ಚಾಮರಾಜನಗರ: ಬಿಜೆಪಿ ಹಮ್ಮಿಕೊಂಡಿರುವ ವಿಜಯ ಸಂಕಲ್ಪ ಯಾತ್ರೆಗೆ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಮಹದೇಶ್ವರ ಬೆಟ್ಟದ ಮಲೆ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ನಗಾರಿ ಬಾರಿಸಿ, ಬಾವುಟ ಬೀಸುವ ಬುಧವಾರ ಚಾಲನೆ ನೀಡಿದರು.
ಮಲೆ ಮಹದೇಶ್ವರ ದೇವಸ್ಥಾನದ ಎದುರಿನ ಮೈದಾನದಲ್ಲಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್, ಕೇಂದ್ರಸಚಿವೆ ಶೋಭಾ ಕರಂದ್ಲಾಜೆ, ಸಚಿವರಾದ ಅರಗ ಜ್ಞಾನೇಂದ್ರ, ಸುನೀಲ್ಕುಮಾರ್, ಕೋಟಾ ಶ್ರೀನಿವಾಸಪೂಜಾರಿ, ರಾಜ್ಯ ಸಭಾ ಸದಸ್ಯ ಜಗ್ಗೇಶ್, ಎನ್. ಮಹೇಶ್, ನಿರಂಜನಕುಮಾರ್, ಜಿಲ್ಲಾ ಪ್ರಭಾರಿ ರಾಜ್ಯ ಉಪಾಧ್ಯಕ್ಷ ರಾಜೇಂದ್ರ, ಜಿಲ್ಲಾಧ್ಯಕ್ಷ ನಾರಾಯಣಪ್ರಸಾದ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವಿವಿಧ ಜನಪದ ಕಲಾತಂಡಗಳು, ಗೊರವರ ಕುಣಿತ, ವೀರಗಾಸೆ, ಬೇಡಗಂಪಣ ನೃತ್ಯ, ಮಂಗಳವಾದ್ಯ ಮತ್ತಿತರ ಸಾಂಸ್ಕೃತಿಕ ಕಲಾ ತಂಡಗಳ ನಡುವೆ ಯಾತ್ರೆಗೆ ಚಾಲನೆ ನೀಡಲಾಯಿತು. ರಥಯಾತ್ರೆಗೆ ಸಜ್ಜುಗೊಂಡಿರುವ ಬಸ್ ಮೇಲೆ ನಿಂತು ಬಿಜೆಪಿ ನಾಯಕರು ಜನರತ್ತ ಕೈ ಬೀಸಿದರು.
ರಥ ಯಾತೆಗೆ ಚಾಲನೆ ನೀಡಿದ ಬಳಿಕ ಜೆ.ಪಿ. ನಡ್ಡಾ ಅವರು ಮಹದೇಶ್ವರ ಬೆಟ್ಟದ ರಂಗಮಂದಿರದಲ್ಲಿ ಬುಡಕಟ್ಟು ಸಮುದಾಯಗಳಾದ ಬೇಡಗಂಪಣ ಹಾಗೂ ಸೋಲಿಗರೊಂದಿಗೆ ಸಂವಾದ ನಡೆಸಿದರು.
ರಾಜ್ಯದ 4 ಕಡೆಯಿಂದ ವಿಜಯ ಸಂಕಲ್ಪ ಯಾತ್ರೆ

ವೇದಿಕೆಯಲ್ಲಿ ಮಾತನಾಡಿದ ನಡ್ಡಾ ಅವರು, ರಾಜ್ಯದ ನಾಲ್ಕು ಕಡೆಗಳಿಂದ ವಿಜಯ ಸಂಕಲ್ಪ ಯಾತ್ರೆ ಆರಂಭವಾಗುತ್ತಿದೆ. 224 ವಿಧಾನಸಭಾ ಕ್ಷೇತ್ರಗಳಲ್ಲೂ ಈ ಯಾತ್ರೆ ನಡೆಯಲಿದೆ. 75 ಸಾರ್ವಜನಿಕ ಸಭೆಗಳು, 150ಕ್ಕೂ ಹೆಚ್ಚು ರೋಡ್ ಶೋಗಳನ್ನು ನಡೆಸಲಿದೆ. ಬೆಳಗಾವಿಯಲ್ಲಿ ದೇಶದ ರಕ್ಷಣಾ ಸಚಿವರಾದ ರಾಜನಾಥ ಸಿಂಗ್ ಹಾಗೂ ಇನ್ನೆರಡು ಕಡೆ ದೇಶದ ಗೃಹ ಸಚಿವ ಅಮಿತ ಶಾ ಅವರು ಯಾತ್ರೆಗೆ ಚಾಲನೆ ನೀಡಲಿದ್ದಾರೆ ಎಂದು ಅವರು ಹೇಳಿದರು.
ಅಭಿವೃದ್ಧಿ ಪಥದತ್ತ ಭಾರತ
ಕರ್ನಾಟಕದ ಜನತೆ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲಿದ್ದಾರೆ ಎಂಬ ವಿಶ್ವಾಸ ನನಗಿದೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ದೇಶವು ಅತ್ಯಂತ ವೇಗದಲ್ಲಿ ಅಭಿವೃದ್ಧಿ ಸಾಧಿಸುತ್ತಿದೆ. ಕಾಂಗ್ರೆಸ್ ಪಕ್ಷವು ಜಾತಿವಾದ, ಕುಟುಂಬವಾದಗಳಿಂದ ಒಡೆದು ಆಳುತ್ತಿತ್ತು. ಇಂದು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಎಲ್ಲರ ವಿಶ್ವಾಸ ಪಡೆದು ಎಲ್ಲರ ಭಾರತವನ್ನು ಅಭಿವೃದ್ಧಿಪಥದತ್ತ ಕೊಂಡೊಯ್ಯಲಾಗುತ್ತಿದೆ. ಜಗತ್ತಿನ ಅಗ್ರಮಾನ್ಯ ದೇಶವಾಗುವತ್ತ ಭಾರತ ಮುನ್ನಡೆಯುತ್ತಿದೆ. ನರೇಂದ್ರಮೋದಿಯವರು ಪ್ರಧಾನಿಯಾಗುವ ಮೊದಲು ಜಗತ್ತಿನಲ್ಲಿ 10ನೇ ಸ್ಥಾನದಲ್ಲಿದ್ದ ಭಾರತ, ಈಗ 5ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ. ಆಟೋಮೊಬೈಲ್, ಮೊಬೈಲ್, ಕೈಗಾರಿಕಾ ಮತ್ತಿತರ ಕ್ಷೇತ್ರಗಳಲ್ಲಿ ದೇಶ ಪ್ರಗತಿ ಸಾಧಿಸಿದೆ. ನಮ್ಮನ್ನು ಆಳಿದ ಬ್ರಿಟಿಷ್ ಸರ್ಕಾರವನ್ನು ಹಿಂದಿಕ್ಕಿ ಭಾರತ ಮುನ್ನಡೆಯುತ್ತಿದೆ ಎಂದು ಬಣ್ಣಿಸಿದರು.
ವನವಾಸಿ ಜನರಿಗೆ ವಿಶೇಷ ಸ್ಥಾನ
ವನವಾಸಿ, ಬುಡಕಟ್ಟು ಜನರು, ಪ.ಜಾತಿ, ಪ.ಪಂಗಡ, ಯುವಕರು, ಮಹಿಳೆಯರು ಹಿಂದುಳಿದ ವರ್ಗ ಎಲ್ಲರ ಬಾಳಿನಲ್ಲಿ ಬೆಳಕಾಗುವ ರೀತಿಯಲ್ಲಿ ಸರ್ಕಾರ ಕೆಲಸ ಮಾಡುತ್ತಿವೆ. ವಾಜಪೇಯಿ ಸರ್ಕಾರದಲ್ಲಿ ವನವಾಸಿ ಜನರಿಗೆ ವಿಶೇಷ ಸ್ಥಾನ ಮಾನವನ್ನು ನೀಡಿದೆ. ನರೇಂದ್ರ ಮೋದಿಯವರ ಸರ್ಕಾರ ನೀಡಿದೆ ಎಂದು ಅವರು ಹೇಳಿದರು.