ಚಾಮರಾಜನಗರ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಮೇ 3ರಂದು ಆಮ್ಲಜನಕದ ಕೊರತೆಯಿಂದ ಕೋವಿಡ್ ರೋಗಿಗಳು ಮೃತಪಟ್ಟಿರುವ ಪ್ರಕರಣದ ಕುರಿತು ಏಕಕಾಲದಲ್ಲಿ ಐದು ರೀತಿಯ ತನಿಖೆಗಳು ನಡೆಯುತ್ತಿದೆ.
ದುರ್ಘಟನೆಯ ಬೆನ್ನಲ್ಲೇ ಐಎಎಸ್ ಅಧಿಕಾರಿ ಶಿವಯೋಗಿ ಸಿ. ಕಳಸದ ಅವರಲ್ಲಿ ಪ್ರಾಥಮಿಕ ತನಿಖೆ ನಡೆಸಲು ಸರ್ಕಾರ ಆದೇಶಿಸಿದ್ದರೆ, ಆರೋಗ್ಯ ಇಲಾಖೆ ಆಂತರಿಕ ತನಿಖೆ ನಡೆಸುತ್ತಿದೆ. ರಾಜ್ಯ ಮಾನವ ಹಕ್ಕುಗಳ ಆಯೋಗವು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು, ತನ್ನದೇ ಪೊಲೀಸ್ ವಿಭಾಗಕ್ಕೆ ತನಿಖೆಯ ಹೊಣೆ ಒಪ್ಪಿಸಿದೆ.ಕರ್ನಾಟಕ ಹೈಕೋರ್ಟ್ ಕೂಡಾ ಸಂವಿಧಾನದ 226ನೇ ವಿಧಿಯಡಿ ದತ್ತವಾಗಿರುವ ಅಧಿಕಾರ ಚಲಾಯಿಸಿ ಮಧ್ಯಪ್ರವೇಶಿಸಿದ್ದು, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಉಸ್ತುವಾರಿಯಲ್ಲಿ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳಾದ ಎ.ಎನ್. ವೇಣುಗೋಪಾಲ ಗೌಡ ಮತ್ತು ಕೆ.ಎನ್. ಕೇಶವ ನಾರಾಯಣ ಅವರನ್ನೊಳಗೊಂಡ ತನಿಖಾ ಸಮಿತಿಯನ್ನು ನೇಮಿಸಿದೆ.
ತನ್ನ ಅಧೀನದಲ್ಲಿ ಎರಡು ತನಿಖೆಗಳು ನಡೆಯುತ್ತಿದ್ದರೂ (ಐಎಎಸ್ ಅಧಿಕಾರಿ ಹಾಗೂ ಆರೋಗ್ಯ ಇಲಾಖೆ) ಪ್ರಕರಣದ ಕುರಿತಂತೆ ಹೈಕೋರ್ಟ್‌ನ ಮಧ್ಯಪ್ರವೇಶಿಸಿದೆಯೆಂದು ರಾಜ್ಯ ಸರ್ಕಾರವು ನಿವೃತ್ತ ನ್ಯಾಯಮೂರ್ತಿ ಬಿ.ಎ. ಪಾಟೀಲ್ ನೇತೃತ್ವದಲ್ಲಿ ತನಿಖಾ ಆಯೋಗ ರಚಿಸಿ ಆದೇಶ ಹೊರಡಿಸಿದೆ. ಇದು ರಾಜ್ಯ ಸರ್ಕಾರದ ತನಿಖೆಯನ್ನು ಗೊಂದಲದ ಗೂಡಾಗಿಸುವ ಪ್ರಯತ್ನದಂತೆ ಮೇಲ್ನೋಟಕ್ಕೆ ಭಾಸವಾಗುತ್ತದೆ.
ಇಂತಹ ಗಂಭೀರ ಘಟನೆಗಳು ನಡೆದಾಗ ಸರ್ಕಾರ ತನ್ನ ಅಧೀನದ ಆಯೋಗಗಳ ಮೂಲಕ ತನಿಖೆ ನಡೆಸಿ, ವರದಿಯ ಆಧಾರದ ಮೇಲೆ ಕ್ರಮವೇ ಕೈಗೊಳ್ಳದೆ ಅಥವಾ ವರದಿಯನ್ನು ಸಾರ್ವಜನಿಕರ ಎದುರು ಇಡದೆ ಮುಚ್ಚಿಟ್ಟು ಪ್ರಕರಣವನ್ನು ಹಳ್ಳ ಹಿಡಿಸುವ ಹಲವಾರು ಸಂಧರ್ಭಗಳಿಗೆ ಸಾಕ್ಷಿಯಾಗಿರುವ ಹಿನ್ನೆಲೆಯಲ್ಲಿ ಸರ್ಕಾರದ ತನಿಖೆಯ ಮೇಲೆ ಅಪನಂಬಿಕೆಗಳು ಹೆಚ್ಚಾಗಿವೆ. ಅಲ್ಲದೆ, ಈ ವಿವಿಧ ತನಿಖೆಗಳು ಒಂದಕ್ಕೊಂದು ವಿರೊಧಾಭಾಸದ ವರದಿಯನ್ನು ನೀಡಿದರೆ, ಗೊಂದಲ ಸೃಷ್ಟಿಯಾಗಿ ತನಿಖೆ ಹಳ್ಳ ಹಿಡಿಯುವ ಸಾಧ್ಯತೆ ನಿಚ್ಚಳವಾಗಿದೆ. ಹಾಗಾಗಿ, ನ್ಯಾಯಾಂಗದ ನೇತೃತ್ವದಲ್ಲೇ ತನಿಖೆ ನಡೆಯಲಿ ಎಂಬ ಕೂಗು ಬಲವಾಗಿ ಕೇಳಿ ಬಂದಿದೆ.
ಈ ಕುರಿತು ʼಪ್ರತಿಧ್ವನಿʼಯೊಂದಿಗೆ ಮಾತನಾಡಿದ ಕರ್ನಾಟಕ ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಜಸ್ಟಿಸ್ HN ನಾಗಮೋಹನ್ ದಾಸ್, ಸರ್ಕಾರದ ಈ ಕ್ರಮ ಸರಿಯಲ್ಲ, ಯಾಕಂದ್ರೆ, ನ್ಯಾಯಾಂಗ ತನಿಖೆ ಮಾಡೋ ಕೂಗು ಬಂದಾಗ ಒಬ್ಬ ಹಿರಿಯ ಅಧಿಕಾರಿಯನ್ನ ನೇಮಿಸಿ ತನಿಖೆ ಆರಂಭಿಸಿತು. ಆರೋಗ್ಯ ಇಲಾಖೆ ಕೂಡಾ ಒಂದು ತನಿಖೆಗೆ ಆದೇಶಿಸಿತು. ಈ ವಿಚಾರ ನ್ಯಾಯಾಲಯದ ಮುಂದೆ ಬಂದಾಗ, “ಈ ಅಮಾನವೀಯ ದುರ್ಘಟನೆ ನಡೆದಾಗ ನೀವು ಸರಿಯಾಗಿ ಸ್ಪಂದಿಸಿಲ್ಲ. ಜನರು ನ್ಯಾಯಾಂಗ ತನಿಖೆಗೆ ಅಪೇಕ್ಷಿಸುತ್ತಿದ್ದಾರೆ. ಹಾಗಾಗಿ ಕಾನೂನು ಸೇವಾ ಪ್ರಾಧಿಕಾರ ವತಿಯಿಂದ ತನಿಖೆ ಮಾಡುವಂತಹ ಉದ್ದೇಶ ಇದೆ, ನಿಮ್ಮ ಅಭಿಪ್ರಾಯ ತಿಳಿಸಿ” ಎಂದು ಸರ್ಕಾರವನ್ನು ಕೇಳಲಾಗಿತ್ತು. ಆದರೆ, ಸರ್ಕಾರ ಅಭಿಪ್ರಾಯ ತಿಳಿಸೋ ಬದಲು, ನ್ಯಾಯಾಲಯಕ್ಕೆ ಎದುರಾಗಿ ಸರ್ಕಾರ ಒಬ್ಬ ನಿವೃತ್ತ ನ್ಯಾಯಮೂರ್ತಿಯನ್ನು ನೇಮಿಸಿ ಆಯೋಗ ರಚಿಸಿ ಘಟನೆ ಕುರಿತಂತೆ ವರದಿ ಕೇಳಿದೆ, ಇದು ಎಷ್ಟು ಸರಿ? ಎಂದು ಪ್ರಶ್ನಿಸಿದ್ದಾರೆ.
ಮುಂದುವರೆದು, ಅದೇ ವೇಳೆ ಸರ್ಕಾರದ ಕ್ರಮ ಸರಿಯಲ್ಲವೆಂದು ನ್ಯಾಯಾಲಯವೇ ಇಬ್ಬರು ನ್ಯಾಯಮೂರ್ತಿಗಳ ನೇಮಕ ಮಾಡಿ ತನಿಖೆ ಆರಂಭಿಸಲು ಆದೇಶ ಹೊರಡಿಸಿದೆ. ಇದು ನೇರವಾಗಿ ಕಾರ್ಯಾಂಗ ಮತ್ತು ನ್ಯಾಯಾಂಗದ ನಡುವಿನ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿದೆ. ಈ ನಡುವೆ, ಮಾನವ ಹಕ್ಕುಗಳ ಆಯೋಗವೂ ತನಿಖೆ ಆರಂಭಿಸಿದೆ. ಒಂದೇ ವಿಚಾರಕ್ಕೆ ಐದು ರೀತಿಯ ತನಿಖೆ ಆರಂಭವಾಗಿದೆ. ಇದು ಗೊಂದಲಕ್ಕೆ ಹಾಗೂ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿದೆ. ಹಾಗಾಗಿ ಸರ್ಕಾರ ತನ್ನ ಆದೇಶವನ್ನು ಹಿಂಪಡೆದು, ನ್ಯಾಯಾಲಯದಲ್ಲಿ ನಾವು ಆದೇಶ ಹಿಂಪಡೆದಿದ್ದೀವಿ, ಹಾಗಾಗಿ ನ್ಯಾಯಾಂಗದ ಮೇಲ್ನೋಟದಲ್ಲಿ ಒಂದೇ ಆಯೋಗವನ್ನು ರಚನೆ ಮಾಡಲು ಮುಂದಾಗಬೇಕುʼ ಎಂದು ನಾಗಮೋಹನ್ ದಾಸ್ ಅಭಿಪ್ರಾಯ ಪಟ್ಟಿದ್ದಾರೆ.
ಇನ್ನು ಈ ಕುರಿತು ಪ್ರತಿಧ್ವನಿಯೊಂದಿಗೆ ಪ್ರತಿಕ್ರಿಯಿಸಿದ ಸುಪ್ರೀಂ ಕೋರ್ಟ್ ನಿವೃತ್ತ ಜಸ್ಟೀಸ್ V ಗೋಪಾಲ ಗೌಡ ಅವರು, ʼ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಉಸ್ತುವಾರಿಯಲ್ಲಿ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳಾದ ಎ.ಎನ್. ವೇಣುಗೋಪಾಲ ಗೌಡ ಮತ್ತು ಕೆ.ಎನ್. ಕೇಶವ ನಾರಾಯಣ ಅವರನ್ನೊಳಗೊಂಡ ತನಿಖಾ ಸಮಿತಿಯನ್ನು ಹೈಕೋರ್ಟ್ ನೇಮಿಸಿದೆ. ಈ ನಡುವೆ ಸರ್ಕಾರ ನೇಮಿಸಿದ ಆಯೋಗ ಅಸಮಂಜಸ. ಅದು ಊರ್ಜಿತವಾಗುವುದಿಲ್ಲ. ಹೈಕೋರ್ಟ್ ಬಳಿ ಈಗ ನಿವೃತ್ತ ನ್ಯಾಯಮೂರ್ತಿಗಳಾದ ಎ.ಎನ್. ವೇಣುಗೋಪಾಲ ಗೌಡ ಮತ್ತು ಕೆ.ಎನ್. ಕೇಶವ ನಾರಾಯಣ ಅವರನ್ನೊಳಗೊಂಡ ತನಿಖಾ ಸಮಿತಿ ನೀಡಿದ ವರದಿ ಇದೆ. ನ್ಯಾಯಾಲಯ ಅದನ್ನು ಪರಾಮರ್ಶಿಸಿ ಅದರ ಆಧಾರದಲ್ಲಿ ಕ್ರಮ ತೆಗೆದುಕೊಳ್ಳುತ್ತದೆ. ಸರ್ಕಾರ ಪ್ರತ್ಯೇಕ ತನಿಖೆಗೆ ಆದೇಶಿಸಿರುವುದು ಸಂವಿಧಾನದ 226 ನೇ ವಿಧಿಯನ್ನು ಉಲ್ಲಂಘಣೆ ಮಾಡಿದಂತಾಗುತ್ತದೆ. ಆದ್ದರಿಂದ, ಸರ್ಕಾರವೇ ರಚಿಸಿದ ವಿಚಾರಣಾ ಆಯೋಗ ಊರ್ಜಿತವಾಗುವುದಿಲ್ಲ ಎಂದು ಹೇಳಿದ್ದಾರೆ.