ಭಾರತದ ಮಹಾತ್ವಕಾಂಕ್ಷೆಯ ಚಂದ್ರಯಾನ 3 ಯೋಜನೆಯು ಮಹತ್ವದ ಘಟ್ಟದಲ್ಲಿದೆ. ಇನ್ನು ಕೆಲವೇ ಗಂಟೆಗಳಲ್ಲಿ ಅಂದರೆ, ಇದೇ ಬುಧವಾರ ಸಂಜೆ 6 ಗಂಟೆ 4 ನಿಮಿಷಕ್ಕೆ ಇಸ್ರೋ ಚಂದ್ರಯಾನ-3 ನೌಕೆಯ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲು ಸಜ್ಜಾಗಿದೆ. ಇದೇ ಸಮಯದಲ್ಲಿ ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಚಂದ್ರಯಾನ-3 ಲ್ಯಾಂಡರ್ ಭೂಮಿಗೆ ಕಾಣಿಸದ ಚಂದ್ರನ ಇನ್ನೊಂದು ಬದಿಯ ಫೋಟೊಗಳನ್ನು ಕ್ಲಿಕ್ಕಿಸಿದೆ. ಈ ಚಿತ್ರಗಳನ್ನು ಇಸ್ರೊ ಹಂಚಿಕೊಂಡಿದ್ದು, ಭೂಮಿಗೆ ಕಾಣಿಸದ ಚಂದ್ರನ ಇನ್ನೊಂದು ಮಗ್ಗಲಿನಲ್ಲಿ ಸಾಕಷ್ಟು ಕುಳಿಗಳು ಇರುವುದು ಕಾಣಿಸಿದೆ.
ಈ ಚಿತ್ರಗಳು ವಿಕ್ರಮ್ ಲ್ಯಾಂಡರ್ಗೆ ಚಂದ್ರನ ಮೇಲೆ ಸುರಕ್ಷಿತವಾಗಿ ಇಳಿಯಲು ನೆರವಾಗಲಿದೆ. “ಲ್ಯಾಂಡರ್ ಹಜಾರ್ಡ್ ಡಿಟೆಕ್ಷನ್ ಆಂಡ್ ಅವಾಯಿಡೆನ್ಸ್ ಕ್ಯಾಮೆರಾ (ಎಲ್ಎಚ್ಡಿಎಸಿ) ಮೂಲಕ ಸೆರೆಹಿಡಿಯಲಾದ ಚಂದ್ರನ ದೂರದ ಪ್ರದೇಶದ ಚಿತ್ರಗಳು ಇಲ್ಲಿವೆ. ಸುರಕ್ಷಿತ ಲ್ಯಾಂಡಿಂಗ್ ಪ್ರದೇಶವನ್ನು ಪತ್ತೆಹಚ್ಚಲು ಈ ಕ್ಯಾಮೆರಾ ನೆರವಾಗಲಿದೆ. ಬಂಡೆಗಳು ಅಥವಾ ಆಳವಾದ ಕಂದಕಗಳಿಲ್ಲದ ಸ್ಥಳದಲ್ಲಿ ಇಳಿಯಲು ಇದು ನೆರವಾಗಲಿದೆ. ಇದನ್ನು ಎಸ್ಎಸಿ/ಇಸ್ರೊ ಅಭಿವೃದ್ಧಿಪಡಿಸಿದೆ” ಎಂದು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ( ಟ್ವಿಟ್ಟರ್) ಇಸ್ರೊ ತಿಳಿಸಿದೆ.
ಈ ಚಿತ್ರಗಳನ್ನು ಶನಿವಾರ ಸೆರೆಹಿಡಿಲಾಗಿದೆ. ಇದರಲ್ಲಿ ಹೈನ್, ಬಾಸ್ ಎಲ್, ಮಾರ್ ಹಬ್ಲೊಲ್ಡಿಟಿನಿಯಮ್ ಮತ್ತು ಬೆಲ್ಕೊವಿಚ್ ಎಂಬ ಕುಳಿಗಳನ್ನು ಗುರುತಿಸಲಾಗಿದೆ. ಭೂಮಿಗೆ ಕಾಣಿಸದ ಚಂದ್ರನ ಭಾಗವು ಗೋಳಾರ್ಧವಾಗಿದೆ. ಚಂದ್ರನ ಕಕ್ಷೆಯಲ್ಲಿ ಸಿಂಕ್ರೊನಸ್ ಆಗಿ ತಿರುಗುವಿಕೆಯಿಂದಾಗಿ ಈ ಭಾಗ ಭೂಮಿಗೆ ಕಾಣಿಸುವುದೇ ಇಲ್ಲ. ಇದೀಗ ಇಸ್ರೋದ ಕ್ಯಾಮೆರಾವು ಆ ಭಾಗದ ಚಿತ್ರಗಳನ್ನು ತೆಗೆದಿದೆ. ಇದೇ ಬುಧವಾರ ಚಂದ್ರಯಾನ 3 ಲ್ಯಾಂಡರ್ ಚಂದ್ರನ ದಕ್ಷಿನ ಧ್ರುವದ ಭಾಗದಲ್ಲಿ ಇಳಿಯಲಿದೆ. ಇದು ಯಶಸ್ವಿಯಾದರೆ ಚಂದ್ರನ ಮೇಲೆ ಲ್ಯಾಂಡರ್ ಇಳಿಸಿದ ಜಗತ್ತಿನ ನಾಲ್ಕನೇ ದೇಶವೆಂಬ ಹೆಮ್ಮೆಗೆ ಭಾರತ ಪಾತ್ರವಾಗಲಿದೆ. ಈಗಾಗಲೇ ಅಮೆರಿಕ, ರಷ್ಯಾ ಮತ್ತು ಚೀನಾ ದೇಶಗಳು ಈ ಕೀರ್ತಿಗೆ ಪಾತ್ರವಾಗಿವೆ.
ಒಂದೆಡೆ ಭಾರತದ ಇಂತಹ ಸಾಧನೆಗೆ ಜಗತ್ತೇ ಎದಿರು ನೋಡುತ್ತಿದೆ. ವಿಶೇಷವಾಗಿ ಭಾರತೀಯರು ಇಂತಹ ಸಾಧನೆ ಕಣ್ತುಂಬಿಕೊಳ್ಳಲು ತುದಿಗಾಲಿನಲ್ಲಿ ನಿಂತಿದ್ದಾರೆ. ಈ ಹಿಂದಿನ ಚಂದ್ರಯಾನ ಯೋಜನೆಯಲ್ಲಿ ಕೊನೆಕ್ಷಣದಲ್ಲಿ ಲ್ಯಾಂಡರ್ ಇಳಿಯುವ ಸಮಯದಲ್ಲಿ ವಿಫಲವಾಗಿತ್ತು. ಈ ಬಾರಿ ಭಾರತದ ಚಂದ್ರಯಾನ 3 ಯಶಸ್ವಿಯಾಗಲೆಂದು ಜನರು ಕಾಯುತ್ತಿದ್ದಾರೆ. ಇಂತಹ ಸಮಯದಲ್ಲಿ ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ಮಾಡಿರುವ ಟ್ವಿಟ್ಟೊಂದು ನೆಟ್ಟಿಗರ ಆಕ್ರೋಶಕ್ಕೆ ಪಾತ್ರವಾಗಿದೆ.
ಇಸ್ರೊ ಮಾಜಿ ಮುಖ್ಯಸ್ಥ ಕೆ. ಶಿವನ್ ಲುಂಗಿ ತೊಟ್ಟು, ಎರಡೂ ಕೈಗಳಲ್ಲಿ ಚಹಾವನ್ನು ಬೆರೆಸುವ ಕಾರ್ಟೂನ್ ಫೊಟೊವನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿರುವ ಪ್ರಕಾಶ್ ರಾಜ್, ”ತಾಜಾ ಸುದ್ದಿ; ಚಂದ್ರಯಾನದಿಂದ ಈಗಷ್ಟೇ ಬಂದ ಮೊದಲ ದೃಶ್ಯ” ಎಂದು ಬರೆದುಕೊಂಡಿದ್ದಾರೆ.










