಾಯದ ನಂತರ ಬಿಜೆಪಿಗೆ ಹೆಚ್ಚಿನ ಮತ ಬ್ಯಾಂಕ್ ಇರುವುದು ವಾಲ್ಮೀಕಿ ಸಮುದಾಯದ್ದು. ಈ ಕಾರಣಕ್ಕಾಗಿಯೇ ಶ್ರೀರಾಮುಲು ಬಿಜೆಪಿಯಲ್ಲಿ ಪ್ರಮುಖ ನಾಯಕನಾಗಿ ಹೊರಹೊಮ್ಮಲು ಸಾಧ್ಯವಾದದ್ದು. ಲಿಂಗಾಯತ (Lingayata) ಹಾಗೂ ವಾಲ್ಮೀಕಿ ಸಮುದಾಯದ (Valmiki Community) ಶಕ್ತಿ ಏನು ಎಂಬುದನ್ನು ಬಿಜೆಪಿ ಪಕ್ಷ 2013 ವಿಧಾನಸಭಾ ಚುನಾವಣೆಯಲ್ಲೇ ಮನಗಂಡಿದೆ. ೨೦೧೩ ರ ಚುನಾವಣೆಗೂ (Election) ಮುನ್ನ ಬಿಜೆಪಿ ಒಡೆದ ಮನೆಯಾಗಿ ಲಿಂಗಾಯತ ಸಮುದಾಯದ ಪ್ರಮುಖ ನಾಯಕ ಬಿ ಎಸ್ ಯಡಿಯೂರಪ್ಪ (Yediyurappa KJP) ಕೆಜಿಪಿ ಪಕ್ಷ ಕಟ್ಟಿದರೆ ಅತ್ತ ವಾಲ್ಮೀಕಿ ಸಮುದಾಯದ ಪ್ರಮುಖ ನಾಯಕ ಶ್ರೀರಾಮುಲು (Sri Ramulu) ಬಿಎಸ್ ಆರ್ ಕಾಂಗ್ರೆಸ್ ಪಕ್ಷ ಕಟ್ಟಿ ಚುನಾವಣೆ ಎದುರಿಸಿದರು. ಇದರ ಪರಿಣಾಮವಾಗಿ ಫಲಿತಾಂಶದಲ್ಲಿ ಬಿಜೆಪಿ ಪಕ್ಷ ಮುಗ್ಗರಿಸಿ ಬಿತ್ತು.
ಆ ಬೆಳವಣಿಗೆಯಿಂದ ಪಾಠ ಕಲಿತಂತಿರುವ ಬಿಜೆಪಿ ನಂತರದ ದಿನಗಳಲ್ಲಿ ಯಡಿಯೂರಪ್ಪ ಹಾಗೂ ಶ್ರೀರಾಮುಲು ಅವರನ್ನು ಪಕ್ಷಕ್ಕೆ ಮರಳಿ ಕರೆ ತಂದು ಪ್ರಮುಖ ಸ್ಥಾನಮಾನಗಳನ್ನೇ ನೀಡಿದೆ. ಈಗ ಇದೇ ವಾಲ್ಮೀಕಿ ಸಮುದಾಯದ ಹಿನ್ನೆಲೆಯಿಂದ ಬಂದಿರುವ ರವಿ ಡಿ ಚನ್ನಣ್ಣವರನ್ನು ವಾಲ್ಮೀಕಿ ಸಮುದಾಯದ ಮತ್ತೊಬ್ಬ ಪ್ರಮುಖ ರಾಜಕೀಯ ನಾಯಕನಾಗಿ ಪರಿಚಯಿಸಲು ಬಿಜೆಪಿ ತಂತ್ರ ಹೆಣೆದಿದೆಯಾ ಎನ್ನುವ ಚರ್ಚೆ ಈ ವರ್ಗಾವಣೆಯಿಂದ ಮತ್ತಷ್ಟು ಸ್ಪಷ್ಟವಾಗುತ್ತಿದೆ.
Also read : ಅಣ್ಣ ಮಲೈ ಹಾದಿಯಲ್ಲೇ ಮತ್ತೊರ್ವ ಐಪಿಎಸ್ ಅಧಿಕಾರಿ: ದೆಹಲಿಯಲ್ಲಿ ಬಿಜೆಪಿ ವರಿಷ್ಠರನ್ನು ಭೇಟಿಯಾದ ರವಿ ಡಿ ಚನ್ನಣ್ಣನವರ್
ಚನ್ನಣ್ಣವರ್ ರಾಜಕೀಯ ಪ್ರವೇಶದ ಅಡಿಗಲ್ಲಾಗುತ್ತಾ ಈ ವರ್ಗಾವಣೆ?
ಕಳೆದ ವರ್ಷ ಆಗಸ್ಟ್ ನಲ್ಲಿ ರವಿ ಡಿ. ಚನ್ನಣ್ಣವರ್ ರಾಷ್ಟ್ರರಾಜಧಾನಿಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ. ಎಲ್. ಸಂತೋಷ್ (BL Santhosh) ಅವರನ್ನು ಭೇಟಿಯಾಗಿದ್ದು ದೊಡ್ಡ ಸುದ್ದಿಯಾಯಿತು. ನಂತರದ ದಿನಗಳಲ್ಲಿ ರಾಜ್ಯದ ಹಲವಾರು ಮಠಗಳಿಗೆ ಸರಣಿ ಭೇಟಿ ನೀಡಿದ್ದರು. ಅದೇ ವೇಳೆ ಐಪಿಎಸ್ ಅಧಿಕಾರಿ ಅಣ್ಣಾಮಲೈ (Annamalai) ನಂತರ ಮತ್ತೊಬ್ಬ ಐಪಿಎಸ್ ಅಧಿಕಾರಿ (IPS Officer) ಬಿಜೆಪಿ ಸೇರಲಿದ್ದಾರೆ ಎನ್ನುವ ಚರ್ಚೆಗಳು ಚನ್ನಣ್ಣವರ್ ಸುತ್ತ ಹುಟ್ಟಿಕೊಂಡಿದ್ದನ್ನು ಇಲ್ಲಿ ಗಮನಿಸಬಹುದು.
ತಕ್ಷಣವೇ ಆ ಎಲ್ಲ ಚರ್ಚೆಗೆ ಚನ್ನಣ್ಣವರ ಸ್ಪಷ್ಟನೆ ನೀಡಿ, “ರಾಜಕೀಯಕ್ಕೆ ನಾನು ಪ್ರವೇಶಿಸುವುದಿಲ್ಲ” ಎಂದು ಹೇಳುವ ಮೂಲಕ ಚರ್ಚೆಗೆ ಆ ಕ್ಷಣಕ್ಕೆ ತೆರೆ ಎಳೆದರು. ಮನುಷ್ಯ ತನ್ನ ಅಭಿಪ್ರಾಯಗಳನ್ನು ಸಮಯ ಸಂದರ್ಭೋಚಿತವಾಗಿ ಬದಲಿಸಿಕೊಳ್ಳುತ್ತಾನೆ ಎನ್ನುವುದಕ್ಕೇ ಐಪಿಎಸ್ ವಲಯದ ಅಧಿಕಾರಿಯಾಗಿದ್ದ ಅಣ್ಣಾಮಲೈ ನೇರ ಉದಾಹರಣೆ. ಅಣ್ಣಾಮಲೈ ತಮ್ಮ ಹುದ್ದೆಗೆ ರಾಜೀನಾಮೆ ನೀಡುವಾಗ ರಾಜಕೀಯ ಪ್ರವೇಶಿಸುವುದಿಲ್ಲ ಸ್ಪಷ್ಟನೆ ನೀಡಿ ನಂತರದಲ್ಲಿ ತಮಿಳುನಾಡಿನ ಬಿಜೆಪಿಯ ರಾಜ್ಯ ಘಟಕ ಅಧ್ಯಕ್ಷರಾಗಿ ಈಗ ರಾಜಕಾರಣಲ್ಲಿ ಸಕ್ರೀಯರಾಗಿದ್ದನ್ನು ನೋಡಬಹುದು.
ಮುಂದೊಂದು ದಿನ ಅಣ್ಣಾಮಲೈ ದಾರಿಯನ್ನೇ ಚನ್ನಣ್ಣವರ್ ತುಳಿದರೆ ಆಶ್ಚರ್ಯ ಪಡಬೇಕಿಲ್ಲ! ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮಕ್ಕೆ ರಾಜ್ಯ ಸರ್ಕಾರ ಕಳೆದ ವರ್ಷದ ಬಜೇಟ್ ನಲ್ಲಿ 1430 ಕೋಟಿ ರೂ. ಅನುದಾನ ನೀಡಿದೆ. ಬರುವ ಬಜೇಟ್ ನಲ್ಲೂ ಇದಕ್ಕಿಂತ ಹೆಚ್ಚಿನ ಅನುದಾನ ನೀಡುವ ನಿರೀಕ್ಷೆ ಇದ್ದು, ಇದೇ ನಿಗಮಕ್ಕೆ ಚನ್ನಣ್ಣವರನ್ನು ವರ್ಗಾವಣೆ ಮಾಡಲಾಗಿದೆ.
ಈ ಮೂಲಕ ವಾಲ್ಮೀಕಿ ನಿಗಮದಡಿ ಸಮುದಾಯದ ಅಭಿವೃದ್ಧಿಯನ್ನು ಚನ್ನಣ್ಣವರ ನೇತೃತ್ವದಲ್ಲಿ ಮಾಡಿಸಿ ವಾಲ್ಮೀಕಿ ಮತ ಬ್ಯಾಂಕ್ ಅನ್ನು ಮತ್ತಷ್ಟು ಗಟ್ಟಿಗೊಳಿಸಿಕೊಳ್ಳುತ್ತಲೇ ಆ ಸಮುದಾಯದ ರಾಜಕೀಯ ನಾಯಕನನ್ನಾಗಿ ರೂಪಿಸುವ ತಂತ್ರ ಬಿಜೆಪಿಯ ಹಿಂದಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಜೊತೆಗೆ ಮತ್ತೊಂದು ಪ್ರಮುಖ ಮಾತು ಕೇಳಿಬಂದಿದೆ ಅದು ಶ್ರೀರಾಮುಲು ಅವರಿಗೆ ಪರ್ಯಾಯ ನಾಯಕತ್ವ ಕಟ್ಟುವುದು!
ಶ್ರೀರಾಮುಲು ಅವರನ್ನು ತೆರೆಗೆ ಸರಿಸುವ ಯತ್ನವೇ?
ಬಿಜೆಪಿಯಲ್ಲಿ ವಾಲ್ಮೀಕಿ ಸಮುದಾಯದ ಚಕ್ರಾಧಿಪತ್ಯವನ್ನು ತಕ್ಕ ಮಟ್ಟಿಗೆ ಅನುಭವಿಸುತ್ತಿರುವ ನಾಯಕ ಶ್ರೀರಾಮುಲು! ಗಾಲಿ ಜರ್ನಾರ್ಧನ ರೆಡ್ಡಿ ಅವರನ್ನು ಬಿಜೆಪಿ ದೂರ ಮಾಡಿದಾಗಿನಿಂದಲೂ ಬಿಜೆಪಿಯೊಂದಿಗೆ ಶ್ರೀರಾಮುಲು ಅವರ ಸಣ್ಣ ತಿಕ್ಕಾಟ ಇದ್ದೇ ಇದೆ. ಈಗ ಅದು ಅಷ್ಟಾಗಿ ತೀವ್ರ ರೂಪದಲ್ಲಿ ಬಹಿರಂಗವಾಗಿಲ್ಲಷ್ಟೇ. ಈಗಾಗಲೇ ಲಿಂಗಾಯತ ಸಮುದಾಯದ ಪ್ರಬಲ ನಾಯಕ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ ಪರ್ಯಾಯವಾಗಿ ಲಿಂಗಾಯತ ಸಮುದಾಯದ ನಾಯಕರನ್ನು ಬೆಳೆಸುವ ಪ್ರಯತ್ನಗಳು ಬಿಜೆಪಿಯಲ್ಲಿ ನಡೆಯುತ್ತಿವೆ. ಬರುವ ದಿನಗಳಲ್ಲಿ ಲಿಂಗಾಯತ ಸಮುದಾಯದ ಪ್ರಬಲ ನಾಯಕರಾಗಿ ಬೊಮ್ಮಾಯಿ ಹೊರಹೊಮುತ್ತಾರಾ? ಅಥವಾ ಮುರುಗೇಶ್ ನಿರಾಣಿ (Murugesh Nirani) ಆ ಸ್ಥಾನವನ್ನು ಪ್ರತಿನಿಧಿಸುತ್ತಾರಾ ಇಲ್ಲವೇ ಮತ್ತಿನ್ನಾರೋ ಆ ನಾಯಕತ್ವಕ್ಕೆ ಬರಬಹುದಾ ಎನ್ನುವುದನ್ನು ಈಗಲೇ ಹೇಳಲಾಗದು.
ಈ ಬೆನ್ನಲ್ಲೇ ಬಿಜೆಪಿಯಲ್ಲಿ ಹಲವಾರು ಬೆಳವಣಿಗೆಗಳು ಸದ್ದಿಲ್ಲದೇ ನಡೆಯುತ್ತಿವೆ. ಮುಖ್ಯಮಂತ್ರಿ ಬದಲಾವಣೆ ವಿಚಾರ ಪಕ್ಷದಲ್ಲಿ ಹೊಗೆಯಾಡುತ್ತಲೇ ಇದೆ. ಲಿಂಗಾಯತ ಸಮುದಾಯದ ನಾಯಕ ನಿರಾಣಿ ಸಿಎಂ ಆಗುತ್ತಾರೆ ಎನ್ನುವ ಚರ್ಚೆಗಳು ಕೂಡ ಹಸಿಯಾಗಿವೆ. ಈ ಮಧ್ಯೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಇಂದು ೬೨ನೇ ಜನ್ಮದಿನದ ಸಂಭ್ರಮ. ಈ ಹಿನ್ನೆಲೆಯಲ್ಲಿ ತಾವು ಮುಖ್ಯಂತ್ರಿಯಾಗಿ ಶುಕ್ರವಾರಕ್ಕೆ ಆರು ತಿಂಗಳು ತುಂಬಿದ್ದು, ಅಭಿವೃದ್ಧಿಯ ಪಕ್ಷಿನೋಟ ಕುರಿತ ಪುಸ್ತಕವನ್ನು ಬಿಡುಗಡೆ ಮಾಡಿದ್ದಾರೆ. ಸಾಮಾನ್ಯವಾಗಿ ವರ್ಷದ ಸಾಧನೆ ಕುರಿತು ಪುಸ್ತಕ ಬಿಡುಗಡೆ ಮಾಡುವುದು ಸಾಮಾನ್ಯ. ಆದರೆ ಬೊಮ್ಮಾಯಿ ಅವರ ಆರು ತಿಂಗಳಿಗೇ ಸಾಧನೆಯ ಕಿರುನೋಟ ಪುಸ್ತಕ ತಂದಿದ್ದು ಕುತೂಹಲ ಹುಟ್ಟಿಸಿದೆ. ತಾವು ಒಂದು ವರ್ಷ ಮುಖ್ಯಮಂತ್ರಿಯಾಗಿ ಪೂರೈಸುವುದು ಅನುಮಾನ ಎಂಬ ಸತ್ಯ ಬೊಮ್ಮಾಯಿ ಅವರಿಗೆ ಬಂದಿರಬಹುದಾ? ಕಾಲವೇ ಉತ್ತರಿಸಬೇಕಿದೆ.
Also read : ಚರ್ಚೆಗೆ ಗ್ರಾಸವಾದ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ರಾಜೀನಾಮೆ ನಡೆ!
ಇನ್ನೊಂದೆಡೆ ಶ್ರೀರಾಮುಲು ಕೂಡ ಬಿಜೆಪಿಯೊಳಗೆ ಮುಖ್ಯಮಂತ್ರಿ ಸ್ಥಾನದ ಪ್ರಮುಖ ಆಕಾಂಕ್ಷಿ ಎನ್ನುವುದು ರಾಜಕೀಯದಲ್ಲಿ ತಿಳಿದ ಸತ್ಯ. ಬರುವ ದಿನಮಾನದಲ್ಲಿ ಪಕ್ಷದೊಳಗೆ ಅನಿರೀಕ್ಷಿತ ಬೆಳವಣಿಗೆಗಳು ನಡೆದು ಶ್ರೀರಾಮುಲು ಬಿಜೆಪಿ ಸಖ್ಯ ಕಳೆದುಕೊಂಡರೇ ಆ ಸ್ಥಾನವನ್ನು ತುಂಬಬಲ್ಲ ನಾಯಕ ಚನ್ನಣ್ಣವರ್ ಆಗಬಹುದೆಂಬ ಲೆಕ್ಕಾಚಾರದಿಂದ ಬಿಜೆಪಿ ಇವರನ್ನು ವಾಲ್ಮೀಕಿ ನಿಗಮಕ್ಕೆ ಎಂಡಿಯಾಗಿ ಕಳುಹಿಸಿದೆ ಎನ್ನುವ ಲೆಕ್ಕಾಚಾರವಿದೆ.!
ನಿರೀಕ್ಷಿಸಿದಂತೆ ಚನ್ನಣ್ಣವರ್ ರಾಜಕೀಯ (Politics) ಪ್ರವೇಶಿಸಿದ್ದೇ ಆದಲ್ಲಿ ವಾಲ್ಮೀಕಿ ಸಮುದಾಯ ಹೆಚ್ಚಾಗಿರುವ ಎಚ್ ಡಿ ಕೋಟೆಯಿಂದ ಅವರ ಸ್ಪರ್ಧೆ ಖಚಿತ ಎನ್ನುವ ವಿಶ್ಲೇಷಣೆಗಳು ಕೂಡ ಕೇಳಿಬಂದಿವೆ. ಈ ಎಲ್ಲ ತಂತ್ರಗಳ ಭಾಗವಾಗಿಯೇ ಚನ್ನಣ್ಣವರ್ ಅವರನ್ನು ಒಳ್ಳೆ ಆಯಕಟ್ಟಿನ ಜಾಗಕ್ಕೆ ವರ್ಗಾವಣೆ ಮಾಡಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಒಟ್ಟಾರೆಯಾಗಿ ಭ್ರಷ್ಟಾಚಾರದ (Corruption) ಗಂಭೀರ ಆರೋಪಗಳು ಇವರ ವಿರುದ್ಧ ಕೇಳಿ ಬಂದ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರ ಶಿಕ್ಷೆ ರೂಪದಲ್ಲಿ ಇವರನ್ನು ವಾಲ್ಕೀಕಿ ನಿಗಮದ ಎಂಡಿಯಾಗಿ ವರ್ಗಾವಣೆ ಮಾಡಿದೆ ಅಂತ ಮೇಲ್ಟೋಟಕ್ಕೆ ಅನ್ನಿಸಿದರೂ ಚನ್ನಣ್ಣವರ್ ಗೆ ಇದರಿಂದ ಲಾಭವೇ ಹೆಚ್ಚಿದೆ!