ದಾವಣಗೆರೆ (Davanagere) ಜಿಲ್ಲೆಯ ಚನ್ನಗಿರಿ (Channagiri) ಠಾಣೆಯ ಪೊಲೀಸರ ಕಸ್ಟಡಿಯಲ್ಲಿದ್ದ ಆರೋಪಿ ಸಾವನ್ನಪ್ಪಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಮೃತ ವ್ಯಕ್ತಿಯ ಸಂಬಂಧಿಕರು ಪೊಲೀಸ್ ಠಾಣೆಗೆ ನುಗ್ಗಿ ಠಾಣೆಯಲ್ಲಿದ್ದ ವಸ್ತುಗಳನ್ನು ಧ್ವಂಸ ಮಾಡಿದ ಘಟನೆ ನಡೆದಿದೆ.
ಠಾಣೆಯ ಮುಂಭಾಗದಲ್ಲಿ ನೂರಾರು ಜನರು ಜಮಾಯಿಸಿದ್ದು, ಇದು ಲಾಕಪ್ ಡೆತ್ (Lockup death) ಎಂದು ಆರೋಪಿಸುತ್ತಿದ್ದಾರೆ. ಮಟ್ಕಾ ಆಡ್ತಿದ್ದ ಹಿನ್ನೆಲೆ ಚನ್ನಗಿರಿ ಪಟ್ಟಣದ ಟಿಪ್ಪು ನಗರ ನಿವಾಸಿಯಾಗಿದ್ದ 30 ವರ್ಷದ ಅದೀಲ್ (Aadil) ಎನ್ನುವ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದು, ಸಂಜೆ ಪೊಲೀಸ್ ಠಾಣೆಗೆ ಕರೆತಂದಿದ್ದರು.
ಆದ್ರೆ ವಿಚಾರಣೆ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಬಿಪಿ ಲೋ (Low BP) ಆಗಿ ಬಿದ್ದ ಅದಿಲ್‌ನನ್ನು ಪೊಲೀಸರು ಅಸ್ಪತ್ರೆಗೆ ಸಾಗಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆರೋಪಿ ಸಾವನ್ನಪ್ಪಿದ್ದಾನೆ. ಇದೀಗ ಅದಿಲ್ ಸಾವಿಗೆ ಪೊಲೀಸರೇ ಕಾರಣ ಎಂದು ಸಂಬಂಧಿಕರು ಅಕ್ರೋಶ ವ್ಯಕ್ತಪಡಿಸಿದ್ದಾರೆ.